ಅವಿವೇಕಿಗಳ ಕೈಯಲ್ಲಿ 'ವಿವೇಕ'
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸ್ವಾಮಿ ವಿವೇಕಾನಂದರು ಭಾರತದ ಅಧ್ಯಾತ್ಮಕ್ಕೆ ಹೊಸ ದಿಕ್ಕನ್ನು ನೀಡಿದರು. ತಮ್ಮ ಬದುಕಿನುದ್ದಕ್ಕೂ ಹಿಂದೂ ಧರ್ಮದೊಳಗಿರುವ ಅಜ್ಞಾನ, ಮೌಢ್ಯ, ಜಾತೀಯತೆಯ ವಿರುದ್ಧ ಮಾತನಾಡಿದ ಕ್ರಾಂತಿಕಾರಿ ಸನ್ಯಾಸಿ ಅವರು. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹಿಂದೂಧರ್ಮದ ಒಳಿತುಗಳನ್ನು ಅವರು ಹರಡಿದರು. ವಿದೇಶಿಯರಷ್ಟೇ ಅಲ್ಲ, ಬೇರೆ ಬೇರೆ ಧರ್ಮದ ಯುವಕರು ಅವರ ಚಿಂತನೆಗಳಿಗೆ ಮಾರು ಹೋಗಿ ಅವರ ಶಿಷ್ಯರಾದರು. ಇಂದು ಯುವ ಜನಾಂಗಕ್ಕೆ ಸ್ವಾಮಿ ವಿವೇಕಾನಂದರು ಹೆಚ್ಚು ಹೆಚ್ಚು ತಲುಪಬೇಕಾಗಿದೆ. ಈ ನಿಟ್ಟಿನಲ್ಲಿ, ನಮ್ಮ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ವಿವೇಕಾನಂದರ ಚಿಂತನೆಗಳನ್ನು ಹರಡುವುದು ತುರ್ತು ಅಗತ್ಯವಾಗಿದೆ. ವಿಪರ್ಯಾಸವೆಂದರೆ, ವಿವೇಕಾನಂದರ ತತ್ವ, ಚಿಂತನೆಗಳ ಬಗ್ಗೆ ಎಳ್ಳಷ್ಟು ಅರಿವಿಲ್ಲದ ಒಂದಿಷ್ಟು ಅವಿವೇಕಿಗಳು 'ವಿವೇಕಾನಂದರ'ನ್ನು ಪ್ರಚಾರ ಮಾಡುವ ಹೆಸರಲ್ಲಿ ವಿವೇಕಾನಂದರನ್ನು ವಿರೂಪಗೊಳಿಸಿ ಅದನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಆತುರದಲ್ಲಿದ್ದಾರೆ. ಶಾಲೆಗಳಲ್ಲಿ ವಿವೇಕಾನಂದರನ್ನು ಅಳವಡಿಸುವುದೆಂದರೆ ಶಾಲೆಗಳ ಗೋಡೆಗಳಿಗೆ 'ಕೇಸರಿ'ಯನ್ನು ಬಳಿಯುವುದು ಎಂದು ನಂಬಿರುವ ಇವರು ಏಕಕಾಲದಲ್ಲಿ ಶಾಲೆಗಳಿಗೂ, ಸ್ವಾಮಿ ವಿವೇಕಾನಂದರಿಗೂ ಅಪಮಾನಿಸಲು ಮುಂದಾಗಿದ್ದಾರೆ. ಇವರ ಕೈಯಿಂದ ನಮ್ಮ ಶಾಲೆಗಳನ್ನು ಮತ್ತು ಸ್ವಾಮಿ ವಿವೇಕಾನಂದರನ್ನು ಉಳಿಸುವುದು ಎಲ್ಲ ಪ್ರಜ್ಞಾವಂತರ ಕರ್ತವ್ಯವಾಗಿದೆ.
ಶಾಲೆಗಳಲ್ಲಿ ತಮ್ಮ ದ್ವೇಷ ರಾಜಕಾರಣಕ್ಕೆ ಸ್ವಾಮಿ ವಿವೇಕಾನಂದರನ್ನು ಬಳಸಲು ಮುಂದಾಗಿರುವ ಇವರಿಗೆ ಸ್ವಾಮಿ ವಿವೇಕಾನಂದರು ಇತರ ಧರ್ಮಗಳ ಕುರಿತಂತೆ ಏನು ಹೇಳಿದ್ದರು ಎನ್ನುವುದನ್ನು ಪಾಠ ಮಾಡಬೇಕಾಗಿದೆ. ''ಜೀಸಸ್ ಬದುಕಿದ್ದ ದಿನಗಳಲ್ಲಿ ನಾನೇನಾದರೂ ಫೆಲೆಸ್ತೀನ್‌ನಲ್ಲಿದ್ದಿದ್ದರೆ ಕಣ್ಣೀರಿನಿಂದಲ್ಲ, ನನ್ನ ಹೃದಯದಿಂದ ರಕ್ತ ಬಸಿದು ಆತನ ಪಾದ ತೊಳೆಯುತ್ತಿದ್ದೆ- (Complete Works of Swami Vivekananda)' ' ಎಂದು ಹೇಳಿದವರು ಸ್ವಾಮಿ ವಿವೇಕಾನಂದರು. ಇಸ್ಲಾಮ್ ಧರ್ಮದ ಕುರಿತಂತೆಯೂ ಇದೇ ಗೌರವವನ್ನು ಅವರು ಹೊಂದಿದ್ದರು. ''ಸರಳ ಬೋಧನೆಯೇ ಇಸ್ಲಾಮಿನ ವೈಶಿಷ್ಟ. ಅರ್ಥವಾಗದ ತತ್ವ,ಜ್ಞಾನಗಳ ಸಿದ್ಧಾಂತದ ಚರ್ಚೆ ಆ ಧರ್ಮದಲ್ಲಿಲ್ಲ. ಸಮತೆ ಎರಡನೆಯ ವೈಶಿಷ್ಟ. ದೇವರೆದುರು ಎಲ್ಲರೂ ಸಮಾನರು. ದೇವರು ಮತ್ತು ಮಾನವರ ನಡುವೆ ಯಾವುದೇ ಪುರೋಹಿತ ಅಲ್ಲಿಲ್ಲ.'' ಈ ಮಾತುಗಳನ್ನು ಮಾರ್ಚ್ 25, 1900ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನಡೆದ 'ಪೈಗಂಬರ್' ಉಪನ್ಯಾಸದಲ್ಲಿ ಅವರು ಆಡಿದ್ದರು. ''ಮುಸ್ಲಿಮರ ಮಧ್ಯೆ ಪರಿಪೂರ್ಣವಾದ ಸಮಾನತೆ ಮತ್ತು ಭ್ರಾತೃತ್ವವನ್ನು ಪ್ರವಾದಿ ಮುಹಮ್ಮದರು ತನ್ನ ಜೀವಿತಾವಧಿಯಲ್ಲಿ ತೋರಿಸಿಕೊಟ್ಟರು.
ಜನಾಂಗ, ಜಾತಿ, ವಂಶ, ವರ್ಣ ಅಥವಾ ಲಿಂಗಭೇದದ ಪ್ರಶ್ನೆ ಅಲ್ಲಿರಲಿಲ್ಲ. ಆಫ್ರಿಕಾದ ಮಾರುಕಟ್ಟೆಯಿಂದ ಖರೀದಿಸಿ ತುರ್ಕಿಗೆ ತಂದ ನೀಗ್ರೋ ಗುಲಾಮನೊಬ್ಬ ಮುಸ್ಲಿಮನಾದಲ್ಲಿ ಮತ್ತು ಸಾಕಷ್ಟು ಅರ್ಹತೆ ಹಾಗೂ ಸಾಮರ್ಥ್ಯವನ್ನು ಹೊಂದಿದ್ದಲ್ಲಿ ಆತ ಸುಲ್ತಾನ್‌ನ ಪುತ್ರಿಯನ್ನು ಕೂಡ ವಿವಾಹವಾಗಬಹುದಾಗಿದೆ. ಇದರೊಂದಿಗೆ ಅಮೆರಿಕದಲ್ಲಿ ನೀಗ್ರೋಗಳನ್ನು ಮತ್ತು ಅಮೆರಿಕನ್ ಇಂಡಿಯನ್ನರನ್ನು ನಡೆಸಿಕೊಳ್ಳುವ ರೀತಿಯನ್ನು ಹೋಲಿಸಿಕೊಳ್ಳಿ. ಆದರೆ, ಇಸ್ಲಾಮ್‌ನಲ್ಲಿ ಜನಾಂಗ ಹಾಗೂ ವರ್ಣ ಭೇದದಿಂದ ಹೊರತಾದ ಪರಿಪೂರ್ಣವಾದ ಸಮಾನತೆಯನ್ನು ನೀವು ಕಾಣುವಿರಿ'' (The Complete Works of Swami Vivekananda/Volume 4/) ಸ್ವಾಮಿ ವಿವೇಕಾನಂದರ ಈ ಮಾತು ಅವರು ಇತರ ಧರ್ಮಗಳನ್ನು ಎಷ್ಟು ಆಳವಾಗಿ ಅಧ್ಯಯನ ಮಾಡಿದ್ದರು ಮತ್ತು ಆಧರ್ಮಗಳ ಕುರಿತಂತೆ ಎಂತಹ ಭಾವನೆಯನ್ನು ಹೊಂದಿದ್ದರು ಎನ್ನುವುದನ್ನು ಹೇಳುತ್ತದೆ. ಅಷ್ಟೇ ಅಲ್ಲ, ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಮರು ಜೊತೆಯಾಗಿ ಬದುಕುವ ಕನಸನ್ನು ಅವರು ಕಂಡಿದ್ದರು. ಮಹಮದ್ ಸರಫರಾಜ್ ಎಂಬವರು ವಿವೇಕಾನಂದರ ಶಿಷ್ಯರಾಗಿದ್ದರು. ಅವರಿಗೆ ವಿವೇಕಾನಂದರು 'ಮಹಮದಾನಂದ' ಎಂದು ಹೆಸರು ನೀಡಿದ್ದರು. ಜೂನ್ 10, 1898ರಂದು ಅಲ್ಮೋರಾದಿಂದ ಶಿಷ್ಯ ಮಹಮದಾನಂದನಿಗೆ ಅವರು ಒಂದು ಪತ್ರ ಬರೆಯುತ್ತಾರೆ. ಆ ಪತ್ರದಲ್ಲಿ ''ನಮ್ಮ ಮಾತೃಭೂಮಿಯ ದೃಷ್ಟಿಯಿಂದ ವೇದದ ತತ್ವ ಜ್ಞಾನ ಮತ್ತು ಇಸ್ಲಾಮಿನ ಸಮತೆಯ ಸಮನ್ವಯವೇ ಏಕೈಕ ಆಶಾಸ್ಥಾನವಾಗಿದೆ'' ಎಂದು ಉಲ್ಲೇಖಿಸುತ್ತಾರೆ. ಇಂದು ತರಗತಿಗಳಲ್ಲಿ ವಿವೇಕಾನಂದರನ್ನು ಕಲಿಸಲು ಹೊರಟವರಿಗೆ ಸಮಾನತೆಯ ಕುರಿತಂತೆ ಎಳ್ಳಷ್ಟಾದರೂ ವಿಶ್ವಾಸವಿದೆಯೆ? ವಿವೇಕಾನಂದರು ಹಿಂದೂ-ಮುಸ್ಲಿಮ್ ಸಮನ್ವಯದ ಕನಸು ಕಂಡಿದ್ದರೆ, ಇವರು ಅದೇ ವಿವೇಕಾನಂದರನ್ನು ಬಳಸಿಕೊಂಡು ಹಿಂದು-ಮುಸ್ಲಿಮರ ನಡುವೆ ಕಂದಕವನ್ನು ಬಿತ್ತಲು ಮುಂದಾಗಿದ್ದಾರೆ.
ತಮ್ಮ ಭಾಷಣ, ಬರಹಗಳಲ್ಲಿ ಹಿಂದೂ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲ ಅನೈತಿಕ ಆಚರಣೆಗಳನ್ನು, ವೌಢ್ಯಗಳನ್ನು ತೀವ್ರವಾಗಿ ಖಂಡಿಸಿದ್ದರು ಸ್ವಾಮಿ ವಿವೇಕಾನಂದ. ''ಹಸಿದವರಿಗೆ ಅನ್ನ ನೀಡದೆ, ಗೋವುಗಳಿಗೆ ಧಾನ್ಯದ ರಾಶಿಯನ್ನೇ ಸುರಿಯುತ್ತೀರಿ. ನನಗೆ ಅಂಥವರ ಬಗ್ಗೆ ಕಿಂಚಿತ್ತೂ ಅನುಕಂಪವಿಲ್ಲ. ಗೋವುಗಳು ಸಹ ಅವುಗಳ ಕರ್ಮದಿಂದಲೇ ಕಸಾಯಿಖಾನೆ ಸೇರಿ ಸಾಯುತ್ತವೆ ಎನ್ನಬಹುದಲ್ಲ? (ರಾಮಕೃಷ್ಣ ಮಠ ಪ್ರಕಟಿಸಿದ ಸ್ವಾಮಿ ವಿವೇಕಾನಂದ ಗ್ರಂಥಾವಳಿ -10ನೇ ಸಂಪುಟ)'' ಎಂದು ಕಟುವಾಗಿ ಬರೆಯುತ್ತಾರೆ. ಬರಗಾಲದ ಸಮಯದಲ್ಲಿ ಗೋವುಗಳ ರಕ್ಷಣೆಗೆ ಧನ ಸಹಾಯ ಯಾಚಿಸಲು ಬಂದ ಪುರೋಹಿತರನ್ನು ಟೀಕಿಸಿದ ಅವರು ''ಯಾವ ಸಭಾ ಸಮಿತಿಗಳು ಮನುಷ್ಯರಲ್ಲಿ ಸಹಾನುಭೂತಿಯನ್ನು ತೋರದೆ, ತಮ್ಮ ಅಣ್ಣ ತಮ್ಮಂದಿರು ಹೊಟ್ಟೆಗಿಲ್ಲದೆ ಸಾಯುತ್ತಿದ್ದಾರೆಂದು ನೋಡಿಯೂ ಅವರನ್ನು ಉಳಿಸುವುದಕ್ಕಾಗಿ ಒಂದು ತುತ್ತು ಅನ್ನವನ್ನು ಕೊಡದೆ, ಪಶುಗಳ ರಕ್ಷಣೆಗಾಗಿ ರಾಶಿ ರಾಶಿ ಅನ್ನವನ್ನು ದಾನ ಮಾಡುತ್ತವೆಯೋ ಅವುಗಳೊಡನೆ ನನಗೆ ಕೊಂಚವೂ ಸಹಾನುಭೂತಿಯಿಲ್ಲ.
ಅವುಗಳಿಂದ ಸಮಾಜಕ್ಕೆ ಹೆಚ್ಚು ಉಪಕಾರವಾಗುತ್ತದೆ ಎಂದು ನಾನು ನಂಬುವುದಿಲ್ಲ-(ಸ್ವಾಮಿ ವಿವೇಕಾನಂದ ಗ್ರಂಥವಾಳಿ-10ನೇ ಸಂಪುಟ)'' ಎಂದು ಸ್ಪಷ್ಟ ಪಡಿಸುತ್ತಾರೆ. ದೇಶಾದ್ಯಂತ ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೀಡು ಮಾಡಿ, ಗೋಶಾಲೆಗಳನ್ನು ಸ್ಥಾಪಿಸಿ ಅವುಗಳಿಗೆ ಕೋಟಿ ಕೋಟಿ ಸುರಿಯುತ್ತಿರುವ ಸರಕಾರಗಳ ಮುಖಕ್ಕೆ ಹೊಡೆಯುವಂತೆ ಸ್ವಾಮಿ ವಿವೇಕಾನಂದರು ಶತಮಾನದ ಹಿಂದೆಯೇ ಮಾತನಾಡಿದ್ದರು. ಕೇರಳದಲ್ಲಿ ನಂಬೂದಿರಿ ಬ್ರಾಹ್ಮಣರು ಆಚರಿಸುತ್ತಿರುವ ಭೀಕರ ಜಾತೀಯತೆ ಮತ್ತು ಶೋಷಣೆಯನ್ನು ಕಂಡು ಆ ರಾಜ್ಯವನ್ನು 'ಹುಚ್ಚಾಸ್ಪತ್ರೆ' ಎಂದು ವ್ಯಂಗ್ಯವಾಡಿದ್ದರು. ''ಹೇ ಬ್ರಾಹ್ಮಣರೇ, ವಂಶ ಪಾರಂಪರ್ಯದಿಂದ ಬ್ರಾಹ್ಮಣರಿಗೆ ಅಸ್ಪಶ್ಯರಿಗಿಂತ ಹೆಚ್ಚು ಶೈಕ್ಷಣಿಕ ಯೋಗ್ಯತೆಯಿದ್ದರೆ ಅಸ್ಪಶ್ಯರ ಶಿಕ್ಷಣಕ್ಕೆ ನಿಮ್ಮೆಲ್ಲರ ಹಣವನ್ನು ಖರ್ಚು ಮಾಡಿ. ಪ್ರತಿಯೊಬ್ಬ ಮಹಿಳೆ, ಪುರುಷ ಮತ್ತು ಮಗು ಜಾತಿ, ಕುಲ, ಗೋತ್ರಗಳ ಭೇದವಿಲ್ಲದೆ, ದುರ್ಬಲ, ಸಬಲ ಎಂಬ ವ್ಯತ್ಯಾಸವಿಲ್ಲದೆ ಉಚ್ಚ-ನೀಚ ಎಂದು ನೋಡದೆ ಪ್ರತಿಯೊಬ್ಬರಲ್ಲೂ ಅನಂತಾತ್ಮನಿದ್ದಾನೆಂದು ಅರಿಯಿರಿ (ಕೃತಿ ಶ್ರೇಣಿ-ಸಂಪುಟ 5) ಇದು ಸ್ವಾಮಿ ವಿವೇಕಾನಂದರ ಮಾತು.
ಹಿಂದೂ ಸಮಾಜದೊಳಗಿರುವ ಶೋಷಣೆಗಳನ್ನು ಅವರೆಷ್ಟು ಕಟುವಾಗಿ ಖಂಡಿಸಿದ್ದರು ಎಂದರೆ, ಇಂದೇನಾದರೂ ಅವರು ಬದುಕಿ ತಮ್ಮ ಚಿಂತನೆ ಗಳನ್ನು ಸಾರ್ವಜನಿಕರ ಮುಂದಿಟ್ಟಿದ್ದರೆ, ಇದೇ ಬಿಜೆಪಿ ಮತ್ತು ಸಂಘಪರಿವಾರ ಸ್ವಾಮಿ ವಿವೇಕಾನಂದರನ್ನು 'ಹಿಂದೂ ವಿರೋಧಿ' 'ನಗರ ನಕ್ಸಲೈಟ್' ಎಂದು ಕರೆದು ಬಂಧಿಸಿ ಜೈಲಿಗೆ ತಳ್ಳುತ್ತಿತ್ತು. ಇತ್ತೀಚೆಗೆ ಕೇಸರಿ ಬಟ್ಟೆ ಧರಿಸಿ ಸ್ವಾಮೀಜಿಯೊಬ್ಬರು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಜೈಲು ಸೇರಿದ್ದಾರೆ. ಇನ್ನೋರ್ವ ಕೇಸರಿ ಧಾರಿ ಸ್ವಾಮೀಜಿ ಮಹಿಳೆಯ ಮೇಲಿನ ಅತ್ಯಾಚಾರ ಆರೋಪ ಎದುರಿಸುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲಿ ಹತ್ತು ಹಲವು ಕೇಸರಿ ಧಾರಿ ಸ್ವಾಮೀಜಿಗಳು ಹತ್ತು ಹಲವು ಆರೋಪಗಳನ್ನು ಎದುರಿಸಿ ಜೈಲಿನಲ್ಲಿದ್ದಾರೆ. ಹೀಗಿರುವಾಗ ಶಾಲೆಗಳಿಗೆ ಕೇಸರಿ ಬಣ್ಣ ಬಳಿದಾಕ್ಷಣ ಶಾಲೆ 'ವಿವೇಕ'ವನ್ನು ಪಡೆಯುತ್ತದೆ ಎನ್ನುವಂತಿಲ್ಲ. ಇಷ್ಟಕ್ಕೂ ಸ್ವಾಮಿ ವಿವೇಕಾನಂದರು ಯಾವತ್ತೂ ಕಾವಿ ಬಟ್ಟೆ ಹಾಕಿಕೊಂಡು ತಿರುಗಾಡುತ್ತಿರಲಿಲ್ಲ ಎನ್ನುವುದನ್ನೂ ರಾಜ್ಯ ಸರಕಾರದೊಳಗಿರುವ 'ಅವಿವೇಕಿ'ಗಳು ನೆನಪಿನಲ್ಲಿಟ್ಟುಕೊಳ್ಳಬೇಕು. ನಿಜಕ್ಕೂ ಸ್ವಾಮಿ ವಿವೇಕಾನಂದರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶ ಸರಕಾರಕ್ಕಿದ್ದರೆ, ವಿವೇಕಾನಂದರ ಕ್ರಾಂತಿಕಾರಿ ಚಿಂತನೆಗಳನ್ನು ಪರಿಚಯಿಸಲಿ. ಇತರ ಧರ್ಮಗಳ ಜೊತೆಗೆ ಹಿಂದೂ ಧರ್ಮದ ಬಗ್ಗೆ, ಹಿಂದೂ ಪುರೋಹಿತರ ಬಗ್ಗೆ ಅವರು ಹೊಂದಿದ್ದ ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಪ್ರಯತ್ನ ನಡೆಸಲಿ. ಹಾಗೆಯೇ, ವಿವೇಕಾನಂದರನ್ನು ರಾಜಕೀಯ ದುರುದ್ದೇಶಗಳಿಗಾಗಿ ವಿರೂಪಗೊಳಿಸುವ ಬಿಜೆಪಿ ಮತ್ತು ಸಂಘಪರಿವಾರದ ಪ್ರಯತ್ನವನ್ನು ವಿವೇಕಾನಂದರ ಬಗ್ಗೆ ಅಭಿಮಾನವಿರುವ ಎಲ್ಲರೂ ಈ ಸಂದರ್ಭದಲ್ಲಿ ಒಕ್ಕೊರಲಿನಲ್ಲಿ ವಿರೋಧಿಸಬೇಕಾಗಿದೆ.