ಶ್ರೀಲಂಕಾ: ತೆರಿಗೆ ಹೆಚ್ಚಳ ವಿರೋಧಿಸಿ ಪ್ರತಿಭಟನೆ

Update: 2022-11-02 17:19 GMT

ಕೊಲಂಬೊ, ನ.2: ಏಳು ದಶಕಗಳಲ್ಲೇ ಎದುರಾದ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಹೆಣಗುತ್ತಿರುವ ಶ್ರೀಲಂಕಾದಲ್ಲಿ ತೆರಿಗೆ ಹೆಚ್ಚಳ(Tax increase), ಹಣದುಬ್ಬರವನ್ನು ವಿರೋಧಿಸಿ ಮತ್ತು ಆಡಳಿತದ ನೇತೃತ್ವದಲ್ಲಿ ದಮನ ನಡೆಯುತ್ತಿದೆ ಎಂದು ಆರೋಪಿಸಿ ರಾಜಧಾನಿ ಕೊಲಂಬೊ(Colombo)ದಲ್ಲಿ ಬುಧವಾರ ನೂರಾರು ಮಂದಿ ಪ್ರತಿಭಟನಾ ಜಾಥಾ ನಡೆಸಿದರು.

ವಿರೋಧ ಪಕ್ಷಗಳು, ಕಾರ್ಮಿಕ ಸಂಘಟನೆಗಳು, ಸಂಘ, ಸಂಸ್ಥೆಗಳು ಜಂಟಿಯಾಗಿ ಸಂಘಟಿಸಿದ್ದ ಸರಕಾರ ವಿರೋಧಿ ಪ್ರತಿಭಟನೆ ಅಧ್ಯಕ್ಷರ ನಿವಾಸ ಹಾಗೂ ಇತರ ಸಚಿವಾಲಯಗಳು ಇರುವ ಕೊಲಂಬೊದ ಕೇಂದ್ರ ಪ್ರದೇಶದತ್ತ ಮುಂದುವರಿದಾಗ ಪೊಲೀಸರು ತಡೆದರು. ‘ರನಿಲ್ ಗೋ ಹೋಮ್’ (Ranil Go Home)ಎಂಬ ಬ್ಯಾನರ್ ಹಿಡಿದಿದ್ದ ಪ್ರತಿಭಟನಾಕಾರರು ದೇಶದಲ್ಲಿ ಹೊಸದಾಗಿ ಸಾರ್ವತ್ರಿಕ ಚುನಾವಣೆ ನಡೆಸುವಂತೆ ಘೋಷಣೆ ಕೂಗಿದರು.

ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ (Ranil Wickramasinghe)ನವೆಂಬರ್ 14ರಂದು ಮಂಡಿಸಲಿರುವ ಬಜೆಟ್ ನಲ್ಲಿ ತೆರಿಗೆ ಹೆಚ್ಚಳದ ಘೋಷಣೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಸರಕಾರ ಈಗಾಗಲೇ ಕಾರ್ಪೊರೇಟ್ ಮತ್ತು ವೈಯಕ್ತಿಕ ಆದಾಯ ತೆರಿಗೆಯನ್ನು 30%ಕ್ಕೆ ಹೆಚ್ಚಿಸಿದೆ. ಜೊತೆಗೆ, ಅಕ್ಟೋಬರ್ ಅಂತ್ಯಕ್ಕೆ ದೇಶದಲ್ಲಿ ಹಣದುಬ್ಬರ ಪ್ರಮಾಣ 66%ಕ್ಕೆ ತಲುಪಿದೆ.

ಜನತೆ ಒಪ್ಪೊತ್ತಿನ ಊಟಕ್ಕೂ ಕಷ್ಟ ಪಡುತ್ತಿರುವಾಗ ಜನರ ನೆರವಿಗೆ ಧಾವಿಸುವ ಬದಲು ಸರಕಾರ ಇನ್ನಷ್ಟು ತೆರಿಗೆಯ ಭಾರ ಹೊರಿಸುತ್ತಿದೆ. ಸಮಸ್ಯೆಗೆ ಪರಿಹಾರ ಹುಡುಕುವುದು ಈಗಿನ ಅಗತ್ಯವಾಗಿದೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಿಲೋನ್ ಟೀಚರ್ಸ್ ಯೂನಿಯನ್‌ನ ಕಾರ್ಯದರ್ಶಿ ಜೋಸೆಫ್ ಸ್ಟಾಲಿನ್ (Joseph Stalin)ಹೇಳಿದ್ದಾರೆ.

Similar News