ಸರಕಾರದ ಮಾನ ಹರಾಜಿಗಿಟ್ಟ ‘ಜಾತಿ’ ಹರಾಜು ಟೆಂಡರ್!

Update: 2022-11-04 04:18 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಧಾರ್ಮಿಕ ದತ್ತಿ ಇಲಾಖೆಯಡಿಯಲ್ಲಿ ಬರುವ ದೇವಸ್ಥಾನಗಳ ಕೆಲವು ವಿಭಾಗಗಳಿಗೆ ಸಂಬಂಧಿಸಿದ ರಾಜ್ಯ ಸರಕಾರದ ಟೆಂಡರ್ ಹರಾಜು ಪ್ರಕಟಣೆಯೊಂದು ಸರಕಾರದೊಳಗಿರುವ ಜಾತೀಯ ಮನಸ್ಸುಗಳನ್ನು ಹರಾಜಿಗಿಟ್ಟಿದೆ. ಈ ಹರಾಜು ಪ್ರಕಟಣೆಯಲ್ಲಿ ಸಮೂಹ ದೇವಸ್ಥಾನಗಳ ನಾನಾ ವಿಭಾಗಗಳ-ಪೂಜಾ ಸಾಮಗ್ರಿಗಳ ಮಾರಾಟ, ಎಳನೀರು ಮಾರಾಟ, ಈಡುಗಾಯಿ ಆಯ್ದುಕೊಳ್ಳುವ ಹಕ್ಕು, ಪಾದರಕ್ಷೆ ಕಾಯುವ ಹಕ್ಕು, ವಾಹನ ನಿಲುಗಡೆಯ ಸುಂಕ ವಸೂಲಾತಿಗೆ ಸಂಬಂಧಿಸಿದ ಕೆಲಸಗಳಿಗೆ ಟೆಂಡರ್ ಆಹ್ವಾನಿಸಲಾಗಿತ್ತು. ಬಹುತೇಕ ವಿಭಾಗಗಳಿಗೆ ಸಾಮಾನ್ಯ ವರ್ಗಗಗಳ ಅಡಿಯಲ್ಲಿ ಟೆಂಡರ್ ಕರೆದಿದ್ದರೆ, ಚಪ್ಪಲಿ ಕಾಯುವ ಹಕ್ಕಿನ ಟೆಂಡರ್‌ನ್ನು ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸರಕಾರ ಮೀಸಲಾತಿ ರೂಪದಲ್ಲಿ ನೀಡಿ ಬಿಟ್ಟಿತ್ತು. ಸರಕಾರ ನಿಜಕ್ಕೂ ಪರಿಶಿಷ್ಟರ ಕುರಿತಂತೆ ಕಾಳಜಿಯನ್ನು ಹೊಂದಿದ್ದರೆ, ಪೂಜಾಸಾಮಗ್ರಿಗಳ ಮಾರಾಟ, ಎಳನೀರು ಮಾರಾಟ, ಈಡುಗಾಯಿ ಆಯ್ದುಕೊಳ್ಳುವ ಹಕ್ಕುಗಳ ಹರಾಜಿನಲ್ಲಿ ಪರಿಶಿಷ್ಟರಿಗೆ ಮೀಸಲಾತಿಯನ್ನು ನೀಡಿ ಅವರಿಗೆ ನೆರವಾಗಬಹುದಾಗಿತ್ತು. ಆದರೆ, ಕೇವಲ ಚಪ್ಪಲಿ ಕಾಯುವ ಕೆಲಸಕ್ಕೆ ಮಾತ್ರ ಅವರನ್ನು ಸೀಮಿತಗೊಳಿಸುವ ಮೂಲಕ ‘ದೇವಸ್ಥಾನಗಳ ಚಪ್ಪಲಿ ಕಾಯುವ ಕೆಲಸ ನಿಮ್ಮದು’ ಎಂದು ಸೂಚಿಸಿರುವುದು ಮಾತ್ರವಲ್ಲ, ಉಳಿದೆಲ್ಲ ಟೆಂಡರ್‌ಗಳಿಗೆ ನೀವು ಅರ್ಹರಲ್ಲ ಎನ್ನುವುದನ್ನೂ ಪರೋಕ್ಷವಾಗಿ ಸರಕಾರವೇ ಹೇಳಿದಂತಾಗಿದೆ.

ಸರಕಾರದ ಈ ಟೆಂಡರ್ ಮೀಸಲಾತಿ ಮನುಶಾಸ್ತ್ರದ ಆಧಾರದಲ್ಲಿದೆ ಎನ್ನುವುದು ಕೆಲವು ದಲಿತ ಮುಖಂಡರ ಆರೋಪವಾಗಿದೆ. ಇಂದಿಗೂ ನಮ್ಮ ನಾಡಿನಲ್ಲಿ ದಲಿತರಿಗೆ ಗರ್ಭಗುಡಿಯೊಳಗೆ ಬಿಡಿ, ದೇವಸ್ಥಾನದ ಆವರಣದೊಳಗೂ ಪ್ರವೇಶವಿಲ್ಲ. ಇತ್ತೀಚೆಗೆ ಕೋಲಾರದಲ್ಲಿ ದೇವರ ಕೋಲನ್ನು ಸ್ಪರ್ಶಿಸಿದ ಕಾರಣಕ್ಕೆ ದಲಿತ ಬಾಲಕನಿಗೆ ಥಳಿಸಿದ್ದಲ್ಲದೆ ಆತನಿಗೆ ದಂಡವಿಧಿಸಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಯಿತು. ಇದೇ ಸಂದರ್ಭದಲ್ಲಿ, ದೇವಸ್ಥಾನದೊಳಗೆ ಪ್ರವೇಶಿಸುವವರ ಚಪ್ಪಲಿ ಕಾಯುವ ಕೆಲಸವನ್ನು ‘ದಲಿತರಿಗಷ್ಟೇ ಮೀಸಲಿಟ್ಟಿರುವುದು’ ದೇವಸ್ಥಾನದಲ್ಲಿ ದಲಿತರ ಸ್ಥಾನಮಾನವನ್ನು ಸರಕಾರವೇ ಅಧಿಕೃತವಾಗಿ ನಿಗದಿ ಪಡಿಸಿದಂತಾಗಿದೆ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯವಾಗಿ ದೇವಸ್ಥಾನದ ಇನ್ನಿತರ ‘ಹಕ್ಕು’ಗಳ ಟೆಂಡರ್‌ಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿದೆ. ಈ ಟೆಂಡರ್‌ಗಳಲ್ಲಿ ಭಾಗವಹಿಸುವ ಅಧಿಕಾರ ದಲಿತರಿಗಿದೆಯೆ? ಟೆಂಡರ್ ಹರಾಜಿನಲ್ಲಿ ಭಾಗವಹಿಸಿ ಗೆದ್ದರೆ, ಅವರು, ಪೂಜಾಸಾಮಗ್ರಿಗಳನ್ನು ಮಾರಾಟ ಮಾಡುವ, ಈಡುಗಾಯಿ ಆಯ್ದುಕೊಳ್ಳುವ ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳಬಹುದೆ? ಮುಜರಾಯಿ ಇಲಾಖೆ ಈ ಪ್ರಶ್ನೆಗಳಿಗೂ ಉತ್ತರಿಸಬೇಕಾಗಿದೆ.

ಹಲವು ದಶಕಗಳಿಂದ ಮೀಸಲಾತಿ ಜಾರಿಯಲ್ಲಿದ್ದರೂ ಈ ದೇಶದ ಶೋಷಿತ ಸಮುದಾಯದ ಬದುಕು ಯಾಕೆ ಸುಧಾರಣೆಯಾಗಿಲ್ಲ ಎನ್ನುವುದಕ್ಕೆ ಉತ್ತರ ಇಲ್ಲಿದೆ. ದಲಿತರು ಯಾವ ಕೆಲಸ ಮಾಡಬೇಕು ಎನ್ನುವ ನಿಯಮ ನಮ್ಮ ಸಮಾಜದಲ್ಲಿ ಅಘೋಷಿತವಾಗಿ ಜಾರಿಯಲ್ಲಿದೆ. ಸಂವಿಧಾನ ಮೀಸಲಾತಿಯನ್ನು ನೀಡಿದೆಯಾದರೂ, ಅದನ್ನು ಅನುಷ್ಠಾನಗೊಳಿಸುವ ಹೊಣೆಗಾರಿಕೆಯನ್ನು, ಮೀಸಲಾತಿ ವಿರೋಧಿ ಮನಸ್ಥಿತ್ನಿ ಹೊಂದಿರುವ ಅಧಿಕಾರಿಗಳ ಕೈಗೆ ನೀಡಲಾಗಿದೆ. ‘ಕೊಟ್ಟಂತೆ ಮಾಡಿ ಕೊಡದಂತಿರುವುದು’ ಹೇಗೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ. ಆದುದರಿಂದಲೇ ಸಾವಿರಾರು ಬ್ಯಾಕ್‌ಲಾಗ್ ಹುದ್ದೆಗಳು ಭರ್ತಿಯಾಗಿಲ್ಲ. ಅರ್ಹ ಅಭ್ಯರ್ಥಿಗಳಿಲ್ಲ ಎನ್ನುವ ಕಾರಣವನ್ನು ಮುಂದಿಟ್ಟು, ದಲಿತರ ಹುದ್ದೆಗಳನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳು ಅನುಭವಿಸುತ್ತಿದ್ದಾರೆ. ದಲಿತರು ಯಾಕೆ ಅಭಿವೃದ್ಧಿ ಹೊಂದಬಾರದು? ಎನ್ನುವುದಕ್ಕೂ ಇವರ ಬಳಿ ಸಕಾರಣಗಳಿವೆ. ಈ ದೇಶದಲ್ಲಿ ದಲಿತರೇ ಮಾಡಬೇಕಾದ ಕೆಲವು ಕೆಲಸಗಳಿವೆ.

ಒಂದು ವೇಳೆ ದಲಿತರು, ಉನ್ನತ ವಿದ್ಯಾಭ್ಯಾಸ ಹೊಂದಿ ಅತ್ಯುನ್ನತ ಸ್ಥಾನಗಳನ್ನು ತಮ್ಮದಾಗಿಸಿಕೊಂಡರೆ ಈ ಕೆಲಸಗಳನ್ನು ಯಾರು ಮಾಡಬೇಕು? ಆದುದರಿಂದಲೇ, ಈ ದೇಶದ ಪೌರಕಾರ್ಮಿಕರಲ್ಲಿ ಶೇ. 70ರಷ್ಟು ಜನರು ದಲಿತ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ಸಾರ್ವಜನಿಕ ಶೌಚಾಲಯದಂತಹ ಪ್ರದೇಶಗಳಲ್ಲಿ ಕೆಲಸ ಮಾಡುವುದಕ್ಕೆ ಸಾಮಾನ್ಯ ವರ್ಗದ ಅಥವಾ ಇತರ ಮೇಲ್‌ಜಾತಿಯ ಬಡವರು ಮುಂದೆ ಬರುವುದಿಲ್ಲ. ಎಲ್ಲ ಸಾರ್ವಜನಿಕ ಶೌಚಾಲಯಗಳನ್ನು ಶುಚಿಗೊಳಿಸುವ ಹೊಣೆಗಾರಿಕೆಯನ್ನು ಈಗಲೂ ದಲಿತ ಸಮುದಾಯದ ಅಭ್ಯರ್ಥಿಗಳೇ ಹೊತ್ತುಕೊಂಡಿದ್ದಾರೆ ಅಥವಾ ಅವರನ್ನು ಸರಕಾರ ವ್ಯವಸ್ಥಿತವಾಗಿ ಅಂತಹ ಸ್ಥಿತಿಗೆ ನೂಕಿದೆ. ಮಲಹೊರುವ ಪದ್ಧತಿಯನ್ನು ಮುಂದುವರಿಸುವುದಕ್ಕಾಗಿಯೇ ನಮ್ಮ ನಾಡಿನಲ್ಲಿ ‘ಭಂಗಿ’ ಸಮುದಾಯ ಅಸ್ತಿತ್ವದಲ್ಲಿದೆ. ಇವರ ಬದುಕನ್ನು ಮೇಲೆತ್ತಿದರೆ, ಈ ಕೆಲಸವನ್ನು ಮುಂದುವರಿಸುವವರು ಯಾರು? ಇದು ಸಮಾಜದ ಮಾತ್ರವಲ್ಲ, ಸರಕಾರದ ಮನಸ್ಥಿತಿಯೂ ಕೂಡ. ಸ್ವಾತಂತ್ರ ಪೂರ್ವದಲ್ಲಿ ಮನುಸಂವಿಧಾನ ದಲಿತರಿಗಾಗಿಯೇ ಕೆಲವು ಹುದ್ದೆಗಳನ್ನು ಮೀಸಲಿರಿಸಿತ್ತು. ನಮ್ಮ ಸಂವಿಧಾನ ಆ ಮೀಸಲಾತಿಯನ್ನು ಕಿತ್ತೊಗೆದು ಸಮಾಜದ ಮುಖ್ಯವಾಹಿನಿಯಲ್ಲಿ ಅವರನ್ನು ಸೇರಿಸಿಕೊಂಡಿತು. ಇದೀಗ ಅಂಬೇಡ್ಕರ್ ಸಂವಿಧಾನವನ್ನು ತಿದ್ದಿ, ಮತ್ತೆ ಮನು ಸಂವಿಧಾನವನ್ನು ಜಾರಿಗೊಳಿಸುವ ಭಾಗವಾಗಿಯೇ, ಚಪ್ಪಲಿ ಕಾಯುವಂತಹ ಕೆಲಸವನ್ನು ಕೇವಲ ದಲಿತರಿಗೆ ಮೀಸಲಿರಿಸಲು ಕೆಲವರು ಮುಂದಾಗಿದ್ದಾರೆ.

ಈ ಜಾತಿ ಹರಾಜಿನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಟೆಂಡರ್‌ನ್ನು ರದ್ದುಗೊಳಿಸಿ, ಹೊಸದಾಗಿ ಟೆಂಡರ್ ಕರೆಯಲು ಮುಜರಾಯಿ ಇಲಾಖೆಯ ಸಚಿವರು ಆದೇಶ ನೀಡಿದ್ದಾರೆ. ಆದರೆ ಈ ಆದೇಶ ನೀಡಿದಷ್ಟಕ್ಕೇ ದಲಿತರಿಗೆ ನ್ಯಾಯಸಿಕ್ಕಿದಂತಾಗುವುದಿಲ್ಲ. ಚಪ್ಪಲಿ ಕಾಯುವ ಕೆಲಸವನ್ನು ನೇರವಾಗಿಯಲ್ಲದಿದ್ದರೂ, ಪರೋಕ್ಷವಾಗಿಯಾದರೂ ದಲಿತ ಸಮುದಾಯದ ಜನರ ತಲೆಗೇ ಮತ್ತೆ ಕಟ್ಟಲಾಗುತ್ತದೆ. ನಿಜಕ್ಕೂ ತನ್ನ ತಪ್ಪನ್ನು ತಿದ್ದಿಕೊಳ್ಳುವ ಉದ್ದೇಶ ಮುಜರಾಯಿ ಇಲಾಖೆಗೆ ಇದ್ದರೆ, ಇನ್ನಿತರ ಹರಾಜುಗಳನ್ನು ದಲಿತರಿಗೆ ಮೀಸಲಾಗಿರಿಸಬೇಕು.ಸಾಮಾನ್ಯ ವರ್ಗದ ಜೊತೆಗೆ ಸ್ಪರ್ಧಿಸಿ ಆ ಟೆಂಡರ್‌ಗಳನ್ನು ಗೆಲ್ಲುವ ಶಕ್ತಿ ಪರಿಶಿಷ್ಟ ಸಮುದಾಯಕ್ಕಿಲ್ಲ ಎನ್ನುವುದು ಸರಕಾರಕ್ಕೆ ತಿಳಿಯದ ವಿಷಯವೇನೂ ಅಲ್ಲ. ಪೂಜಾಸಾಮಗ್ರಿಗಳ ಮಾರಾಟ, ಎಳನೀರು ಮಾರಾಟ, ಈಡುಗಾಯಿ ಆಯ್ದುಕೊಳ್ಳುವ ಹಕ್ಕುಗಳು ಮೊದಲಾದ ಕೆಲಸದ ಹಕ್ಕುಗಳ ಟೆಂಡರ್‌ನ್ನು ಕೇವಲ ಪರಿಶಿಷ್ಟ ಜಾತಿಗಳಿಗೆ ಮಾತ್ರ ಮೀಸಲಿರಿಸಿ ಅವರಿಗೆ ನ್ಯಾಯ ನೀಡಬೇಕು. ಹಾಗೆಯೇ, ಈವರೆಗೆ ದಲಿತ ಸಮುದಾಯಗಳು ದೇವಸ್ಥಾನದ ಹೊರಗಿರುವ ಚಪ್ಪಲಿಗಳನ್ನು ಕಾಯುವ ಕೆಲಸ ಮಾಡುತ್ತಾ ಬಂದಿದ್ದಾರೆ. ಸ್ವಲ್ಪ ಸಮಯ ದಲಿತರಿಗೆ ಆ ಕೆಲಸದಿಂದ ವಿಶ್ರಾಂತಿ ನೀಡಿ, ಆ ಮಹತ್ತರ ಹೊಣೆಗಾರಿಕೆಯನ್ನು ಸರಕಾರ ‘ಸಾಮಾನ್ಯ ವರ್ಗ’ಕ್ಕೆ ಮೀಸಲಿರಿಸಲಿ. ಈ ಮೂಲಕ, ಈಗಾಗಲೇ ‘ಜಾತಿ ಹರಾಜಿನಲ್ಲಿ’ ಭಾಗಶಃ ಹರಾಜಾಗಿರುವ ತನ್ನ ಅಳಿದುಳಿದ ಮಾನವನ್ನು ಸರಕಾರ ಕಾಪಾಡಿಕೊಳ್ಳಬೇಕು.

Similar News