ಪ್ರತಿರೋಧ ಹತ್ತಿಕ್ಕಲು ತನಿಖಾ ಸಂಸ್ಥೆಗಳ ದುರ್ಬಳಕೆ

Update: 2022-11-21 02:36 GMT

ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲದ ಪಕ್ಷದ ಕೈಯಲ್ಲಿ ಒಮ್ಮೆ ಅಧಿಕಾರ ಸಿಕ್ಕರೆ ಅದು ಸುಲಭಕ್ಕೆ ಬಿಟ್ಟು ಕೊಡುವುದಿಲ್ಲ. ಇದಕ್ಕೆ ಭಾರತ ಒಂದು ಪ್ರತ್ಯಕ್ಷ ಉದಾಹರಣೆ ಆಗಿದೆ. ತುರ್ತುಸ್ಥಿತಿಗಿಂತ ಭಯಾನಕವಾದ ದಿನಗಳು ಬರುವ ಮುನ್ನ ಜನಸಾಮಾನ್ಯರು, ಜನತಾಂತ್ರಿಕ ಶಕ್ತಿಗಳು ಎಚ್ಚೆತ್ತು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಅಳಿವು , ಉಳಿವಿನ ಹೋರಾಟ ನಡೆಸಬೇಕಾಗಿದೆ.



ಆನಂದ ತೇಲ್ತುಂಬ್ಡೆ ನಮ್ಮ ದೇಶದ ಬಹುದೊಡ್ಡ ವಿದ್ವಾಂಸರು. ಅಂತರ್‌ರಾಷ್ಟ್ರೀಯ ಮಟ್ಟದ ಲೇಖಕರು. ಪಾಂಡಿತ್ಯದ ಮೇರು ಪರ್ವತ ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳನ್ನು ಹೊಸ ಸನ್ನಿವೇಶದಲ್ಲಿ ಅತ್ಯಂತ ಸೂಕ್ತವಾಗಿ ಅರ್ಥೈಸುವವರು.ಇಂಥ ಹೆಸರಾಂತ ವಿಚಾರವಾದಿ ಕಳೆದ ಎರಡು ವರ್ಷಗಳಿಂದ ಜೈಲಿನಲ್ಲಿದ್ದಾರೆ.ಅವರ ಮೇಲೆ ಯುಎಪಿಎ ಕಾಯ್ದೆಯ ಪ್ರಕಾರ ಪ್ರಕರಣ ದಾಖಲಿಸಿದ್ದರೂ ಪುರಾವೆಗಳನ್ನು ಒದಗಿಸಿಲ್ಲ. ಇಂಥ ಸಂದರ್ಭದಲ್ಲಿ ಮುಂಬೈ ಹೈಕೋರ್ಟ್ ತೇಲ್ತುಂಬ್ಡೆೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೆ ಆದೇಶ ನೀಡಿದೆ. ಆದರೆ ಫ್ಯಾಶಿಸ್ಟ್ ವ್ಯವಸ್ಥೆಯಲ್ಲಿ ಹೊರಗೆ ಬರುವುದು ಸುಲಭವಲ್ಲ. ಮುಂಬೈ ಹೈಕೋರ್ಟ್ ಜಾಮೀನು ನೀಡಿದ್ದರೂ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದರೆ ಮಾತ್ರ ಬಿಡುಗಡೆ. ಮುಂಬೈ ಹೈಕೋರ್ಟಿನ ಆದೇಶ ಪ್ರಶ್ನಿಸಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಈಗಾಗಲೇ ಸುಪ್ರೀಂ ಕೋರ್ಟಿಗೆ ಹೋಗಿದೆ. ಹಾಗೆ ಹೋಗಲು ಮುಂಬೈ ಹೈಕೋರ್ಟ್ ಕಾಲಾವಕಾಶ ನೀಡಿತ್ತು.

ಆನಂದ ತೇಲ್ತುಂಬ್ಡೆ ಅವರ ಜಾಮೀನು ಬಿಡುಗಡೆಯ ನ್ಯಾಯಾಲಯದ ಆದೇಶದ ಸುದ್ದಿ ಬಂದಾಗ ನಾನು ಕೋಬಾಡ ಗಾಂಧಿಯವರ ಅತಂತ್ರ ಸ್ವಾತಂತ್ರ ಪುಸ್ತಕವನ್ನು ಓದುತ್ತಿದ್ದೆ. ಅತ್ಯಂತ ಸರಳವಾದ ಸುಂದರ ಕನ್ನಡದಲ್ಲಿ ಜ್ಯೋತಿ ಅನಂತಸುಬ್ಬರಾವ ಇದನ್ನು ಕನ್ನಡಕ್ಕೆ ತಂದಿದ್ದಾರೆ. ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ. ಕೋಬಾಡ ಗಾಂಧಿಯವರನ್ನು ಕೂಡ ಯುಎಪಿಎ ಕಾಯ್ದೆಯಡಿ ಬಂಧಿಸಲಾಗಿತ್ತು. ಕೋಬಾಡ ಗಾಂಧಿ ಕೋರ್ಟಿನಲ್ಲಿ ಕಾನೂನು ಹೋರಾಟ ಮಾಡಿ ಹೊರಗೆ ಬಂದರು.ಅತ್ಯಂತ ರೋಮಾಂಚಕಾರಿಯಾದ ಈ ಪುಸ್ತಕದ ಬಗ್ಗೆ ಶೀಘ್ರದಲ್ಲೇ ಇನ್ನೊಮ್ಮೆ ಬರೆಯುತ್ತೇನೆ.

ಆನಂದ ತೇಲ್ತುಂಬ್ಡೆ ಅವರು ಕೋಬಾಡ ಗಾಂಧಿಯವರಂತೆ ಯಾವುದೇ ಪಕ್ಷ, ಇಲ್ಲವೇ ಸಂಘಟನೆಯ ಜೊತೆಗೆ ನೇರವಾಗಿ ಗುರುತಿಸಿಕೊಂಡವರಲ್ಲ. ಯಾವುದೇ ವಿಚಾರ ಧಾರೆಯ ಬಗ್ಗೆ ಒಲವು ಹೊಂದುವುದು ಅಪರಾಧವಲ್ಲ. ಆದರೆ ಇಂದಿನ ಬಿಜೆಪಿ ಸಾಮ್ರಾಜ್ಯದಲ್ಲಿ ಅದೂ ಕೂಡ ಅಪರಾಧವಾಗಿದೆ.ಕ್ರಾಂತಿಕಾರಿ ವಿಚಾರಗಳ ಬಗ್ಗೆ ಒಲವು ತೋರಿಸುವವರನ್ನು ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರ ‘ನಗರ ನಕ್ಸಲರು’ ಎಂದು ಹೆಸರಿಸಿತು. ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಇದನ್ನು ಪುನರುಚ್ಚರಿಸಿದರು.

ಕ್ರಾಂತಿಕಾರಿ ವಿಚಾರಧಾರೆಯ ಬಗ್ಗೆ ಒಲವು ಹೊಂದಿದವರನ್ನು ಮಾತ್ರವಲ್ಲ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿದವರೂ ಕೂಡ ಆಡಳಿತ ಪಕ್ಷದ ಕಾರ್ಯಸೂಚಿಗೆ ಸಹಕರಿಸದಿದ್ದರೆ ಅವರೂ ಕೂಡ ಪ್ರಭುತ್ವದ ಕೆಂಗಣ್ಣಿಗೆ ಗುರಿಯಾಗುತ್ತಾರೆ.

ಆನಂದ ತೇಲ್ತುಂಬ್ಡೆ, ಕೋಬಾಡ ಗಾಂಧಿ, ಗೌತಮ್ ನವ್ಲಾಖಾ, ಕವಿ ವರವರರಾವ್, ಸುಧಾ ಭಾರದ್ವಾಜ್ ಮುಂತಾದವರು ದಮನಿತರ ಪರವಾಗಿ ದನಿಯೆತ್ತಿದ ತಪ್ಪಿಗಾಗಿ ಯುಎಪಿಎ ಕರಾಳ ಕಾಯ್ದೆಗೆ ಬಲಿಪಶುಗಳಾಗುತ್ತಾರೆ. ಇನ್ನು ರಾಜಕೀಯ ಭಿನ್ನಾಭಿಪ್ರಾಯ ಇರುವ ಇತರರನ್ನು ಹಣಿಯಲು ಜಾರಿ ನಿರ್ದೇಶನಾಲಯ (ಈ.ಡಿ.) ಸಿಬಿಐ, ಆದಾಯ ತೆರಿಗೆ ಇಲಾಖೆಗಳಂಥ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದು ಬಿಜೆಪಿಗೆ ಬಹುಮತ ಬಾರದಿದ್ದರೆ ಅಲ್ಲೂ ಕೂಡ ಜನಾದೇಶವನ್ನು ಉಲ್ಟಾಪಲ್ಟಾ ಮಾಡಲು ಇಂಥ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತದೆ.

ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರಾವುತ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತು. ಇದಕ್ಕೂ ಮೊದಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಾವುತ್ ಅವರ ಮನೆ ಮತ್ತು ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸಿದರು. ಈ ಬಂಧನಕ್ಕೆ ಕಾರಣಗಳೇ ಇರಲಿಲ್ಲ. ಅಂತಲೇ ಮುಂಬೈನ ವಿಶೇಷ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿತು. ಆ ಸಂದರ್ಭದಲ್ಲಿ ನ್ಯಾಯಾಧೀಶರು ಜಾರಿ ನಿರ್ದೇಶನಾಲಯದ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದು ಸೇಡಿನ ಕ್ರಮವಲ್ಲದೆ ಮತ್ತೇನೂ ಅಲ್ಲ ಎಂದು ಹೇಳಿದರು.
ಅಕ್ರಮ ಹಣ ವರ್ಗಾವಣೆ ಕುರಿತಂತೆ ಸಂಜಯ್ ರಾವುತ್ ಅವರನ್ನು ಬಂಧಿಸಲಾಗಿತ್ತು ಎಂದು ಜಾರಿ ನಿರ್ದೇಶನಾಲಯ ಸ್ಪಷ್ಟನೆ ನೀಡಿದೆ.ಆದರೆ ಇದರಲ್ಲಿ ರಾವುತ್ ಅವರ ಪಾತ್ರದ ಬಗ್ಗೆ ಸ್ಪಷ್ಟ ಪುರಾವೆಗಳನ್ನು ಅದು ಒದಗಿಸಿಲ್ಲ. ಅಂತಲೇ ನ್ಯಾಯಾಲಯ ಈ ಬಂಧನಕ್ಕೆ ಸ್ಪಷ್ಟ ಕಾರಣಗಳಿರಲಿಲ್ಲ ಎಂದು ಹೇಳಿದೆ.

ಒಂದು ವೇಳೆ ಸಂಜಯ್ ರಾವುತ್ ಬಿಜೆಪಿ ಸೇರಿದರೆ ದೋಷ ಮುಕ್ತರಾಗಿ ಹೊರ ಬರುತ್ತಾರೆ. ಜಾರಿ ನಿರ್ದೇಶನಾಲಯ ಅವರಿಗೆ ಕ್ಲೀನ್ ಚಿಟ್ ನೀಡುತ್ತದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರಕಾರವನ್ನು ಉರುಳಿಸಿದ್ದು ಇಂಥದೇ ಅಸ್ತ್ರ ಬಳಸಿ. ಗೋವಾದಲ್ಲಿ ಚುನಾವಣೆಯಲ್ಲಿ ಜನತೆ ತಿರಸ್ಕರಿಸಿದರೂ ಬಿಜೆಪಿ ಅಧಿಕಾರಕ್ಕೆ ಬಂದುದು ಇಂಥದೇ ತಂತ್ರದಿಂದ. ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ಒಡೆದು ಅಲ್ಲಿನ ಮೈತ್ರಿ ಸರಕಾರವನ್ನು ಕೆಡವಿ ಕೈಗೊಂಬೆ ಮುಖ್ಯಮಂತ್ರಿಯನ್ನು ಪ್ರತಿಷ್ಠಾಪಿಸಿದ್ದು ಇಂಥದೇ ತಂತ್ರದಿಂದ. ಪುದುಚೇರಿಯಲ್ಲಿ ಮಾಡಿದ್ದು ಇದೇ ಕಸರತ್ತು. ಕೇರಳದಲ್ಲಿ ಕಮ್ಯುನಿಸ್ಟ್ ಶಾಸಕರನ್ನು ಖರೀದಿ ಮಾಡಲು ಇಲ್ಲವೇ ತನಿಖಾ ಸಂಸ್ಥೆಗಳ ಮೂಲಕ ಬೆದರಿಸಲು ಆಗುವುದಿಲ್ಲ ಎಂದು ಅಲ್ಲಿ ರಾಜ್ಯಪಾಲರನ್ನು ಛೂ ಬಿಟ್ಟು ಎಡಪಂಥೀಯ ಸರಕಾರದ ವಿರುದ್ಧ ಮಸಲತ್ತು ಮಾಡಲಾಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಪ್ರತಿಪಕ್ಷ ನಾಯಕರಿಗೆ ತೊಂದರೆ ಕೊಡಲೆಂದೇ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಮನ ಬಂದಂತೆ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇದಕ್ಕೆ ಸಂಜಯ್ ರಾವುತ್ ಪ್ರಕರಣ ಇತ್ತೀಚಿನ ಉದಾಹರಣೆಯಾಗಿದೆ.

ಬಿಜೆಪಿಗೆ ತನ್ನ ‘ಹಿಂದೂ ರಾಷ್ಟ್ರ’ ನಿರ್ಮಾಣದ ಗುರಿ ಸಾಧಿಸಲು ಕೈಯಲ್ಲಿ ಅಧಿಕಾರ ಇರಬೇಕು. ಪ್ರತಿಪಕ್ಷ ಗಳು ತಲೆ ಎತ್ತದಂತೆ ಮಾಡಬೇಕು. ಇದಕ್ಕಾಗಿ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಅದು ದುರ್ಬಳಕೆ ಮಾಡಿಕೊಳ್ಳಲು ಹಿಂಜರಿಯುವುದಿಲ್ಲ.

ಯಾವುದೇ ರಾಜ್ಯದಲ್ಲಿ ಚುನಾವಣೆ ಬಂದರೆ ಅದಕ್ಕಿಂತ ಮುಂಚೆ ಪ್ರತಿಪಕ್ಷ ನಾಯಕರು, ಶಾಸಕರ ಮನೆಗಳ ಮೇಲೆ ಸಿಬಿಐ, ಈ.ಡಿ. ಐಟಿ ದಾಳಿಗಳಾಗುತ್ತವೆ. ಗುಜರಾತ್ ವಿಧಾನಸಭಾ ಚುನಾವಣೆಗೆ ಮುಂಚೆ ದಿಲ್ಲಿ ಮುಖ್ಯ ಮಂತ್ರಿ ಅರವಿಂದ ಕೇಜ್ರಿವಾಲ್‌ರ ಇಬ್ಬರು ಸಹೋದ್ಯೋಗಿಗಳ ಮನೆಗಳ ಮೇಲೆ ದಾಳಿ ನಡೆಯಿತು. 2017ರಲ್ಲಿ ಪಂಜಾಬ್ ಚುನಾವಣೆ ಸಂದರ್ಭದಲ್ಲಿ ಆಮ್ ಆದ್ಮಿ ಪಾರ್ಟಿಯ ನಾಯಕರ ಬಂಧನವಾಯಿತು. 2020ರಲ್ಲಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಮಂತ್ರಿಗಳ ಮನೆಗಳ ಮೇಲೆ ಐಟಿ ದಾಳಿ ನಡೆಯಿತು. ಕರ್ನಾಟಕದಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರಗೆ ಇನ್ನೂ ಐಟಿ ಕಿರುಕುಳ ತಪ್ಪಿಲ್ಲ.
ಸರಕಾರದ ಸಂವಿಧಾನ ವಿರೋಧಿ ದಮನ ನೀತಿಗೆ ಈಗ ನ್ಯಾಯಾಂಗ ಪ್ರಮುಖ ಅಡ್ಡಿಯಾಗಿದೆ. ಹೆಸರಾಂತ ಪತ್ರಕರ್ತ, ಚಿಂತಕ ಗೌತಮ್ ನವ್ಲಾಖಾ ಅವರನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಜೈಲಿನಿಂದ ಬಿಡುಗಡೆಯಾಗಿ ಅವರು ತಮ್ಮ ಇಷ್ಟದ ಜಾಗದಲ್ಲಿ ಗೃಹಬಂಧನದಲ್ಲಿ ಇರಬಹುದು ಎಂದು ನ್ಯಾಯಾಲಯ ಹೇಳಿದೆ. ಇದಕ್ಕೂ ತಕರಾರು ತೆಗೆದ ಎನ್‌ಐಎ. ಗೌತಮ್ ನವ್ಲಾಖಾ ಸಿಪಿಐ ಕಚೇರಿಯಲ್ಲಿ ಗೃಹ ಬಂಧನದಲ್ಲಿ ಇರಲು ಬಯಸಿದ್ದಾರೆ. ಅದಕ್ಕೆ ಅವಕಾಶ ಕೊಡಬಾರದೆಂದು ಅಡ್ಡಗಾಲು ಹಾಕಿತು. ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಸಿಪಿಐ ಮಾನ್ಯತೆ ಪಡೆದ ರಾಜಕೀಯ ಪಕ್ಷ ಆ ಪಕ್ಷದ ಕಚೇರಿಯಲ್ಲಿ ಗೌತಮ್ ನವ್ಲಾಖಾ ಆಶ್ರಯ ಪಡೆದರೆ ತಪ್ಪೇನು ಎಂದು ಪ್ರಶ್ನಿಸಿ ಆಕ್ಷೇಪವನ್ನು ತಳ್ಳಿ ಹಾಕಿದರು.

 ಆಡಳಿತ ಪಕ್ಷದ ಕೆಂಗಣ್ಣಿಗೆ ಬರೀ ಪ್ರತಿಪಕ್ಷ ರಾಜಕಾರಣಿಗಳು ಮಾತ್ರವಲ್ಲ ಮುಕ್ತವಾಗಿ ಅಭಿವ್ಯಕ್ತಿ ಮಾಡುವ ಮಾಧ್ಯಮಗಳೂ ಗುರಿಯಾಗಿವೆ. ಈಗಂತೂ ಈ ದಾಳಿಗೆ ಹೆದರಿ ಬಹುತೇಕ ಟಿ.ವಿ.ವಾಹಿನಿಗಳು ಆಳುವ ಪಕ್ಷದ ತುತ್ತೂರಿಗಳಾಗಿವೆ. ತಲೆ ಬಾಗದ ಎನ್‌ಡಿಟಿವಿ ಮೇಲೆ ದಾಳಿ ಮಾಡಿ ಮಣಿಸಲು ಸಾಧ್ಯವಾಗದಾಗ ಅದಾನಿ ಮೂಲಕ ಅದರ ಶೇರು ಖರೀದಿಸಿ ಹಿಡಿತ ಸಾಧಿಸಲಾಯಿತು. ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲದ ಪಕ್ಷದ ಕೈಯಲ್ಲಿ ಒಮ್ಮೆ ಅಧಿಕಾರ ಸಿಕ್ಕರೆ ಅದು ಸುಲಭಕ್ಕೆ ಬಿಟ್ಟು ಕೊಡುವುದಿಲ್ಲ. ಇದಕ್ಕೆ ಭಾರತ ಒಂದು ಪ್ರತ್ಯಕ್ಷ ಉದಾಹರಣೆ ಆಗಿದೆ. ತುರ್ತುಸ್ಥಿತಿಗಿಂತ ಭಯಾನಕವಾದ ದಿನಗಳು ಬರುವ ಮುನ್ನ ಜನಸಾಮಾನ್ಯರು, ಜನತಾಂತ್ರಿಕ ಶಕ್ತಿಗಳು ಎಚ್ಚೆತ್ತು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಅಳಿವು , ಉಳಿವಿನ ಹೋರಾಟ ನಡೆಸಬೇಕಾಗಿದೆ.

Similar News