ಭಾರತೀಯ ಪತ್ರಕರ್ತರ ಒಕ್ಕೂಟದ 73ನೆ ಸಂಸ್ಥಾಪನಾ ದಿನಾಚರಣೆ
ಮಂಗಳೂರು, ಅ.29: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾ ಭವನ ದಲ್ಲಿ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ 73ನೇ ಸಂಸ್ಥಾಪನಾ ದಿನಾಚರಣೆಯು ಶನಿವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದ.ಕ. ಪ್ರಭಾರ ಜಿಲ್ಲಾಧಿಕಾರಿ ಮತ್ತು ದ.ಕ ಜಿಪಂ ಸಿಇಒ ಡಾ.ಕುಮಾರ್ ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಅಂಗವೆಂದು ಸ್ಥಾನ ಪಡೆದ ಮಾಧ್ಯಮಕ್ಕೆ ಸಮಾಜವನ್ನು ತಿದ್ದುವ ಮಹತ್ವದ ಜವಾಬ್ದಾರಿ ಇದೆ. ಸಮಾಜದ ಮಹತ್ವದ ಅಂಗವಾದ ಪತ್ರಿಕೋದ್ಯಮ ತನ್ನ ವೃತ್ತಿಯ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಬೇಕಾದ ಅಗತ್ಯವಿದೆ. ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಮಾಧ್ಯಮಗಳ ಹೊಣೆಗಾರಿಕೆ ಮಹತ್ವದ್ದಾಗಿದೆ ಎಂದರು.
ಪತ್ರಿಕಾ ವೃತ್ತಿಗೆ ಅಧ್ಯಯನಶೀಲತೆಯ ಅಗತ್ಯವಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಚಲಾವಣೆಯ ಸಂದರ್ಭ ನಮ್ಮ ಅಂತರಂಗದ ಸ್ವಾತಂತ್ರ್ಯವನ್ನು ಒತ್ತೆ ಇಡಬಾರದು ಎಂದು ಡಾ.ಕುಮಾರ್ ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿಯ ಸದಸ್ಯ ಪಿ.ಬಿ.ಹರೀಶ್ ರೈ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಭಾಗವಹಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ‘ಸಮಕಾಲೀನ ಪತ್ರಿಕೋದ್ಯಮ’ದ ಬಗ್ಗೆ ಉಪನ್ಯಾಸ ನೀಡಿದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ, ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿಗಳಾದ ವಿಜಯ ಕೋಟ್ಯಾನ್ ಪಡು ಕಾರ್ಯಕ್ರಮ ನಿರೂಪಿಸಿದರು. ಪುಷ್ಪರಾಜ್ ಬಿ.ಎನ್. ವಂದಿಸಿದರು.