ಲಸಿಕೆಯನ್ನು ಸರಕಾರ ಕಡ್ಡಾಯಗೊಳಿಸಿರಲಿಲ್ಲವೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೊರೋನ ವೈರಸ್ ಲಸಿಕೆಯ ವ್ಯತಿರಿಕ್ತ ಪರಿಣಾಮಗಳಿಂದ ಸಂಭವಿಸುವ ಸಾವುಗಳಿಗೆ ಸರಕಾರ ಪರಿಹಾರ ನೀಡಬೇಕೆಂದು ಹೇಳುವುದು ಕಾನೂನಾತ್ಮಕವಾಗಿ ಕಾರ್ಯಸಾಧುವಲ್ಲ ಹಾಗೂ ಇಂತಹ ಸಾವುಗಳಿಗೆ ನಾವು ಹೊಣೆಯಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ಹೇಳಿಕೆ ನೀಡಿದೆ. ಲಸಿಕೆ ಸಂಬಂಧಿ ಸಾವಿಗೆ ಪರಿಹಾರ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಪ್ರತಿಯಾಗಿ ಅಫಿಡವಿಟ್ ಸಲ್ಲಿಸಿರುವ ಕೇಂದ್ರ ಸರಕಾರ ''ಲಸಿಕೆ ತೆಗೆದುಕೊಳ್ಳುವಂತೆ ನಾನು ಯಾವತ್ತೂ ಯಾವುದೇ ಪ್ರಜೆಯನ್ನು ಒತ್ತಾಯಿಸಿಲ್ಲ'' ಎಂದು ಸ್ಪಷ್ಟಪಡಿಸಿದೆ. ತಮ್ಮ ಪುತ್ರಿಯ ಸಾವುಗಳಿಗೆ ಪರಿಹಾರ ನೀಡಬೇಕು ಎಂದು ಕೋರಿ ಹೈದರಾಬಾದ್ ಮತ್ತು ಕೊಯಂಬತ್ತೂರ್‌ನ ಇಬ್ಬರು ಸಂತ್ರಸ್ತರು 2021ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದ್ದರು. ಹೈದರಾಬಾದ್‌ನ ಗಂಗು ಎಂಬವರ ಪುತ್ರಿ ರಿತಿಕಾ 2021ರ ಜೂನ್‌ನಲ್ಲಿ ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡ 15 ದಿನಗಳಲ್ಲಿ ಮೃತಪಟ್ಟಿದ್ದರು. ಅವರ ಸಾವಿಗೂ ಕೋವಿಶೀಲ್ಡ್ ಲಸಿಕೆಗೆ ಸಂಬಂಧವಿರುವುದನ್ನು ತನಿಖಾ ಸಮಿತಿ ಖಚಿತ ಪಡಿಸಿತ್ತು. ಹಾಗೆಯೇ ಕೊಯಂಬತ್ತೂರ್‌ನ ಗೋವಿಂದನ್ ಎಂಬವರ ಪುತ್ರಿ ಕಾರುಣ್ಯ 2021ರಲ್ಲಿ ಮೃತಪಟ್ಟಿದ್ದರು. 2021 ನವೆಂಬರ್ 19ರವರೆಗೆ ದೇಶಾದ್ಯಂತ 219 ಕೋಟಿಗೂ ಅಧಿಕ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಎನ್ನುವುದನ್ನು ಅಂಕಿಅಂಶಗಳು ಹೇಳುತ್ತವೆ. ಲಸಿಕೆ ಪಡೆದುಕೊಂಡ ಬಳಿಕ 92,114 ಅಡ್ಡ ಪರಿಣಾಮಗಳು ವರದಿಯಾಗಿದ್ದು, ಇವುಗಳಲ್ಲಿ 2,782 ಪ್ರಕರಣಗಳು ಗಂಭೀರ ಸ್ವರೂಪದ್ದಾಗಿವೆ. ಇದೇ ಸಂದರ್ಭದಲ್ಲಿ ಸರಕಾರದ ದಾಖಲೆಗಳ ಹೊರತಾಗಿಯೂ ನೂರಾರು ಜನರು ಲಸಿಕೆಗೆ ಬಲಿಯಾಗಿದ್ದಾರೆ. ದೇಶಾದ್ಯಂತ ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಿದ್ದು, ಇದರ ಹಿಂದೆಯೂ ಲಸಿಕೆಯ ಅಡ್ಡ ಪರಿಣಾಮಗಳಿವೆ ಎಂದು ಕೆಲವು ತಜ್ಞರು ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ಇದೀಗ ಲಸಿಕೆಯ ದುಷ್ಪರಿಣಾಮಗಳ ಹೊಣೆಗಾರಿಕೆಯಿಂದ ಸರಕಾರ ಸಂಪೂರ್ಣ ಕಳಚಿಕೊಂಡಿದ್ದು, ಇದನ್ನು ಔಷಧಿ ಉತ್ಪಾದಕರು ಮತ್ತು ಸಂತ್ರಸ್ತರ ನಡುವಿನ ವಿವಾದವಾಗಿ ನೋಡಬೇಕು ಎಂದು ಅಫಿಡವಿಟ್‌ನಲ್ಲಿ ಕೋರಿಕೊಂಡಿದೆ.
''ಕೊರೋನ ಲಸಿಕೆ ಕಡ್ಡಾಯವಲ್ಲ, ಅದು ಐಚ್ಛಿಕವಾಗಿತ್ತು'' ಎಂದು ನ್ಯಾಯಾಲಯದಲ್ಲಿ ಸರಕಾರ ನೀಡುತ್ತಿರುವ ಹೇಳಿಕೆ ಎಷ್ಟರಮಟ್ಟಿಗೆ ಪ್ರಾಮಾಣಿಕವಾದುದು ಎನ್ನುವುದು ಚರ್ಚೆಗೆ ಅರ್ಹವಾಗಿದೆ. ಕೊರೋನ ಲಸಿಕೆಯನ್ನು ಸರಕಾರ ಕಡ್ಡಾಯಗೊಳಿಸಿರಲಿಲ್ಲ ನಿಜ, ಆದರೆ ಲಸಿಕೆ ತೆಗೆದುಕೊಳ್ಳಲೇ ಬೇಕಾದಂತಹ ಸ್ಥಿತಿಯನ್ನು ನಿರ್ಮಾಣ ಮಾಡಿತ್ತು ಎನ್ನುವುದನ್ನು ಶ್ರೀಸಾಮಾನ್ಯರು ಇನ್ನೂ ಮರೆತಿಲ್ಲ. ಕೋಟ್ಯಂತರ ರೂಪಾಯಿಯನ್ನು ಲಸಿಕೆಗಾಗಿ ಸರಕಾರ ಸುರಿದದ್ದು ಮಾತ್ರವಲ್ಲ, ಅದರ ಪ್ರಚಾರಕ್ಕಾಗಿಯೂ ಭಾರೀ ಪ್ರಮಾಣದ ದುಡ್ಡನ್ನು ವ್ಯಯ ಮಾಡಿತ್ತು. ಕೋವಿಡ್ ಲಸಿಕೆಯನ್ನು ಪ್ರಧಾನಿ ಮೋದಿಯವರ ಸಾಧನೆಯಾಗಿ ಸರಕಾರ ಬಿಂಬಿಸಿತ್ತು. ಒಂದು ಕೋಟಿ, ಎರಡು ಕೋಟಿ ಲಸಿಕೆಗಳನ್ನು ಜನರು ಪಡೆದಾಗ ಅದನ್ನು ಸರಕಾರದ ಸಾಧನೆಯೆಂಬಂತೆ ಸಂಭ್ರಮಿಸಿತ್ತು. ಮಾಧ್ಯಮಗಳ ಮೂಲಕ ತನ್ನ ಸರಕಾರದ ಸಾಧನೆಯೆಂದು ಕೊಚ್ಚಿಕೊಂಡಿತ್ತು. ಅಷ್ಟೇ ಅಲ್ಲ, ಲಸಿಕೆ ಪಡೆದುಕೊಂಡ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರವನ್ನು ಮುದ್ರಿಸಲಾಗಿತ್ತು. ಲಸಿಕೆಗೂ ಸರಕಾರಕ್ಕೂ ಸಂಬಂಧವೇ ಇಲ್ಲವೆಂದಾದರೆ, ಪ್ರಮಾಣ ಪತ್ರದಲ್ಲಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಯಾವ ಕಾರಣಕ್ಕೆ ಮುದ್ರಿಸಲಾಗಿತ್ತು? ಲಸಿಕೆ ತಯಾರಿಸಿರುವ ಸಂಸ್ಥೆಗಳಿಗೂ ಪ್ರಧಾನಿ ಮೋದಿಗೂ ಇರುವ ಸಂಬಂಧವೇನು? ಎನ್ನುವುದನ್ನು ಸರಕಾರ ಈಗ ಸುಪ್ರೀಂಕೋರ್ಟ್‌ಗೆ ಸ್ಪಷ್ಟಪಡಿಸಬೇಕಾಗಿದೆ. ಲಸಿಕೆ ಪ್ರಮಾಣ ಪತ್ರದಲ್ಲಿ ಮೋದಿಯವರ ಭಾವಚಿತ್ರ ಛಾಪಿಸಿರುವುದನ್ನು ಹಲವು ರಾಜ್ಯಗಳು ಪ್ರಶ್ನಿಸಿದ್ದವು. ಪ್ರಧಾನಿಯವರ ಭಾವಚಿತ್ರದ 'ಭರವಸೆ'ಯ ಜೊತೆಗೆ ಲಸಿಕೆಯನ್ನು ಜನರಿಗೆ ವಿತರಿಸಿರುವುದರಿಂದ, ಪ್ರಧಾನಿ ಮೋದಿಯವರೇ ಲಸಿಕೆಯ ದುಷ್ಪರಿಣಾಮಗಳ ಜವಾಬ್ದಾರಿಯನ್ನು ಹೊರುವುದು ಅನಿವಾರ್ಯವಾಗಿದೆ.
ಲಸಿಕೆ ಮಾರುಕಟ್ಟೆಗೆ ಬಂದಂತೆಯೇ ಅದನ್ನು ಜನಸಾಮಾನ್ಯರು ಹಾಕಿಸಿಕೊಳ್ಳುವುದಕ್ಕೆ ಒತ್ತಾಯಿಸಲು 'ಲಾಕ್‌ಡೌನ್'ನ್ನು ಬ್ಲಾಕ್‌ಮೇಲ್ ರೂಪದಲ್ಲಿ ಬಳಸಲಾಯಿತು. ಲಾಕ್‌ಡೌನ್‌ಗಳಿಂದ ಪಾರಾಗುವುದಕ್ಕೆ ಜನರು ಅನಿವಾರ್ಯವಾಗಿ ಲಸಿಕೆಯನ್ನು ಪಡೆದುಕೊಳ್ಳಬೇಕಾಯಿತು. ಈ ದೇಶದ ಶ್ರೀಸಾಮಾನ್ಯರು ಕೊರೋನಾ ಕಾಲದಲ್ಲಿ ನಮಗೆ 'ಉದ್ಯೋಗ ಮಾಡಲು ಅವಕಾಶ ಮಾಡಿ ಕೊಡಿ, ಆಹಾರ ಕೊಡಿ' ಎಂದು ಕೇಳುತ್ತಿದ್ದರೇ ವಿನಹ 'ಲಸಿಕೆ ಕೊಡಿ' ಎಂದು ಯಾರೂ ಸರಕಾರವನ್ನು ಒತ್ತಾಯಿಸಿರಲಿಲ್ಲ. ಒಂದು ಬಾರಿ ಕೊರೋನ ಬಂದು ಹೋದವರಿಗೆ ಲಸಿಕೆಯ ಅಗತ್ಯವಿಲ್ಲ ಎನ್ನುವುದನ್ನು ಹಲವು ತಜ್ಞ ವೈದ್ಯರು ಮಾಧ್ಯಮಗಳ ಮೂಲಕ ಸಾರಿ ಸಾರಿ ಹೇಳುತ್ತಿದ್ದರು. ಜೊತೆಗೆ, 30 ವರ್ಷದ ಒಳಗಿನ ತರುಣರಿಗೂ ಲಸಿಕೆಯ ಅಗತ್ಯವಿಲ್ಲ ಎಂದು ವೈದ್ಯರು ಸಲಹೆ ನೀಡುತ್ತಿದ್ದರು. ಆದರೆ, ಸರಕಾರದ ಸುತ್ತೋಲೆಗಳು ಜನರನ್ನು ದಾರಿ ತಪ್ಪಿಸಿದವು. ಹಲವು ಮಾಲ್‌ಗಳೊಳಗೆ, ಬಸ್‌ನಿಲ್ದಾಣಗಳಿಗೆ ಪ್ರವೇಶಿಸಬೇಕಾದರೆ ಲಸಿಕೆ ಪಡೆದುಕೊಳ್ಳುವುದು ಅತ್ಯಗತ್ಯ ಎನ್ನುವ ನಿಯಮಗಳು ಶ್ರೀಸಾಮಾನ್ಯರಿಗೆ ಲಸಿಕೆ ತೆಗೆದುಕೊಳ್ಳುವ ಅನಿವಾರ್ಯ ಸ್ಥಿತಿಯನ್ನು ನಿರ್ಮಾಣ ಮಾಡಿತು. ಅಷ್ಟೇ ಏಕೆ, ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾದರೆ ಪೋಷಕರು ಕಡ್ಡಾಯವಾಗಿ ಲಸಿಕೆಯನ್ನು ಪಡೆದುಕೊಳ್ಳಬೇಕು ಎಂಬ ನಿಯಮಗಳನ್ನು ಕೆಲವು ಸರಕಾರಗಳು ಹೇರಿದವು.
ಹೆಚ್ಚಿನ ಶಾಲೆಗಳು ವಿದ್ಯಾರ್ಥಿಗಳಿಗೂ ಲಸಿಕೆಯನ್ನು ಕಡ್ಡಾಯಗೊಳಿಸಿದವು. ಲಸಿಕೆಯ ಕುರಿತಂತೆ ಭರವಸೆ ಇಲ್ಲದೇ ಇದ್ದರೂ ಜನಸಾಮಾನ್ಯರು ಲಸಿಕೆಯನ್ನು ಪಡೆದುಕೊಳ್ಳಬೇಕಾದ ಒತ್ತಡಕ್ಕೆ ಸಿಲುಕಿಕೊಂಡರು. ಆರಂಭದಲ್ಲಿ ಲಸಿಕೆಯ ದರವನ್ನು ರಾಜ್ಯ ಸರಕಾರದ ತಲೆಗೆ ಕಟ್ಟುವುದಕ್ಕೆ ಕೇಂದ್ರ ಸರಕಾರ ಪ್ರಯತ್ನಿಸಿತು. ರಾಜ್ಯ ಸರಕಾರಗಳ ಪ್ರಬಲ ಪ್ರತಿಭಟನೆಯ ಬಳಿಕ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯಿತು. ಜನಸಾಮಾನ್ಯರ ಕೋಟ್ಯಂತರ ರೂಪಾಯಿಯನ್ನು ಲಸಿಕೆ ಕಂಪೆನಿಗಳಿಗೆ ಸುರಿದು, ಜನಸಾಮಾನ್ಯರಿಗೆ ಉಚಿತವಾಗಿ ಲಸಿಕೆಯನ್ನು ಕೊಟ್ಟಿದ್ದೇವೆ ಎಂಬ ಹೇಳಿಕೆಗಳನ್ನು ಮಾಧ್ಯಮಗಳ ಮೂಲಕ ಜನರಿಗೆ ನೀಡಿತು. ಜನಸಾಮಾನ್ಯರು ಲಸಿಕೆ ಪಡೆಯುವುದಕ್ಕೆ ಹಿಂಜರಿದಾಗಲೆಲ್ಲ, ಕೋವಿಡ್ ಸಾವು ನೋವಿನ ಅಂಕಿಅಂಶಗಳ ಗುಮ್ಮನನ್ನು ತೋರಿಸುತ್ತಾ ಲಸಿಕೆ ಪಡೆಯಲು ಒತ್ತಾಯಿಸಿತು. ಆದರೆ ಇಂದು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಲಸಿಕೆಗಳು ಬೇಡಿಕೆಗಳಿಲ್ಲದೆ ವ್ಯರ್ಥವಾಗುವ ಹಂತದಲ್ಲಿದೆ.
ಕೋವ್ಯಾಕ್ಸಿನ್ ಪೂರ್ಣ ಪ್ರಮಾಣದಲ್ಲಿ ಪರೀಕ್ಷೆಗೊಳಗಾಗುವ ಮೊದಲೇ ಸರಕಾರ ಆತುರಾತುರವಾಗಿ ಅದಕ್ಕೆ ಅನುಮೋದನೆಯನ್ನು ಕೊಟ್ಟಿದೆ ಎನ್ನುವ ಆರೋಪವೂ ಸರಕಾರದ ಮೇಲಿದೆ. ಈಗ ಲಸಿಕೆಯಿಂದಾಗಿರುವ ದುಷ್ಪರಿಣಾಮಗಳ ವರದಿಗಳು ಒಂದೊಂದಾಗಿ ಹೊರ ಬೀಳುತ್ತಿವೆ. ಲಸಿಕೆಗಳಿಂದ ಸಂತ್ರಸ್ತರಾಗಿರುವವರು ಒಬ್ಬೊಬ್ಬರಾಗಿ ಪರಿಹಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಏರುತ್ತಿದ್ದಂತೆಯೇ ಸರಕಾರ, ಲಸಿಕೆ ಕಂಪೆನಿಗಳ ಕಡೆಗೆ ಕೈತೋರಿಸುತ್ತಿದೆ. ಒಂದೆಡೆ ಲಸಿಕೆಯನ್ನು ತನ್ನ ಸಾಧನೆ ಎಂದು ಹೇಳಿಕೊಂಡ ಸರಕಾರ, ಸಾರ್ವಜನಿಕರಿಗೆ ಲಾಕ್‌ಡೌನ್ ಮೂಲಕ ಲಸಿಕೆ ಪಡೆದುಕೊಳ್ಳಲೇಬೇಕಾದಂತಹ ಒತ್ತಡವನ್ನು ನಿರ್ಮಾಣ ಮಾಡಿದ ಸರಕಾರ ಇದೀಗ 'ಲಸಿಕೆಯನ್ನು ಸರಕಾರ ಕಡ್ಡಾಯ ಮಾಡಿರಲಿಲ್ಲ, ಅದು ಐಚ್ಛಿಕವಾಗಿತ್ತು' ಎಂದು ಸುಪ್ರೀಂಕೋರ್ಟ್‌ಗೆ ಹೇಳಿಕೆ ನೀಡಿರುವುದು, ಜನಸಾಮಾನ್ಯರಿಗೆ ಮಾಡಿದ ಬಹುದೊಡ್ಡ ಮೋಸವಾಗಿದೆ. ಸರಕಾರದ ಮಾತುಗಳನ್ನು, ಮೋದಿಯ ಭಾವಚಿತ್ರವನ್ನು ನಂಬಿ ಲಸಿಕೆ ಹಾಕಿಸಿಕೊಂಡ ಜನಸಾಮಾನ್ಯರಿಗೆ ಎಸಗಿದ ದ್ರೋಹವಾಗಿದೆ.