ಗಂಧದ ಗುಡಿಗೆ ದುರ್ಗತಿ ತಂದವರು ಯಾರು?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಹೊಸ ಶ್ರೀಗಂಧ ನೀತಿಗೆ ಸಚಿವ ಸಂಪುಟ ಕೊನೆಗೂ ಅನುಮೋದನೆ ನೀಡಿದೆ. ಈ ಮೂಲಕ, ಶ್ರೀಗಂಧ ಬೆಳೆಯಲು ರೈತರಿಗೆ ಇದ್ದ ಅಡೆತಡೆ ನಿವಾರಣೆ ಯಾದಂತಾಗಿದೆ. ಅಷ್ಟೇ ಅಲ್ಲ, ರೈತರು ಬೆಳೆದ ಶ್ರೀಗಂಧಗಳಿಗೆ ಕಳ್ಳಕಾಕರಿಂದ ಭದ್ರತೆಯನ್ನು ಈ ನೀತಿ ನೀಡಿದೆ. ಈ ಹೊಸ ನೀತಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದದ್ದೇ ಆದರೆ, ಕರ್ನಾಟಕದಲ್ಲಿ ಮತ್ತೆ ಶ್ರೀಗಂಧ ತನ್ನ ಪರಿಮಳವನ್ನು ಹರಡಲಿದೆ. ಒಂದು ಕಾಲದಲ್ಲಿ ‘ಗಂಧದ ಗುಡಿ’ ಎಂದು ಬಣ್ಣಿಸಲ್ಪಟ್ಟಿದ್ದ ಕರ್ನಾಟಕ, ಇಂದು ಶ್ರೀಗಂಧವನ್ನು ವಿದೇಶಗಳಿಂದ ಆಮದು ಮಾಡಬೇಕಾದಂತಹ ಸ್ಥಿತಿಗೆ ಬಂದು ನಿಂತಿದೆ. ಕರ್ನಾಟಕ ತನ್ನ ಅಗತ್ಯವನ್ನು ಪೂರೈಸುವುದಕ್ಕಾಗಿ ಆಸ್ಟ್ರೇಲಿಯಾದಿಂದ ಶ್ರೀಗಂಧವನ್ನು ತರಿಸಿಕೊಳ್ಳುತ್ತಿದೆ. ಕರ್ನಾಟಕದ ಗಂಧದ ಗುಡಿಗೆ ಇಂತಹ ಸ್ಥಿತಿ ಒದಗಿದ್ದು ಹೇಗೆ ಎನ್ನುವುದು ಕೊನೆಗೂ ಸರಕಾರದ ಅರಿವಿಗೆ ಬಂದಂತಿದೆ. ರೈತರು ಸಹಜವಾಗಿ ತಮ್ಮ ಭೂಮಿಯಲ್ಲಿ ಶ್ರೀಗಂಧವನ್ನು ರಕ್ಷಿಸಿ, ಪೋಷಿಸಿ ಅದರಿಂದ ಲಾಭವನ್ನು ತನ್ನದಾಗಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ, ಶ್ರೀಗಂಧದ ರಕ್ಷಣೆಯ ಹೆಸರಿನಲ್ಲಿ ಸರಕಾರ ಮೂಗು ತೂರಿಸಿದ ಪರಿಣಾಮವಾಗಿ, ರಾಜ್ಯದಲ್ಲಿ ಶ್ರೀಗಂಧದ ಬೆಳೆ ಸರ್ವನಾಶದ ಅಂಚಿಗೆ ಬಂದು ನಿಂತಿತು. ಶ್ರೀಗಂಧದ ರಕ್ಷಣೆಗಾಗಿ ಸರಕಾರ ತಂದ ಕಠಿಣ ಕಾನೂನೇ ಅಂತಿಮವಾಗಿ ಶ್ರೀಗಂಧ ಬೆಳೆಗೆ ಮುಳುವಾಯಿತು.
ರೈತರು ತಮ್ಮ ಜಮೀನಿನಲ್ಲಿ ಶ್ರೀಗಂಧವನ್ನು ಬೆಳೆಯುವುದನ್ನೇ ನಿಲ್ಲಿಸಬೇಕಾದಂತಹ ಅನಿವಾರ್ಯ ಸ್ಥಿತಿಯನ್ನು ಈ ಕಾನೂನು ನಿರ್ಮಾಣ ಮಾಡಿತು. ರೈತರು ಜಮೀನಿನಲ್ಲಿ ಶ್ರೀಗಂಧದ ಮರ ಬೆಳೆದರೆ ಅದರ ಮೇಲೆ ತಕ್ಷಣ ಅರಣ್ಯ ಇಲಾಖೆಯ ಕೆಂಗಣ್ಣು ಬೀಳುತ್ತಿತ್ತು. ಅದರ ರಕ್ಷಣೆಯ ಹೆಸರಿನಲ್ಲಿ ಇಲಾಖೆ ರೈತರಿಗೆ ಸಲ್ಲದ ಕಿರುಕುಳವನ್ನು ನೀಡತೊಡಗಿತು. ಇತ್ತ, ರೈತರ ಜಮೀನಿನಲ್ಲಿರುವ ಗಂಧದ ಮರಗಳನ್ನು ಮರಗಳ್ಳರು ರಾತ್ರೋರಾತ್ರಿ ಕದ್ದೊಯ್ದರೆ, ಅರಣ್ಯ ಇಲಾಖೆ ರೈತರ ಮೇಲೆ ಕೇಸು ದಾಖಲಿಸಿ ಅವರನ್ನು ಜೈಲಿಗೆ ತಳ್ಳುತ್ತಿತ್ತು. ಒಂದೆಡೆ ಅರಣ್ಯಾಧಿಕಾರಿಗಳು, ಇನ್ನೊಂದೆಡೆ ಮರಗಳ್ಳರು ಇವರ ನಡುವೆ ರೈತರು ಅತಂತ್ರರಾದರು. ಸಣ್ಣದೊಂದು ಗಂಧದ ಗಿಡ ತಮ್ಮ ಜಮೀನಿನಲ್ಲಿ ಕಾಣಿಸಿಕೊಂಡರೂ ಅದನ್ನು ರೈತರು ಬೇರುಸಮೇತ ಕಿತ್ತು ಹಾಕತೊಡಗಿದರು.
ಒಂದು ವೇಳೆ ಅದೇನಾದರೂ ಮರವಾಗಿ ಬೆಳೆದರೆ, ಅದನ್ನು ಕಾಯುವ ಜವಾಬ್ದಾರಿಯನ್ನೂ ಅವರು ಹೊತ್ತುಕೊಳ್ಳಬೇಕಾಗಿತ್ತು. ಕೃಷಿಕರು ತಮಗೆ ಲಾಭದಾಯಕವಾಗದೇ ಹೋದರೆ ಯಾವ ಬೆಳೆಯನ್ನಾದರೂ ಯಾಕೆ ಬೆಳೆಯುತ್ತಾರೆ? ಜೊತೆಗೆ, ಅದನ್ನು ಬೆಳೆದದ್ದೇ ಮಹಾಪರಾಧವಾಗಿ ಕಾನೂನಿನ ಕಿರುಕುಳವನ್ನೂ ಎದುರಿಸಬೇಕಾಗಿ ಬಂದರೆ, ಆ ಬೆಳೆಯನ್ನೇ ಸರ್ವನಾಶ ಮಾಡಿ ಬಿಡುತ್ತಾರೆ ಎನ್ನುವುದು ಸರಕಾರಕ್ಕೆ ಮನವರಿಕೆಯಾಗುವಷ್ಟರಲ್ಲಿ ಎಲ್ಲವೂ ಮುಗಿದಿತ್ತು. ಇಂದು ಮತ್ತೆ ಹೊಸ ಕಾನೂನನ್ನು ಜಾರಿಗೊಳಿಸುವ ಮೂಲಕ ಮುರಿದು ಬಿದ್ದ ಗಂಧದ ಗುಡಿಯ ಮರು ನಿರ್ಮಾಣಕ್ಕೆ ಸರಕಾರ ಮುಂದಾಗಿದೆ. ಶ್ರೀಗಂಧದ ರಕ್ಷಣೆಯ ಹೆಸರಿನಲ್ಲಿ ಕಾನೂನು ಜಾರಿಗೊಳಿಸಿ ಶ್ರೀಗಂಧದ ಮರಕ್ಕೆ ಆಳುವವರು ಎಂತಹ ಗತಿಯನ್ನು ತಂದರೋ, ಇದೀಗ ಗೋವುಗಳಿಗೂ ಅದೇ ಗತಿಯನ್ನು ತರಲು ಮುಂದಾಗಿದ್ದಾರೆ. ಈ ನಾಡು ತಲೆ ತಲಾಂತರಗಳಿಂದ ಗೋಸಾಕಣೆಯನ್ನು ಅವಲಂಬಿಸಿಕೊಂಡು ಬಂದಿದೆ. ಗ್ರಾಮೀಣ ಪ್ರದೇಶದ ರೈತರು ಗೋಸಾಕಣೆಯನ್ನು ಒಂದು ಯಶಸ್ವೀ ಉದ್ಯಮವಾಗಿ ಮುನ್ನಡೆಸುತ್ತಾ ಬಂದಿದ್ದಾರೆ. ಅವರಿಂದಾಗಿಯೇ ಗೋವುಗಳು ಉಳಿದಿವೆ. ಗೋ ಸಾಕಣೆ ಅಥವಾ ಹೈನೋದ್ಯಮ ಲಾಭದಾಯಕ ಉದ್ಯಮವಾಗಿರುವವರೆಗೆ ರೈತರು ಅದನ್ನು ಉಳಿಸಿ ಬೆಳೆಸಿದ್ದಾರೆ. ಆದರೆ ಸರಕಾರ ಇತ್ತೀಚೆಗೆ ರಾಜಕೀಯ ಕಾರಣಕ್ಕಾಗಿ ಗೋರಕ್ಷಣೆಯ ಹೆಸರಿನಲ್ಲಿ ಕಾನೂನೊಂದನ್ನು ಜಾರಿ ಮಾಡಿ, ಅದನ್ನು ಈ ನಾಡಿನ ರೈತರ ಮೇಲೆ ಹೇರಿದೆ.
ಈವರೆಗೆ ಯಾವ ರೈತರೂ ತಮ್ಮ ಹಟ್ಟಿಯಲ್ಲಿರುವ ಅನುಪಯುಕ್ತ ಗೋವುಗಳನ್ನು ರಕ್ಷಣೆ ಮಾಡಿ ಎಂದು ಸರಕಾರದ ಬಳಿ ಕೇಳಿಕೊಂಡಿರಲಿಲ್ಲ. ಅನುಪಯುಕ್ತ ಗೋವುಗಳು ಕೂಡ ಹೈನೋದ್ಯಮದ ಪ್ರಮುಖ ಭಾಗವಾಗಿರುತ್ತಿತ್ತು. ಅನುಪಯುಕ್ತ ಗೋವುಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ತಮ್ಮ ಉದ್ಯಮವನ್ನು ಇನ್ನಷ್ಟು ಲಾಭದಾಯಕವನ್ನಾಗಿಸುತ್ತಾ ಬರುತ್ತಿದ್ದರು. ಇರುವ ಹಾಲು ಕೊಡುವ ಹಸುಗಳಿಗೆ ಬೇಕಾದ ಆಹಾರ ಅಥವಾ ಮನೆಯ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಈ ಹಣವನ್ನು ಅವರು ಬಳಸಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಸರಕಾರ ಗೋವುಗಳ ರಕ್ಷಣೆಯ ಹೆಸರಿನಲ್ಲಿ ‘ಜಾನುವಾರುಗಳನ್ನು ಮಾರಾಟ ಮಾಡುವ ಹಕ್ಕ’ನ್ನು ರೈತರಿಂದ ಕಿತ್ತುಕೊಂಡಿದೆ. ತಾನು ಸಾಕಿ ಬೆಳೆಸಿದ ಜಾನುವಾರನ್ನು ಯಾರಿಗೆ, ಯಾವಾಗ ಮಾರಾಟ ಮಾಡಬೇಕು ಎನ್ನುವುದಕ್ಕೆ ಪೊಲೀಸರ ಮತ್ತು ಬೀದಿಯಲ್ಲಿ ನಕಲಿ ಗೋರಕ್ಷಕರ ವೇಷದಲ್ಲಿರುವ ಗೂಂಡಾಗಳ ಅನುಮತಿಯನ್ನು ಪಡೆಯುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಗಂಧದ ಬೆಳೆಗೆ ಅರಣ್ಯ ಕಾನೂನು ಮತ್ತು ಮರಗಳ್ಳರು ಅಡ್ಡಿಯಾದರೆ, ಇಲ್ಲಿ ಗೋಸಾಕಣೆಗೆ ಸರಕಾರದ ನೂತನ ಕಾನೂನು ಮತ್ತು ನಕಲಿ ಗೋರಕ್ಷಕರು ಬಹುದೊಡ್ಡ ತಡೆಯಾಗಿ ನಿಂತಿದ್ದಾರೆ.
ಈ ಕಾನೂನಿನಿಂದ ಅನುಪಯುಕ್ತ ಗೋವುಗಳನ್ನು ಸಾಕುವ ಜವಾಬ್ದಾರಿಯನ್ನು ಸರಕಾರ ಮೈಮೇಲೆ ಎಳೆದುಕೊಂಡಿದೆ. ಸರಕಾರ ಸಾರ್ವಜನಿಕರ ಹಣವನ್ನು ಈ ಅನುಪಯುಕ್ತ ಗೋವುಗಳ ಸಾಕಣೆಗೆ ಸುರಿಯುತ್ತಿದೆ. ಮಗದೊಂದೆಡೆ ಗೋಸಾಕಣೆ ಮಾಡುವ ರೈತರು ಅನುಪಯುಕ್ತ ಗೋವುಗಳನ್ನು ಮಾರಾಟ ಮಾಡುವ ಹಕ್ಕನ್ನು ಕಳೆದುಕೊಂಡು, ಆರ್ಥಿಕವಾಗಿ ನಷ್ಟಕ್ಕೀಡಾಗಿದ್ದಾರೆ. ಅಷ್ಟೇ ಅಲ್ಲ, ಕಾನೂನಿನ ತೊಡಕುಗಳಿಂದಾಗಿ ಅನುಪಯುಕ್ತ ಗೋವುಗಳನ್ನು ಹಟ್ಟಿಯಲ್ಲಿಟ್ಟು ಸಾಕುವ ಸ್ಥಿತಿ ನಿರ್ಮಾಣವಾಗಿದೆ. ಅದನ್ನು ಮಾರಾಟ ಮಾಡಲು ಮುಂದಾದರೆ ಒಂದೆಡೆ ನಕಲಿ ಗೋರಕ್ಷಕರ ದಾಳಿ. ಜೊತೆಗೆ ಪೊಲೀಸರ ಭಯ. ಪರಿಣಾಮವಾಗಿ ರೈತರು ಗೋಸಾಕಣೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ರೈತರು ಹೈನೋದ್ಯಮದಲ್ಲಿ ತೊಡಗಿರುವುದು ಆರ್ಥಿಕ ಕಾರಣಕ್ಕಾಗಿಯೇ ಹೊರತು, ಧಾರ್ಮಿಕ ಕಾರಣಕ್ಕಾಗಿಯಲ್ಲ.
ಆರ್ಥಿಕವಾಗಿ ನಷ್ಟವನ್ನು ಹೊಂದಿ ಯಾಕಾದರೂ ಅವರು ಗೋವುಗಳನ್ನು ಸಾಕುತ್ತಾರೆ? ಇದೇ ಸಂದರ್ಭದಲ್ಲಿ ಗೋಶಾಲೆಗಳ ಹೆಸರಿನಲ್ಲಿ ಗೋವುಗಳ ಜೊತೆಗೆ ಸಂಬಂಧವೇ ಇಲ್ಲದವರು ಸರಕಾರದ ಅನುದಾನಗಳನ್ನು ಲೂಟಿ ಹೊಡೆಯುತ್ತಿದ್ದಾರೆ. ಹೀಗೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ‘ಪೂಜಿಸುವುದಕ್ಕೂ’ ಗೋವುಗಳ ಕೊರತೆಯನ್ನು ಜನಸಾಮಾನ್ಯರು ಎದುರಿಸಬೇಕಾಗಬಹುದು. ಕೋಟೆ ಸೂರೆ ಹೋಗುವ ಮೊದಲು ಸರಕಾರ ಎಚ್ಚೆತ್ತುಕೊಳ್ಳಬೇಕು. ಶ್ರೀಗಂಧದ ರಕ್ಷಣೆಗೆ ಹೊರಟು ಶ್ರೀಗಂಧದ ಗುಡಿಯನ್ನೇ ನಾಶ ಮಾಡಿದಂತೆ, ಗೋವುಗಳ ಸಂತಾನವನ್ನು ಅಳಿಸಲು ಮುಂದಾಗಿರುವ ಸರಕಾರ ತಕ್ಷಣ, ಜಾನುವಾರುಗಳ ಕುರಿತಂತೆ ಮಾಡಿರುವ ಕಾನೂನನ್ನು ಹಿಂದೆಗೆದುಕೊಂಡು ಗೋ ಸಾಕಣೆಗೆ ರೈತರಿಗೆ ಪೂರ್ಣ ಪ್ರಮಾಣದ ಸ್ವಾತಂತ್ರವನ್ನು ನೀಡಬೇಕು