ಕಾಶಿಗೆ ಹೊರಟ ಶಾಂಕರ ಏಕಾತ್ಮತಾ ಪಾದಯಾತ್ರೆ
ಪಡುಬಿದ್ರಿ: ಕಾಶಿಯಲ್ಲಿ ಮೂಲ ವೈಶ್ಯ ಗುರುಮಠದ ಪುನರ್ ನಿರ್ಮಾಣಕ್ಕಾಗಿ ಕೇರಳದಿಂದ ಉತ್ತರದ ಕಾಶೀ ವಿಶ್ವನಾಥ ಕ್ಷೇತ್ರದ ವರೆಗೆ ನಡೆಯುವ ಶಾಂಕರ ಏಕಾತ್ಮತಾ ಪಾದಯಾತ್ರೆಯು ರವಿವಾರ ಉಡುಪಿ ಜಿಲ್ಲೆಯ ಗಡಿಪ್ರದೇಶವಾದ ಹೆಜಮಾಡಿಯ ಮೂಲಕ ಪಡುಬಿದ್ರಿ ತಲುಪಿತು.
ವಿಶ್ವಪ್ರಸಿದ್ಧ ಹೊನ್ನಾವರದ ಹಳದಿಪುರ ವೈಶ್ಯ ವಾಣಿ ಸಮಾಜದ ಶ್ರೀ ಸಂಸ್ಥಾನ ಶಾಂತಾಶ್ರಮ ಮಠದ ಶ್ರೀ ವಾಮನಾಶ್ರಮ ಸ್ವಾಮೀಜಿ ಕಳೆದ ವಿಜಯದಶಮಿ ಅ.5 ರಂದು ತಮ್ಮ ಶಿಶ್ಯರೊಂದಿಗೆ ಪಾದಯಾತ್ರೆ ಆರಂಭಿಸಿದ್ದರು. ಅಕ್ಷಯ ತೃತೀಯ ಎ.23 ರಂದು ಕಾಶಿ ತಲುಪುವ ಯೋಜನೆ ಇದೆ ಎಂದು ಹೇಳಿದರು. ಅವರು ಪಾದಯಾತ್ರೆ ಮಾರ್ಗದಲ್ಲಿ ಪಡುಬಿದ್ರಿ ಶ್ರೀ ವೆಂಕಟರಮಣ ದೇವಳಕ್ಕೆ ಭೇಟಿ ನೀಡಿದರು. ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಶಾಂತ್ ಶೆಣೈ ಸ್ವಾಮೀಜಿಯವರನ್ನು ಸ್ವಾಗತಿಸುವ ಮೂಲಕ ಬರ ಮಾಡಿಕೊಂಡರು. ಮಧ್ಯಾಹ್ನದ ವಿಶ್ರಾಂತಿ ಬಳಿಕ ಸ್ವಾಮೀಜಿಯವರು ಕಾಪು ಕಡೆಗೆ ಪಾದಯಾತ್ರೆ ಬೆಳೆಸಿ ಇಂದು ಕಾಪು ಹಳೆ ಮಾರಿಗುಡಿಯಲ್ಲಿ ವಿಶ್ರಾಂತಿ ಹೊಂದಲಿದ್ದಾರೆ. ಸೋಮವಾರ ಕಾಪುವಿನಿಂದ ಪಾದಯಾತ್ರೆಯ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾಶಿಯಲ್ಲಿ ನಮ್ಮ ಸಂಸ್ಥಾನದ ಮೂಲಮಠ ಇದ್ದು, ನಮ್ಮ ಗುರು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಇಚ್ಛೆಯಿಂದ ಮೂಲ ಮಠವನ್ನು ಪುನರುತ್ಥಾನ ಗೊಳಿಸುವ ಸಲುವಾಗಿ ಈ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದರು.