ಬಿಲ್ಲವರ ಒಡಲ ಸಂಕಟ ಬಲ್ಲವರಾಗೋಣ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಒಂದು ಕಾಲದಲ್ಲಿ ತುಳಿತಕ್ಕೊಳಪಟ್ಟು ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಅತ್ಯಂತ ಹಿಂದುಳಿದಿದ್ದ ಬಿಲ್ಲವರು ಇಂದು ಸಮಾಜದಲ್ಲಿ ಬಲ್ಲವರಾಗಿ ಗುರುತಿಸಲ್ಪಡುತ್ತಿದ್ದಾರೆ. ಅವರ ಸಾಧನೆಗಳ ಹಿಂದೆ, ಅಪಾರ ಹೋರಾಟ, ತ್ಯಾಗ ಬಲಿದಾನಗಳಿವೆ. ನಾರಾಯಣ ಗುರುಗಳ ಅಧ್ಯಾತ್ಮ ಮಾರ್ಗದರ್ಶನ ಕೇರಳದಲ್ಲಿ ಈಳವರು ಮತ್ತು ಕರಾವಳಿಯಲ್ಲಿ ಬಿಲ್ಲವರ ಬದುಕಿನಲ್ಲಿ ಬಹುದೊಡ್ಡ ಕ್ರಾಂತಿಯನ್ನು ಮಾಡಿತು. ಇಂದು ಬಿಲ್ಲವ ಸಮುದಾಯ ರಾಷ್ಟ್ರ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುತ್ತಿದ್ದರೆ ಅದಕ್ಕೆ ಮುಖ್ಯ ಕಾರಣ, ಬಿಲ್ಲವರ ಬದುಕಿಗೆ ಹೊಸ ತಿರುವನ್ನು ನೀಡಿದ ನಾರಾಯಣ ಗುರುಗಳ ಕ್ರಾಂತಿಕಾರಿ ಮಾರ್ಗದರ್ಶನ. ಹಿಂದೂ ಧರ್ಮದ ಅಸ್ಪಶ್ಯತೆಯ ಬಲೆಯಿಂದ ಪಾರಾಗುವುದಕ್ಕೆ ನಾರಾಯಣಗುರುಗಳಿಂದ ಅವರಿಗೆ ಸಾಧ್ಯವಾಯಿತು. ಇದಾದ ಬಳಿಕ, ಕರ್ನಾಟಕದಲ್ಲಿ ಜಾರಿಯಾದ ಭೂಸುಧಾರಣೆ ಕಾಯ್ದೆ ಕೂಡ ಬಿಲ್ಲವರ ಆರ್ಥಿಕ ಬದುಕಿನ ಮೇಲೆ ಬಹುದೊಡ್ಡ ಪರಿಣಾಮ ಬೀರಿತು. ಬಿಲ್ಲವರ ಮುಂಬೈ ವಲಸೆ, ರಾಜಕೀಯ ಜಾಗೃತಿ ನಿಧಾನಕ್ಕೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದು ನಿಲ್ಲಿಸಿತು. ಬಂಗಾರಪ್ಪ, ಜನಾರ್ದನ ಪೂಜಾರಿ, ಹರಿಪ್ರಸಾದ್‌ರಂತಹ ರಾಷ್ಟ್ರಮಟ್ಟದ ರಾಜಕೀಯ ನಾಯಕರು ಈ ಸಮುದಾಯದಲ್ಲಿ ಹುಟ್ಟಿಕೊಂಡರು.
ಸುಮಾರು ೮೦, ೯೦ರ ದಶಕದಲ್ಲಿ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಬಿಲ್ಲವರ ಸಾಧನೆಯ ವೇಗಕ್ಕೆ ಹೋಲಿಸಿದರೆ ಇಂದು ಹಿಂದಕ್ಕೆ ಚಲಿಸುತ್ತಿದ್ದಾರೆ. ಒಂದು ಕಾಲದಲ್ಲಿ ಬಿಲ್ಲವ ಸಮುದಾಯದ ನಾಯಕರು ರಾಜಕೀಯವಾಗಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ್ದರೆ, ಇಂದು ರಾಜ್ಯಸಚಿವ ಸ್ಥಾನವನ್ನು ತಮ್ಮದಾಗಿಸಿಕೊಳ್ಳುವುದಕ್ಕೂ ಅವರು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೇಂದ್ರದಲ್ಲಿ ಸ್ಥಾನಮಾನವಂತೂ ದೂರದ ಮಾತು. ಸಹಜವಾಗಿಯೇ ಇದು ಬಿಲ್ಲವರ ಸಾಮಾಜಿಕ ಮತ್ತು ಆರ್ಥಿಕ ಬದುಕಿನ ಮೇಲೂ ಪರಿಣಾಮವನ್ನು ಬೀರತೊಡಗಿದೆ. ಇತರ ಬಲಾಢ್ಯ ಸಮುದಾಯಗಳು ಇನ್ನಷ್ಟು ಗಟ್ಟಿಯಾಗಿ ಬೇರೂರಿ ಬೆಳೆಯುತ್ತಿರುವಾಗ, ಬಿಲ್ಲವ ಸಮುದಾಯ ಮಾತ್ರ ಸಾಮಾಜಿಕವಾಗಿ ಹಿನ್ನಡೆಯನ್ನು ಅನುಭವಿಸುತ್ತಿರುವುದು ಬಿಲ್ಲವ ಮುಖಂಡರನ್ನು ಕಳವಳಕ್ಕೀಡು ಮಾಡತೊಡಗಿದೆ. ಕೋಮುಗಲಭೆಯಂತಹ ಪ್ರಕರಣಗಳಲ್ಲಿ ಬಿಲ್ಲವ ಸಮುದಾಯದ ಯುವಕರು ದೊಡ್ಡ ಸಂಖ್ಯೆಯಲ್ಲಿ ಜೈಲು ಪಾಲಾಗುತ್ತಿರುವುದರ ಬಗ್ಗೆ ಈಗಾಗಲೇ ಬಿಲ್ಲವ ನಾಯಕರು ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಬಿಲ್ಲವ ಯುವ ಸಂಪನ್ಮೂಲ ಪೋಲಾಗುತ್ತಿದೆ ಎನ್ನುವುದು ಅವರ ಕಳವಳವಾಗಿದೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಕರಾವಳಿಯ ಬಿಲ್ಲವರು ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ. ಆದರೆ ರಾಜಕೀಯ ಸ್ಥಾನಮಾನವನ್ನು ಹಂಚುವ ಸಂದರ್ಭದಲ್ಲಿ ಅವರು ನಿರ್ವಹಿಸಿದ ಪಾತ್ರವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿಲ್ಲ ಎಂದು ಬಿಲ್ಲವ ಮುಖಂಡರು ಸಾರ್ವಜನಿಕವಾಗಿ ಆರೋಪಿಸತೊಡಗಿದ್ದಾರೆ. ಒಬ್ಬ ಬಿಲ್ಲವ ಬಿಜೆಪಿಯೊಳಗೆ ನಾಯಕನಾಗಿ ಹೊರಹೊಮ್ಮಬೇಕಾದರೆ, ನೂರಾರು ಕ್ರಿಮಿನಲ್ ಕೇಸ್‌ಗಳನ್ನು ಮೈಮೇಲೆ ಹೊತ್ತುಕೊಳ್ಳಬೇಕಾದಂತಹ ಸನ್ನಿವೇಶವಿದೆ. ಕೋಮುಗಲಭೆಗಳ ಕಳಂಕಗಳನ್ನು ಅಂಟಿಸಿಕೊಳ್ಳಬೇಕು. ಸದಾ ಇನ್ನೊಂದು ಸಮುದಾಯವನ್ನು ದ್ವೇಷಿಸುವ ಮಾತುಗಳನ್ನಾಡಿ ಆರೆಸ್ಸೆಸ್ ನಾಯಕರನ್ನು ಸಂತೃಪ್ತಿಗೊಳಿಸಬೇಕು. ಮೇಲ್‌ಜಾತಿಯ ನಾಯಕರು ‘ಸಜ್ಜನ ರಾಜಕಾರಣಿ’ಗಳಾಗಿ ಬಿಂಬಿತರಾಗುತ್ತಿರುವಾಗ, ಬಿಲ್ಲವ ನಾಯಕರು ‘ಕೋಮುವಾದಿ’ ಬಿರುದುಗಳನ್ನು ಅಂಟಿಸಿಕೊಂಡು ಓಡಾಡುವುದು ಅನಿವಾರ್ಯ ಎನ್ನುವ ಸ್ಥಿತಿ ಬಿಜೆಪಿಯೊಳಗಿದೆ. ಇಷ್ಟಾದ ಬಳಿಕವೂ ಬಿಲ್ಲವರನ್ನು ಉಪಮುಖ್ಯಮಂತ್ರಿ, ಗೃಹಖಾತೆಯಂತಹ ಪ್ರಮುಖ ಸ್ಥಾನಗಳಿಗೆ ಬಿಜೆಪಿ ಪರಿಗಣಿಸಿದ ಉದಾಹರಣೆಗಳೇ ಇಲ್ಲ. ಕನಿಷ್ಠ ಬಿಲ್ಲವ ಸಮುದಾಯದ ಅಭಿವೃದ್ಧಿಯ ಕುರಿತಂತೆ ಸರಕಾರ ಯೋಜನೆಗಳನ್ನು ರೂಪಿಸಿದೆಯೇ ಎಂದು ನೋಡಿದರೆ, ಬಿಲ್ಲವರನ್ನು ಸರಕಾರ ಸಂಪೂರ್ಣ ನಿರ್ಲಕ್ಷಿಸಿದೆ. ಇದು ಕರಾವಳಿಯ ಬಿಲ್ಲವರನ್ನು ತೀವ್ರ ಆಕ್ರೋಶಕ್ಕೆ ಈಡು ಮಾಡಿದ್ದು, ಬಿಲ್ಲವರ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮವೊಂದನ್ನು ಸ್ಥಾಪಿಸಬೇಕು ಎನ್ನುವ ಬೇಡಿಕೆ ಆಂದೋಲನದ ರೂಪವನ್ನು ಪಡೆದುಕೊಂಡಿದೆ. ಬಿಲ್ಲವರ ಅಭಿವೃದ್ಧಿಗಾಗಿ ನಿಗಮವನ್ನು ಸ್ಥಾಪಿಸದೇ ಇದ್ದರೆ, ಶೀಘ್ರದಲ್ಲೇ ಸರಕಾರದ ವಿರುದ್ಧ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳುವುದಾಗಿಯೂ ಬಿಲ್ಲವ ಮುಖಂಡರು ಬೆದರಿಕೆಯನ್ನು ಒಡ್ಡಿದ್ದಾರೆ.
ಬಿಲ್ಲವ ಸಮುದಾಯ ತಮ್ಮ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮವೊಂದನ್ನು ಕೇಳುತ್ತಿದ್ದಂತೆಯೇ, ‘ಜಾತಿಯ ಅಭಿವೃದ್ಧಿಗೊಂದು ನಿಗಮವೆ?’ ಎನ್ನುವ ಪ್ರಶ್ನೆಯನ್ನು ಸರಕಾರದೊಳಗಿರುವ ಜನರೇ ಕೇಳುತ್ತಿದ್ದಾರೆ. ‘ಬಿಲ್ಲವರ ಅಭಿವೃದ್ಧಿಗಾಗಿ ನಿಗಮವನ್ನು ಮಾಡಿದರೆ, ಇನ್ನಿತರ ಜಾತಿಗಳೂ ನಿಗಮಗಳನ್ನು ಕೇಳಬಹುದು’ ಎನ್ನುವುದು ಕೆಲವು ರಾಜಕಾರಣಿಗಳ ವಾದವಾಗಿದೆ. ಆದರೆ ಬಿಲ್ಲವರು ಇಂತಹದೊಂದು ಬೇಡಿಕೆಯನ್ನು ಮುಂದಿಡುವುದಕ್ಕೆ ಸ್ವತಃ ಸರಕಾರವೇ ಕಾರಣ ಎನ್ನುವ ಅಂಶವನ್ನು ಈ ರಾಜಕೀಯ ನಾಯಕರು ಮರೆತಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸರಕಾರ ‘ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ’ವೊಂದನ್ನು ಸ್ಥಾಪಿಸಿತು. ಇದರ ಬೆನ್ನಿಗೇ ಒಕ್ಕಲಿಗರಿಗಾಗಿಯೂ ಪ್ರತ್ಯೇಕ ಅಭಿವೃದ್ಧಿ ನಿಗಮವೊಂದನ್ನು ಸರಕಾರ ಸ್ಥಾಪಿಸಿತು. ಇವುಗಳಿಗೆ ತಲಾ ೧೦೦ ಕೋಟಿ ರೂಪಾಯಿ ಅನುದಾನವನ್ನು ನೀಡಿತು. ಯಾವುದೇ ಒಂದು ಜಾತಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮವೊಂದನ್ನು ಸ್ಥಾಪಿಸುವುದಿದ್ದರೆ ಅದಕ್ಕೆ ಕೆಲವು ಅನಿವಾರ್ಯ ಕಾರಣಗಳಿರಬೇಕು. ಮುಖ್ಯವಾಹಿನಿಯಿಂದ ಆ ಸಮುದಾಯ ತೀರಾ ಹೊರಗಿದ್ದರೆ, ಆ ಸಮುದಾಯಕ್ಕೆ ವಿಶೇಷ ಆದ್ಯತೆಯನ್ನು ನೀಡಲು ನಿಗಮವನ್ನು ಸ್ಥಾಪಿಸಬಹುದು. ಆದರೆ, ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ಸಮಾಜದಲ್ಲಿ ಈಗಾಗಲೇ ಮುಖ್ಯವಾಹಿನಿಯಲ್ಲಿದೆ. ಬಿಲ್ಲವ, ಕುರುಬ ಸಮುದಾಯಕ್ಕೆ ಹೋಲಿಸಿದರೆ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ಎಲ್ಲ ಕ್ಷೇತ್ರಗಳಲ್ಲೂ ದೊಡ್ಡ ಮಟ್ಟದಲ್ಲಿ ಪ್ರಾತಿನಿಧ್ಯವನ್ನು ತನ್ನದಾಗಿಸಿಕೊಂಡಿವೆ. ಆರ್ಥಿಕ, ರಾಜಕೀಯ, ಶಿಕ್ಷಣ ಕ್ಷೇತ್ರಗಳಲ್ಲಿ ಈ ಸಮುದಾಯ ಅಗ್ರ ಸ್ಥಾನದಲ್ಲಿದೆ. ಹೀಗಿರುವಾಗ, ಈ ಎರಡು ಸಮುದಾಯಗಳಿಗಾಗಿ ಯಾವ ಮಾನದಂಡದಲ್ಲಿ ಸರಕಾರ ಪ್ರತ್ಯೇಕ ನಿಗಮವನ್ನು ಸ್ಥಾಪಿಸಿತು? ಒಕ್ಕಲಿಗ, ಲಿಂಗಾಯತ ಸಮುದಾಯಕ್ಕೆ ಹೋಲಿಸಿದರೆ ಬಿಲ್ಲವ ಸಮುದಾಯ ಆರ್ಥಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ತೀರಾ ಹಿಂದುಳಿದಿದೆ. ನಿಜಕ್ಕೂ ನಿಗಮ ಸ್ಥಾಪನೆಯಾಗಬೇಕಾಗಿರುವುದು ಸಾಮಾಜಿಕವಾಗಿ ಹಿಂದುಳಿದಿರುವ ಬಿಲ್ಲವರ ಅಭಿವೃದ್ಧಿಗಾಗಿ. ಆದರೆ, ಬಿಲ್ಲವ ಸಮುದಾಯದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಲು ಸರಕಾರ ಯಾಕೆ ಹಿಂದೇಟು ಹಾಕುತ್ತಿದೆ? ಬಲಾಢ್ಯ ಸಮುದಾಯಕ್ಕೆ ಇನ್ನಷ್ಟು ಸವಲತ್ತುಗಳನ್ನು ನೀಡಲು ತುದಿಗಾಲಿನಲ್ಲಿ ನಿಂತಿರುವ ಸರಕಾರ, ದುರ್ಬಲಸಮುದಾಯವಾಗಿರುವ ಬಿಲ್ಲವರ ನೋವು ಸಂಕಟಗಳಿಗೆ ಯಾಕೆ ಸ್ಪಂದಿಸುತ್ತಿಲ್ಲ? ಒಕ್ಕಲಿಗ, ಲಿಂಗಾಯತರ ಮತಗಳನ್ನು ದೃಷ್ಟಿಯಾಗಿಟ್ಟುಕೊಂಡು ಸರಕಾರ ನಿಗಮ ಸ್ಥಾಪನೆ ಮಾಡಿತು ಎಂದೇ ಇಟ್ಟುಕೊಳ್ಳೋಣ. ಕರಾವಳಿಯಲ್ಲಿ ಬಿಲ್ಲವರೂ ರಾಜಕೀಯ ಶಕ್ತಿಯಾಗಿ ಬೆಳೆದಿದ್ದಾರೆ ಮತ್ತು ಆ ಶಕ್ತಿಯನ್ನು ಬಳಸಿಕೊಂಡೇ ಬಿಜೆಪಿ ತನ್ನ ಸರಕಾರವನ್ನು ರಚನೆ ಮಾಡಿದೆ. ಬಿಜೆಪಿ ಅಧಿಕಾರದಲ್ಲೇರುವುದಕ್ಕಾಗಿ ಬಿಲ್ಲವ ಯುವ ಸಮುದಾಯ ಬಹಳಷ್ಟು ತ್ಯಾಗ, ಬಲಿದಾನಗಳನ್ನು ಮಾಡಿದೆ. ಕನಿಷ್ಠ ರಾಜಕೀಯ ಕಾರಣಗಳಿಗಾದರೂ, ಬಿಲ್ಲವ ಸಮುದಾಯವನ್ನು ಮೇಲೆತ್ತಲು ಸರಕಾರ ಯಾಕೆ ಹಿಂದೇಟು ಹಾಕುತ್ತಿದೆ?
ಸಮಾಜದಲ್ಲಿ ದ್ವೇಷವನ್ನು ಬಿತ್ತಿ, ಬಿಲ್ಲವ ಸಮುದಾಯವನ್ನು ಅದಕ್ಕೆ ಬಲಿಪಶುಗಳನ್ನಾಗಿಸಿ ಅಧಿಕಾರ ಹಿಡಿಯುವ ರಾಜಕಾರಣಿಗಳು ಬಿಲ್ಲವರ ನೋವು, ಸಂಕಟಗಳನ್ನು ಇನ್ನಾದರೂ ಬಲ್ಲವರಾಗಬೇಕು. ಬಿಲ್ಲವ, ಕುರುಬ ಸೇರಿದಂತೆ ದುರ್ಬಲವಾಗಿರುವ ಎಲ್ಲ ಜಾತಿಗಳ ಅಭಿವೃದ್ಧಿಗೂ ನಿಗಮಗಳನ್ನು ಸ್ಥಾಪಿಸಬೇಕು. ಇಲ್ಲದೇ ಇದ್ದರೆ, ಈಗಾಗಲೇ ಬ್ರಾಹ್ಮಣರು, ಲಿಂಗಾಯತರು ಮತ್ತು ಒಕ್ಕಲಿಗರ ಅಭಿವೃದ್ಧಿಗಾಗಿ ಸ್ಥಾಪಿಸಿರುವ ಪ್ರತ್ಯೇಕ ನಿಗಮ, ಮಂಡಳಿಗಳನ್ನು ಬರ್ಖಾಸ್ತುಗೊಳಿಸಬೇಕು ಹಾಗೂ ಆರ್ಥಿಕ, ಸಾಮಾಜಿಕ ಸ್ಥಿತಿಗತಿಯ ಮಾನದಂಡದಲ್ಲಿ ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಸರಕಾರ ಹೊಸದಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಬಲಾಢ್ಯರನ್ನು ಇನ್ನಷ್ಟು ಬಲಾಢ್ಯರಾಗಿಸುವುದರಿಂದ ಸಾಮಾಜಿಕ ನ್ಯಾಯವನ್ನು ಕಾಪಾಡಲು ಸಾಧ್ಯವಿಲ್ಲ. ದುರ್ಬಲರನ್ನು ಮೇಲೆತ್ತಲು ಯೋಜನೆಗಳನ್ನು ರೂಪಿಸಿ ಅವರಿಗೆ ಬಲಾಢ್ಯರ ಜೊತೆಗೆ ಸರಿಸಮಾನರಾಗಿಬದುಕಲು ಅವಕಾಶ ಮಾಡಿಕೊಡುವುದು ಸರಕಾರದ ಹೊಣೆಗಾರಿಕೆಯಾಗಿದೆ.