ಮಂಗಳೂರು: ‘ಮಾಧ್ಯಮ ಮಂಥನ’ ಕಾರ್ಯಾಗಾರ

Update: 2022-10-30 12:43 GMT

ಮಂಗಳೂರು: ದೇಶದಲ್ಲಿ ಬಿಜೆಪಿ ಬಲಿಷ್ಠ ಪಕ್ಷವಾಗಿ ಹೊರಹೊಮ್ಮಿದೆ. ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಪಕ್ಷಕ್ಕೆ ಸೇರ್ಪಡೆಗೊಳ್ಳುವವರ ಸಂಖ್ಯೆಯೂ ಹೆಚ್ಚಾಗುತ್ತಿವೆ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದರು.

ನಗರದ ಡೊಂಗರಕೇರಿಯ ಕೆನರಾ ಹೈಸ್ಕೂಲ್‌ನ ಸುಂದ್ರ ಸಭಾಭವನದಲ್ಲಿ ರವಿವಾರ ನಡೆದ ದ.ಕ., ಉಡುಪಿ, ಕೊಡಗು ಜಿಲ್ಲೆಗಳನ್ನು ಒಳಗೊಂಡ ಭಾರತೀಯ ಜನತಾ ಪಾರ್ಟಿಯ ಮಾಧ್ಯಮ ವಿಭಾಗದ ‘ಮಾಧ್ಯಮ ಮಂಥನ’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಾಧ್ಯಮರಂಗವು ಸಮಾಜದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ. ಅಭಿವೃದ್ಧಿ ಕಾಮಗಾರಿಗಳ ಸಹಿತ ಅಗತ್ಯ ಕಾರ್ಯಕ್ರಮಗಳತ್ತ ಜನಪ್ರತಿನಿಗಳ ಕಣ್ತೆರೆಸುವ, ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿಯನ್ನು ಮಾಧ್ಯಮಗಳು ಸಮರ್ಥವಾಗಿ ನಿರ್ವಹಿಸುತ್ತಾ ಬಂದಿವೆ ಎಂದು ವೇದವ್ಯಾಸ ಕಾಮತ್ ನುಡಿದರು.

ಬಿಜೆಪಿ ಮಂಗಳೂರು ದಕ್ಷಿಣ ಮಂಡಲದ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ‘ಸಮಕಾಲೀನ ಪರಿಸ್ಥಿತಿಯಲ್ಲಿ ಮಾಧ್ಯಮ ನಿರ್ವಹಣೆ’ ಕುರಿತು ಉಪನ್ಯಾಸ ನೀಡಿದರು. ಪತ್ರಕರ್ತ ಶಿವಕುಮಾರ್ ಸಾಮಾಜಿಕ ಜಾಲತಾಣದ ಮಹತ್ವ ಮತ್ತು ನಿರ್ವಹಣೆ ಕುರಿತು ವಿಷಯ ಮಂಡಿಸಿದರು. ಬಿಜೆಪಿ ರಾಜ್ಯ ವಕ್ತಾರ ಗಣೇಶ್ ಕಾರ್ಣಿಕ್ ಮುಂದಿನ ಕಾರ್ಯಯೋಜನೆಗಳ ಕುರಿತು ಮಾತನಾಡಿದರು.

ಬಿಜೆಪಿ ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಮಾಧ್ಯಮ ರಾಜ್ಯ ಸಮಿತಿ ಸದಸ್ಯ ರತನ್ ರಮೇಶ್ ಪೂಜಾರಿ ಉಪಸ್ಥಿತರಿದ್ದರು.

ಬಿಜೆಪಿ ದ.ಕ.ಜಿಲ್ಲಾ ವಕ್ತಾರ ರವಿಶಂಕರ ಮಿಜಾರು ಸ್ವಾಗತಿಸಿದರು. ಜಗದೀಶ ಶೇಣವ ವಂದಿಸಿದರು.

Similar News