ಅಳಿವಿನಂಚಿನಲ್ಲಿ ಭಾಷಾ ವೈವಿಧ್ಯ!

Update: 2022-12-03 05:06 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಒಂದು ಬೃಹತ್ ಮರವಿದ್ದರೆ, ಅಲ್ಲಿ ಒಂದು ಜಾತಿಯ ಹಕ್ಕಿಗಳಷ್ಟೇ ತಂಗುವುದಿಲ್ಲ. ಸಂಜೆಯಾಗುತ್ತಿದ್ದಂತೆಯೇ ಬಗೆ ಬಗೆಯ ಹಕ್ಕಿಗಳು ಅಲ್ಲಿ ನೆರೆಯುತ್ತವೆ. ತಮ್ಮ ತಮ್ಮ ಭಾಷೆಯಲ್ಲಿ ತಮ್ಮ ತಮ್ಮ ಬಳಗವನ್ನು ಕೂಗಿ ಕರೆಯುತ್ತವೆ. ಹಲವು ಬಗೆಯ ಹಕ್ಕಿಗಳ ಧ್ವನಿಗಳು ಒಂದಾಗಿ ಸೃಷ್ಟಿಯಾಗುವ ಕಲರವ ಪ್ರಕೃತಿಯನ್ನು ಇನ್ನಷ್ಟು ಸುಂದರವಾಗಿಸುತ್ತದೆ. ಪ್ರಕೃತಿ ಸದಾ ವೈವಿಧ್ಯವನ್ನು ಪೋಷಿಸುತ್ತಾ ಬಂದಿದೆ. ಮನುಷ್ಯನೂ ಇದಕ್ಕೆ ಹೊರತಲ್ಲ. ಪ್ರದೇಶದಿಂದ ಪ್ರದೇಶಕ್ಕೆ ತನ್ನ ಜೀವನ ಪದ್ಧತಿಗಳ ಮೂಲಕ ವೈವಿಧ್ಯಮಯವಾಗಿ ಬದುಕುತ್ತಾ ಬಂದಿದ್ದಾನೆ. ಈ ವೈವಿಧ್ಯವೇ ಇಂದು ಈ ಜಗತ್ತನ್ನು ಇನ್ನಷ್ಟು ಶ್ರೀಮಂತವಾಗಿಸಿದೆ. ಭಾರತವಂತೂ ಹತ್ತು ಹಲವು ವೈವಿಧ್ಯಗಳ ಸಂಗಮ. ಇಲ್ಲಿರುವ ನೂರಾರು ಭಾಷೆಗಳು ಜನರ ಬದುಕನ್ನು ಕಟ್ಟಿದೆ. ಆ ಭಾಷೆಗಳಲ್ಲಿ ದಾಖಲಾಗಿರುವ ಜ್ಞಾನ ಸಂಪತ್ತು ಜಗತ್ತಿನ ಆಸ್ತಿಯಾಗಿವೆ. ಅವುಗಳನ್ನು ಉಳಿಸಿ, ಬೆಳೆಸುವ ಮೂಲಕ ಭಾರತ ತನ್ನ ಸ್ವಂತಿಕೆಯನ್ನು ಉಳಿಸಿಕೊಳ್ಳಬೇಕಾಗಿದೆ. ಆದರೆ ಭಾರತದ ಭಾಷಾ ವೈವಿಧ್ಯ ಹಿಂದೆಂದಿಗಿಂತ ಹೆಚ್ಚು ಅಪಾಯದಲ್ಲಿದೆ. ಇಂಗ್ಲಿಷ್ ಪ್ರಾದೇಶಿಕ ಭಾಷೆಗಳನ್ನು ಭಾಗಶಃ ನಾಶ ಮಾಡಿದ್ದರೆ, ಹಿಂದಿ ಅವುಗಳನ್ನು ನಾಮಾವಶೇಷ ಮಾಡಲು ಹೊಸ ವೇಷದೊಂದಿಗೆ ಪ್ರವೇಶಿಸಿದೆ. ಅದು ಕೇವಲ ಭಾಷೆಯನ್ನಷ್ಟೇ ನಾಶ ಮಾಡುವ ಉದ್ದೇಶವನ್ನು ಹೊಂದಿಲ್ಲ, ಆ ಭಾಷೆಯನ್ನು ಅವಲಂಬಿಸಿದ ಜನರನ್ನು ತನ್ನ ಗುಲಾಮನಾಗಿಸಿ, ಅವರ ಮೇಲೆ ನಿಯಂತ್ರಣ ಸಾಧಿಸುವ ರಾಜಕೀಯ ಉದ್ದೇಶವನ್ನೂ ಹೊಂದಿದೆ. ಈಗಾಗಲೇ ಭಾರತದ ಅಧಿಕೃತ ರಾಷ್ಟ್ರ ಭಾಷೆಯಾಗಿ ಹಿಂದಿಯನ್ನು ತರಬೇಕು ಎಂಬುದಾಗಿ ಅಧಿಕೃತ ಭಾಷಾ ಸಮಿತಿ ಶಿಫಾರಸು ಮಾಡಿದೆ.

ಗೃಹ ಸಚಿವರ ನೇತೃತ್ವದ ಸಮಿತಿಯು ಇತ್ತೀಚೆಗೆ ತನ್ನ ಏಳು ಸಂಪುಟಗಳ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿರುವುದನ್ನು ನಾವು ಗಮನಿಸಬೇಕಾಗಿದೆ. ಭಾರತದಲ್ಲಿ 780 ಭಾಷೆಗಳನ್ನು ಮಾತನಾಡಲಾಗುತ್ತಿದೆ ಹಾಗೂ 66 ಲಿಪಿಗಳನ್ನು ಬಳಸಲಾಗುತ್ತಿದೆ. 400 ಭಾಷೆಗಳು ಸಾಯುವ ಅಪಾಯವನ್ನು ಎದುರಿಸುತ್ತಿವೆ ಎಂದು ಭಾಷಾತಜ್ಞರು ಎಚ್ಚರಿಸಿದ್ದಾರೆ. ಈ ಎಲ್ಲಾ ಭಾಷೆಗಳು ದೇಶದ ವಿವಿಧ ಭಾಗಗಳಲ್ಲಿ ಜನಪ್ರಿಯವಾಗಿವೆ ಹಾಗೂ ಅವುಗಳು ಆಯಾಯ ಸಮುದಾಯಗಳ ಕುರಿತ ಜ್ಞಾನದ ಮೂಲ ಸೆಳೆಗಳಾಗಿವೆ. ಅದೂ ಅಲ್ಲದೆ, ಜಗತ್ತಿನ ಜನಾಂಗೀಯ ಭಾಷಾ ಪಟ್ಟಿಯಲ್ಲಿ, ಮಾತನಾಡುವ ಭಾಷೆಗಳ ಸಂಖ್ಯಾ ವಿಭಾಗದಲ್ಲಿ ಭಾರತ ನಾಲ್ಕನೇ ಸ್ಥಾನವನ್ನು ಪಡೆದಿದೆ. ಆದರೆ, ಇಂಗ್ಲಿಷ್ ಭಾಷೆಯ ಪ್ರಾಬಲ್ಯದಿಂದಾಗಿ, ಸ್ವಾತಂತ್ರಾನಂತರ ಭಾರತ ಸರಕಾರವು ಪ್ರಾದೇಶಿಕ ಭಾಷೆಗಳಿಗೆ ಬೆಂಬಲ ನೀಡಿಲ್ಲ. ಇದೀಗ ಇಂಗ್ಲಿಷ್‌ನ್ನು ವಿರೋಧಿಸುವ ನೆಪದಲ್ಲಿ ಹಿಂದಿಯನ್ನೂ ಪ್ರಾದೇಶಿಕ ಭಾಷೆಗಳ ವಿರುದ್ಧ ಛೂ ಬಿಡುವುದಕ್ಕೆ ಕೇಂದ್ರ ಸರಕಾರ ಮುಂದಾಗಿದೆ.
     
ಪ್ರಾದೇಶಿಕ ಭಾಷೆಗಳಿಗೆ ಸಂಬಂಧಿಸಿದ ಭಾರತದ ನೀತಿಯು ಬುಡಕಟ್ಟು ಭಾಷೆಗಳನ್ನು ಹೆಚ್ಚಾಗಿ ಬಾಧಿಸಿದೆ . ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಾದ ಪ್ರಕಾರ, ಭಾರತದಲ್ಲಿ ಐದು ಬುಡಕಟ್ಟು ಭಾಷೆಗಳು ಅಳಿವಿನ ಅಂಚಿನಲ್ಲಿವೆ. ಸಿಕ್ಕಿಮ್‌ನ ಮಾಝಿ ಭಾಷೆಯು ಅವುಗಳ ಪೈಕಿ ಒಂದು. ಈಗ ಈ ಭಾಷೆಯನ್ನು ಕೇವಲ ಒಂದು ಕುಟುಂಬದ ನಾಲ್ವರು ಮಾತನಾಡುತ್ತಿದ್ದಾರೆ. ಅದೇ ರೀತಿ, ಅಸ್ಸಾಮಿನ ದಿಮಾಸ, ಪೂರ್ವ ಭಾರತದ ಮಹಾಲಿ, ಅರುಣಾಚಲಪ್ರದೇಶದ ಕೋರೊ ಮತ್ತು ಗುಜರಾತ್‌ನ ಸಿದ್ದಿ ಭಾಷೆಗಳು ಅಸ್ತಿತ್ವದ ಬೆದರಿಕೆಯನ್ನು ಎದುರಿಸುತ್ತಿವೆ. ಜಾಗತೀಕರಣದ ಈ ದಿನಗಳಲ್ಲಿ ನಾವು ನಮ್ಮದೇ ಸೀಮಿತ ಭಾಷೆಯ ಕೊಠಡಿಯೊಳಗೆ ಬೀಗ ಜಡಿದು ಕುಳಿತುಕೊಳ್ಳುವಂತಿಲ್ಲ. ಇಂತಹ ಸಂದರ್ಭದಲ್ಲಿ ಹೊರ ಜಗತ್ತಿನ ಸಂಪರ್ಕ ಭಾಷೆಯಾಗಿ ಇಂಗ್ಲಿಷ್‌ನ್ನು ಬಳಸುವುದು ಅನಿವಾರ್ಯ. ಇದೀಗ ‘ಇಂಗ್ಲಿಷ್‌ಗೆ ವಿರುದ್ಧವಾಗಿ ಹಿಂದಿ’ ಕುರಿತ ಚರ್ಚೆಯೊಂದು ತೆರೆದುಕೊಂಡಿದೆ. ಇದರ ಅಂತಿಮ ಉದ್ದೇಶ, ಇತರ ಪ್ರಾದೇಶಿಕ ಭಾಷೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ಹಿಂದಿಯನ್ನು ಹೇರುವುದು.

ಉತ್ತರ ಭಾರತದ ವಲಯಗಳಲ್ಲಿ, ಹಿಂದಿಯನ್ನು ಯಜಮಾನ ಭಾಷೆಯಾಗಿ ಬಿಂಬಿಸಲಾಗುತ್ತಿದೆ. ಹಾಗಾಗಿ, ಅದು ಭೋಜ್‌ಪುರಿ ಮತ್ತು ಮಗಾದಿ ಮುಂತಾದ ಭಾಷೆಗಳನ್ನು ಆಪೋಷನ ತೆಗೆದುಕೊಳ್ಳುವ ಬೆದರಿಕೆಯನ್ನು ಹುಟ್ಟುಹಾಕಿದೆ. ದಕ್ಷಿಮ ಭಾರತದ ಭಾಷೆಗಳೂ ಈ ಬೆದರಿಕೆಯನ್ನು ಎದುರಿಸುತ್ತಿದೆ. ಸರಕಾರವೀಗ ಪ್ರಾದೇಶಿಕ ಭಾಷೆಗಳ ವಿರುದ್ಧ ಹೊಸ ತಂತ್ರವನ್ನು ಹೂಡಲು ಮುಂದಾಗಿದೆ. ಹಿಂದಿಗೆ ಅತಿ ದೊಡ್ಡ ಸವಾಲಾಗಿ ನಿಂತಿರುವುದು ದಕ್ಷಿಣ ಭಾರತದ ದ್ರಾವಿಡ ಭಾಷೆಗಳು. ಆದರೆ ದಕ್ಷಿಣ ಭಾರತ ಇಂಗ್ಲಿಷನ್ನು ಜಾಗತಿಕವಾಗಿ ಬೆಳೆಯುವುದಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಂಡಿದೆ. ಪ್ರಾದೇಶಿಕ ಭಾಷೆಗೆ ಇಂಗ್ಲಿಷ್ ಬಹುದೊಡ್ಡ ಸವಾಲು ಎನ್ನುವ ಚರ್ಚೆ ಒಂದು ಕಾಲದವರೆಗೆ ಇತ್ತಾದರೂ, ನಿಧಾನಕ್ಕೆ ದ್ರಾವಿಡ ಭಾಷೆಗಳು ಮತ್ತು ಇಂಗ್ಲಿಷ್ ನಡುವೆ ಸಮನ್ವಯ ನಿರ್ಮಾಣವಾಯಿತು. ತಮ್ಮ ಭಾಷೆಯ ಜೊತೆಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಈ ರಾಜ್ಯಗಳು ಇಂಗ್ಲಿಷ್‌ನ್ನು ಬಳಸಿಕೊಂಡವು. ಪರಿಣಾಮವಾಗಿ ಐಟಿ, ಬಿಟಿಯಂತಹ ತಂತ್ರಜ್ಞಾನದಲ್ಲಿ ಭಾರೀ ಸಾಧನೆಯನ್ನು ಮಾಡಲು ದಕ್ಷಿಣ ಭಾರತೀಯರಿಗೆ ಸಾಧ್ಯವಾಯಿತು. ಆರೋಗ್ಯ, ಶಿಕ್ಷಣ ಮೊದಲಾದ ಕ್ಷೇತ್ರಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳು ಸಾಧನೆ ಮಾಡುವುದಕ್ಕೆ ಸಾಧ್ಯವಾಗಿರುವುದು, ತಮ್ಮ ತಮ್ಮ ಭಾಷೆಯ ಬಳಿಕ ಇಂಗ್ಲಿಷ್ ಭಾಷೆಗೆ ಆದ್ಯತೆಯನ್ನು ನೀಡಿರುವುದು. ಬರೀ ಹಿಂದಿಯನ್ನಷ್ಟೇ ನೆಚ್ಚಿಕೊಂಡ ಬಹುತೇಕ ಉತ್ತರ ಭಾರತದ ರಾಜ್ಯಗಳು ದಕ್ಷಿಣ ಭಾರತಕ್ಕೆ ಹೋಲಿಸಿದರೆ ಹಿಂದುಳಿದಿವೆ. ದಕ್ಷಿಣ ಭಾರತದ ಎಲ್ಲ ರಾಜ್ಯಗಳು ಎಲ್ಲ ಕ್ಷೇತ್ರಗಳಲ್ಲೂ ಉತ್ತರ ಭಾರತದ ರಾಜ್ಯಗಳಿಗೆ ಮಾದರಿ ಅನ್ನಿಸಿವೆ.

ಇದೀಗ ಇಂಗ್ಲಿಷ್ ಬದಲಿಗೆ ಹಿಂದಿಯನ್ನು ಹೇರುವ ಮೂಲಕ ಕೇಂದ್ರ ಸರಕಾರ ಎರಡು ರೀತಿಯಲ್ಲಿ ದಕ್ಷಿಣ ಭಾರತೀಯರಿಗೆ ಅನ್ಯಾಯ ಎಸಗಲು ಮುಂದಾಗಿದೆ. ಇಲ್ಲಿನ ರಾಜ್ಯಗಳ ಕೈಯಿಂದ ಇಂಗ್ಲಿಷ್‌ನ್ನು ಕಿತ್ತುಕೊಂಡು ಅವರ ಕೈಗೆ ಹಿಂದಿಯನ್ನು ಕೊಡುವುದು. ಈಗಾಗಲೇ ಇಂಗ್ಲಿಷ್‌ನಿಂದಾಗಿ ಸಾಕಷ್ಟು ಹಾನಿ ಅನುಭವಿಸುತ್ತಿರುವ ಪ್ರಾದೇಶಿಕ ಭಾಷೆಗಳು ಈ ಹಿಂದಿ ಹೇರಿಕೆಯಿಂದ ಇನ್ನಷ್ಟು ಹಿನ್ನಡೆಯನ್ನು ಅನುಭವಿಸಬೇಕಾಗುತ್ತದೆ. ಜೊತೆಗೆ ಇಂಗ್ಲಿಷ್ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳುವುದರಿಂದ, ದಕ್ಷಿಣ ಭಾರತ ತನ್ನ ಜಾಗತಿಕ ಮಟ್ಟದ ರಾಜತಾಂತ್ರಿಕ ಸಂಬಂಧಗಳಲ್ಲೂ ಹಿನ್ನಡೆ ಅನುಭವಿಸಬೇಕಾಗುತ್ತದೆ. ಹಂತಹಂತವಾಗಿ ಹಿಂದಿಯನ್ನು ದಕ್ಷಿಣ ಭಾರತೀಯರಿಗೆ ಅನಿವಾರ್ಯವಾಗಿಸಿ, ಇಲ್ಲಿರುವ ಎಲ್ಲ ಉದ್ಯೋಗಗಳನ್ನು ಉತ್ತರ ಭಾರತೀಯರಿಗೆ ಹಂಚುವುದು ಕೇಂದ್ರದ ಬಹುದೊಡ್ಡ ಸಂಚಾಗಿದೆ. ಹಿಂದಿಯನ್ನು ಒಪ್ಪಿಕೊಳ್ಳುವುದೆಂದರೆ, ಉತ್ತರ ಭಾರತೀಯರ ಸರ್ವಾಧಿಕಾರಕ್ಕೆ ತಲೆಬಾಗುವುದೆಂದು ಅರ್ಥ. ದಕ್ಷಿಣ ಭಾರತ ತನ್ನ ಪ್ರಾದೇಶಿಕತೆಯನ್ನು ಉಳಿಸಿಕೊಳ್ಳುವುದು ಎಷ್ಟು ಮುಖ್ಯವೋ ಹಾಗೆಯೇ, ಉತ್ತರ ಭಾರತೀಯರ ಹೇರಿಕೆಯ ವಿರುದ್ಧ ಧ್ವನಿಯೆತ್ತುವುದಕ್ಕೆ ಇಂಗ್ಲಿಷ್‌ನ್ನು ಸಂಪರ್ಕ ಭಾಷೆಯಾಗಿ ಬಳಸುವುದೂ ಅತ್ಯಗತ್ಯವಾಗಿದೆ. ಕರ್ನಾಟಕದ ಮಟ್ಟಿಗೆ ಇಂಗ್ಲಿಷ್ ಮತ್ತು ಕನ್ನಡ ಈ ಕಾರಣಕ್ಕಾಗಿಯೇ ಜೊತೆ ಜೊತೆಯಾಗಿ ಸಾಗಬೇಕು. ಇಂಗ್ಲಿಷ್ ಭಾಷೆಯನ್ನು ಯಾವ ಕಾರಣಕ್ಕೂ ಹಿಂದಿ ತುಂಬಲಾರದು. ಹಿಂದಿಯಿಲ್ಲದೆಯೇ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿಯನ್ನು ಕಾಣಲು ನಮಗೆ ಸಾಧ್ಯವಾಗಿರುವಾಗ, ಯಾವ ಕಾರಣಕ್ಕಾಗಿ ಹಿಂದಿಯನ್ನು ಹೊಸದಾಗಿ ಕಲಿಯಬೇಕು? ಹಿಂದಿಯಿಲ್ಲದೆ ದಕ್ಷಿಣ ಭಾರತೀಯರು ಕಳೆದುಕೊಂಡದ್ದಾದರೂ ಏನು ಎನ್ನುವುದನ್ನು ಮೊದಲು ಕೇಂದ್ರ ಸರಕಾರ ಸ್ಪಷ್ಟಪಡಿಸಬೇಕಾಗಿದೆ.

ಪ್ರಾದೇಶಿಕ ವೈವಿಧ್ಯತೆಗೆ ಇಂಗ್ಲಿಷ್ ಮತ್ತು ಹಿಂದಿ ಎರಡೂ ಸಮಾನ ಶತ್ರುಗಳು ಎನ್ನುವ ಅಭಿಪ್ರಾಯವಿತ್ತು. ಆದರೆ ಇಂದು ನಾವು ಒಂದು ಅಂತರ್‌ರಾಷ್ಟ್ರೀಯ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಈ ಕಾರಣಕ್ಕಾಗಿ ಇಂಗ್ಲಿಷ್‌ನ್ನು ಆಯ್ಕೆ ಮಾಡಿಕೊಳ್ಳಬೇಕು. ಹಿಂದಿ ಅಗತ್ಯವಿದ್ದವರು ಕಲಿಯಲಿ. ಅದರ ಹೇರಿಕೆ ಬೇಡ. ಇದೇ ಸಂದರ್ಭದಲ್ಲಿ ಭಾಷಾ ವೈವಿಧ್ಯವನ್ನು ಉಳಿಸಿ ಬೆಳೆಸುವುದಕ್ಕಾಗಿ ಕೇಂದ್ರ ಸರಕಾರ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕಾಗಿದೆ. ಕೇಂದ್ರಕ್ಕೆ ಅದರಲ್ಲಿ ಆಸಕ್ತಿಯಿಲ್ಲ ಎಂದಾದರೆ, ಆಯಾ ರಾಜ್ಯಗಳೇ ಅದರ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕು. ಹಿಂದಿಯನ್ನು ರಾಷ್ಟ್ರಭಾಷೆಯಾಗಿಸುವ ಪ್ರಸ್ತಾವವು ರಾಜಕೀಯ ಪ್ರೇರಿತವಾಗಿದೆ. ಇತರ ಭಾಷೆಗಳು, ಅವುಗಳನ್ನು ಅವಲಂಬಿಸಿದ ಜನರ ಸಾಮಾಜಿಕ ಮತ್ತು ಸಾಂಸ್ಕೃತಿಕ ಗುರುತುಗಳನ್ನು ಅಳಿಸಿಹಾಕುವುದಕ್ಕಾಗಿ ಬಿಜೆಪಿಯು ಹಿಂದಿ ರಾಷ್ಟ್ರಭಾಷೆ ಎನ್ನುವ ಕಲ್ಪನೆಗೆ ಬೆಂಬಲ ನೀಡುತ್ತಿದೆ. ಇದನ್ನು ಅರಿತು, ನಮ್ಮ ಭಾಷೆಯನ್ನು ಉಳಿಸಿ ಬೆಳೆಸುತ್ತಲೇ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ ದಾರಿಯನ್ನು ನಮಗೆ ನಾವೇ ಕಂಡುಕೊಳ್ಳಬೇಕು.

Similar News