ಮಂಗಳೂರಿನಲ್ಲಿ ಸ್ಫೋಟ: ಭದ್ರತಾ ವೈಫಲ್ಯಕ್ಕೆ ಯಾರು ಹೊಣೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮ ಂಗಳೂರಿನಲ್ಲಿ ಶನಿವಾರ ಆಟೊ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣ ‘ಭಯೋತ್ಪಾದಕ ಕೃತ್ಯ’ವೆಂದು ಘೋಷಣೆಯಾಗುವ ಮೂಲಕ ತಿರುವು ಪಡೆದುಕೊಂಡಿದೆ. ಸಂಭವಿಸಿರುವುದು ಸಣ್ಣ ಸ್ಫೋಟವೇ ಆಗಿದ್ದರೂ, ಅದು ಬೇರೆ ಬೇರೆ ಕಾರಣಗಳಿಗಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿ ಯಾಗುತ್ತಿದೆ. ಈ ಹಿಂದೆ ಆದಿತ್ಯ ರಾವ್ ಎಂಬಾತ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಡುವುದಕ್ಕೆ ನಡೆಸಿದ ಪ್ರಯತ್ನವನ್ನು ಇದು ನೆನಪಿಗೆ ತರುತ್ತದೆಯಾದರೂ, ಈ ಪ್ರಕರಣ ಅದಕ್ಕಿಂತಲೂ ಭಿನ್ನವಾದುದು. ಅಂದು ಆತ ವಿಮಾನ ನಿಲ್ದಾಣದಲ್ಲಿ ತಂದಿಟ್ಟಿದ್ದು ಸ್ಫೋಟಕದ ಬಿಡಿಭಾಗಗಳಾಗಿದ್ದವು. ಅವುಗಳನ್ನು ಪೂರ್ಣ ಪ್ರಮಾಣದಲ್ಲಿ ಜೋಡಿಸಿರಲಿಲ್ಲ. ಆದರೆ ಇಲ್ಲಿ ಶಾರಿಕ್ ಎಂಬಾತ ಕುಕ್ಕರ್ ಬಾಂಬ್‌ನ್ನು ತಯಾರಿಸಿ ಅದನ್ನು ಮಂಗಳೂರಿನ ಯಾವ ಭಾಗದಲ್ಲಾದರೂ ಸ್ಫೋಟಿಸುವುದಕ್ಕೆ ಸಿದ್ಧನಾಗಿ ಬಂದಿದ್ದ ಎಂದು ಪೊಲೀಸರು ಹೇಳುತ್ತಿದ್ದಾರೆ. ದಾರಿ ಮಧ್ಯೆ ಅವನ ಕೈಯಲ್ಲೇ ಅದು ಸ್ಫೋಟವಾಯಿತು ಎನ್ನುವುದು ಪೊಲೀಸರ ಹೇಳಿಕೆ. ಆರೋಪಿಯ ಜೊತೆಗೆ ಅಮಾಯಕ ರಿಕ್ಷಾ ಚಾಲಕನೂ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಪ್ರಕರಣದಲ್ಲಿ ಪೊಲೀಸ್ ವೈಫಲ್ಯ ಅತ್ಯಂತ ಆಘಾತಕಾರಿಯಾಗಿದೆ. ಇದೊಂದು ಸಣ್ಣ ಕುಕ್ಕರ್ ಬಾಂಬ್ ಆಗಿರುವುದರಿಂದ ಸಣ್ಣ ಸ್ಫೋಟ ನಡೆದು ಇಬ್ಬರು ಗಾಯಗೊಳ್ಳುವುದರೊಂದಿಗೆ ಪ್ರಕರಣ ಮುಗಿದಿದೆ. ಆದರೆ ಒಂದು ವೇಳೆ ಆತ ಭಾರೀ ಸ್ಫೋಟಕವನ್ನೇನಾದರೂ ತಂದಿದ್ದರೆ ಮಂಗಳೂರಿನ ಸ್ಥಿತಿ ಏನಾಗುತ್ತಿತ್ತು? ಈ ಪ್ರಶ್ನೆ ಮಂಗಳೂರನ್ನು ಮಾತ್ರವಲ್ಲ, ಇಡೀ ರಾಜ್ಯವನ್ನೇ ಕಂಗೆಡಿಸಿದೆ. ಆರೋಪಿ ಮೈಸೂರಿನಲ್ಲಿ ಕೆಲ ಕಾಲ ತಂಗಿದ್ದ, ಮಂಗಳೂರಿನಲ್ಲಿ ಓಡಾಡಿಕೊಂಡಿದ್ದ ಎಂದೆಲ್ಲ ಪೊಲೀಸರು ಇದೀಗ ಹೇಳಿಕೆ ನೀಡುತ್ತಿದ್ದಾರೆ. ಆದರೆ ಈ ಅವಧಿಯಲ್ಲಿ ‘ಪೊಲೀಸರು ಏನು ಮಾಡುತ್ತಿದ್ದರು?’ ಎನ್ನುವ ಪ್ರಶ್ನೆಗೆ ಯಾರಿಂದಲೂ ಉತ್ತರವಿಲ್ಲ. ಪ್ರಕರಣದ ಆರೋಪಿ ಈಗಾಗಲೇ ಒಂದು ಬಾರಿ ಯುಎಪಿಎ ಕಾಯ್ದೆಯಡಿಯಲ್ಲಿ ಬಂಧಿಸಲ್ಪಟ್ಟವನು. ನ್ಯಾಯಾಲಯದಿಂದ ಜಾಮೀನನ್ನೂ ಪಡೆದುಕೊಂಡಿದ್ದ ಎಂದು ಪೊಲೀಸರು ತಿಳಿಸುತ್ತಾರೆ. ಸೂಕ್ತ ಸಮಯದಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸದ ಕಾರಣದಿಂದ ಆತನಿಗೆ ಜಾಮೀನು ದೊರಕುವಂತಾಗಿತ್ತು. ಅಷ್ಟೇ ಅಲ್ಲ, ಈ ನಡುವೆ ಆತ ಪೊಲೀಸರಿಂದ ತಲೆ ಮರೆಸಿಕೊಂಡಿದ್ದ.
ಉಗ್ರಗಾಮಿ ಸಂಘಟನೆಯೊಂದನ್ನು ಬೆಂಬಲಿಸಿ ಗೋಡೆ ಬರಹ ಬರೆದ ಆರೋಪದಲ್ಲಿ ಬಂಧಿಸಲ್ಪಟ್ಟ ಆರೋಪಿಯ ಕುರಿತಂತೆ ಪೊಲೀಸರು ಇಷ್ಟರ ಮಟ್ಟಿಗೆ ನಿರ್ಲಕ್ಷ ಹೊಂದಲು ಹೇಗೆ ಸಾಧ್ಯ? ಎನ್ನುವ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ. ಆರೋಪಿ ಪೊಲೀಸರಿಂದ ತಲೆಮರೆಸಿಕೊಂಡದ್ದು ಮಾತ್ರವಲ್ಲ, ಈ ಅವಧಿಯಲ್ಲಿ ಇನ್ನೊಂದು ಸ್ಫೋಟಕ್ಕೂ ತಯಾರಿ ನಡೆಸುತ್ತಿದ್ದ ಎನ್ನುವುದು ನಿಜಕ್ಕೂ ಆಘಾತಕಾರಿಯಾಗಿದೆ. ಮೈಸೂರು-ಮಂಗಳೂರು ಎಂದು ಶಂಕಿತ ಉಗ್ರ ಓಡಾಡುತ್ತಿದ್ದರೂ ಪೊಲೀಸರಿಗೆ ಯಾವುದೇ ಮಾಹಿತಿಯಿರಲಿಲ್ಲ ಎನ್ನುವುದು ಗೃಹ ಇಲಾಖೆಯ ಬಹುದೊಡ್ಡ ವ್ಯಂಗ್ಯವಾಗಿದೆ. ಅಷ್ಟೇ ಅಲ್ಲ, ತಲೆ ಮರೆಸಿಕೊಂಡ ಅವಧಿಯಲ್ಲೇ ನಕಲಿ ಐಡಿಯನ್ನು ಬಳಸಿಕೊಂಡು ಮೈಸೂರಿನ ಲಾಡ್ಜ್‌ನಲ್ಲಿ ತಂಗುತ್ತಾನೆ. ಕುಕ್ಕರ್ ಬಾಂಬ್ ಮಾಡಿದ್ದು ಮಾತ್ರವಲ್ಲ, ಅದರ ಜೊತೆಗೆ ಸೆಲ್ಫಿಯನ್ನೂ ತೆಗೆದುಕೊಳ್ಳುತ್ತಾನೆ ಎಂದರೆ, ಕರ್ನಾಟಕದ ಗೃಹ ಇಲಾಖೆಯನ್ನು ಈತ ಅದೆಷ್ಟು ಹಗುರವಾಗಿ ತೆಗೆದುಕೊಂಡಿದ್ದ ಎನ್ನುವುದನ್ನು ಹೇಳುತ್ತದೆ. ಕೊನೆಗೂ ಆರೋಪಿಯನ್ನು ಪೊಲೀಸರಿಗೆ ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಆಟೊ ರಿಕ್ಷಾದಲ್ಲಿ ನಡೆದ ಅವಘಡದಿಂದಾಗಿ ಆರೋಪಿ ತಾನಾಗಿ ಪೊಲೀಸರಿಗೆ ಸಿಲುಕಿಕೊಂಡ. ಘಟನೆ ನಡೆದ ಹಿಂದಿನ ದಿನ ಮುಖ್ಯಮಂತ್ರಿಯೂ ಸೇರಿದಂತೆ ರಾಜ್ಯದ ಹಲವು ಗಣ್ಯರು ಮಂಗಳೂರಿನಲ್ಲಿದ್ದರು. ಈ ಅವಧಿಯನ್ನೇ ಆತ ಸ್ಫೋಟ ನಡೆಸಲು ಆರಿಸಿಕೊಂಡಿದ್ದನೆ? ಅಂದರೆ ಮುಖ್ಯಮಂತ್ರಿಯ ಕಾರ್ಯಕ್ರಮದ ವಿವರಗಳು ಆತನಿಗೆ ಮೊದಲೇ ಗೊತ್ತಿತ್ತೆ? ಇವೆಲ್ಲವೂ ತನಿಖೆಗೆ ಅರ್ಹವಾಗಿರುವ ವಿಚಾರಗಳು. ಇದೀಗ ನೋಡಿದರೆ ಗಾಯಾಳುವಿನ ಸ್ಥಿತಿ ಚಿಂತಾಜನಕವಾಗಿದೆ, ಆತ ಮಾತನಾಡುವ ಸ್ಥಿತಿಯಲ್ಲಿಲ್ಲ ಎಂದೆಲ್ಲ ಪೊಲೀಸರು ನುಡಿಯುತ್ತಿದ್ದಾರೆ.
ಶಂಕಿತ ಉಗ್ರ ಶಾಶ್ವತವಾಗಿ ಮಾತನಾಡದೇ ಇದ್ದರೆ ಪ್ರಕರಣ ನಿಗೂಢವಾಗಿಯೇ ಉಳಿದು ಬಿಡುವ ಸಾಧ್ಯತೆಗಳಿವೆ. ಇಷ್ಟು ಸಮಯ ಪೊಲೀಸರ ಕಣ್ಣಿಗೂ ಮಣ್ಣೆರಚಿ ಆತ ತಲೆ ಮರೆಸಿಕೊಂಡಿದ್ದ ಎನ್ನುವುದು ಸಣ್ಣ ವಿಷಯವೇನೂ ಅಲ್ಲ. ಈಗಾಗಲೇ ಆರೋಪಿ ಯುಎಪಿಎ ಕಾಯ್ದೆಯಡಿ ಬಂಧಿಸಲ್ಪಟ್ಟಿರುವುದರಿಂದ ಸಂಬಂಧಿಕರು, ಆತ್ಮೀಯರು ಕೂಡ ಆತನಿಗೆ ಆಶ್ರಯ ನೀಡಲಾರರು. ಹೀಗಿರುವಾಗ ಆತ ಈ ಅವಧಿಯಲ್ಲಿ ತಲೆ ಮರೆಸಿಕೊಂಡದ್ದು ಎಲ್ಲಿ? ಕುಕ್ಕರ್ ಬಾಂಬ್‌ಗೆ ಬೇಕಾದ ಸಲಕರಣೆಗಳನ್ನು ಎಲ್ಲಿಂದ ಸಂಪಾದಿಸಿಕೊಂಡಿದ್ದ? ಅದನ್ನು ಆತನಿಗೆ ಒದಗಿಸಿದವರು ಯಾರು? ಅದಕ್ಕೆ ಬೇಕಾದ ಹಣವನ್ನು ಆತನಿಗೆ ವರ್ಗಾಯಿಸಿರುವುದು ಯಾರು? ಇವೆಲ್ಲವೂ ತನಿಖೆಯಿಂದ ಹೊರಬರಬೇಕಾಗಿದೆ. ಆದುದರಿಂದ, ಶಂಕಿತ ಉಗ್ರ ಬದುಕಿ ಉಳಿಯಬೇಕಾಗಿದೆ. ಆತ ಬಾಯಿ ತೆರೆಯಬೇಕಾಗಿದೆ. ಈತನ ಹೆಸರಿನ ಜೊತೆಗೆ ಇನ್ನಷ್ಟು ಹೆಸರುಗಳನ್ನು ತಳಕು ಹಾಕಲಾಗಿದೆ. ಅವರ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿಕೆ ನೀಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಶಾರಿಕ್ ಕುಕ್ಕರ್ ಸ್ಫೋಟ ಪ್ರಕರಣದಲ್ಲಿ ನಡೆದ ಭದ್ರತಾ ವೈಫಲ್ಯವೂ ತನಿಖೆಗೊಳಗಾಗ ಬೇಡವೆ? ಈ ಆರೋಪಿಯ ಕುರಿತಂತೆ ಪೊಲೀಸರ, ತನಿಖಾಧಿಕಾರಿಗಳ ಬೇಜವಾಬ್ದಾರಿಗೆ ಯಾರು ಹೊಣೆ? ಆದುದರಿಂದ, ಮಂಗಳೂರಿನಲ್ಲಿ ಶನಿವಾರ ನಡೆದ ಭದ್ರತಾ ವೈಫಲ್ಯವನ್ನು ತನಿಖೆ ಮಾಡಲು ಪ್ರತ್ಯೇಕ ತಂಡವೊಂದನ್ನು ರಚಿಸುವ ಅಗತ್ಯವಿದೆ.
ಇದೇ ಸಂದರ್ಭದಲ್ಲಿ ಆದಿತ್ಯ ರಾವ್, ಶಾರಿಕ್‌ನಂತಹ ಯುವಕರನ್ನು ಸೃಷ್ಟಿಸುವ ಶಕ್ತಿಗಳ ಬಗ್ಗೆ ಸಮಾಜ ಜಾಗೃತವಾಗಬೇಕಾಗಿದೆ. ಇದನ್ನು ಕೇವಲ ಪೊಲೀಸ್ ಇಲಾಖೆಯಿಂದಷ್ಟೇ ತಡೆಯಲು ಸಾಧ್ಯವಿಲ್ಲ. ಯುವಕರಲ್ಲಿ ದ್ವೇಷ, ಹಿಂಸೆ, ಸೇಡನ್ನು ಬಿತ್ತುವ ಶಕ್ತಿಗಳು ಸಮಾಜದಲ್ಲಿ ಹೆಚ್ಚುತ್ತಿದ್ದಾರೆ. ಇಂದು ಧರ್ಮದ ಹೆಸರಲ್ಲಿ ಮಾತ್ರವಲ್ಲ, ರಾಷ್ಟ್ರೀಯತೆಯ ಹೆಸರಿನಲ್ಲೂ ದ್ವೇಷವನ್ನು, ಉಗ್ರವಾದವನ್ನು ಹರಡುವ ಶಕ್ತಿಗಳು ನಮ್ಮ ನಡುವೆ ಬೇರಿಳಿಸುತ್ತಿವೆ. ಮಾಲೆಗಾಂವ್ ಸ್ಫೋಟ, ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟಗಳಲ್ಲಿ ಕೇಳಿ ಬಂದ ಹೆಸರುಗಳು ‘ಸ್ವದೇಶಿ ಉಗ್ರವಾದ’ ಹೇಗೆ ಭಾರತವನ್ನು ಒಳಗೊಳಗೆ ನಾಶ ಮಾಡಲು ಸಂಚು ರೂಪಿಸುತ್ತಿವೆ ಎನ್ನುವುದನ್ನು ಬಹಿರಂಗ ಪಡಿಸಿವೆ. ಸ್ವತಂತ್ರ ಭಾರತದ ಪ್ರಪ್ರಥಮ ಭಯೋತ್ಪಾದಕ ನಾಥುರಾಂ ಗೋಡ್ಸೆಯ ಅಭಿಮಾನಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ‘ರಾಷ್ಟ್ರೀಯತೆ’ಯ ಹೆಸರಿನಲ್ಲೇ ಈ ದೇಶದ್ರೋಹಿಗಳನ್ನು ವೈಭವೀಕರಿಸುವ ಪ್ರಯತ್ನ ನಡೆಯುತ್ತಿದೆ.
ಶಾರಿಕ್-ಆದಿತ್ಯ ರಾವ್-ಪ್ರಜ್ಞಾಸಿಂಗ್-ಕಸಬ್ ಇವರೆಲ್ಲರೂ ಒಂದೇ ನಾಣ್ಯದ ಮುಖಗಳು. ಇವರನ್ನೆಲ್ಲ ಧರ್ಮದ ಆಧಾರದಲ್ಲಿ ಗುರುತಿಸುವುದರಿಂದ ಪ್ರಕರಣವನ್ನು ಬಗೆ ಹರಿಸುವುದು ಸಾಧ್ಯವಿಲ್ಲ. ಉಗ್ರವಾದಕ್ಕೆ ಧರ್ಮವಿಲ್ಲ ಎನ್ನುವುದನ್ನು ಬರೇ ಬಾಯಿಯಲ್ಲಿ ಪಠಿಸಿ ಪ್ರಯೋಜನವಿಲ್ಲ. ಅದನ್ನು ಅನುಷ್ಠಾನಕ್ಕೂ ತಂದಾಗ ಮಾತ್ರ ಶಾರಿಕ್ ಅಥವಾ ಆದಿತ್ಯ ರಾವ್‌ನಂತಹ ತರುಣರು ಸೃಷ್ಟಿಯಾಗದಂತೆ ನೋಡುವಲ್ಲಿ ನಾವು ಯಶಸ್ವಿಯಾಗಬಹುದು. ಭಯೋತ್ಪಾದಕರ ಹೆಸರು ಪ್ರಜ್ಞಾಸಿಂಗ್ ಇರಲಿ ಅಥವಾ ಕಸಬ್ ಇರಲಿ. ಇಬ್ಬರಿಗೂ ಒಂದೇ ನೀತಿ ಅನ್ವಯವಾದಾಗ ಮಾತ್ರ ಈ ದೇಶವನ್ನು ಉಗ್ರವಾದದಿಂದ ಉಳಿಸಬಹುದು. ಹಾಗೆಯೇ ನಮ್ಮ ಯುವಕರನ್ನು ಗೋಡ್ಸೆ, ಸಾವರ್ಕರ್ ಚಿಂತನೆಯಿಂದ ಗಾಂಧಿ, ಅಂಬೇಡ್ಕರ್, ನೆಹರೂ ಚಿಂತನೆಯ ಕಡೆಗೆ ಹೊರಳಿಸುವ ಹೊಣೆಗಾರಿಕೆಯನ್ನು ಪ್ರಜ್ಞಾವಂತರು ಹೊತ್ತುಕೊಳ್ಳಬೇಕು. ಇಲ್ಲವಾದರೆ ಮುಂದೊಂದು ದಿನ ದೇಶವನ್ನು ಈ ‘ಸ್ವದೇಶಿ ಉಗ್ರ’ರೇ ವಿಚ್ಛಿದ್ರಗೊಳಿಸುವ ಅಪಾಯವಿದೆ