ಕರಗುತ್ತಿರುವ ಮೋದಿ ತುತ್ತೂರಿಯ ಬಣ್ಣ!

Update: 2022-12-09 04:19 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಹೊರ ಬೀಳುವ ಚುನಾವಣಾ ಫಲಿತಾಂಶಗಳಿಂದಾಗಿ ಆರೋಗ್ಯ ಕೆಡಿಸಿಕೊಳ್ಳುವವರಿಗಾಗಿಯೇ ಚುನಾವಣಾ ಆಯೋಗ ಅನಧಿಕೃತವಾಗಿ, ಚುನಾವಣೋತ್ತರ ಸಮೀಕ್ಷೆಯ ಹೆಸರಿನಲ್ಲಿ ಪೂರ್ವಭಾವಿಯಾಗಿ ಫಲಿತಾಂಶವನ್ನು ಬಿಡುಗಡೆ ಮಾಡುತ್ತದೆ. ಚುನಾವಣಾ ಫಲಿತಾಂಶಗಳಿಗೆ ದೇಶವಾಸಿಗಳನ್ನು ಮಾನಸಿಕವಾಗಿ ಸಿದ್ಧಗೊಳಿಸುವ ಮಹತ್ತರ ಉದ್ದೇಶವನ್ನು ಚುನಾವಣೋತ್ತರ ಸಮೀಕ್ಷೆ ಹೊಂದಿದೆ. ಇದರಿಂದಾಗಿ ಜನರು ಚುನಾವಣಾ ಫಲಿತಾಂಶಗಳ ಅನಿರೀಕ್ಷಿತಗಳಿಂದ ಆಘಾತಗೊಳ್ಳುವುದು ತಪ್ಪುತ್ತದೆ ಎನ್ನುವುದು ಅದರ ದೂರಾಲೋಚನೆಯಿರಬೇಕು. ಚುನಾವಣೋತ್ತರ ಸಮೀಕ್ಷೆಯ ಕಾರಣದಿಂದಾಗಿ ಈ ಬಾರಿಯ ಚುನಾವಣೆಯ ಫಲಿತಾಂಶವ ನಿರೀಕ್ಷೆಗೆ ತಕ್ಕಂತೆಯೇ ಇದೆ. ಪ್ರಧಾನಿಯ ರಾಜ್ಯವಾಗಿರುವ ಗುಜರಾತ್ ಮತ್ತೆ ಅಭೂತಪೂರ್ವ ರೀತಿಯಲ್ಲಿ ಬಿಜೆಪಿಯ ತೆಕ್ಕೆಗೆ ಸರಿದಿದೆ. ಇದೇ ಸಂದರ್ಭದಲ್ಲಿ, ಕಾಂಗ್ರೆಸ್ ನಾಯಕರು ಅನಗತ್ಯವಾಗಿ ‘ಇವಿಎಂ’ ಮೇಲೆ ಗೂಬೆ ಕೂರಿಸದಿರಲಿ ಎನ್ನುವಂತೆ ಹಿಮಾಚಲ ಪ್ರದೇಶದಲ್ಲಿ ಮತದಾರರು ಕಾಂಗ್ರೆಸ್‌ಗೆ ಒಲಿದಿದ್ದಾರೆ. ದಿಲ್ಲಿಯ ಮಹಾನಗರಪಾಲಿಕೆಯನ್ನು ಸಂಪೂರ್ಣ ಕೈವಶ ಮಾಡಿರುವುದರಿಂದ, ಇವಿಎಂ ಹ್ಯಾಕ್ ಆಗಿರುವ ಬಗ್ಗೆ ಆಪ್ ಕೂಡ ತುಟಿ ಬಿಚ್ಚುವಂತಿಲ್ಲ. ಒಟ್ಟಿನಲ್ಲಿ ವಿಜಯಾಮೃತದ ದೊಡ್ಡ ಪಾಲು ಬಿಜೆಪಿಗೆ ಸಿಕ್ಕಿದೆ. ಪಾಲಿಗೆ ಬಂದದ್ದು ಪಂಚಾಮೃತ ಎಂದು ಆಪ್, ಕಾಂಗ್ರೆಸ್ ಕೂಡ ಬಾಯಿ ಚಪ್ಪರಿಸಿಕೊಂಡಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯ ಕೇಂದ್ರ ಬಿಂದು ಗುಜರಾತ್ ಆಗಿದ್ದುದರಿಂದ, ಅಂತಿಮ ಫಲಿತಾಂಶದಲ್ಲಿ ಅಮಿತ್ ಶಾ ಮುಸಿ ಮುಸಿ ನಗುತ್ತಿದ್ದಾರೆ. ಇತ್ತ ಆಪ್ ಗುಜರಾತ್‌ನಲ್ಲಿ ದೊಡ್ಡ ಮಟ್ಟದ ಸ್ಥಾನಗಳನ್ನು ತನ್ನದಾಗಿಸಿಕೊಳ್ಳದೇ ಇರಬಹುದು. ಆದರೆ ಆಪ್‌ನ ಸಾಧನೆಯನ್ನು ನಿರ್ಲಕ್ಷಿಸುವಂತೆ ಇಲ್ಲ. ಅತಿ ಸಣ್ಣ ಅವಧಿಯಲ್ಲಿ ಆಪ್ ರಾಷ್ಟ್ರೀಯ ಪಕ್ಷವಾಗಿ ಹೊರ ಹೊಮ್ಮಿದೆ. ಬಿಜೆಪಿಗೆ ಎದುರಾಳಿಯಾಗಿ ಆಮ್ ಆದ್ಮಿ ಪಕ್ಷವನ್ನು ಮತದಾರರು ಈ ಬಾರಿ ಗುರುತಿಸಿದ್ದಾರೆ. ಬಿಜೆಪಿಯ ಹಿಂದುತ್ವ ಮತಗಳನ್ನು ಆಪ್ ಕಸಿದುಕೊಳ್ಳಲು ವಿಫಲವಾಗಿದೆ. ಆದರೆ,   ಕಾಂಗ್ರೆಸ್‌ನೊಳಗಿರುವ ಮೃದು ಹಿಂದುತ್ವವಾದಿ ಮತಗಳು ದೊಡ್ಡ ಮಟ್ಟದಲ್ಲಿ ಈ ಬಾರಿ ಆಪ್‌ಗೆ ವರ್ಗಾವಣೆಯಾದಂತಿದೆ. ಪರಿಣಾಮವಾಗಿ ಕಾಂಗ್ರೆಸ್ ಗುಜರಾತ್‌ನಲ್ಲಿ ಹೀನಾಯ ಸಾಧನೆಯನ್ನು ಮಾಡಿದೆ.

ಗುಜರಾತ್ ವಿಧಾನಸಭಾ ಚುನಾವಣೆಯ ಕೆಸರಲ್ಲಿ ೨೦೦೨ರ ಹತ್ಯಾಕಾಂಡದ ಅವಶೇಷಗಳು ಮೇಲೆದ್ದಿವೆ. ಈ ಬಾರಿಯ ಗುಜರಾತ್ ಫಲಿತಾಂಶ ಈ ಕಾರಣದಿಂದಾಗಿ ನಿರಾಶಾದಾಯಕವಾಗಿದೆ. ಅಮಿತ್ ಶಾ ಈ ಬಾರಿಯ ಚುನಾವಣೆಯಲ್ಲಿ ಅಭಿವೃದ್ಧಿಯನ್ನು ಬದಿಗಿಟ್ಟು, ಗುಜರಾತ್ ಹತ್ಯಾಕಾಂಡದ ಗಾಯಗಳನ್ನು ಮತ್ತೆ ಕೆದಕಿದ್ದಾರೆ. ಚುನಾವಣಾ ಭಾಷಣದ ಸಂದರ್ಭದಲ್ಲಿ ‘ಗುಜರಾತ್ ಹತ್ಯಾಕಾಂಡ’ವನ್ನು ಅವರು ದೊಡ್ಡ ಧ್ವನಿಯಲ್ಲಿ ಸಮರ್ಥಿಸಿಕೊಂಡಿದ್ದರು. ೨೦೦೨ರ ಗಲಭೆಗಳ ಮೂಲಕ ನಾವು ಒಂದು ಸಮುದಾಯಕ್ಕೆ ಪಾಠವನ್ನು ಕಲಿಸಿದೆವು ಎಂಬರ್ಥದ ಮಾತುಗಳನ್ನಾಡಿದರು. ಆ ಮೂಲಕ ಗುಜರಾತ್ ಹತ್ಯಾಕಾಂಡದಲ್ಲಿ ಭಾಗವಹಿಸಿದ ಪಾತಕಿಗಳನ್ನು ಗುಜರಾತ್‌ನ ‘ಶಾಂತಿ ಪಾಲಕರು’ ಎಂದು ಬಿಂಬಿಸಿದ್ದರು. ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಜೀವಾವಧಿ ಶಿಕ್ಷೆಗೊಳಗಾಗಿದ್ದ ಗುಜರಾತ್ ಹತ್ಯಾಕಾಂಡ ಮತ್ತು ಅತ್ಯಾಚಾರ ಆರೋಪಿಗಳನ್ನು ಸರಕಾರ ಆತುರಾತುರವಾಗಿ ಬಿಡುಗಡೆ ಮಾಡಿತ್ತು. ಚುನಾವಣೆಯಲ್ಲಿ ಗುಜರಾತ್ ಹತ್ಯಾಕಾಂಡ ಆರೋಪಿಗಳಿಗೆ ಟಿಕೆಟ್ ನೀಡಿತು ಮಾತ್ರವಲ್ಲ, ಚುನಾವಣಾ ಪ್ರಚಾರಗಳಲ್ಲೂ ಅವರನ್ನು ಬಳಸಿಕೊಂಡಿತು. ವಿಪರ್ಯಾಸವೆಂದರೆ, ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಹತ್ಯಾಕಾಂಡ ಹಿನ್ನೆಲೆಯಿರುವ ಆರೋಪಿಗಳು ಭರ್ಜರಿ ಬಹುಮತದಿಂದ ಗೆದ್ದಿದ್ದಾರೆ. ಆದುದರಿಂದಲೇ, ಗುಜರಾತ್‌ನ ಫಲಿತಾಂಶ ಗುಜರಾತ್‌ಗಾಗಲಿ, ಭಾರತಕ್ಕಾಗಲಿ ಒಲಿತನ್ನು ಬಗೆಯಲಾರದು. ಗುಜರಾತ್ ಹತ್ಯಾಕಾಂಡವನ್ನು ಭಾರತ ಒಂದು ಕಳಂಕವೆಂದು ಭಾವಿಸುವುದೇ ಆಗಿದ್ದರೆ, ಅದೇ ಗುಜರಾತ್ ಹತ್ಯಾಕಾಂಡದ ಸಂತ್ರಸ್ತರ ಪಳೆಯುಳಿಕೆಗಳನ್ನು ಬಳಸಿಕೊಂಡು ಗೆದ್ದ ಚುನಾವಣೆ ಭಾರತಕ್ಕೆ ಯಾವ ರೀತಿಯಲ್ಲಿ ಒಳಿತನ್ನು ಮಾಡೀತು?

ಉಳಿದಂತೆ ಹಿಮಾಚಲ ಪ್ರದೇಶದ ಫಲಿತಾಂಶ ಕಾಂಗ್ರೆಸ್‌ಗೆ ಪೂರಕವಾಗಿದೆ. ಸ್ಪಷ್ಟ ಬಹುಮತದೊಂದಿಗೆ ಅಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಆದರೆ ಹಿಮಾಚಲ ಪ್ರದೇಶದ ಫಲಿತಾಂಶ ಹೊರ ಬಿದ್ದ ಬೆನ್ನಿಗೇ ಕಾಂಗ್ರೆಸ್ ಪಕ್ಷ ಬೆದರಿ ಕೂತಿದೆ. ಗೆದ್ದ ಶಾಸಕರನ್ನು ಹದ್ದುಗಳು ಯಾವಾಗ ಕಚ್ಚಿಕೊಂಡು ಹೋಗುತ್ತವೆಯೋ ಎನ್ನುವ ಭಯ ಅದನ್ನು ಕಾಡುತ್ತಿದೆ. ವಿವಿಧ ರಾಜ್ಯಗಳಲ್ಲಿ ನಡೆದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದಾಗ, ಹಿಮಾಚಲ ಪ್ರದೇಶದ ಅಧಿಕಾರವನ್ನು ಅಕ್ರಮ ದಾರಿಯ ಮೂಲಕ ಬಿಜೆಪಿ ಕೈವಶ ಮಾಡಲಾರದು ಎನ್ನುವಂತಿಲ್ಲ. ಯಾಕೆಂದರೆ ಶಾಸಕರನ್ನು ಕೊಂಡು ಇಡೀ ಚುನಾವಣೆಯನ್ನು ಬದಲಿಸುವಷ್ಟು ದುಡ್ಡು ಬಿಜೆಪಿಯ ಬಳಿ ಇದೆ. ಇದೇ ಸಂದರ್ಭದಲ್ಲಿ, ಪಕ್ಷದ ಸಿದ್ಧಾಂತ, ಪ್ರಜಾಸತ್ತೆಯ ಮೌಲ್ಯಗಳನ್ನು ಗಾಳಿಗೆ ತೂರಿ ಬಿಜೆಪಿಗೆ ಹರಾಜಾಗುವುದಕ್ಕೆ ತುದಿಗಾಲಿನಲ್ಲಿ ನಿಂತಿರುವ ಶಾಸಕರು ಕಾಂಗ್ರೆಸ್‌ನೊಳಗೂ ಇದ್ದಾರೆ. ಹೀಗಿರುವಾಗ, ಹಿಮಾಚಲ ಪ್ರದೇಶದಲ್ಲಿ ಜನಾದೇಶವೇ ಅಂತಿಮವಾಗಬೇಕಾಗಿಲ್ಲ. ಜನಾದೇಶವನ್ನೇ ತಮ್ಮ ದುಡ್ಡಿನಿಂದ ಕೊಂಡು ಕೊಳ್ಳುವ ಪರಿಪಾಠ ಹಿಮಾಚಲ ಪ್ರದೇಶದಲ್ಲೂ ನಡೆದರೆ, ಅಲ್ಲಿಗೆ ಪ್ರಜಾಸತ್ತೆಯ ಅಳಿದುಳಿದ ಆಟವೂ ಮುಗಿದಂತಾಗುತ್ತದೆ. ಗುಜರಾತ್‌ನ ಚುನಾವಣೆಯಲ್ಲಿ ಬಿಜೆಪಿ ಆಡಿದ ಕೆಟ್ಟ ರಾಜಕೀಯ, ಹಿಮಾಚಲ ಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ ಬೇರೆಯೇ ರೂಪದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.

ಚುನಾವಣೆಗಳು ಒಂದನ್ನಂತೂ ಸ್ಪಷ್ಟ ಪಡಿಸಿವೆ. ಮೋದಿಯ ‘ಅಮೃತ ಕಾಲ’ದ ಕುರಿತಂತೆ ಭಾರತ ಭರವಸೆಯನ್ನು ಕಳೆದುಕೊಂಡಿದೆ. ಇದು ಬಿಜೆಪಿಗೂ ಗೊತ್ತಾಗಿದೆ. ಆದುದರಿಂದಲೇ ಅದು ಗುಜರಾತ್‌ನಲ್ಲಿ ಭವಿಷ್ಯದ ಅಮೃತ ಕಾಲವನ್ನು ಪಕ್ಕಕ್ಕಿಟ್ಟು ೨೦೦೨ರ ‘ಮೃತ ಕಾಲ’ವನ್ನು ಮತ್ತೆ ಬಗೆಯಿತು. ಪಾತಕಿಗಳು, ಭ್ರಷ್ಟರ ಮೂಲಕ ಚುನಾವಣೆಯನ್ನು ಎದುರಿಸಿತು. ಮೋದಿಯ ತುತ್ತೂರಿಯ ಬಣ್ಣ ಕರಗುತ್ತಿರುವುದನ್ನು ಇದು ಹೇಳುತ್ತಿದೆ. ದಿಲ್ಲಿಯ ಮಹಾನಗರ ಪಾಲಿಕೆಯನ್ನು ಆಪ್ ಕೈವಶ ಮಾಡಿಕೊಂಡಿರುವುದು ದಿಲ್ಲಿಯ ಮೇಲೆ ನಿಯಂತ್ರಣ ಸಾಧಿಸುವ ಕೇಂದ್ರದ ಪ್ರಯತ್ನಕ್ಕೆ ಬಹುದೊಡ್ಡ ಹಿನ್ನಡೆಯಾಗಿದೆ. ಅದರ ಬೆನ್ನಿಗೇ ಉಪಚುನಾವಣೆಗಳಲ್ಲೂ ಪ್ರಧಾನಿ ಮೋದಿಯವ ವರ್ಚಸ್ಸನ್ನು ಬಿಜೆಪಿಗೆ ಬಳಸಿಕೊಳ್ಳಲಾಗಿಲ್ಲ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಮಾಡಿರುವ ಹಲವು ಜನಪ್ರಿಯ ಘೋಷಣೆಗಳು ‘ಅಭಿವೃದ್ಧಿಯ ರಾಜಕಾರಣ’ವನ್ನು ಎತ್ತಿ ಹಿಡಿದಿದೆ. ಬಿಜೆಪಿಯ ಭಾವನಾತ್ಮಕ ರಾಜಕಾರಣಕ್ಕೆ ಇಲ್ಲಿ ಹಿನ್ನಡೆಯಾಗಿದೆ. ಇದೇ ಸಂದರ್ಭದಲ್ಲಿ ಗುಜರಾತ್‌ನಲ್ಲಿ ಅಮಿತ್ ಶಾ ಅಲ್ಲಿನ ಪಟೇಲರು ಮತ್ತು ಇತರ ಪ್ರಬಲ ಹಿಂದುಳಿದ ವರ್ಗಗಳನ್ನು ಜಾತಿ ರಾಜಕಾರಣಕ್ಕೆ ಬಳಸಿಕೊಂಡಿದ್ದು, ಬಿಜೆಪಿಗೆ ದಾಖಲೆ ಗೆಲುವನ್ನು ತನ್ನದಾಗಿಸಲು ಸಾಧ್ಯವಾಯಿತು.  ಮುಸ್ಲಿಮ್ ಬಾಹುಳ್ಯವಿರುವ ಪ್ರದೇಶದಲ್ಲಿ ಉವೈಸಿಯ ನೇತೃತ್ವದ ಎಐಎಂಐಎಂಯನ್ನು ಕೂಡ ಬಿಜೆಪಿ ಬಳಸಿಕೊಂಡಿದೆ. ಇದೇ ಸಂದರ್ಭದಲ್ಲಿ ಗುಜರಾತ್‌ನಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆಗೆ ಮುನ್ನವೇ ತನ್ನ ಸೋಲನ್ನು ಒಪ್ಪಿಕೊಂಡಿತ್ತು. ಕಾಂಗ್ರೆಸ್‌ನೊಳಗಿದ್ದ ಮೃದು ಹಿಂದುತ್ವವಾದಿ ಮತಗಳು ಈ ಬಾರಿ ಆಪ್‌ನ ಮೇಲೆ ಭರವಸೆಯನ್ನು ತಳೆದುದು ಫಲಿತಾಂಶದಲ್ಲಿ ಎದ್ದು ಕಂಡಿದೆ. ಪರಿಣಾಮವಾಗಿ ಕಾಂಗ್ರೆಸ್ ಮಕಾಡೆ ಮಲಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಮಾತ್ರವಲ್ಲ, ಆಪ್‌ಗೆ ಸಾಲು ಸಾಲಾಗಿ ಕಾಂಗ್ರೆಸ್ ನಾಯಕರು ವಲಸೆ ಹೋಗುವ ಸಾಧ್ಯತೆಗಳಿವೆ.

Similar News