ಕನ್ನಡದಲ್ಲೂ ವೈದ್ಯಕೀಯ, ಇಂಜಿನಿಯರಿಂಗ್ ಶಿಕ್ಷಣ ದೊರೆಯುವಂತಾಗಲಿ: ಡಾ.ನಾ. ದಾಮೋದರ ಶೆಟ್ಟಿ
ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನ ಉದ್ಘಾಟನೆ
ಮಂಗಳೂರು, ಅ.30: ಕನ್ನಡದಲ್ಲೂ ವೈದ್ಯಕೀಯ, ಇಂಜಿನಿಯರಿಂಗ್ ಶಿಕ್ಷಣ ದೊರೆಯುವಂತಾಗಬೇಕು ಎಂದು ಹಿರಿಯ ಸಾಹಿತಿ ಡಾ.ನಾ.ದಾಮೋದರ ಶೆಟ್ಟಿ ಅಭಿಪ್ರಾಯಿಸಿದ್ದಾರೆ.
ಅವರು ಇಂದು ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕದ ವತಿಯಿಂದ ನಗರದ ಶಾರದಾ ವಿದ್ಯಾಲಯದಲ್ಲಿ ಆಯೋಜಿಸಿರುವ 'ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ'ದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಉತ್ತರ ಭಾರತದಲ್ಲಿ ವೈದ್ಯಕೀಯ ಶಿಕ್ಷಣ ವನ್ನು ಹಿಂದಿಯಲ್ಲಿ ಕಲಿಸಲು ಆರಂಭಿಸಿದ್ದಾರೆ. ಕನ್ನಡದಲ್ಲೂ ವೈದ್ಯಕೀಯ, ಇಂಜಿನಿ ಯರಿಂಗ್ ವಿದ್ಯಾಭ್ಯಾಸಕ್ಕೆ ತ್ವರಿತವಾಗಿ ಅಡಿಪಾಯ ಹಾಕಬೇಕಾಗಿದೆ. ಅದು ಕನ್ನಡದ ಶಕ್ತಿಯಾಗಬೇಕು ಎಂದು ಡಾ.ನಾ.ದಾಮೋದರ ಶೆಟ್ಟಿ ನುಡಿದರು.
ಉಕ್ರೇನ್ ಗೆ ವೈದ್ಯಕೀಯ ಶಿಕ್ಷಣಕ್ಕೆ ತೆರಳುವವರು ಮೊದಲು ಉಕ್ರೇನಿ ಯನ್ ಭಾಷೆ ಕಲಿಯಬೇಕಾಗಿದೆ. ಆಂಗ್ಲ ಭಾಷೆಯ ಹೊರತಾಗಿ ವೃತ್ತಿಪರ ಶಿಕ್ಷಣ ವನ್ನು ಹಲವು ದೇಶಗಳಲ್ಲಿ ಪಡೆಯುತ್ತಿದ್ದಾರೆ. ಉನ್ನತ ಶಿಕ್ಷಣದ ಹೆಸರಿನಲ್ಲಿ ನಮ್ಮ ಮಕ್ಕಳನ್ನು ವಿದೇಶಕ್ಕೆ ಅಟ್ಟುವ ಪರಿ ಇಂದು ಹಳ್ಳಿಗಳಿಗೂ ತಲುಪಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಭಾಷೆ ಬದಲು ಆಂಗ್ಲ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡತೊಡಗಿದರು. ಹೀಗೆ ವಿದೇಶದಲ್ಲಿ ಶಿಕ್ಷಣ ಪಡೆದು ಹಿಂದಿರುಗಿ ಬರುವಾಗ ಅವರು ಈ ದೇಶಕ್ಕೆ ಅತಿಥಿಗಳಾಗಿ ಬರತೊಡಗಿದರು. ಇಲ್ಲಿನ ಕನ್ನಡ ಪತ್ರಿಕೆಗಳ ಸ್ಥಾನವನ್ನು ಆಂಗ್ಲ ಪತ್ರಿಕೆ ಗಳು ಆವರಿಸಿಕೊಳ್ಳತೊಡಗಿರುವುದು ಬೇಸರದ ಸಂಗತಿ. ನಮ್ಮ ಯುವ ಜನರು ಕನ್ನಡ ಭಾಷೆಯಿಂದ ಹಿಂದೆ ಸರಿಯದೆ ನಾಡು ನುಡಿಯನ್ನು ಪ್ರೀತಿಸುವಂತಾಗಬೇಕು ಎಂದರು.
ನಮ್ಮ ಊರಿಗೆ ಬರುವ ಬೇರೆ ಭಾಷೆಯ ಜನರಿಗೆ ಕನ್ನಡ ಕಲಿಸುವ ಕೆಲಸ ಆಗಬೇಕಾಗಿದೆ. ಕನ್ನಡದ ಅನ್ನ ಉಣ್ಣುವವರು ಕನ್ನಡ ಭಾಷೆ ಗೂ ಬದ್ಧತೆ ತೋರುವಂತಾಗಬೇಕು ಎಂದರು.
ಶಾಸಕ ವೇದವ್ಯಾಸ ಕಾಮತ್ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಸಮಾರಂಭದಲ್ಲಿ ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ. ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷೆ ವಿಜಯಲಕ್ಷ್ಮೀ, ಅದಾನಿ ಸಮೂಹ ಸಂಸ್ಥೆಯ ದಕ್ಷಿಣ ಭಾರತದ ಅಧ್ಯಕ್ಷ ಕಿಶೋರ್ ಆಳ್ವ, ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್, ಸಾಹಿತಿ ನಿತ್ಯಾನಂದ ಕಾರಂತ ಪೊಳಲಿ, ಸುಖಲಾಕ್ಷಿ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಶ್ರೀಪಾದ ರೇವಣ್ಕರ ಸ್ವಾಗತಿಸಿದರು. ಡಾ.ಮೀನಾಕ್ಷಿ ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು. ಸುಖಲಾಕ್ಷಿ ಸುವರ್ಣ ಅಧ್ಯಕ್ಷರ ಬಗ್ಗೆ ಪರಿಚಯಿಸಿದರು. ಗಣೇಶ್ ಪ್ರಸಾದ್ ವಂದಿಸಿದರು.