‘ಲೋಕತಂತ್ರದ ಜನನಿ’ಯ ಹಿಂದಿರುವ ಕುತಂತ್ರ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಈ ವರ್ಷ ನ.26ರ ಸಂವಿಧಾನ ಸಮರ್ಪಣಾ ದಿನವನ್ನು ‘ಭಾರತ- ಲೋಕತಂತ್ರದ ಜನನಿ’ ಎಂಬ ವಿಷಯದ ಸುತ್ತ ಆಚರಿಸಬೇಕೆಂದು ಮೋದಿ ಸರಕಾರ ಹೊರಡಿಸಿರುವ ಸುತ್ತೋಲೆ ಸಹಜವಾಗಿಯೇ ವಿವಾದವನ್ನು ಮತ್ತು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಆದೇಶದ ಜೊತೆಗೆ ಐಸಿಎಚ್‌ಆರ್ (ಭಾರತೀಯ ಇತಿಹಾಸ ಸಂಶೋಧನಾ ಪರಿಷತ್ತು) ಒಂದು ಪರಿಕಲ್ಪನಾತ್ಮಕ ಟಿಪ್ಪಣಿಯನ್ನು ನೀಡಿದೆ. ಆ ಟಿಪ್ಪಣಿಯು ಸರಕಾರದ ಸುತ್ತೋಲೆಯಂತಿರದೆ ಆರೆಸ್ಸೆಸ್‌ನ ಪ್ರಚಾರ ಸಾಹಿತ್ಯದಂತಿರುವುದೂ ಮೋದಿ ಸರಕಾರದ ಉದ್ದೇಶಗಳನ್ನು ಪ್ರಶ್ನಿಸುವಂತೆ ಮಾಡಿದೆ. ಈ ಸುತ್ತೋಲೆಯಂತೆ ನ. 26ನ್ನು ಅಚರಿಸಿದರೆ ಭಾರತೀಯರು ಸಂಭ್ರಮಿಸುವುದು 1949ರಲ್ಲಿ ಸಮರ್ಪಣೆಯಾದ ಪ್ರಜಾತಾಂತ್ರಿಕ ಸಂವಿಧಾನವನ್ನೋ ಅಥವಾ ಜಾತಿ ತಾರತಮ್ಯ ಆಧಾರಿತ ವೈದಿಕ ಭಾರತದ ಪುನರುತ್ಥಾನವನ್ನೋ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಈ ಒಟ್ಟಾರೆ ಕಸರತ್ತಿನ ಪ್ರಧಾನ ಒತ್ತು ನಾಲ್ಕು ವಿಷಯಗಳ ಮೇಲಿದೆ.
ಅ)ವೇದಗಳ ಕಾಲದಿಂದಲೂ ಭಾರತದಲ್ಲಿ ಪ್ರಜಾತಂತ್ರ-ಜನತಂತ್ರ- ಲೋಕತಂತ್ರ ಜಾರಿಯಲ್ಲಿತ್ತು ಎಂದು ಹೇಳುತ್ತಾ ವೇದಕಾಲೀನ ಶೋಷಕ ವರ್ಣಾಶ್ರಮ ಪದ್ಧತಿ ಹಾಗೂ ಜಾತಿ ವ್ಯವಸ್ಥೆಗಳನ್ನು ಭಾರತದ ಪ್ರಜಾತಂತ್ರದ ರೂಪ ಎಂದು ಬಣ್ಣಿಸುವುದು. ಆ) ಲೋಕತಂತ್ರದ ಪರಿಕಲ್ಪನೆಯನ್ನು ಜಗತ್ತಿಗೆ ಕೊಟ್ಟಿದ್ದೇ ಭಾರತ ಎಂದು ಸುಳ್ಳು ಹಿರಿಮೆಯನ್ನು ಬೋಧಿಸುವುದು ಇ) ಮತ್ತು ಭಾರತದ ಖಾಪ್ ಪಂಚಾಯತ್ ಅರ್ಥಾತ್ ಜಾತಿ ಪಂಚಾಯತ್‌ಗಳು ಎಂದು ಅದರ ಪ್ರಸ್ತುತತೆಯನ್ನು ಎತ್ತಿ ಹಿಡಿಯುವುದು. ಈ) ಈ ಜಾತಿ ಪ್ರಜಾತಂತ್ರದ ಮೂಲಕವೇ ಹಿಂದೂ ಭಾರತ 2,000 ವರ್ಷಗಳ ಪರಕೀಯರ ದಾಳಿಯನ್ನು ಹಿಮ್ಮೆಟ್ಟಿಸಿತು ಎಂದು ಪ್ರತಿಪಾದಿಸುತ್ತಾ ಭಾರತವೆಂದರೆ ಹಿಂದೂ ಹಾಗೂ 2,000 ವರ್ಷಗಳ ಹಿಂದೆ ಬಂದ ಆರ್ಯರು ಪರಕೀಯರಲ್ಲ ಈ ದೇಶದ ಮೂಲನಿವಾಸಿಗಳು ಎಂದು ಪರೋಕ್ಷವಾಗಿ ಬಿತ್ತುವುದು.
ಹಾಗೆ ನೋಡಿದರೆ ಪ್ರಾಚೀನ ಭಾರತದಲ್ಲಿ ಪ್ರಜಾಪ್ರಭುತ್ವ ಇರಲಿಲ್ಲ ಎಂದೇನಲ್ಲ. ಆದರೆ ಅದು ಇದ್ದದ್ದು ವೇದಕಾಲದಲ್ಲ್ಲಿ. ಬೌದ್ಧ ಭಾರತದಲ್ಲಿ. 1949ರ ನವೆಂಬರ್ 25ರಂದು ಸಂವಿಧಾನವನ್ನು ಸಮರ್ಪಿಸುತ್ತಾ ಅಂಬೇಡ್ಕರ್ ಅವರು ಸಂವಿಧಾನ ಸಭೆಯಲ್ಲಿ ಮಾಡಿದ ಕೊನೆ ಭಾಷಣದಲ್ಲಿ ಕೂಡ ಹೇಗೆ ಪ್ರಾಚೀನ ಭಾರತದಲ್ಲಿ ಅದರಲ್ಲೂ ಬೌದ್ಧ ಸಂಘಗಳಲ್ಲಿ ಸಂಸದೀಯ ಪ್ರಜಾತಂತ್ರದ ಹಲವಾರು ರೀತಿ ರಿವಾಜುಗಳನ್ನು ಅನುಸರಿಸುತ್ತಿದ್ದರು ಎಂದು ವಿವರಿಸುತ್ತಾರೆ. ಇದರ ಬಗ್ಗೆ ಎಲ್ಲಾ ಭಾರತೀಯರಿಗೂ ಸಹಜವಾಗಿ ಹೆಮ್ಮೆ ಇರಬೇಕು. ಆದರೆ ಮೋದಿ ಸರಕಾರ ಹೊರಡಿಸಿರುವ ‘ಪ್ರಜಾತಂತ್ರದ ಜನನಿ’ ಟಿಪ್ಪಣಿಯಲ್ಲಿ ಬೌದ್ಧ ಭಾರತದ ಬಗ್ಗೆ ಉಲ್ಲೇಖವೇ ಇಲ್ಲ.
ಅದೇ ಭಾಷಣದಲ್ಲಿ ಅಂಬೇಡ್ಕರ್ ಅವರು ಭಾರತದ ಆ ಪ್ರಾಚೀನ ಪ್ರಜಾತಂತ್ರವನ್ನು ಕಳೆದುಕೊಂಡ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾರೆ ಮತ್ತು ‘ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ’ ಎಂಬ ಕೃತಿಯಲ್ಲಿ, ಹೇಗೆ ಬ್ರಾಹ್ಮಣ್ಯದ ದಿಗ್ವಿಜಯದ ಮೂಲಕ ಬೌದ್ಧ ಪ್ರಜಾತಂತ್ರ ಅವಸಾನವಾಯಿತು ಎಂಬುದನ್ನು ವಿವರಿಸುತ್ತಾರೆ. ಸಮತೆ, ಮಮತೆಯ ಆಧಾರದಲ್ಲಿ ಬೌದ್ಧ ಭಾರತ ಕಟ್ಟಬಯಸಿದ ಭಾರತೀಯ ಸಮಾಜ ರಚನೆಯನ್ನು ನಾಶ ಮಾಡಿ, ಅದರ ಜಾಗದಲ್ಲಿ ವೇದ, ಪುರಾಣ, ಮನುಸ್ಮತಿಗಳನ್ನು ಆಧರಿಸಿದ ಜಾತಿ ವ್ಯವಸ್ಥೆಯನ್ನು ಜಾರಿ ಮಾಡಿ ಈ ದೇಶದ ದಲಿತರು, ಶೂದ್ರರು ಮತ್ತು ಮಹಿಳೆಯರು ಸಾವಿರಾರು ವರ್ಷಗಳ ಗುಲಾಮಗಿರಿಗೆ ಈಡಾಗುವಂತೆ ಮಾಡಿದರು ಎಂದು ಅಂಬೇಡ್ಕರ್ ವಿವರಿಸುತ್ತಾರೆ. ವೈಚಾರಿಕತೆ ಮತ್ತು ನೈತಿಕತೆಯನ್ನು ನಾಶಮಾಡುವ ವೇದ-ಶಾಸ್ತ್ರ-ಪುರಾಣಗಳ ದಾಳಿಯಿಂದಾಗಿಯೇ ಬೌದ್ಧ ಪ್ರಜಾತಂತ್ರ ಅವನತಿಗೊಂಡಿತು ಎಂದು ಅಂಬೇಡ್ಕರ್ ಪ್ರತಿಪಾದಿಸುತ್ತಾರೆ ಮತ್ತು ಈ ದೇಶ ಒಂದು ದೇಶವಾಗಬೇಕೆಂದರೆ, ಹಿಂದೂ ಧರ್ಮ ನಿಜವಾದ ಅರ್ಥದಲ್ಲಿ ಒಂದು ಧರ್ಮವಾಗಬೇಕಾದರೆ, ಒಬ್ಬ ಹಿಂದೂ ಜಾತಿ ಕಲ್ಮಷವಿರದ ಸಹಜ ಮನುಷ್ಯನಾಗಬೇಕೆಂದರೆ ವೇದ-ಪುರಾಣಗಳನ್ನು ಡೈನಮೈಟ್ ಇಟ್ಟು ಉಡಾಯಿಸಬೇಕೆಂದು ಅವರ ‘ಜಾತಿ ವಿನಾಶ’ ಕೃತಿಯಲ್ಲಿ ಕರೆ ನೀಡುತ್ತಾರೆ.
ಹೀಗೆ ಯಾವ ವೇದ-ಪುರಾಣ-ಮನುಸ್ಮತಿಗಳು ಈ ದೇಶದಲ್ಲಿದ್ದ ಪ್ರಜಾತಂತ್ರದ ನಾಶಕ್ಕೆ ಕಾರಣವಾಗಿ ಅತ್ಯಂತ ಅಪ್ರಜಾತಾಂತ್ರಿಕ, ಅಮಾನವೀಯ, ಕ್ರೂರ ಜಾತಿ ವ್ಯವಸ್ಥೆಗೆ ಕಾರಣವಾಯಿತೋ ಅದನ್ನೇ ಈ ದೇಶದ ಪ್ರಜಾತಂತ್ರವೆಂದು ಆಚರಿಸಲು ಮೋದಿ ಸರಕಾರ ಈ ಬಾರಿ ಕರೆ ನೀಡಿದೆ. ಹಾಗೆ ನೋಡಿದರೆ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಆಧರಿಸಿದ ಭಾರತದ ಸಂವಿಧಾನವನ್ನು ಆರೆಸ್ಸೆಸ್ ಮತ್ತದರ ಅಂಗಸಂಸ್ಥೆಗಳು ಮೊದಲಿಂದಲೂ ತಿರಸ್ಕರಿಸುತ್ತಲೇ ಬಂದಿವೆ. ಸಂವಿಧಾನ ಸಮರ್ಪಣೆಯಾದ ಮರುವಾರವೇ 1949ರ ನವೆಂಬರ್ 30ರಂದು ಆರೆಸ್ಸೆಸ್ ತನ್ನ ಮುಖವಾಣಿ ‘ಆರ್ಗನೈಸರ್’ ಪತ್ರಿಕೆಯಲ್ಲಿ ಬರೆದುಕೊಂಡ ಸಂಪಾದಕೀಯದಲ್ಲಿ ಭಾರತದ ಸಂವಿಧಾನದಲ್ಲಿ ಭಾರತೀಯವಾದದ್ದು ಏನೂ ಇಲ್ಲವೆಂದೂ, ಇಡೀ ಜಗತ್ತೇ ಮಾನ್ಯ ಮಾಡುವ ಮನುಸ್ಮತಿ ಮಾತ್ರ ಈ ದೇಶದ ನಿಜವಾದ ಸಂವಿಧಾನವೆಂದು ಘೋಷಿಸಿತ್ತು. ಆರೆಸ್ಸೆಸ್‌ನ ಪಿತಾಮಹರಾದ ಸಾವರ್ಕರ್ ಅವರಂತೂ ಮನುಸ್ಮತಿಯು ವಿಶ್ವಮಾನ್ಯ ಸಾಮಾಜಿಕ ಕಟ್ಟಳೆಯೆಂದು, ಭಾರತೀಯರು ತಮ್ಮ ಜೀವನದಲ್ಲಿ ಯಾವತ್ತಿಗೂ ಅದನ್ನೇ ಅನುಸರಿಸುತ್ತಾರೆಂದು ಘೋಷಿಸಿದ್ದರು.
ಆದರೆ ಸ್ವಾತಂತ್ರ್ಯದ ಗಾಳಿ, ಸಮಾನತೆಯ ಹೋರಾಟಗಳು ಮತ್ತು ಭಾರತದ ಶೋಷಿತ ಜನರಲ್ಲಿ ಉಂಟಾಗಿದ್ದ ಜಾಗೃತಿಗಳಿಂದಾಗಿ ತನ್ನ ಎಲ್ಲಾ ಪ್ರಜಾತಂತ್ರ ವಿರೋಧಿ ಸಿದ್ಧಾಂತಗಳಿಗೆ ಸಾಂವಿಧಾನಿಕ ಮುಸುಕನ್ನು ಹೊದಿಸಿ ಚಾಲ್ತಿಯಲ್ಲಿಟ್ಟಿತ್ತು. ಆದರೆ ಕಳೆದೆರಡು ದಶಕಗಳಲ್ಲಿ ಜನರ ಬದುಕು ಮತ್ತು ಪ್ರಜಾತಾಂತ್ರಿಕ ಹೋರಾಟಗಳು ಬಲಹೀನಗೊಂಡು, ಜನರ ಆತಂಕಗಳು ಮತ್ತು ಆಕ್ರೋಶಗಳನ್ನು ಸಂಘಪರಿವಾರ ದ್ವೇಷ ರಾಜಕಾರಣಕ್ಕೆ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗತೊಡಗಿತು. ಅದರ ಭಾಗವಾಗಿಯೇ 2014ಕ್ಕೆ ಮುಂಚಿನ ಇತಿಹಾಸವೆಲ್ಲಾ ದೇಶದ್ರೋಹಿಗಳು ಬರೆದ ಇತಿಹಾಸ, ನೆಹರೂ-ಗಾಂಧಿಗಳೆಲ್ಲಾ ಹಿಂದೂ ದ್ರೋಹಿಗಳು, ಸಾವರ್ಕರ್ ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ಬ್ರಾಹ್ಮಣ್ಯ-ಜಾತಿ ಈ ದೇಶದ ಅಸ್ಮಿತೆ ಎಂಬೆಲ್ಲಾ ಅಪದ್ಧಗಳನ್ನು ಬಹಿರಂಗವಾಗಿ ಪ್ರಚಾರ ಮಾಡಲು ಪ್ರಾರಂಭಿಸಿತು 2019ರಲ್ಲಿ ಎರಡನೇ ಬಾರಿ ಮೋದಿ ಸರಕಾರ ಹಿಂದುತ್ವದ ಅಜೆಂಡಾದ ಮೇಲೆ ಅಧಿಕಾರಕ್ಕೆ ಬಂದ ಮೇಲೆ ಈ ಬ್ರಾಹ್ಮಣ್ಯ ಪುನರುತ್ಥಾನ ಅಜೆಂಡಾ ಇನ್ನಷ್ಟು ಆಕ್ರಮಣಕಾರಿಯಾಗಿಯೂ ವೇಗವಾಗಿಯೂ ನಡೆಯುತ್ತಿದೆ. ಈ ‘ಭಾರತ- ಪ್ರಜಾತಂತ್ರದ ಜನನಿ ಯೋಜನೆ’ ಬ್ರಾಹ್ಮಣ್ಯ ಪುನರುತ್ಥಾನ ಯೋಜನೆಯ ಭಾಗವೇ ಆಗಿದೆ. ಬ್ರಾಹ್ಮಣೀಕರಣವೇ ಭಾರತೀಕರಣವಾಗುತ್ತಿದೆ. ವಾಸ್ತವವಾಗಿ ಮೋದಿ ಸರಕಾರ ಪ್ರಥಮ ಬಾರಿಗೆ 2015ರಲ್ಲಿ ನ. 26ನ್ನು ಸಂವಿಧಾನ ದಿನವನ್ನಾಗಿ ಆಚರಿಸಲು ಕರೆ ನೀಡಿದಾಗ ಹಲವರಲ್ಲಿ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು. ಈಗ ಅದು ಏಕೆಂದು ಸ್ಪಷ್ಟವಾಗಿದೆ. ಪ್ರಾಚೀನ ಭಾರತದಲ್ಲಿ ಲೋಕತಂತ್ರವಿತ್ತು. ಆದರೆ ಅದನ್ನು ವೇದ-ಪುರಾಣ-ಶಾಸ್ತ್ರ ಆಧಾರಿತ ಬ್ರಾಹ್ಮಣ್ಯ ಪ್ರತಿಕ್ರಾಂತಿಯ ಮೂಲಕ ನಾಶ ಮಾಡಿತು. ಸಂವಿಧಾನ ಜಾರಿಯಾದ ನಂತರ ಈ ದೇಶದಲ್ಲಿ ಮತ್ತೊಂದು ಪ್ರಜಾತಾಂತ್ರಿಕ ಕ್ರಾಂತಿಯಾಗಿತ್ತು. ಆದರೆ ಇದೀಗ ಮೋದಿ ಸರಕಾರ ಮತ್ತೊಮ್ಮೆ ಬ್ರಾಹ್ಮಣ್ಯದ ಪುನರುತ್ಥಾನದ ಮೂಲಕ ಪ್ರತಿಕ್ರಾಂತಿ ಮಾಡ ಹೊರಟಿದೆ. ಭಾರತದ ಪ್ರಜ್ಞಾವಂತ ಶೋಷಿತ ಜನತೆ ಇದನ್ನು ಆಗಗೊಡುವರೇ?