ಟಿಪ್ಪು ಸುಲ್ತಾನ್ ವ್ಯಕ್ತಿತ್ವವನ್ನು 100 ಅಡಿಗೆ ಇಳಿಸುವುದು ಬೇಡ

Update: 2022-11-14 03:18 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

'ಟಿಪ್ಪು ಸುಲ್ತಾನ್‌ನ ಬೃಹತ್ ಪ್ರತಿಮೆಯೊಂದನ್ನು ಮೈಸೂರಿನಲ್ಲಿ ಅಥವಾ ಶ್ರೀರಂಗ ಪಟ್ಟಣದಲ್ಲಿ ಸ್ಥಾಪಿಸುವ' ಕುರಿತಂತೆ ಇತ್ತೀಚೆಗೆ ಮೈಸೂರಿನ ಶಾಸಕರೊಬ್ಬರು ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದ್ದಾರೆ. ಇದನ್ನು 'ಶಾಸಕರೊಬ್ಬರ ವೈಯಕ್ತಿಕ ಹೇಳಿಕೆ' ಎಂದು ನಿರ್ಲಕ್ಷಿಸುವ ಸ್ಥಿತಿ ನಮ್ಮ ನಡುವೆ ಇಲ್ಲ. ಪ್ರತಿಮೆಯ ಕೊಡುಗೆಯನ್ನು ಘೋಷಿಸಿದ ಶಾಸಕ ಮುಸ್ಲಿಮ್ ಸಮುದಾಯದಿಂದ ಬಂದಿರುವುದರಿಂದ, ಈ ಹೇಳಿಕೆ ರಾಜಕೀಯ ತಿರುವು ಪಡೆದುಕೊಂಡಿದೆ. ಶಾಸಕರ ಹೇಳಿಕೆ ಹೊರ ಬೀಳುತ್ತಿದ್ದಂತೆಯೇ, ಅದಕ್ಕಾಗಿಯೇ ಕಾಯುತ್ತಿದ್ದ, ಸಂಘಪರಿವಾರ ಅದರ ವಿರುದ್ಧ ಹೇಳಿಕೆಗಳ ಮೇಲೆ ಹೇಳಿಕೆಗಳನ್ನು ನೀಡತೊಡಗಿತು. ಒಬ್ಬಾತನಂತೂ, ನಿರ್ಮಾಣವೇ ಆಗದ ಆ ಪ್ರತಿಮೆಯನ್ನು ಧ್ವಂಸಗೊಳಿಸುವ ಬೆದರಿಕೆಯನ್ನು ಒಡ್ಡಿದ್ದಾನೆ.

ಶಾಸಕರ ಹೇಳಿಕೆ ಅತ್ಯಂತ ಬೇಜವಾಬ್ದಾರಿಯುತವಾದುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಟಿಪ್ಪುಸುಲ್ತಾನ್‌ನ ಹಿರಿಮೆಯನ್ನು ಪ್ರತಿಮೆ ನಿರ್ಮಾಣದ ಮೂಲಕ ಉಳಿಸಿ ಬೆಳೆಸುವ ಅಗತ್ಯವೇ ಇಲ್ಲ. ಸ್ವಾತಂತ್ರ ಪೂರ್ವದಲ್ಲಿ, ಟಿಪ್ಪುಸುಲ್ತಾನ್ ಕಾರಣದಿಂದಲೇ ಜಗತ್ತು ಕರ್ನಾಟಕದ ಕಡೆಗೆ ನೋಡಿತು. ಅಮೆರಿಕದ ಕ್ರಾಂತಿಕಾರರು ಟಿಪ್ಪು ಮತ್ತು ಆತನ ತಂದೆ ಹೈದರ್ ಅಲಿಯ ಮೂಲಕ ಸ್ಫೂರ್ತಿಯನ್ನು ಪಡೆದರು. ಅವೆಲ್ಲಕ್ಕೂ ದಾಖಲೆಗಳಿವೆ. ಟಿಪ್ಪು ತನ್ನ ಆಡಳಿತ ಕಾಲದಲ್ಲಿ ಮಾಡಿದ ಸುಧಾರಣೆಗಳನ್ನು ಇತಿಹಾಸದ ಪುಸ್ತಕದಿಂದ ಅಳಿಸುವುದು ಸುಲಭವಿಲ್ಲ. ಟಿಪ್ಪುವಿನ ವಿರುದ್ಧ ಅದೆಷ್ಟು ಅಪಪ್ರಚಾರ ನಡೆಸಿದರೂ, ಸಂಘಪರಿವಾರ ತನ್ನ ಕಾರ್ಯದಲ್ಲಿ ಯಶಸ್ಸುಸಾಧಿಸದೇ ಇರಲು ಇದುವೇ ಕಾರಣ. ಟಿಪ್ಪುವಿನ ಸಾಮಾಜಿಕ ಸುಧಾರಣೆ, ಧಾರ್ಮಿಕ ಸೌಹಾರ್ದ, ಆತನ ಶೌರ್ಯದ ಕುರಿತ ವಿವರಗಳು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹಬ್ಬಿವೆ. ಅಮೆರಿಕದ ನಾಸಾದಲ್ಲಿರುವ ಟಿಪ್ಪುವಿನ ರಾಕೆಟ್ ಆತನ ದೂರದೃಷ್ಟಿಯನ್ನು ಜಗತ್ತಿಗೆ ಸಾರುತ್ತಿದೆ. ಇಂತಹ ಟಿಪ್ಪುವಿನ ವ್ಯಕ್ತಿತ್ವವನ್ನು 100 ಅಡಿ ಎತ್ತರದ ಪ್ರತಿಮೆ ಮೂಲಕ ಕಟ್ಟಿಕೊಡುವುದು ಸಾಧ್ಯವಿಲ್ಲ. ಅದು ನಭದೆತ್ತರದಲ್ಲಿರುವ ಟಿಪ್ಪುವಿನ ವ್ಯಕ್ತಿತ್ವವನ್ನು ನೂರು ಅಡಿಗೆ ಇಳಿಸೀತಷ್ಟೇ.

ಎಲ್ಲಕ್ಕಿಂತ ಮುಖ್ಯವಾಗಿ ಶಾಸಕರ ಹೇಳಿಕೆ ಟಿಪ್ಪುವನ್ನು ಒಂದು ನಿರ್ದಿಷ್ಟ ಸಮುದಾಯದ ಪ್ರತಿನಿಧಿಯಾಗಿ ಬಿಂಬಿಸುವ ದುರುದ್ದೇಶವನ್ನು ಹೊಂದಿದೆ. ಟಿಪ್ಪು ಯಾವುದೇ ಒಂದು ನಿರ್ದಿಷ್ಟ ಧರ್ಮ, ಸಮುದಾಯವನ್ನು ಪ್ರತಿನಿಧಿಸುವುದಿಲ್ಲ. ಆತ ಈ ಅಖಂಡ ಕರ್ನಾಟಕದ ಎಲ್ಲ ಜನಸಮುದಾಯದ ಆಸ್ತಿ. ಆದುದರಿಂದಲೇ, ಟಿಪ್ಪುವಿನ ಹೆಸರಿನಲ್ಲಿ ದೇವಸ್ಥಾನಗಳಲ್ಲಿ 'ಸಲಾಂ ಆರತಿ' ಮಾಡುತ್ತಾರೆ. ನಂಬೂದಿರಿ ಬ್ರಾಹ್ಮಣರು ಹೇರಿದ್ದ 'ಮೊಲೆ ತೆರಿಗೆ'ಯನ್ನು ನಿಷೇಧಿಸಿದ ಕಾರಣಕ್ಕಾಗಿ, ಇಂದಿಗೂ ಮಲಬಾರಿನಲ್ಲಿ ಹಿಂದುಳಿದ ವರ್ಗದಜನರು ಟಿಪ್ಪುವನ್ನು ಸ್ಮರಿಸುತ್ತಾರೆ. ಮೈಸೂರು ಭಾಗದಲ್ಲಿ ಟಿಪ್ಪು ಸುಲ್ತಾನನಿಂದ ಭೂಮಿಯ ಹಕ್ಕನ್ನು ತನ್ನದಾಗಿಸಿಕೊಂಡ ಸಾವಿರಾರು ದಲಿತ, ಶೋಷಿತ ಸಮುದಾಯದ ಜನರಿದ್ದಾರೆ. ಆತ ಅಭಿವೃದ್ಧಿ ಪಡಿಸಿದ ಗೋವಿನ ತಳಿ, ರೇಷ್ಮೆ, ಕಾಫಿ ಇವೆಲ್ಲವೂ ಸಮಸ್ತ ಕನ್ನಡ ಜನಸಮುದಾಯದ ಭಾಗವಾಗಿ ಹರಡಿಕೊಂಡಿವೆ.

ಟಿಪ್ಪುವಿನ ಸೇನೆಯಲ್ಲಿ ಮುಸ್ಲಿಮೇತರರೇ ಬಹುಸಂಖ್ಯಾತರಾಗಿದ್ದರು. ಆತನ ಮಂತ್ರಿ ಪೂರ್ಣಯ್ಯ ಬ್ರಾಹ್ಮಣನಾಗಿದ್ದ. ಈ ನಾಡಿನ ಮುಸ್ಲಿಮರು ಟಿಪ್ಪು ಸುಲ್ತಾನನ್ನು ತಮ್ಮ ಧರ್ಮದ ಪ್ರತಿನಿಧಿಯಾಗಿ ಎಂದೂ ಬಿಂಬಿಸಿಕೊಂಡಿಲ್ಲ. ಅವರಿಗೆ ಟಿಪ್ಪು ಈ ನಾಡನ್ನು ಆಳಿ ಹೋದ ನೂರಾರು ರಾಜರಲ್ಲಿ ಇನ್ನೊಬ್ಬ. ಆತ ಆಡಳಿತದಲ್ಲಿ ಮಾಡಿದ ಸುಧಾರಣೆ, ಪ್ರದರ್ಶಿಸಿದ ಶೌರ್ಯ, ನಾಡಿಗಾಗಿ ಮಾಡಿದ ತ್ಯಾಗ ಬಲಿದಾನದ ಕಾರಣಕ್ಕಾಗಿ ಮುಸ್ಲಿಮರಷ್ಟೇ ಅಲ್ಲ, ಸರ್ವ ಧರ್ಮೀಯರು ಜಾತಿ ಭೇದಗಳಾಚೆಗೆ ಟಿಪ್ಪುವನ್ನು ಸ್ಮರಿಸುತ್ತಾರೆ. ಅಷ್ಟೇ ಏಕೆ? ಸರಕಾರ 'ಟಿಪ್ಪು ಜಯಂತಿ'ಯನ್ನು ಆಚರಿಸಬೇಕು ಎಂದು ಈ ನಾಡಿನ ಮುಸ್ಲಿಮರು ಎಂದೂ ಒತ್ತಾಯ ಮಾಡಿರಲಿಲ್ಲ. ಸಿದ್ದರಾಮಯ್ಯ ನೇತೃತ್ವದ ಅಂದಿನ ಕಾಂಗ್ರೆಸ್ ಸರಕಾರ ಮುಸ್ಲಿಮ್ ಸಮುದಾಯಕ್ಕೆ ಮಾಡುವ ಅದೇನೋ ಬೃಹತ್ ಉಪಕಾರವಾಗಿ 'ಟಿಪ್ಪು ಜಯಂತಿ'ಯನ್ನು ಘೋಷಿಸಿತು. ಕಾಂಗ್ರೆಸ್‌ನೊಳಗಿರುವ ಕೆಲವು ಮುಸ್ಲಿಮ್ ನಾಯಕರ ಸಂಕುಚಿತ ಮನಸ್ಥಿತಿಯೂ ಇದರಲ್ಲಿ ಕೆಲಸ ಮಾಡಿರಬಹುದು. ಈ ಜಯಂತಿ ಘೋಷಣೆಯಾದ ದಿನದಿಂದ ಮುಸ್ಲಿಮರಿಗೆ ಲಾಭವಾಗುವುದಕ್ಕಿಂತ, ನಷ್ಟವಾದದ್ದೇ ಅಧಿಕ. ಇದರಿಂದ ಟಿಪ್ಪುವಿನ ವ್ಯಕ್ತಿತ್ವಕ್ಕೂ ಸರಕಾರ ಇನ್ನಷ್ಟು ಘಾಸಿ ಮಾಡಿತು. ಸಂಘಪರಿವಾರಕ್ಕೂ ಟಿಪ್ಪು 'ಮುಸ್ಲಿಮರ ಪ್ರತಿನಿಧಿ'ಯಾಗುವುದು ಬೇಕಾಗಿತ್ತು.

'ಟಿಪ್ಪು ಜಯಂತಿ'ಯನ್ನು ಬಳಸಿಕೊಂಡು ನಾಡಿನ ಮುಸ್ಲಿಮರ ವಿರುದ್ಧ ಸಂಘಪರಿವಾರ ದ್ವೇಷ ಕಾರಲು ಆರಂಭಿಸಿತು. ಕೊಡಗು, ಮಂಗಳೂರಿನಲ್ಲಿ ಕೋಮುಗಲಭೆಗಳಿಗೆ 'ಟಿಪ್ಪು ಜಯಂತಿ'ಯನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಟಿಪ್ಪು ಜಯಂತಿ ಆಚರಿಸಲು ಕೊಡಗಿನಲ್ಲಿ ನೆರೆದ ಜನರನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರವೇ 'ಕೇರಳದಿಂದ ಬಂದ ಉಗ್ರವಾದಿಗಳು' ಎಂದು ಆರೋಪಿಸಿತು. ಅಂತಿಮವಾಗಿ ಸಾಮಾಜಿಕ ನೆಲೆಯಲ್ಲಾಗಲಿ, ಆರ್ಥಿಕ ನೆಲೆಯಲ್ಲಾಗಲಿ ಈ ಟಿಪ್ಪು ಜಯಂತಿಯಿಂದ ಮುಸ್ಲಿಮರಿಗೆ ಯಾವ ಲಾಭವೂ ಆಗಲಿಲ್ಲ. ಇದೀಗ ಅದೇ ಕಾಂಗ್ರೆಸ್‌ನ ನಾಯಕರೊಬ್ಬರು ಟಿಪ್ಪುವಿನ 100 ಅಡಿ ಪ್ರತಿಮೆಯನ್ನು ಸ್ಥಾಪಿಸುವ ಕೊಡುಗೆಯನ್ನು ನೀಡಿದ್ದಾರೆ. ಈ ಮೂಲಕ, ಟಿಪ್ಪುವಿನ ಎತ್ತರವನ್ನು 100 ಅಡಿಗೆ ಇಳಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.

ಮೈಸೂರಿನ ಜನರಾಗಲಿ ಅಥವಾ ಕರ್ನಾಟಕದ ಮುಸ್ಲಿಮರಾಗಲಿ ಟಿಪ್ಪುವಿನ ಪ್ರತಿಮೆ ತಮ್ಮ ಅಗತ್ಯವೆಂದು ಎಲ್ಲೂ ಹೇಳಿಕೆ ನೀಡಿಲ್ಲ. ಸರಕಾರವನ್ನು ಒತ್ತಾಯಿಸಿಯೂ ಇಲ್ಲ. ಶಾಸಕರೇ ಇದನ್ನು ಮೈಸೂರಿನ 'ಮುಸ್ಲಿಮರ ತುರ್ತು ಅಗತ್ಯ'ವಾಗಿ ಬಿಂಬಿಸಲು ಮುಂದಾಗಿದ್ದಾರೆ. ಟಿಪ್ಪು ಜಯಂತಿಯಿಂದ ಆದ ಅನಾಹುತಗಳು ಸಾಕಾಗಲಿಲ್ಲವೆಂದು, ಸಂಘಪರಿವಾರದ ದ್ವೇಷ ರಾಜಕಾರಣಕ್ಕೆ ಇನ್ನಷ್ಟು ಆಹಾರ ಒದಗಿಸುವ ಆತುರದಲ್ಲಿ ಅವರಿದ್ದಾರೆ. ಮುಸ್ಲಿಮ್ ಸಮುದಾಯಕ್ಕೆ ನೆರವಾಗುವ ಪ್ರಾಮಾಣಿಕ ಉದ್ದೇಶ ಕಾಂಗ್ರೆಸ್ ಅಥವಾ ಇನ್ನಿತರ ಜಾತ್ಯತೀತ ಪಕ್ಷಗಳ ಶಾಸಕರಿಗೆ ಇದ್ದಿದ್ದೇ ಆದರೆ, ಮುಸ್ಲಿಮರನ್ನು ಬಡತನ, ಅನಕ್ಷರತೆಯಿಂದ ಮೇಲೆತ್ತುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಿ.

16ನೇ ಶತಮಾನದಲ್ಲಿ ಹೈದರ್, ಟಿಪ್ಪು ಅವರಿಗೆ ಬಡವರು, ರೈತರು, ಶೋಷಿತ ಸಮುದಾಯದ ಬಗ್ಗೆ ಇದ್ದ ಕಾಳಜಿಯ ಅರ್ಧದಷ್ಟಾದರೂ ಇಂದಿನ ರಾಜಕಾರಣಿಗಳಿಗಿದ್ದರೆ, ಕರ್ನಾಟಕದಲ್ಲಿರುವ ಮುಸ್ಲಿಮರ, ದಲಿತರ ಸ್ಥಿತಿ ಇಷ್ಟು ದಯನೀಯವಾಗಿರುತ್ತಿರಲಿಲ್ಲವೇನೋ. ಎಲ್ಲ ಧರ್ಮಗಳನ್ನು ಜೊತೆ ಸೇರಿಸಿಕೊಂಡು ಆಡಳಿತವನ್ನು ನೀಡಿದ ಟಿಪ್ಪುವಿನ ದೂರದೃಷ್ಟಿ ಇಂದಿನ ರಾಜಕೀಯ ನಾಯಕರಿಗೆ ಅತ್ಯಗತ್ಯವಾಗಿ ಇರಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಪಕ್ಷಗಳು ಟಿಪ್ಪುಸುಲ್ತಾನ್‌ನ ಸರ್ವ ಧರ್ಮ ಸಮನ್ವಯವನ್ನು ಮಾದರಿಯಾಗಿರಿಸಿಕೊಂಡು, ಕರ್ನಾಟಕದ ಹಿರಿಮೆಯನ್ನು ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲಿ. ನಿರ್ಜೀವ ಪ್ರತಿಮೆಗಳ ಕುರಿತಂತೆ ಇರುವ ಆಸಕ್ತಿಯನ್ನು ಸರಕಾರ, ಬಡತನ, ಅನಾರೋಗ್ಯದಿಂದ ನರಳುತ್ತಿರುವ ಶ್ರೀಸಾಮಾನ್ಯರ ಬಗ್ಗೆ ಪ್ರದರ್ಶಿಸಲಿ.

Similar News