ಜಿ20 ಅಧ್ಯಕ್ಷಗಿರಿ: ವಿಶ್ವಶಾಂತಿಯ ಪ್ರಯತ್ನಕ್ಕೆ ಅವಕಾಶವಾಗುವುದೇ?

Update: 2022-12-03 04:17 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಈ ವರ್ಷ ಜಿ20 ದೇಶಗಳ ಕೂಟದ ಅಧ್ಯಕ್ಷಗಿರಿಯನ್ನು ಭಾರತದ ವಿಧ್ಯುಕ್ತವಾಗಿ ಡಿಸೆಂಬರ್ 1ರಂದು ವಹಿಸಿಕೊಂಡಿತು. ಮುಂದಿನ ಡಿಸೆಂಬರ್‌ನಲ್ಲಿ ಈ ಅಧ್ಯಕ್ಷಗಿರಿಯನ್ನು ಬ್ರೆಝಿಲ್ ಅಧ್ಯಕ್ಷರಿಗೆ ವಹಿಸುವವರೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಧ್ಯಕ್ಷರಾಗಿರುತ್ತಾರೆ. ಈ ಇಡೀ ವರ್ಷ ಭಾರತದ ವಿವಿಧ ಪ್ರದೇಶಗಳಲ್ಲಿ ವಿವಿಧ ವಿಷಯಗಳ ಬಗ್ಗೆ 50ಕ್ಕೂ ಹೆಚ್ಚು ಜಿ20 ಸಭೆ, ಸಮ್ಮೇಳನಗಳನ್ನು ಏರ್ಪಡಿಸಲು ಮೋದಿ ಸರಕಾರ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ವರೆಗೆ 17 ದೇಶಗಳು ಇಂತಹ ವರ್ಷವಿಡೀ ಸಭೆಗಳಿಗೆ ಆತಿಥ್ಯ ವಹಿಸಿದ್ದು ಹಲವಾರು ಅರ್ಥಪೂರ್ಣ ಚರ್ಚೆಗಳಾಗಿವೆ. ಆದರೆ ಅವುಗಳಲ್ಲಿ ಬಹುಪಾಲು ನಿರ್ಧಾರಗಳು ಆಚರಣೆಗೆ ಬರುವಷ್ಟು ರಾಜಕೀಯ ಚೈತನ್ಯ ಹೊಂದಿಲ್ಲದಿದ್ದರಿಂದ ವ್ಯರ್ಥವೂ ಆಗಿದೆ. ಈ ಬಾರಿ ಅಧ್ಯಕ್ಷಪಟ್ಟ ವಹಿಸಿಕೊಂಡಿರುವ ಪ್ರಧಾನಿ ಮೋದಿಯವರು ''ಜಗತ್ತು ಹೆಚ್ಚು ಧ್ರುವೀಕರಣಗೊಳ್ಳುತ್ತಿರುವ ಹೊತ್ತಿನಲ್ಲಿ ಭಾರತಕ್ಕೆ ಅಧ್ಯಕ್ಷಗಿರಿ ವಹಿಸಿರುವುದು ಸಹಜವಾಗಿದೆ. ಏಕೆಂದರೆ ಭಾರತದ ಡಿಎನ್‌ಎನಲ್ಲೇ ಭಿನ್ನಾಭಿಪ್ರಾಯ ಉಳ್ಳವರನ್ನು ಒಟ್ಟಿಗೆ ಕರೆದೊಯ್ಯುವ ಮಧ್ಯಮ ಮಾರ್ಗಿ ಸಮ ಭಾವವಿದೆ'' ಎಂದೆಲ್ಲ ದೊಡ್ಡ ಮಾತುಗಳನ್ನಾಡಿದ್ದಾರೆ. ಆದರೆ, ಈ ಜಿ20ರ ಅಧ್ಯಕ್ಷಗಿರಿಯ ಅವಕಾಶವನ್ನು ಬಿಜೆಪಿ ಮತ್ತದರ ಪರಿವಾರ ಬಳಸಿಕೊಳ್ಳುತ್ತಿರುವುದನ್ನು ನೋಡಿದರೆ ಪ್ರಧಾನಿಯವರ ಮಾತುಗಳು ಬರೀ ಬೊಗಳೆ ಎಂದೆನಿಸುವಂತಿದೆ. ಏಕೆಂದರೆ ಮೊದಲಿಗೆ ಈ ಅಧ್ಯಕ್ಷಗಿರಿ ಭಾರತಕ್ಕೆ ಬಂದಿರುವುದೇ ಜಗತ್ತು ಮೋದಿಯವರ ಮುತ್ಸದ್ದಿತನವನ್ನು ಗುರುತಿಸಿರುವುದರ ಸಂಕೇತ ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ ಅದರಲ್ಲಿ ಒಂದಿನಿತೂ ಸತ್ಯವಿಲ್ಲ.

ಸಹಜ ರೊಟೇಷನ್ ಪದ್ಧತಿಯ ಭಾಗವಾಗಿ ಭಾರತಕ್ಕೆ ಈ ಅಧ್ಯಕ್ಷಗಿರಿ ಬಂದಿದೆಯೇ ವಿನಾ ಮೋದಿಯವರ ಸನ್ಮಾನಕ್ಕಲ್ಲ. ಏಕೆಂದರೆ ಜಿ20 ಒಂದು ಮಧ್ಯಮ ಗಾತ್ರದ ಆರ್ಥಿಕತೆಗಳ ಅನೌಪಚಾರಿಕ ಸಮಾಲೋಚನಾ ಕೂಟ. ಇದಕ್ಕೊಂದು ಶಾಶ್ವತ ಸೆಕ್ರೆಟರಿಯೇಟ್ ಕೂಡ ಇಲ್ಲ ಹಾಗೂ ಈವರೆಗೆ ಬಲಿಷ್ಠ ರಾಷ್ಟ್ರಗಳ ಆಸಕ್ತಿಗಳನ್ನು ವಿರೋಧಿಸುತ್ತ ಬಡ-ಮಧ್ಯಮ ಗಾತ್ರದ ರಾಷ್ಟ್ರಗಳ ಹಿತಾಸಕ್ತಿಯನ್ನು ರಕ್ಷಿಸುವ ಒಂದು ನಿರ್ಣಯವನ್ನೂ ಈ ಜಿ20 ಕೂಟ ತೆಗೆದುಕೊಂಡಿಲ್ಲ. ಅಕಸ್ಮಾತ್ ತೆಗೆದುಕೊಂಡಿದ್ದರೂ ಅದಕ್ಕಾಗಿ ವಿಶ್ವಸಂಸ್ಥೆ, ವಿಶ್ವ ವಾಣಿಜ್ಯ ಸಂಸ್ಥೆ, ವಿಶ್ವ ಬ್ಯಾಂಕ್- ಐಎಂಎಫ್ ಇನ್ನಿತ್ಯಾದಿ ರಾಜಕೀಯ ಮತ್ತು ಆರ್ಥಿಕ ವೇದಿಕೆಗಳಲ್ಲಿ ಒತ್ತಾಯಿಸಿಯೂ ಇಲ್ಲ. ಹಾಗೆ ನೋಡಿದರೆ ಈ ಜಿ20, 1998ರಲ್ಲಿ ಪೂರ್ವ ಏಶ್ಯ ದೇಶಗಳಲ್ಲಿ ಸಂಭವಿಸಿದ ಹಣಕಾಸು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಧ್ಯಮ ಗಾತ್ರದ ಆರ್ಥಿಕತೆಗಳಾಗಿರುವ ಭಾರತ, ಇಂಡೋನೇಶ್ಯ, ಆಸ್ಟ್ರೇಲಿಯ, ಟರ್ಕಿ, ಇಟಲಿ, ಬ್ರೆಝಿಲ್‌ನಂತಹ ದೇಶಗಳು ಐರೋಪ್ಯ ಒಕ್ಕೂಟ ಮತ್ತು ಅಮೆರಿಕದೊಂದಿಗೆ ಸೇರಿಕೊಂಡು 20 ದೇಶಗಳು ಹಣಕಾಸು ಸುಸ್ಥಿರತೆ ಮತ್ತಿತರ ಜಾಗತಿಕ ವಿಷಯಗಳಿಗಾಗಿ ರೂಪಿಸಿಕೊಂಡಿರುವ ಒಂದು ಅನೌಪಚಾರಿಕ ಸಮಾಲೋಚನಾ ಒಕ್ಕೂಟವಷ್ಟೆ.

ಇವುಗಳ ಅಧ್ಯಕ್ಷಗಿರಿಯನ್ನು ಪ್ರತೀ ವರ್ಷ ಒಂದೊಂದು ದೇಶ ವಹಿಸಿ ತನ್ನ ದೇಶದಲ್ಲಿ ಆ ವರ್ಷದಾದ್ಯಂತ ಜಾಗತಿಕ ವಿಷಯಗಳಿಗೆ ಸಂಬಂಧಪಟ್ಟ ಸಮಾಲೋಚನೆ, ಚರ್ಚೆ, ಸಮ್ಮೇಳನಗಳನ್ನು ನಡೆಸುವ ಆತಿಥ್ಯ ವಹಿಸುತ್ತದೆ. ಕಳೆದ ವರ್ಷ ಇದರ ಅಧ್ಯಕ್ಷಗಿರಿಯನ್ನು ಇಂಡೋನೇಶ್ಯ ವಹಿಸಿತ್ತು. ಅದರ ಹಿಂದಿನ ವರ್ಷ ಇಟಲಿ ವಹಿಸಿತ್ತು. ಈ ವರ್ಷ ಭಾರತ ವಹಿಸುತ್ತಿದೆ. ಮುಂದಿನ ವರ್ಷ ಬ್ರೆಝಿಲ್ ವಹಿಸುತ್ತದೆ. ಹೀಗಾಗಿ ಈ ಅಧ್ಯಕ್ಷಗಿರಿ ಯಾವುದೇ ದೇಶಕ್ಕೆ ಕೊಡಮಾಡುವ ವಿಶೇಷ ಸನ್ಮಾನವೂ ಅಲ್ಲ. ಪ್ರಶಸ್ತಿಯೂ ಅಲ್ಲ. ಭಾರತದಲ್ಲಿ ಈ ವರ್ಷ ಬಿಜೆಪಿ ಸರಕಾರದ ಬದಲು ಬೇರೆ ಯಾವುದೇ ಸರಕಾರವಿದ್ದರೂ ಅದರ ಪ್ರಧಾನಿ ಜಿ20ರ ಅಧ್ಯಕ್ಷಗಿರಿ ವಹಿಸುತ್ತಿದ್ದರು. ಹೀಗಾಗಿ ಬಿಜೆಪಿ ಪರಿವಾರ ಇದನ್ನು ತನ್ನ ಪಕ್ಷದ ಅಥವಾ ತನ್ನ ನಾಯಕನ ಗರಿಮೆ ಎಂದು ಪ್ರಚಾರ ಮಾಡುವುದು ದೇಶಕ್ಕೆ ಮಾಡುವ ಅಪಮಾನವೇ ಅಗಿದೆ. ಅದೇನೇ ಇರಲಿ. ಈಗ ಅಧ್ಯಕ್ಷಗಿರಿ ವಹಿಸಿರುವ ಭಾರತ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಬೇಕಿದೆ. ಯುದ್ಧ, ಜನಾಂಗೀಯ ದ್ವೇಷ, ಧರ್ಮ ದ್ವೇಷ, ಕಾರ್ಪೊರೇಟ್ ಕಂಪೆನಿಗಳ ಲಾಭ ದುರಾಸೆಯಿಂದಾಗಿ ಹೆಚ್ಚುತ್ತಿರುವ ಹವಾಮಾನ ತುರ್ತುಸ್ಥಿತಿ, ಎಲ್ಲೆಡೆ ಸಾಮಾಜಿಕ ಮತ್ತು ಆರ್ಥಿಕ ಬಿಕ್ಕಟ್ಟಿನ ದುರ್ಲಾಭ ಪಡೆದು ಬಲಗೊಳ್ಳುತ್ತಿರುವ ಪ್ರಜಾತಂತ್ರ ವಿರೋಧಿ ಬಲಪಂಥೀಯ ಸರ್ವಾಧಿಕಾರಿ ರಾಜಕೀಯ, ಸಾಮಾಜಿಕ ಧ್ರುವೀಕರಣಗೊಂಡಿರುವ ಜಗತ್ತಿನಲ್ಲಿ ಪ್ರೀತಿ, ಭ್ರಾತೃತ್ವ ಹಾಗೂ ಆರ್ಥಿಕ ಸಮಾನತೆಗಳ ಆಲೋಚನೆ ಹಾಗೂ ಕಾರ್ಯಕ್ರಮಗಳನ್ನು ತುರ್ತಾಗಿ ಬಿತ್ತಬೇಕಿದೆ. ಆದರೆ ಮೋದಿ ಸರಕಾರಕ್ಕೆ, ಮತ್ತವರು ಪ್ರತಿನಿಧಿಸುವ ರಾಜಕೀಯಕ್ಕೆ ಜಗತ್ತಿಗೆ ಬೇಕಿರುವ ಪ್ರೀತಿಯ ಹಾಗೂ ಬದುಕಿನ ಸಿಂಚನ ಮಾಡುವ ಚೈತನ್ಯವಿದೆಯೇ?

ತಮ್ಮ ಉದ್ಘಾಟನಾ ಭಾಷಣದಲ್ಲಿ ಮೋದಿಯವರು ಧ್ರುವೀಕರಣಗೊಂಡಿರುವ ಜಗತ್ತಿನಲ್ಲಿ ಭಿನ್ನಮಾರ್ಗಿಗಳನ್ನು ಒಟ್ಟಾಗಿ ಕೊಂಡೊಯ್ಯುವ ಚಿಂತನೆ ಭಾರತೀಯ ನಾಗರಿಕತೆಯಲ್ಲೇ ಹಾಸುಹೊಕ್ಕಾಗಿದೆ ಎಂದೇನೋ ಹೇಳಿದ್ದಾರೆ. ಆದರೆ ದೇಶದೊಳಗೆ ಹಾಗೂ ವಿದೇಶದಲ್ಲಿ ಅವರ ಸರಕಾರ ನಡೆದುಕೊಳ್ಳುತ್ತಿರುವ ರೀತಿ ಅಂತಹ ಯಾವುದೇ ಭರವಸೆಗಳನ್ನು ಹುಟ್ಟುಹಾಕುವಂತಿಲ್ಲ. ಉದಾಹರಣೆಗೆ ಭಿನ್ನ ಮಾರ್ಗಿಗಳನ್ನು ಒಟ್ಟಿಗೆ ಸಮಾಲೋಚನೆಯ ಮಾರ್ಗದ ಮೂಲಕ ಕೊಂಡೊಯ್ಯುವ ರಿವಾಜನ್ನು ಮೋದಿ ಸರಕಾರ ಭಾರತದ ಸಂಸತ್ತಿನಲ್ಲೇ ಅನುಸರಿಸುತ್ತಿಲ್ಲ. ಮಾತುಕತೆ ಮತ್ತು ಸಮಾಲೋಚನೆಯ ಮೂಲಕ ಮಸೂದೆಗಳು ಪಾಸಾಗಬೇಕಿದ್ದ ಸಂಸತ್ತಿನಲ್ಲಿ ಮೋದಿ ಕಾಲಾವಧಿಯಲ್ಲಿ ಚರ್ಚೆಗಳೇ ನಡೆಯುತ್ತಿಲ್ಲ. ರಾಜ್ಯಗಳ ಜೊತೆಗೆ ಯಾವ ವಿಷಯದಲ್ಲೂ ಸಮಾಲೋಚನೆಯನ್ನೇ ನಡೆಸದೆ ನೋಟು ನಿಷೇಧ, ಲಾಕ್‌ಡೌನ್ ಹೇರಿದ ಹೆಗ್ಗಳಿಕೆ ಮೋದಿ ಸರಕಾರದ್ದು. ಇನ್ನು ಕೋವಿಡ್ ಸಂದರ್ಭದಲ್ಲಿ ಸರಕಾರದ ಅಂಗಗಳನ್ನು ಬಳಸಿಕೊಂಡೇ ಮುಸ್ಲಿಮ್ ದ್ವೇಷವನ್ನು ಬಿತ್ತಲು ಬಳಸಿಕೊಂಡದ್ದನ್ನು ಇಡೀ ಜಗತ್ತೇ ಖಂಡಿಸಿತ್ತು. ಹೀಗೆ ದೇಶದೊಳಗೆ ದ್ವೇಷ ಬಿತ್ತುವ ಮೋದಿ ನೇತೃತ್ವದ ಸರಕಾರ ಜಗತ್ತಿನಲ್ಲಿ ಮಾತ್ರ ಪ್ರೀತಿ ಬಿತ್ತುವುದೇ? ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಭಾರತ ಪರಂಪರಾನುಗತವಾಗಿ ಅನುಸರಿಸಿಕೊಂಡು ಬಂದಿದ್ದ ದುರ್ಬಲ ಹಾಗೂ ಶೋಷಿತ ರಾಷ್ಟ್ರಗಳ ಪರವಾದ ನಿಲುವನ್ನು ಸಂಪೂರ್ಣವಾಗಿ ಬದಲಾಯಿಸಿ ಬಲಿಷ್ಠ ರಾಷ್ಟ್ರಗಳ ಪರವಾದ ನಿಲುವನ್ನು ವಹಿಸುತ್ತಿದೆ.

ಸ್ವಾತಂತ್ರ ಬಂದಾಗಿನಿಂದ ಭಾರತದ ಯಾವ ಪ್ರಧಾನಿಯೂ ಇಸ್ರೇಲ್‌ಗೆ ಭೇಟಿ ಕೊಟ್ಟಿರಲಿಲ್ಲ. ಅದು ಇಸ್ರೇಲ್ ಫೆಲೆಸ್ತೀನಿಯರ ಮೇಲೆ ಮಾಡುತ್ತಿರುವ ಶೋಷಣೆಗೆ ಪ್ರತಿಭಟನೆಯ ಸ್ವರೂಪದಲ್ಲಿತ್ತು. ಆದರೆ ಅವೆಲ್ಲವನ್ನು ಉಲ್ಲಂಘಿಸಿ ಮೋದಿಯವರು 2017ರಲ್ಲಿ ಇಸ್ರೇಲ್‌ಗೆ ಎರಡು ದಿನಗಳ ಅಧಿಕೃತ ಭೇಟಿಯನ್ನಿತ್ತರು. ಜಗತ್ತಿನ ಬಹುಪಾಲು ದೇಶಗಳು ಇಸ್ರೇಲ್ ಒಂದು ಯೆಹೂದಿ ಪ್ರಜಾತಂತ್ರವಾಗಿ ಬದಲಾಗಿದ್ದನ್ನು ಮತ್ತು ರಾಜಧಾನಿಯನ್ನು ಜೆರುಸಲೇಂಗೆ ವರ್ಗಾಯಿಸಿದ್ದನ್ನು ಖಂಡಿಸಿದರೆ ಮೋದಿ ಸರಕಾರ ಅದರ ಬಗ್ಗೆ ಮೌನ ವಹಿಸಿತ್ತು ಹಾಗೂ ಇಸ್ರೇಲಿನ ಜೊತೆಗೆ ವಹಿವಾಟು ಮುಂದುವರಿಸಿತು. ಇದು ಯುದ್ಧದ ಕಾಲವಲ್ಲ ಎಂದು ಮೋದಿ ಸರಕಾರ ಎಷ್ಟೇ ಹೇಳುತ್ತಿದ್ದರೂ ಉಕ್ರೇನ್ ಮೇಲೆ ಆಕ್ರಮಣ ಮಾಡಿರುವ ರಶ್ಯ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಖಂಡಿಸುವ ನಿರ್ಣಯವು ವಿಶ್ವಸಂಸ್ಥೆಯಲ್ಲಿ ಚರ್ಚೆಗೆ ಬಂದಾಗಲೆಲ್ಲಾ ಮೋದಿ ಸರಕಾರ ರಶ್ಯ ಪರ ನಿಲ್ಲುತ್ತಾ ಯುದ್ಧದ ಪರೋಕ್ಷ ಮುಂದುವರಿಕೆ ಬೆಂಬಲದ ಸರಬರಾಜು ಮಾಡುತ್ತಿದೆ. ಮೋದಿ ಸರಕಾರ ಜಾರಿಗೆ ತರಲು ಬಯಸಿರುವ ಸಿಎಎ-ಎನ್‌ಆರ್‌ಸಿ ನೀತಿಯಂತೂ ಮೋದಿಯವರು ಜಿ20ರ ಅಧ್ಯಕ್ಷರಾಗಿ ಹೇಳುತ್ತಿರುವ ಒಳಗೊಳ್ಳುವ ನೀತಿಗೆ, ಮಧ್ಯಮ ಮಾರ್ಗಿ ನೀತಿಗೆ, ಶಾಂತಿ-ಸಹಬಾಳ್ವೆಯ ನೀತಿಗೆ ತದ್ವಿರುದ್ಧವಾಗಿವೆ. ಹೀಗಿರುವಾಗ ಜಗತ್ತು ಮೋದಿಯವರ ಅಧ್ಯಕ್ಷಗಿರಿಯಿಂದ ಹೆಚ್ಚೇನು ಪಡೆಯದಿದ್ದರೂ, ಭಾರತದಲ್ಲಿ ಮಾತ್ರ ಬಿಜೆಪಿ ಮತ್ತವರ ಪರಿವಾರ ಇದನ್ನು ಹುಸಿ ಹೆಗ್ಗಳಿಕೆಗಳಿಗೆ ಮತ್ತು ಚುನಾವಣಾ ಪ್ರಚಾರಗಳಿಗೆ ಬಳಸಿಕೊಳ್ಳುವುದು ಖಂಡಿತಾ. ಆದರೆ ಇದರಿಂದ ವಿಶ್ವಮಟ್ಟದಲ್ಲಿ ಭಾರತದ ಮಾನ-ಮರ್ಯಾದೆ-ಪ್ರತಿಷ್ಠೆಗೆ ಧಕ್ಕೆಯಾಗುತ್ತದೆ ಎಂದಾದರೂ ಅರ್ಥಮಾಡಿಕೊಳ್ಳಬೇಕಲ್ಲವೇ?

Similar News