ಕೋವಿಡ್ ಸಂದರ್ಭದಲ್ಲಿ ಶಾಶ್ವತವಾಗಿ ಮುಚ್ಚಿದ ಶೇ.14ರಷ್ಟು ಸಣ್ಣ ಮತ್ತು ಮಧ್ಯಮ ಉದ್ಯಮಗಳು

Update: 2022-11-19 12:53 GMT

ಹೊಸದಿಲ್ಲಿ,ನ.19: ಕೋವಿಡ್ ಸಾಂಕ್ರಾಮಿಕ ಮತ್ತು ನಂತರದ ಲಾಕ್‌ಡೌನ್‌ಗಳು ಕಿರು,ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಂಇ)ಗಳಿಗೆ ಭಾರೀ ಹೊಡೆತವನ್ನು ನೀಡಿವೆ. ಸಮೀಕ್ಷೆಗೊಳಪಟ್ಟ ಎಂಎಸ್‌ಎಂಇಗಳ ಪೈಕಿ ಸುಮಾರು ಶೇ.14ರಷ್ಟು ಘಟಕಗಳು ನಗದು ಹಣದ ಕೊರತೆ ಮತ್ತು ವ್ಯವಹಾರದ ವೈಫಲ್ಯದಿಂದಾಗಿ ಶಾಶ್ವತವಾಗಿ ಉದ್ಯಮದಿಂದ ನಿರ್ಗಮಿಸಿವೆ ಎಂದು ಗ್ಲೋಬಲ್ ಅಲೈಯನ್ಸ್ ಫಾರ್ ಮಾಸ್ ಎಂಟರ್‌ಪ್ರಿನರ್‌ಶಿಪ್ (ಜಿಎಎಂಇ) ನಡೆಸಿದ ಅಧ್ಯಯನವು ತೋರಿಸಿದೆ ಎಂದು indianexpress.com ವರದಿ ಮಾಡಿದೆ.

ಮಾರ್ಚ್ 2020ರಲ್ಲಿ ಜಾರಿಗೊಳಿಸಲಾಗಿದ್ದ ಕಠಿಣ ಲಾಕ್‌ಡೌನ್‌ನಿಂದಾಗಿ ಲಕ್ಷಾಂತರ ವಲಸೆ ಕಾರ್ಮಿಕರು ಅನಿವಾರ್ಯವಾಗಿ ತಮ್ಮ ಊರುಗಳಿಗೆ ಮರಳುವಂತಾಗಿತ್ತು. ಎಂಎಸ್‌ಎಂಇಗಳು ತಮ್ಮ ಅಸ್ತಿತ್ವವನ್ನುಳಿಸಿಕೊಳ್ಳಲು ಪರದಾಡುವಂತಾಗಿತ್ತು. ಕೇಂದ್ರ ಸರಕಾರವು ಈ ಕ್ಷೇತ್ರಕ್ಕೆ ನೆರವಾಗಲು ಹಲವಾರು ಕ್ರಮಗಳನ್ನು ಪ್ರಕಟಿಸಿತ್ತಾದರೂ ಲಾಕ್‌ಡೌನ್‌ನ ಎರಡು ವರ್ಷಗಳ ಬಳಿಕವೂ ಕಿರು ಉದ್ಯಮಗಳು ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ.

ಮಾರಾಟದಲ್ಲಿ ಕುಸಿತ ಮತ್ತು ಗ್ರಾಹಕರ ಸಂಖ್ಯೆ ಕ್ಷೀಣಿಸಿರುವುದು ಇವು ಕಿರು ಉದ್ಯಮಗಳನ್ನು ಸಂಕಷ್ಟದಲ್ಲಿ ತಳ್ಳಿರುವ ಎರಡು ಪ್ರಮುಖ ಅಂಶಗಳಾಗಿವೆ. ಸಮೀಕ್ಷೆಗೊಳಪಟ್ಟ ಸುಮಾರು ಶೇ.14ರಷ್ಟು ಘಟಕಗಳು ಶಾಶ್ವತವಾಗಿ ಮುಚ್ಚಿದ್ದು,ಈ ಪೈಕಿ ಶೇ.38ರಷ್ಟು ಘಟಕಗಳು ಉಳಿತಾಯ ಮತ್ತು ಗ್ರಾಹಕರ ಕೊರತೆ ತಾವು ಉದ್ಯಮ ರಂಗದಿಂದ ಶಾಶ್ವತವಾಗಿ ನಿರ್ಗಮಿಸಲು ಕಾರಣವಾಗಿದೆ ಎಂದು ಹೇಳಿವೆ.

 ಉಳಿತಾಯದ ಕೊರತೆಯು ಶೇ.40ರಷ್ಟು ಕಿರು ಉದ್ಯಮಗಳು ಸಾಲಕ್ಕೆ ಅರ್ಜಿ ಸಲ್ಲಿಸುವಂತೆ ಮಾಡಿದೆ. ಈ ಪೈಕಿ ಶೇ.85ರಷ್ಟು ಘಟಕಗಳಿಗೆ ಹಣಕಾಸು ಸಂಗ್ರಹಿಸಲು ಸಾಧ್ಯವಾಗಿದೆ ಎನ್ನುವುದು ಇರುವುದರಲ್ಲಿ ಸಮಾಧಾನದ ವಿಷಯವಾಗಿದೆ. ಈ ಪೈಕಿ ಶೇ.92ರಷ್ಟು ಉದ್ಯಮಿಗಳು ನೆರವಿಗಾಗಿ ಸ್ನೇಹಿತರು ಮತ್ತು ಕುಟುಂಬಗಳತ್ತ ಕೈಚಾಚಿದ್ದರಾದರೂ ಬಳಿಕ ಹಣಕಾಸು ಸಂಸ್ಥೆಗಳ ಮೊರೆ ಹೋಗಿದ್ದರು. ವಿವಿಧ ಕಾರಣಗಳಿಂದಾಗಿ ಸುಮಾರು ಶೇ.33-ಶೇ.41 ಎಂಎಸ್‌ಎಂಇಗಳಿಗೆ ಸಾಲಗಳನ್ನು ನಿರಾಕರಿಸಲಾಗಿದೆ ಎಂದು ವರದಿಯು ಬೆಟ್ಟು ಮಾಡಿದೆ.

   ಸಾಮೂಹಿಕವಾಗಿ ಕಾರ್ಮಿಕರನ್ನು ವಜಾಗೊಳಿಸುವುದು ಎಂಎಸ್‌ಎಂಇಗಳಲ್ಲಿ ಹೆಚ್ಚು ಪ್ರಚಲಿತವಿಲ್ಲ. ಕೋವಿಡ್ ಸಂದರ್ಭದಲ್ಲಿ ಅದು ಅನಿವಾರ್ಯವಾಗಿದ್ದರೂ ತಮ್ಮ ಕಾರ್ಮಿಕರನ್ನು ಉಳಿಸಿಕೊಳ್ಳಲು ಈ ಘಟಕಗಳು ಅತ್ಯುತ್ತಮ ಪ್ರಯತ್ನಗಳನ್ನು ನಡೆಸಿದ್ದವು,ಕೆಲವು ಘಟಕಗಳು ತಮ್ಮ ಕಾರ್ಮಿಕರಿಗೆ ಮುಂಗಡ ಹಣವನ್ನೂ ಪಾವತಿಸಿದ್ದವು. ಕೆಲಸವನ್ನು ಕಳೆದುಕೊಂಡ ಕಾರ್ಮಿಕರಲ್ಲಿ ಪ್ರತಿಶತ 55ರಷ್ಟು ಮಹಿಳೆಯರಾಗಿದ್ದರು ಎನ್ನುವುದು ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಒಟ್ಟು ಶೇ.34ರಷ್ಟು ಎಂಎಸ್‌ಎಂಇಗಳು ತಮ್ಮ ಕಾರ್ಮಿಕರ ಸಂಖ್ಯೆಯನ್ನು ಕಡಿತಗೊಳಿಸಿದ್ದವು ಹಾಗೂ ಪುರುಷರ ನೇತೃತ್ವದ ಉದ್ಯಮಗಳಿಗಿಂತ ಹೆಚ್ಚಿನ ಕಾರ್ಮಿಕರನ್ನು ಮಹಿಳೆಯರ ನೇತೃತ್ವದ ಉದ್ಯಮಗಳು ವಜಾಗೊಳಿಸಿದ್ದವು ಎನ್ನುವುದನ್ನು ಸಮೀಕ್ಷೆಯು ತೋರಿಸಿದೆ.

ಬ್ಯಾಂಕ್ ಮತ್ತು ಸರಕಾರಿ ಯೋಜನೆಗಳ ಕುರಿತು ಬ್ಯಾಂಕ್ ಮ್ಯಾನೇಜರ್‌ಗಳು,ಕ್ಷೇತ್ರಾಧಿಕರಿಗಳು ಮತ್ತು ಬ್ಯಾಂಕಿಂಗ್ ಕರಸ್ಪಾಂಡೆಂಟ್‌ಗಳಲ್ಲಿ ಸಾಕಷ್ಟು ಅರಿವನ್ನು ಮೂಡಿಸುವ ಅಗತ್ಯವಿದೆ. ಸಮೀಕ್ಷೆಗೊಳಗಾದವರಲ್ಲಿ ಶೇ.31 ಜನರಿಗೆ ಮಾತ್ರ ಆತ್ಮನಿರ್ಭರ ಭಾರತ ಉಪಕ್ರಮದಡಿ ಆರಂಭಿಸಲಾಗಿರುವ ಯೋಜನೆಗಳ ಬಗ್ಗೆ ತಿಳಿದಿತ್ತು.

ಪ್ಯಾಕೇಜ್‌ನ ಅಂಗವಾಗಿ ಹಣಕಾಸು ಸಂಸ್ಥೆಗಳು ಎಂಎಸ್‌ಎಂಇಗಳಿಗಾಗಿ ಸಾಲ ಉತ್ಪನ್ನವನ್ನು ಪರಿಚಯಿಸಿದ್ದು,ಇವುಗಳ ಸಾಲ ಖಾತೆಗಳನ್ನು ವಿಶೇಷ ಉಲ್ಲೇಖ ಖಾತೆಗಳನ್ನಾಗಿ ವರ್ಗೀಕರಿಸಲಾಗುತ್ತದೆ. ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಎಂಎಸ್‌ಎಂಇಗಳನ್ನು ಬೆಂಬಲಿಸಲು ಈ ವ್ಯವಸ್ಥೆಯನ್ನು ಸೃಷ್ಟಿಸಲಾಗಿದೆ. ಇದೇ ರೀತಿ ಬಾಹ್ಯ ಸವಾಲುಗಳಿಗೆ ಉತ್ತರವಾಗಿ ವ್ಯಾಪಾರ ಮಾರ್ಪಾಡುಗಳನ್ನು ಉತ್ತೇಜಿಸಲು ಹಣಕಾಸು ಪರಿಹಾರಗಳನ್ನು ಸೃಷ್ಟಿಸಬಹುದು ಎಂದು ಜಿಎಎಂಇ ಸಹಸ್ಥಾಪಕ ರವಿ ವೆಂಕಟೇಶನ್ ವರದಿಯಲ್ಲಿ ಹೇಳಿದ್ದಾರೆ

Similar News