ಹೆಣ್ಣು ಭ್ರೂಣ ಹತ್ಯೆ: ಆತಂಕಕಾರಿ ಅಂಶಗಳು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಇಂದು ನವೆಂಬರ್ 1, ಕರ್ನಾಟಕ ರಾಜ್ಯ ಉದಯವಾದ ದಿನ. ಎಲ್ಲೆಡೆ ರಾಜ್ಯೋತ್ಸವ ಆಚರಣೆ ಸಂಭ್ರಮದಿಂದ ನಡೆಯುತ್ತಿದೆ. ಇನ್ನೊಂದೆಡೆ ರಾಜ್ಯದಲ್ಲಿ ಹೆಣ್ಣು ಮಕ್ಕಳ ಸಂಖ್ಯಾ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿರುವ ಆತಂಕಕಾರಿ ಅಂಕಿ ಅಂಶಗಳು ಬೆಳಕಿಗೆ ಬಂದಿವೆ. ಒಕ್ಕೂಟ ಸರಕಾರ ನಡೆಸಿದ 2020ರ ಸಮೀಕ್ಷಾ ವರದಿಯಿಂದ ಈ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ. ಮುಂಚೆ ಲಿಂಗಾನುಪಾತ ಉತ್ತರ ಭಾರತದ ರಾಜ್ಯಗಳಲ್ಲಿ ವ್ಯಾಪಕವಾಗಿತ್ತು. ಈಗಲೂ ಇದೆ. ಆದರೆ ಈ ಪಿಡುಗು ದಕ್ಷಿಣ ಭಾರತದ ಕರ್ನಾಟಕದಲ್ಲೂ ಹಬ್ಬುತ್ತಿರುವುದು ನಿರ್ಲಕ್ಷ ಮಾಡಬೇಕಾದ ವಿಷಯವಲ್ಲ.
ಕರ್ನಾಟಕದಲ್ಲಿ ಈಗ ಒಂದು ಸಾವಿರ ಗಂಡು ಮಕ್ಕಳಿಗೆ 916 ಹೆಣ್ಣು ಮಕ್ಕಳಿದ್ದಾರೆ ಎಂದು ಈ ಸಮೀಕ್ಷಾ ವರದಿ ತಿಳಿಸಿದೆ. ನಮ್ಮ ರಾಜ್ಯದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಾವಿರಕ್ಕೆ 942 ಹೆಣ್ಣು ಮಕ್ಕಳು ಹಾಗೂ ನಗರ ಪ್ರದೇಶಗಳಲ್ಲಿ 871 ಹೆಣ್ಣು ಮಕ್ಕಳಿದ್ದಾರೆ ಎಂಬ ಸಂಗತಿ ಕಳವಳಕಾರಿಯಾಗಿದೆ. ರಾಜ್ಯ ಸರಕಾರದ ಆರೋಗ್ಯ ಇಲಾಖೆ ಕೊಂಚ ಎಚ್ಚರ ವಹಿಸಿದ್ದರೆ ಲಿಂಗಾನುಪಾತದ ಪ್ರಮಾಣ ಇಷ್ಟು ಆತಂಕಕಾರಿಯಾಗಿ ಕುಸಿಯುತ್ತಿರಲಿಲ್ಲ.
ರಾಜ್ಯದಲ್ಲಿ ಲಿಂಗ ಪತ್ತೆ ಹಚ್ಚುವ ಭ್ರೂಣ ಪರೀಕ್ಷೆಯನ್ನು 1994ರಲ್ಲೇ ನಿರ್ಬಂಧಿಸಲಾಗಿದೆ ಎಂಬುದು ನಿಜ. ಆದರೂ ಭ್ರೂಣ ಪತ್ತೆ ಮಾಡುವ ಸ್ಕಾನಿಂಗ್ ಕೇಂದ್ರಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಕಠಿಣ ಕಾನೂನು ಜಾರಿಗೆ ಬಂದ ನಂತರ ರಾಜ್ಯದ ಗಡಿ ಪ್ರದೇಶದಲ್ಲಿ ಅಕ್ಕಪಕ್ಕದ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳಿಗೆ ಹೋಗಿ ಭ್ರೂಣ ಪತ್ತೆ ಹಚ್ಚಿ ಹೆಣ್ಣು ಭ್ರೂಣವನ್ನು ಹೊಸಕಿ ಹಾಕುವ ಕಾರ್ಯ ಸಂಬಂಧಿಸಿದ ಅಧಿಕಾರಿಗಳ ಕಣ್ಣು ತಪ್ಪಿಸಿ ನಡೆಯುತ್ತಲೇ ಇದೆ. ಈ ಕುರಿತು ಕೆಲ ಪ್ರಕರಣಗಳನ್ನು ದಾಖಲಿಸಲಾಗಿದ್ದರೂ ತಡೆಯಲು ಸಾಧ್ಯವಾಗಿಲ್ಲ.
ಹೆಣ್ಣು ಭ್ರೂಣ ಹತ್ಯೆಯಂತಹ ಅತ್ಯಂತ ಅಮಾನವೀಯ, ಪೈಶಾಚಿಕ ಕೃತ್ಯವನ್ನು ಬರೀ ಸರಕಾರವೊಂದೇ ತಡೆಯಲು ಆಗುವುದಿಲ್ಲ. ಸಮಾಜ ಕೂಡ ಈ ಬಗ್ಗೆ ಎಚ್ಚರ ವಹಿಸಬೇಕು. ಹಿಂದೂ ಮಹಿಳೆಯರು ಹೆಚ್ಚು ಮಕ್ಕಳನ್ನು ಹೆತ್ತು ಧರ್ಮ ರಕ್ಷಕರ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಕರೆ ಕೊಡುವ ಸ್ವಯಂ ಘೋಷಿತ ಧರ್ಮ ರಕ್ಷಕರು, ಹೆಚ್ಚಿನ ಮಠಾಧೀಶರು, ಧರ್ಮ ಗುರುಗಳು ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ ಅಪ್ಪಿತಪ್ಪಿಯೂ ಮಾತಾಡುವುದಿಲ್ಲ. ರಾಜಕೀಯ ಪಕ್ಷಗಳೂ ಧ್ವನಿ ಎತ್ತುವುದಿಲ್ಲ. ಇದನ್ನು ಪ್ರತಿಭಟಿಸಬೇಕಾದ ಯುವ ಸಮೂಹವನ್ನು ಈಗಾಗಲೇ ಅಡ್ಡ ಹಾದಿ ಹಿಡಿಸಿ ದಾರಿ ತಪ್ಪಿಸಲಾಗಿದೆ. ಅಂತಲೇ ಹೆಣ್ಣನ್ನು ಭ್ರೂಣದಲ್ಲೇ ಹೊಸಕಿ ಹಾಕುವ ಕಾರ್ಯ ರಾಜಾರೋಷವಾಗಿ ನಡೆದಿದೆ. ಲಿಂಗಾನುಪಾತದಂತಹ ವಿಷಯದಲ್ಲಿ ಕರ್ನಾಟಕ ಮಾತ್ರವಲ್ಲ ಜಾಗತಿಕವಾಗಿ ಭಾರತಕ್ಕೆ ಒಳ್ಳೆಯ ಹೆಸರೇನೂ ಇಲ್ಲ ಎಂಬುದು ಕಹಿಯಾದರೂ ಸತ್ಯ ಸಂಗತಿ. ಭಾರತ ಒಂದೆಡೆ ಆಧುನಿಕತೆಗೆ ತೆರೆದು ಕೊಳ್ಳುತ್ತಿದೆ. ಇನ್ನೊಂದು ಕಡೆ ಹೆಣ್ಣನ್ನು ಹತ್ತಿಕ್ಕುವ ಸಾಂಸ್ಕೃತಿಕ ರಾಜಕಾರಣ ಧರ್ಮದ ಹೆಸರಿನಲ್ಲಿ ನಡೆಯುತ್ತಿದೆ. ಹೆಣ್ಣು ಮಕ್ಕಳು ಯಾವ ಕೆಲಸ ಮಾಡಬೇಕು, ಎಂತಹ ಬಟ್ಟೆಯನ್ನು ತೊಡಬೇಕು, ಯಾರನ್ನು ವಿವಾಹವಾಗಬೇಕು ಎಂಬುದನ್ನು ಇನ್ಯಾರೂ ಬಲವಂತವಾಗಿ ನಿರ್ದೇಶಿಸುವ ಮಾತುಗಳು, ಬಿಟ್ಟಿ ಉಪದೇಶಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.
ಕರ್ನಾಟಕ ಮಾತ್ರವಲ್ಲ ಭಾರತದ ಇತರ ರಾಜ್ಯಗಳಲ್ಲೂ ಹೆಣ್ಣು ಮಕ್ಕಳ ಪ್ರಮಾಣ ಕುಸಿಯುತ್ತಲೇ ಇದೆ. ಮುಂಚೆ ಪಂಜಾಬ್ ಮತ್ತು ಹರ್ಯಾಣದಂತಹ ರಾಜ್ಯಗಳಿಗೆ ಸೀಮಿತವಾಗಿದ್ದ ಈ ಪ್ರವೃತ್ತಿ ದೇಶದ ಇತರ ಭಾಗಗಳಿಗೂ ಹಬ್ಬುತ್ತಿದೆ. ವಿದ್ಯಾವಂತರೇ ಇಂತಹ ಪಾತಕ ಕೃತ್ಯಗಳಲ್ಲಿ ತೊಡಗಿರುವುದು ಇನ್ನೂ ಆತಂಕದ ಸಂಗತಿಯಾಗಿದೆ.
ಲಿಂಗ ತಾರತಮ್ಯದ ನಿವಾರಣೆಗೆ ಸಂಬಂಧಿಸಿದ ಜಾಗತಿಕ ಮಟ್ಟದ ಸೂಚ್ಯಂಕದಲ್ಲೂ ಭಾರತದ ಸ್ಥಾನ ಮತ್ತಷ್ಟು ಕುಸಿದಿದೆ. ವಿಶ್ವ ಆರ್ಥಿಕ ಫೋರಂನ ಲಿಂಗ ತಾರತಮ್ಯ ಕುರಿತ ಇತ್ತೀಚಿನ ವರದಿಯ ಪ್ರಕಾರ ವಿಶ್ವದ 156 ರಾಷ್ಟ್ರ ಗಳ ಪಟ್ಟಿಯಲ್ಲಿ ಭಾರತದ ಸ್ಥಾನ 140ಕ್ಕೆ ಕುಸಿದಿದೆ. ದಕ್ಷಿಣ ಏಶ್ಯದಲ್ಲಿ ಅತ್ಯಂತ ಕಳಪೆ ಸಾಧನೆಯನ್ನು ತೋರಿದ ಮೂರು ದೇಶಗಳಲ್ಲಿ ಭಾರತವೂ ಒಂದು ಎಂಬುದು ಕಳವಳಕಾರಿ ಸಂಗತಿಯಾಗಿದೆ. ಸರಕಾರವೇನೋ 'ಬೇಟಿ ಬಚಾವೋ, ಬೇಟಿ ಪಢಾವೋ'ದಂಥ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕೆಲವು ರಾಜ್ಯ ಸರಕಾರಗಳು ಮಹಿಳೆಯರ ಏಳಿಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿವೆ. ಆದರೂ ಲಿಂಗಾನುಪಾತದ ಪ್ರಮಾಣದಲ್ಲಿ ವ್ಯತ್ಯಾಸವಾಗಿಲ್ಲ.ಮಹಿಳೆಯರ ಪರಿಸ್ಥಿತಿ ಸುಧಾರಣೆಯಾಗಿಲ್ಲ.
ಮೀಸಲು ವ್ಯವಸ್ಥೆಯಿಂದಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ದೊರಕಿದೆ. ಆದರೆ ರಾಜ್ಯಗಳ ವಿಧಾನಸಭೆ ಹಾಗೂ ಸಂಸತ್ತಿನ ಉಭಯ ಸದನಗಳಲ್ಲಿ ಮಹಿಳೆಯರಿಗೆ ಅವರ ಜನಸಂಖ್ಯಾ ಪ್ರಮಾಣಕ್ಕನುಗುಣವಾಗಿ ನ್ಯಾಯವಾದ ಪಾಲು ದೊರಕಿಲ್ಲ. ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ವಿಧೇಯಕ ಧೂಳು ತಿನ್ನುತ್ತಾ ಬಿದ್ದಿದೆ. ಪುರುಷಾಧಿಪತ್ಯದ ಸಮಾಜ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲು ನಿರಾಕರಿಸುತ್ತಿದೆ. ಇದಕ್ಕೆ ಸರಕಾರವನ್ನು ಮಾತ್ರ ದೂರಿ ಪ್ರಯೋಜನವಿಲ್ಲ. ಒಟ್ಟಾರೆ ಭಾರತೀಯ ಸಮಾಜ ಮೇಲ್ನೋಟಕ್ಕೆ ಬದಲಾಗಿರುವಂತೆ ಕಾಣಿಸಿಕೊಂಡರೂ ಪುರುಷಾಧಿಪತ್ಯದ ಬೇರುಗಳು ಸಡಿಲವಾಗಿಲ್ಲ.
ನಮ್ಮ ಸಮಾಜದಲ್ಲಿ ಈಗಲೂ ಗಂಡು ಮಕ್ಕಳಿಗೆ ಸಿಗುವ ಆದ್ಯತೆ ಹೆಣ್ಣು ಮಕ್ಕಳಿಗೆ ಸಿಗುವುದಿಲ್ಲ. ಹಾಗಾಗಿಯೇ ಹೆಣ್ಣು ಭ್ರೂಣ ಹತ್ಯೆಗಳು ವ್ಯಾಪಕವಾಗಿ ನಡೆಯುತ್ತಿವೆ. ನಮ್ಮ ಸಮಾಜದ ಪುರುಷ ಪ್ರಾಧಾನ್ಯದ ಮನೋಭಾವ ಬದಲಾಗಬೇಕಾಗಿದೆ. ಧರ್ಮದ ಉದ್ಧಾರ ಮಾಡಲು ಹೊರಟವರು, ರಾಷ್ಟ್ರೀಯತೆಯ ಬಗ್ಗೆ ಮಾತಾಡುವವರು ಸೇರಿದಂತೆ ನಮ್ಮ ಸಮಾಜದ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರು ಲಿಂಗ ಅಸಮಾನತೆಯನ್ನು ತೊಲಗಿಸಲು ಮುಂದಾಗಬೇಕು. ಹೆಣ್ಣು ಭ್ರೂಣ ಹತ್ಯೆಯನ್ನು ಘನ ಘೋರ ಅಪರಾಧ ಎಂದು ಪರಿಗಣಿಸಿ ಇದಕ್ಕೆ ಕಾರಣರಾಗುವ ಪಾತಕಿಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಬೇಕು.