ಕೋಟಿ ಕಂಠ ಗಾಯನ: ಸತ್ತಂತಿಹರನು ಬಡಿದೆಚ್ಚರಿಸಬಹುದೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಜ್ಯ ಸರಕಾರದ ವತಿಯಿಂದ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ 'ಕೋಟಿ ಕಂಠ ಗಾಯನ' ಯಶಸ್ವಿಯಾಗಿ ನಡೆದಿದ್ದು, ದೇಶ, ವಿದೇಶಗಳಿಂದ ಈ ಕಾರ್ಯಕ್ರಮಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 1.50 ಕೋಟಿಗೂ ಅಧಿಕ ಜನರು ಕನ್ನಡದ ಹಾಡುಗಳಿಗೆ ಧ್ವನಿಯಾಗುವ ಮೂಲಕ, ವಿಶ್ವಾದ್ಯಂತ ಕನ್ನಡತನವನ್ನು ಎಚ್ಚರಿಸಿದರು. ಮುಖ್ಯಮಂತ್ರಿ ಬೊಮ್ಮಾಯಿ ಸಹಿತ ನಾಡಿನ ಹಲವು ಗಣ್ಯಾತಿಗಣ್ಯರು ಈ ಹಾಡಿಗೆ ಧ್ವನಿ ಸೇರಿಸಿರುವುದು ವಿಶೇಷ. 50 ದೇಶ, 29 ರಾಜ್ಯಗಳು ಸೇರಿದಂತೆ ವಿಶ್ವದ ಉದ್ದಗಲದಿಂದ ಜನರು ಈ ದಾಖಲೆಗಳಲ್ಲಿ ಭಾಗವಹಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. ಕನ್ನಡ ಪರಂಪರೆಯ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಜಯ ಭಾರತ ಜನನಿಯ ತನುಜಾತೆ, ಉದಯವಾಗಲಿ ಚೆಲುವ ಕನ್ನಡ ನಾಡು, ವಿಶ್ವ ವಿನೂತನ ವಿದ್ಯಾಚೇತನ, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು...ಮೊದಲಾದ ಪದ್ಯಗಳು ವಿಶ್ವಾದ್ಯಂತ ಅನುರಣಿಸಿದವು. ಕನ್ನಡ ಜಾಗೃತಿಯ ನಿಟ್ಟಿನಲ್ಲಿ ಇದೊಂದು ಸಾರ್ಥಕ ಪ್ರಯತ್ನ ಎನ್ನುವುದರಲ್ಲಿ ಎರಡು ಮಾತಿಲ್ಲ.
ಆದರೆ ಈ ಗಾಯನ ನಮ್ಮಳಗಿನ ಕನ್ನಡತನವನ್ನು ಜಾಗೃತಗೊಳಿಸುವಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿವೆ? ಎನ್ನುವುದು ಮಾತ್ರ ಇನ್ನೂ ಸ್ಪಷ್ಟವಿಲ್ಲ. ಕೇವಲ ದಾಖಲೆಯನ್ನು ಸ್ಥಾಪಿಸುವುದು ಮತ್ತು ಜನರನ್ನು ಮನರಂಜಿಸುವುದಷ್ಟೇ ಈ ಗಾಯನದ ಉದ್ದೇಶವೆ? ಅಥವಾ ಈ ಮೂಲಕ ಜನರಲ್ಲಿ ಕನ್ನಡ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಅಜೆಂಡಾವನ್ನು ಸರಕಾರ ಹೊಂದಿದೆಯೆ? ಸಾಧಾರಣವಾಗಿ ಗಾಯನವೆನ್ನುವುದು ನಮ್ಮನ್ನು ವಾಸ್ತವದಿಂದ ಮೈಮರೆಸುತ್ತದೆ. ಹಾಡಿದ ಎಲ್ಲ ಪದ್ಯಗಳು ಹಲವು ದಶಕಗಳ ಹಿಂದೆ ಬರೆದಿರುವುದು. ಭಾವನಾತ್ಮಕವಾಗಿ ಜನರನ್ನು ಒಂದಾಗಿಸುವ ಉದ್ದೇಶದಿಂದ ನವೋದಯ ಕಾಲದಲ್ಲಿ ಬರೆದ ಪದ್ಯಗಳು ಅವು. ಈ ಹಾಡುಗಳು ಭಾವುಕಗೊಳಿಸಿ, ಮೈಮರೆಯುವಂತೆ ಮಾಡುವುದರಿಂದ ಕನ್ನಡಕ್ಕೆ ಯಾವ ಪ್ರಯೋಜನವೂ ಇಲ್ಲ. ಕುವೆಂಪು ಅವರ 'ಬಾರಿಸು ಕನ್ನಡ ಡಿಂಡಿಮವ' ಕವಿತೆ ಈ ಕಾರಣಕ್ಕಾಗಿಯೇ 'ಸತ್ತಂತಿಹರನು ಬಡಿದೆಚ್ಚರಿಸು' ಎಂದು ಕರೆ ನೀಡುತ್ತದೆ. ಕನ್ನಡಕ್ಕಾಗಿ ಕೈ ಎತ್ತಲು ಆದೇಶಿಸುತ್ತದೆ. ಕುವೆಂಪು ಅವರು ಕವಿತೆ ಬರೆದ ಕಾಲದಲ್ಲಿ ಇದ್ದುದಕ್ಕಿಂತಲೂ ಕನ್ನಡದ ಸ್ಥಿತಿ ಇಂದು ಹೀನಾಯವಾಗಿದೆ. ಹಿಂದಿ ಬರೇ ಭಾಷೆಯಾಗಿ ಮಾತ್ರವಲ್ಲ, ಸರ್ವಾಧಿಕಾರಿ ರೂಪದಲ್ಲಿ ಕರ್ನಾಟಕದ ಮೇಲೆ ಎರಗಿದೆ. ಅದು ಕರ್ನಾಟಕದ ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಬದುಕನ್ನು ನಿಯಂತ್ರಿಸುವ ಪ್ರಯತ್ನವನ್ನು ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ, ಕೋಟಿ ಕಂಠ ಗಾಯನ ಕರ್ನಾಟಕವನ್ನು ಬಡಿದೆಚ್ಚರಿಸುವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎನ್ನುವ ಆತ್ಮವಿಮರ್ಶೆ ಇಂದಿನ ಅಗತ್ಯವಾಗಿದೆ.
'ಈ ಗಾಯನ ದಾಖಲೆ ಸೃಷ್ಟಿಸಿದೆ' ಎಂದು ನಾಡು ಸಂಭ್ರಮಿಸಿದ ಮರುದಿನವೇ, ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗವು ಹಮ್ಮಿಕೊಂಡ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಕೈ ಬಿಟ್ಟಿರುವುದು ಸುದ್ದಿಯಾಗಿದೆ. ಸಂಸತ್ ಸಮಿತಿಯು ಇತ್ತೀಚೆಗೆ ರಾಷ್ಟ್ರಪತಿಗಳಿಗೆ ನೀಡಿದ ವರದಿಯಲ್ಲಿ, 'ಎಲ್ಲ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಬೇಕು' ಎಂದು ಶಿಫಾರಸು ಮಾಡಿದೆ. ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡಿ ಎಂದು ಇತ್ತೀಚೆಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಕರೆ ನೀಡಿದ್ದರು. ಕನ್ನಡದ ಪಾಲಿಗೆ ಕೇಂದ್ರ ಸರಕಾರ ''ಬಾಯಲ್ಲಿ ಬೆಣ್ಣೆ, ಬಗಲಲ್ಲಿ ದೊಣ್ಣೆ' ನೀತಿಯನ್ನು ಅನುಸರಿಸುತ್ತಾ ಬರುತ್ತಿದೆ. ಗಾಯನ ಕೆಲವು ಕ್ಷಣ ನಮ್ಮನ್ನು ಮೈಮರೆಸಬಲ್ಲವು. ಆದರೆ ವಾಸ್ತವದ ಗಾಯಗಳಿಗೆ ಅದು ಮದ್ದು ಹಚ್ಚುವ ಶಕ್ತಿಯನ್ನು ಹೊಂದಿಲ್ಲ. 'ಕೋಟಿ ಕಂಠ ಗಾಯನ'ವನ್ನು ಕೇಳಿ, ಕರ್ನಾಟಕದ ಜನರ ಕುರಿತಂತೆ, ಕನ್ನಡ ಭಾಷೆಯ ಕುರಿತಂತೆ ಕೇಂದ್ರ ಸರಕಾರ ತನ್ನ ನೀತಿಯನ್ನು ಬದಲಿಸಿಲ್ಲ. ಅದು ಬದಲಾಗಬೇಕಾದರೆ ಕರ್ನಾಟಕ ಸರಕಾರ ಕನ್ನಡದ ಕುರಿತಂತೆ ಜಾಗೃತಿಯನ್ನು ಹೊಂದಬೇಕು. ಮಾನಸಿಕವಾಗಿ ಹಿಂದಿಯ ಗುಲಾಮರಾಗಿ, ಬಾಯಿಯಲ್ಲಿ ಕನ್ನಡ ಹಾಡುಗಳನ್ನು ಹಾಡಿದರೆ, ಕನ್ನಡಿಗರಿಗೆ ನ್ಯಾಯ ದೊರಕುವುದಿಲ್ಲ.
ಕೇಂದ್ರ ಸರಕಾರ ಕನ್ನಡ ವಿರೋಧಿ ನೀತಿಗಳನ್ನು ಜಾರಿಗೊಳಿಸಿದರೆ, ಅದನ್ನು ಪ್ರಶ್ನಿಸುವ, ಅದರ ವಿರುದ್ಧ ಪ್ರತಿಭಟಿಸುವ ಶಕ್ತಿಯನ್ನು ರಾಜ್ಯ ಸರಕಾರ ಹೊಂದಿರಬೇಕು. ಆಗ ಮಾತ್ರ ಕನ್ನಡಕ್ಕೆ ನ್ಯಾಯ ಸಿಗಲು ಸಾಧ್ಯ. ಈಗಾಗಲೇ ಕೇರಳ, ತಮಿಳುನಾಡು ಹಿಂದಿಯ ವಿರುದ್ಧ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿವೆ. ಹಿಂದಿ ಹೇರಿಕೆಯ ವಿರುದ್ಧ ಪ್ರಧಾನಿಗೆ ನೇರ ಪತ್ರಗಳನ್ನು ಅಲ್ಲಿನ ಮುಖ್ಯಮಂತ್ರಿಗಳು ಬರೆದಿದ್ದಾರೆ. ಆದರೆ ಕರ್ನಾಟಕದಲ್ಲಿ ಇದಕ್ಕೆ ವ್ಯತಿರಿಕ್ತವಾದುದು ನಡೆಯುತ್ತಿದೆ. ಇಲ್ಲಿನ ಸರಕಾರವೇ ಮುಂದೆ ನಿಂತು, ಹಿಂದಿಯನ್ನು ರಾಜ್ಯದ ಜನತೆಯ ಮೇಲೆ ಹೇರಿ, ಪ್ರಧಾನಿ ಮೋದಿಯನ್ನು ಮೆಚ್ಚಿಸುವುದಕ್ಕೆ ಮುಂದಾಗಿದೆ. ಅಷ್ಟೇ ಅಲ್ಲ, ಉತ್ತರ ಭಾರತದ ರಾಜ್ಯಗಳನ್ನು ಕರ್ನಾಟಕಕ್ಕೆ ಮಾದರಿಯಾಗಿಸಲು ಸರಕಾರವೇ ಯತ್ನಿಸುತ್ತಿದೆ. ಇಂದು ಶಿಕ್ಷಣ, ಐಟಿ-ಬಿಟಿ, ಆರೋಗ್ಯ ಮೊದಲಾದ ಕ್ಷೇತ್ರಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳು ದೊಡ್ಡ ಮಟ್ಟದ ಸಾಧನೆಗಳನ್ನು ಮಾಡಿವೆ. ಇದೇ ಸಂದರ್ಭದಲ್ಲಿ ಉತ್ತರ ಭಾರತದ ರಾಜ್ಯಗಳು ಬಡತನ, ಅನಕ್ಷರತೆಗಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿವೆ. ಹೀಗಿರುವಾಗ, ಕರ್ನಾಟಕ ಹೊಸದಾಗಿ ಹಿಂದಿಯನ್ನು ಕಲಿತು ಸಾಧಿಸುವುದಾದರೂ ಏನನ್ನು? ಕರ್ನಾಟಕದ ಮೇಲೆ ಹಿಂದಿ ಹೇರುವ ಮೂಲಕ ಕೇಂದ್ರ ಸರಕಾರ ಆಯಕಟ್ಟಿನ ಜಾಗಗಳಲ್ಲಿ ಹಿಂದಿ ಭಾಷಿಗರನ್ನು ತುಂಬುವ ದುರುದ್ದೇಶವನ್ನು ಹೊಂದಿದೆ. ಕರ್ನಾಟಕದ ಸಂಪನ್ಮೂಲಗಳನ್ನು ಬಳಸಿ ಹಿಂದಿ ಭಾಷಿಗರನ್ನು ಸಾಕುವ ಕೆಲಸಕ್ಕೆ ಕೇಂದ್ರ ಮುಂದಾಗಿದೆ.
ಕೇಂದ್ರ ಸರಕಾರದ ಈ ಹುನ್ನಾರಗಳ ಅರಿವಿದ್ದೂ ರಾಜ್ಯದ ರಾಜಕೀಯ ನಾಯಕರು ಪ್ರಧಾನಿ ಮೋದಿಗೆ ಎದುರು ಮಾತನಾಡಲಾಗದೆ ಅಸಹಾಯಕರಂತೆ ವರ್ತಿಸುತ್ತಿದ್ದಾರೆ. ಅದರ ಭಾಗವಾಗಿಯೇ, ಕೇಂದ್ರ ಸಿಬ್ಬಂದಿ ಆಯೋಗವು ಪರೀಕ್ಷೆಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‌ಗಷ್ಟೇ ಆದ್ಯತೆಯನ್ನು ನೀಡಲು ಮುಂದಾಗಿದೆ. ಈವರೆಗೆ ಇದನ್ನು ವಿರೋಧಿಸಿ, ಸರಕಾರದ ಯಾವೊಬ್ಬ ಸಚಿವನೂ ಹೇಳಿಕೆಯನ್ನು ನೀಡಿಲ್ಲ. ಇದು ಕರ್ನಾಟಕದ ದುರಂತವಾಗಿದೆ. ಇಷ್ಟೇ ಅಲ್ಲ, ಕನ್ನಡತನವನ್ನು ಪ್ರತಿನಿಧಿಸುವ ನಾಯಕರನ್ನು ಮುನ್ನೆಲೆಗೆ ತಂದು ಕರ್ನಾಟಕದ ಹಿರಿಮೆಯನ್ನು ಸಾರಬೇಕಾದ ಸರಕಾರ, ಉತ್ತರ ಭಾರತದ ಸಾವರ್ಕರ್, ಹೆಡಗೆವಾರ್, ಶಿವಾಜಿ ಮೊದಲಾದ ಅಸ್ಮಿತೆಗಳನ್ನು ಕನ್ನಡದ ಮೇಲೆ ಹೇರಲು ಮುಂದಾಗಿದೆ. ಕನ್ನಡ ನಾಡು ನುಡಿಯನ್ನು ಬೆಳೆಸಬೇಕಾದ ಸರಕಾರವೇ ಕನ್ನಡದ ವಿರುದ್ಧದ ಸಂಚಿನಲ್ಲಿ ಭಾಗಿಯಾದರೆ, ಅದೆಷ್ಟು ಕೋಟಿ ಕಂಠಗಳು ಒಂದಾಗಿ ಗಾಯನವನ್ನು ಹಾಡಿದರೆ ಏನು ಪ್ರಯೋಜನ? ನಮ್ಮ ಕನ್ನಡ ಡಿಂಡಿಮ ಮೊತ್ತ ಮೊದಲು, ಸತ್ತಂತಿಹ ನಮ್ಮ ನಾಯಕರನ್ನು ಎಚ್ಚರಿಸುವ ಕೆಲಸವನ್ನು ಮಾಡಬೇಕಾಗಿದೆ. ಅವರು ಎಚ್ಚರವಾದರೆ, ಸಕಲ ಕನ್ನಡಿಗರೂ ಎಚ್ಚರಗೊಳ್ಳುತ್ತಾರೆ. ಸಿರಿಗನ್ನಡ ಗೆಲ್ಲುತ್ತದೆ, ಬಾಳುತ್ತದೆ.