ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರ ಸಭೆ

Update: 2022-11-01 15:22 GMT

ಮಂಗಳೂರು, ನ.1: ಆಮ್ ಆದ್ಮಿ ಪಾರ್ಟಿ (ಎಎಪಿ)ಯ ಕಾರ್ಯಕರ್ತರ ಸಭೆಯು ಮಂಗಳವಾರ ನಗರದ ಡಾನ್ ಬೊಸ್ಕೋ ಹಾಲ್‌ನಲ್ಲಿ ನಡೆಯಿತು. ಸಭಾ ಕಾರ್ಯಕ್ರಮದ ಮೊದಲು ನಗರದ ಪಂಪ್‌ವೆಲ್‌ನಿಂದ ಪಾದಯಾತ್ರೆ, ಬಲ್ಮಠ ಸೋಜಾ ಅರ್ಕೆಡ್‌ನಲ್ಲಿ ಎಎಪಿ ಕಾರ್ಯಾಲಯದ ಉದ್ಘಾಟನೆ ನೆರವೇರಿತು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಎಎಪಿ ಕರ್ನಾಟಕ ರಾಜಾಧ್ಯಕ್ಷ ಪೃಥ್ವಿ ರೆಡ್ಡಿ ‘ನಾವು ರಾಜಕೀಯ ಮಾಡಲು ಬಂದವರಲ್ಲ. ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸಲು ಬಂದವರು. ನಮ್ಮದು ಶೂನ್ಯ ಕಮಿಷನ್ ಮತ್ತು ಶೇ.ನೂರರಷ್ಟು ಕೆಲಸ ಮಾಡುವ ಪಕ್ಷ ಎಂಬುದನ್ನು ಎಎಪಿ ಆಡಳಿತಕ್ಕೆ ಬಂದ ರಾಜ್ಯಗಳಲ್ಲಿ ತೋರಿಸಿಕೊಟ್ಟಿದ್ದೇವೆ ಎಂದರು.

ರಾಜ್ಯದ ಮೂರು ಪ್ರಮುಖ ಪಕ್ಷಗಳು ಕೇವಲ ರಾಜಕೀಯ ಮಾಡಿಕೊಂಡು ಬಂದಿದೆ. ಆದರೆ ಎಎಪಿ ರಾಜಕೀಯ ವಿಚಾರಗಳನ್ನೇ ಬದಲಾಯಿಸಿಬಿಟ್ಟಿದೆ. ದಿಲ್ಲಿಯಲ್ಲಿ  ಸರಕಾರಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದಿದ ವಿದ್ಯಾರ್ಥಿಗಳಲ್ಲಿ 1 ಸಾವಿರಕ್ಕೂ ಹೆಚ್ಚು ಮಂದಿ ಐಐಟಿ, ನೀಟ್‌ನಲ್ಲಿ ಉತ್ತಮ ಅಂಕಗಳಿಸಿ ಹೊರಬರುತ್ತಿದ್ದಾರೆ. ಎಎಪಿ ಭ್ರಷ್ಟಚಾರವನ್ನು ತೊಲಗಿಸಿ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸಿದೆ ಎಂದು ಪೃಥ್ವಿರೆಡ್ಡಿ ಅಭಿಪ್ರಾಯಪಟ್ಟರು.

ಶೇ.40ರಷ್ಟು ಕಮಿಷನ್ ಎಂಬುದು ಕೇವಲ ಹಣದ ವಿಚಾರವಲ್ಲ. ಶಾಲೆ, ಆಸ್ಪತ್ರೆ, ಸೇತುವೆ ಕಟ್ಟುವಾಗ ಶೇ.40ರಷ್ಟು ಕಬ್ಬಿಣ ಕಡಿಮೆ ಹಾಕಿದರೆ ಬೀಳುವ  ಸಾಧ್ಯತೆ ಹೆಚ್ಚಿರುತ್ತದೆ.  ಈ ಶಾಲೆ, ಆಸ್ಪತ್ರೆ, ಸೇತುವೆಯಲ್ಲಿ ಹೋಗುವ ಮಂದಿ ಕೂಡ ನಾವಿರುತ್ತೇವೆ. ಇಂತಹ ವಿಚಾರದಲ್ಲಿ ಸಹಿಸುವುದು ಸರಿಯಲ್ಲ ಎಂದು ಪೃಥ್ವಿ ರೆಡ್ಡಿ ನುಡಿದರು.

ಪುರುಷೋತ್ತಮ ಕೋಲ್ಪೆ ಸ್ವಾಗತಿಸಿದರು. ಉದ್ಯಮಿ ಮೈಕಲ್ ಡಿಸೋಜ, ಎಎಪಿ ದ.ಕ. ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್, ಎಎಪಿ ಮುಖಂಡರಾದ ವಿವೇಕಾನಂದ ಸಾಲಿನ್ಸ್, ಅಶೋಕ ಎಡಮಲೆ, ಬೆನೆಟ್ ನವಿತಾ ಮೊರಾಸ್, ದಿವಾಕರ್ ಸನಿಲ್, ಬಾಲಕೃಷ್ಣ ನಾಯಕ್, ವಿಜಯನಾಥ ವಿಟ್ಠಲ ಶೆಟ್ಟಿ, ವೇಣುಗೋಪಾಲ್, ಡಾ.ಬಿ.ಕೆ. ವಿಶುಕುಮಾರ್, ಸುಮನ ಬೆಳ್ಳಾರ್ಕರ್ ಮತ್ತಿತರರು ಉಪಸ್ಥಿತರಿದ್ದರು.

Similar News