ಶಾಲೆಗಳಲ್ಲಿ ಧ್ಯಾನ: ಹೊಸತೊಂದು ಅಧ್ವಾನ!

Update: 2022-11-07 04:41 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಆರೋಗ್ಯ ವೃದ್ಧಿ, ಮಾನಸಿಕ ಒತ್ತಡ ಇತ್ಯಾದಿಗಳಿಂದ ಮಕ್ಕಳನ್ನು ಮುಕ್ತಗೊಳಿಸಲು ಸರಕಾರ ಹೊಸ ಯೋಜನೆಯೊಂದನ್ನು ಜಾರಿಗೊಳಿಸಲು ಮುಂದಾಗಿದೆ. ಅದರ ಭಾಗವಾಗಿ ಶಾಲೆಗಳಲ್ಲಿ ಇನ್ನು ಮುಂದೆ ಪ್ರತೀ ದಿನ ತರಗತಿ ಆರಂಭವಾಗುವುದಕ್ಕೆ ಮುನ್ನ 10 ನಿಮಿಷಗಳ ಕಾಲ ಮಕ್ಕಳಿಗೆ ಧ್ಯಾನವನ್ನು ಕಡ್ಡಾಯ ಮಾಡಿದೆ. ಸರಕಾರದ ಈ ನಿರ್ಧಾರದ ವಿರುದ್ಧ ಶಿಕ್ಷಣ ತಜ್ಞರೂ ಸೇರಿದಂತೆ ನಾಡಿನ ಚಿಂತಕರು ತಮ್ಮ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ. ಕೊರೋನೋತ್ತರ ದಿನಗಳಲ್ಲಿ ಶಾಲೆಗಳು ಅದರಲ್ಲೂ ಸರಕಾರಿ ಶಾಲೆಗಳು ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಮರೆಮಾಚುವುದಕ್ಕಾಗಿ, ಇಂತಹ ತಲೆಬುಡವಿಲ್ಲದ ಆದೇಶಗಳನ್ನು ಶಿಕ್ಷಣ ಸಚಿವರು ಹೊರಡಿಸುತ್ತಿದ್ದಾರೆ ಎನ್ನುವುದು ಅವರ ಆರೋಪ. ಶಾಲೆಗಳ ನಿಜವಾದ ಅಗತ್ಯಗಳನ್ನು ಈಡೇರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸರಕಾರ, ಇದೀಗ ಬೇರೆ ಬೇರೆ ವಿವಾದಗಳ ಮೂಲಕ ವಿಷಯಾಂತರಗೊಳಿಸಲು ಯತ್ನಿಸುತ್ತಿದೆ. ಅದರ ಭಾಗವಾಗಿಯೇ ಧ್ಯಾನವನ್ನು ವಿದ್ಯಾರ್ಥಿಗಳ ಮೇಲೆ ಹೇರುವುದಕ್ಕೆ ಮುಂದಾಗಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.

ಕೊರೋನೋತ್ತರ ದಿನಗಳಲ್ಲಿ ಶಾಲೆಗಳ ಬಹುದೊಡ್ಡ ಸಮಸ್ಯೆಯೇ, ಸಾವಿರಾರು ವಿದ್ಯಾರ್ಥಿಗಳು ಶಾಲೆಗಳಿಂದ ಹೊರಗುಳಿದಿರುವುದು. ನ್ಯಾಯಾಲಯ ನೇಮಿಸಿರುವ ವಿಶೇಷ ಸಮಿತಿಯೊಂದು ನೀಡಿರುವ ವರದಿಯ ಪ್ರಕಾರ, ರಾಜ್ಯದಲ್ಲಿ ಮೂರು ವರ್ಷದ ಒಳಗಿನ ನಾಲ್ಕೂವರೆ ಲಕ್ಷ ಮಕ್ಕಳು, 4-6 ವರ್ಷದೊಳಗಿನ 5,33,206 ಮಕ್ಕಳು ಅಂಗನವಾಡಿಗಳಿಗೆ ದಾಖಲಾಗಿಲ್ಲ. 6-14 ವರ್ಷದೊಳಗಿನ 10,018 ಮಕ್ಕಳು ಶಾಲೆಗಳಿಗೆ ದಾಖಲಾಗಿಲ್ಲ. 15,338 ಮಕ್ಕಳು ಶಾಲೆಗಳಿಗೆ ದಾಖಲಾಗಿದ್ದರೂ ಅವರು ತರಗತಿಗಳಿಗೆ ಹಾಜರಾಗುತ್ತಿಲ್ಲ. ಕೊರೋನೋತ್ತರ ದಿನಗಳಲ್ಲಿ ಈ ಸಂಖ್ಯೆ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದೆ. ಕೊರೋನ ಕಾಲದಲ್ಲಿ ಸರಕಾರದಿಂದ ಹೇರಿಕೆಯಾದ ಲಾಕ್‌ಡೌನ್‌ನಿಂದಾಗಿ ಸಾವಿರಾರು ಬಡಕುಟುಂಬಗಳು ಸಾಲಗಳ ಶೂಲದಲ್ಲಿ ಸಿಲುಕಿ ಹಾಕಿಕೊಂಡವು. ಗ್ರಾಮೀಣ ಪ್ರದೇಶಗಳಲ್ಲಿ ಮನೆಯೊಳಗಿರುವ ಎಳೆಮಕ್ಕಳನ್ನು ದುಡಿಮೆಗೆ ಕಳುಹಿಸುವುದು ಅವರಿಗೆ ಅನಿವಾರ್ಯವಾಯಿತು.

ಪಡೆದ ಸಾಲ ತೀರಿಸುವುದಕ್ಕಾಗಿಯೂ ಧಣಿಗಳ ಹಟ್ಟಿಯಲ್ಲಿ ಮಕ್ಕಳನ್ನು ಬಿಟ್ಟು ಬರಬೇಕಾದ ಸ್ಥಿತಿ ನಿರ್ಮಾಣವಾಯಿತು. ಕೆಲವು ಮನೆಗಳಲ್ಲಿ, ಗಂಡು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ, ಹೆಣ್ಣು ಮಕ್ಕಳನ್ನು ಶಾಲೆ ತೊರೆಯುವಂತೆ ಒತ್ತಾಯಿಸಲಾಯಿತು. ಬಾಲ್ಯವಿವಾಹಗಳಿಗೆ ಶಾಲೆ ಕಲಿಯುವ ಬಾಲಕಿಯರು ಕೊರಳೊಡ್ಡ ಬೇಕಾಯಿತು. ಆನ್‌ಲೈನ್ ಕಲಿಕೆಯಂತೂ ಶಿಕ್ಷಣ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಿತು. ಸಾವಿರಾರು ಬಡ, ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಅಭದ್ರತೆ, ಖಿನ್ನತೆಯನ್ನು ತುಂಬಿತು. ನೆಟ್‌ವರ್ಕ್‌ಗಳಿಲ್ಲದೆ, ಮೊಬೈಲ್‌ಗಳಿಲ್ಲದೆ ಸುಮಾರು ಎರಡು ವರ್ಷ ಕಲಿಕೆಯಲ್ಲಿ ದೊಡ್ಡ ಮಟ್ಟದ ಅಸಮಾನತೆಯೊಂದು ಸೃಷ್ಟಿಯಾಯಿತು. ಆ ಆಘಾತದಿಂದ ವಿದ್ಯಾರ್ಥಿಗಳು ಇನ್ನೂ ಚೇತರಿಸಿಕೊಂಡಿಲ್ಲ. ಗ್ರಾಮೀಣ ಮತ್ತು ನಗರಪ್ರದೇಶದ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗಾದ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಸರಕಾರ ಇನ್ನೂ ಯಾವುದೇ ಬಗೆಯ ಕಾರ್ಯಕ್ರಮ, ಯೋಜನೆಗಳನ್ನು ಹಾಕಿಕೊಂಡಿಲ್ಲ.

ಶಾಲೆಯಿಂದ ಹೊರತಳ್ಳಲ್ಪಟ್ಟ ವಿದ್ಯಾರ್ಥಿಗಳನ್ನು ಮತ್ತೆ ಸೇರ್ಪಡೆಗೊಳಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಪಕ್ಕಕ್ಕಿರಲಿ, ಸರಕಾರದ ನೀತಿಗಳು ಇರುವ ಮಕ್ಕಳನ್ನು ಶಾಲೆಯಿಂದ ಹೊರದಬ್ಬುವುದಕ್ಕೆ ನೆರವಾಗತೊಡಗಿದವು. ಹಿಜಾಬ್ ವಿವಾದವನ್ನು ಸೃಷ್ಟಿಸುವ ಮೂಲಕ, ಶಾಲೆಗಳಿಗೆ ಆಗಮಿಸಿದ ಹೆಣ್ಣು ಮಕ್ಕಳನ್ನೇ ಶಾಲೆಗಳಿಂದ ಬಹಿಷ್ಕರಿಸಿದ್ದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ಅದರ ಬೆನ್ನಿಗೇ, ಸರಕಾರಿ ಶಾಲೆಗಳ ಮೂಲಭೂತ ಅವಶ್ಯಕತೆಗಳಿಗಾಗಿ ಪೋಷಕರಿಂದಲೇ ದೇಣಿಗೆಯನ್ನು ಪಡೆಯಬೇಕು ಎನ್ನುವ ಹೊಸತೊಂದು ಆದೇಶವನ್ನು ಹೊರಡಿಸಿ ವಿವಾದಕ್ಕೀಡಾಯಿತು. ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಆದೇಶವನ್ನು ಹಿಂದೆಗೆದುಕೊಂಡಿತಾದರೂ, ಸರಕಾರಿ ಶಾಲೆಗಳ ಮತ್ತು ಅಲ್ಲಿನ ವಿದ್ಯಾರ್ಥಿಗಳ ಕುರಿತಂತೆ ಸರಕಾರ ಎಂತಹ ಮನಸ್ಥಿತಿಯನ್ನು ಹೊಂದಿದೆ ಎನ್ನುವುದನ್ನು ಇದು ಬಹಿರಂಗಪಡಿಸಿತು. ಜೊತೆ ಜೊತೆಗೇ ಪಠ್ಯದೊಳಗೆ ಸರಕಾರ ಮಾಡಿರುವ ಹಸ್ತಕ್ಷೇಪ ಇಡೀ ಕಲಿಕಾ ಪ್ರಕ್ರಿಯೆಯಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಸಿತು. ಇವೆಲ್ಲವೂ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಬೀರಿದ ಪರಿಣಾಮಗಳನ್ನು ಯಾವ 'ಧ್ಯಾನ'ದಿಂದಲೂ ತೊಡೆದು ಹಾಕಲು ಸಾಧ್ಯವಿಲ್ಲ.

ವಿದ್ಯಾರ್ಥಿಗಳ ಮಾನಸಿಕ ಒತ್ತಡಗಳನ್ನು ನಿವಾರಿಸುವ, ಅವರಲ್ಲಿ ಕಲಿಕೆಯ ಕುರಿತಂತೆ ಆಸಕ್ತಿಯನ್ನು ಹುಟ್ಟಿಸುವ ಉದ್ದೇಶ ಸರಕಾರಕ್ಕಿರುವುದು ನಿಜವೇ ಆಗಿದ್ದರೆ, ಶಾಲೆಯೊಳಗೆ 'ರಾಜಕೀಯ'ವನ್ನು ತುರುಕುವುದರಿಂದ ಅದು ಮೊದಲು ಹಿಂದೆ ಸರಿಯಬೇಕು. ಹಾಗೆಯೇ, ಕೊರೋನ, ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೀಡಾಗಿರುವ ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲಿ ನೆರವಾಗಬಹುದು ಎನ್ನುವುದರ ಬಗ್ಗೆ ಸರಕಾರ ಯೋಚಿಸಬೇಕು ಮತ್ತು ಅದಕ್ಕಾಗಿ ಯೋಜನೆಗಳನ್ನು ಹಾಕಿಕೊಳ್ಳಬೇಕು. ಬಡತನ, ಕಾಯಿಲೆ, ಹಸಿವು ಮೊದಲಾದ ಹತ್ತು ಹಲವು ಸಮಸ್ಯೆಗಳ ಜೊತೆಗೆ ಶಾಲೆಯ ಮೆಟ್ಟಿಲು ತುಳಿಯುತ್ತಿರುವ ವಿದ್ಯಾರ್ಥಿಗಳ ಒತ್ತಡಗಳನ್ನು ಹತ್ತು ನಿಮಿಷದ ಧ್ಯಾನದಿಂದ ಪರಿಹರಿಸುವುದು ಸಾಧ್ಯವೆ? ಇಷ್ಟಕ್ಕೂ ವಿದ್ಯಾರ್ಥಿಗಳಿಗೆ 'ಧ್ಯಾನ' ಮಾಡುವುದಕ್ಕೆ ಆದೇಶ ನೀಡುವುದು ಶಿಕ್ಷಣ ಸಚಿವರ ಹೊಣೆಗಾರಿಕೆಯಲ್ಲ. ಧ್ಯಾನ ತೀರಾ ಖಾಸಗಿಯಾದುದು. ದೊಡ್ಡವರಿಗೇ 'ಧ್ಯಾನ' ಕುರಿತಂತೆ ಸ್ಪಷ್ಟವಾದ ತಿಳುವಳಿಕೆಯಿಲ್ಲ. ಸಾಧಾರಣವಾಗಿ ಮಕ್ಕಳು ತಮ್ಮ ತಮ್ಮ ಮನೆಗಳಲ್ಲಿ ಪೂಜೆ, ಪ್ರಾರ್ಥನೆಗಳನ್ನು ಮುಗಿಸಿಯೇ ಶಾಲೆಗಳಿಗೆ ಆಗಮಿಸುತ್ತಾರೆ. ತರಗತಿ ಆರಂಭಕ್ಕೆ ಮುನ್ನ ಶಾಲೆಗಳಲ್ಲೂ ಈಗಾಗಲೇ ಪ್ರಾರ್ಥನೆಯನ್ನು ಹಾಡುವ ಪರಿಪಾಠವಿದೆ. ಹೀಗಿರುವಾಗ ಹೊಸದಾಗಿ 'ಧ್ಯಾನ'ವನ್ನು ಅವರ ಮೇಲೆ ಹೇರುವ ಅಗತ್ಯವಾದರೂ ಏನಿದೆ?

ವಿದ್ಯಾರ್ಥಿಗಳ ಒತ್ತಡಗಳನ್ನು ಕಡಿಮೆ ಮಾಡುವ ಉದ್ದೇಶವಿದ್ದರೆ, ವಾರಕ್ಕೊಮ್ಮೆ ಎಲ್ಲ ಶಾಲೆಗಳಿಗೂ 'ಆಪ್ತ ಸಮಾಲೋಚನೆಗಾಗಿ ಮಕ್ಕಳ ವೈದ್ಯ'ರನ್ನು ಸರಕಾರ ನೇಮಕ ಮಾಡಲಿ. ಬಿಕ್ಕಟ್ಟಿನ ಈ ದಿನಗಳಲ್ಲಿ ಈ ಆಪ್ತ ಸಮಾಲೋಚಕರ ಅಗತ್ಯ ಎಲ್ಲ ಮಕ್ಕಳಿಗೂ ಇದೆ. ಪರೀಕ್ಷೆ, ಕಲಿಕೆಯ ಒತ್ತಡಗಳು ತೀವ್ರವಾಗಿರುವ ಈ ದಿನಗಳಲ್ಲಿ, ಆ ಒತ್ತಡಗಳಿಂದ ವಿದ್ಯಾರ್ಥಿಗಳನ್ನು ಪಾರು ಮಾಡುವ ದಾರಿಯನ್ನು ಶಿಕ್ಷಣ ಇಲಾಖೆ ಹುಡುಕಬೇಕೇ ಹೊರತು, ಧ್ಯಾನದ ಹೆಸರಿನಲ್ಲಿ ತನ್ನ ಹೊಣೆಗಾರಿಕೆಯಿಂದ ಜಾರಿಕೊಳ್ಳುವುದು ಸರಕಾರಕ್ಕೆ ಶೋಭೆ ತರುವುದಿಲ್ಲ.

Similar News