ಮೀಸಲಾತಿಯ ವ್ಯಂಗ್ಯವೋ? ಸಂವಿಧಾನದ ವ್ಯಂಗ್ಯವೋ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಇತ್ತೀಚೆಗೆ ಪಾಟ್ನಾ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರೊಬ್ಬರು ಅಧಿಕಾರಿಯ ಕಳಪೆ ಕಾರ್ಯವೈಖರಿಯನ್ನು ತಮಾಷೆ ಮಾಡುತ್ತಾ ''ನಿಮಗೆ ಮೀಸಲಾತಿಯಲ್ಲಿ ಕೆಲಸ ಸಿಕ್ಕಿದ್ದಾ?'' ಎಂದು ಪ್ರಶ್ನಿಸಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ಆರೋಪಿ ಅಧಿಕಾರಿಯನ್ನು ಅವರು ಈ ರೀತಿಯಲ್ಲಿ ನಿಂದಿಸುತ್ತಾರೆ ಮಾತ್ರವಲ್ಲ, ಆತನ ಕೃತ್ಯಕ್ಕೆ ನೇರವಾಗಿ ಮೀಸಲಾತಿಯನ್ನು ಹೊಣೆ ಮಾಡುತ್ತಾರೆ. ಇಂತಹ ವ್ಯಂಗ್ಯ, ಟೀಕೆ, ಕುಹಕಗಳನ್ನು ಈ ದೇಶದ ಶೋಷಿತ ಸಮುದಾಯ ಹಲವು ದಶಕಗಳಿಂದ ಎದುರಿಸುತ್ತಲೇ, ಮೀಸಲಾತಿಯ ಮೂಲಕ ತಲೆಯೆತ್ತಿ ನಿಲ್ಲುವ ಪ್ರಯತ್ನವನ್ನು ಮಾಡುತ್ತಾ ಬಂದಿದೆ. ಆದರೆ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಬೇಕಾಗಿದ್ದ ಹೈಕೋರ್ಟ್‌ನ ನ್ಯಾಯಾಧೀಶರೊಬ್ಬರು 'ಮೀಸಲಾತಿ'ಯ ಬಗ್ಗೆ ಇಂತಹ ಕುಹಕ ಮಾತುಗಳನ್ನಾಡುತ್ತಾರೆ ಎಂದ ಮೇಲೆ, ಈ ದೇಶದಲ್ಲಿ ಮೀಸಲಾತಿ ಪರಿಣಾಮಕಾರಿಯಾಗಿ ಯಾಕೆ ಅನುಷ್ಠಾನಗೊಂಡಿಲ್ಲ ಎನ್ನುವುದಕ್ಕೆ ಬೇರೆ ಕಾರಣ ಹುಡುಕುವ ಅಗತ್ಯವಿದೆಯೆ?
ಮೀಸಲಾತಿ ಜಾರಿಗೊಂಡ ದಿನದಿಂದ, ಅದನ್ನು ದೇಶದೊಳಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಪ್ರಯತ್ನಗಳಿಗಿಂತ, ಅದನ್ನು ವಿಫಲಗೊಳಿಸುವ ಪ್ರಯತ್ನಗಳೇ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿವೆ. ಅಂದಿನಿಂದ ಇಂದಿನವರೆಗೆ ಮೀಸಲಾತಿಯ ಮೇಲೆ ಹೊರ ಒಳಗಿನಿಂದ ದಾಳಿಗಳು ನಡೆಯುತ್ತಲೇ ಇವೆ. ಶತಶತಮಾನಗಳಿಂದ ಮನು ಮೀಸಲಾತಿಯ ಕಾರಣಗಳಿಂದಾಗಿ ಈ ದೇಶದ ದೊಡ್ಡ ಸಂಖ್ಯೆಯ ಜನರನ್ನು ಮುಖ್ಯವಾಹಿನಿಯಿಂದ ಹೊರಗಿಡಲಾಗಿತ್ತು. ಹಾಗೆ ಹೊರಗಿಟ್ಟ ಜನರನ್ನು ಮೀಸಲಾತಿಯ ಮೂಲಕ ಸಮಾಜದ ಮುಖ್ಯಭಾಗವಾಗಿಸುವುದು ಸಂವಿಧಾನದ ಆಶಯವಾಗಿತ್ತು. ಆದರೆ, ಇದನ್ನು ಸಹಿಸದ ಶಕ್ತಿಗಳು ಮೀಸಲಾತಿಯಿಂದ 'ಪ್ರತಿಭಾವಂತರಿಗೆ ಅನ್ಯಾಯವಾಗುತ್ತದೆ' ಎಂದು ಹುಯಿಲೆಬ್ಬಿಸುತ್ತಾ ಬಂದವು. ಆ ಮೂಲಕ ಮೀಸಲಾತಿಯಿಂದ ಆಯ್ಕೆಯಾಗುವ ಅಭ್ಯರ್ಥಿಗಳು ಪ್ರತಿಭಾ ಹೀನರು ಎನ್ನುವ ಮನಸ್ಥಿತಿಯನ್ನು ಸಮಾಜದಲ್ಲಿ ಹರಿಯ ಬಿಟ್ಟರು. ದೇಶದ ಸಮಸ್ತ ಸಮಸ್ಯೆಗಳಿಗೂ ಮೀಸಲಾತಿಯೇ ಕಾರಣ ಎಂದು ಬಿಂಬಿಸತೊಡಗಿದರು. ಈ ದೇಶದಲ್ಲಿ ಮೀಸಲಾತಿಯನ್ನು ಯಾಕೆ ಜಾರಿಗೊಳಿಸಲಾಯಿತು ಎನ್ನುವುದು ಇವರಿಗೆ ಅರಿವಿಲ್ಲ ಎಂದು ಇದರ ಅರ್ಥವಲ್ಲ. ಶಿಕ್ಷಣ, ಉದ್ಯೋಗ, ಸ್ವಾಭಿಮಾನದ ಬದುಕು ಈ ದೇಶದ ಕೆಲವೇ ಕೆಲವರಿಗಷ್ಟೇ ಸೀಮಿತವಲ್ಲ, ಅದು ಈ ದೇಶದ ಪ್ರತಿಯೊಬ್ಬರ ಹಕ್ಕಾಗಬೇಕು ಎನ್ನುವ ಕಾರಣಕ್ಕಾಗಿ ಮೀಸಲಾತಿಯನ್ನು ಜಾರಿಗೊಳಿಸಲಾಗಿತ್ತು. ಆ ಕಾರಣದಿಂದಲೇ, ಇಂದು ದೇಶದ ಬೇರೆ ಬೇರೆ ಕ್ಷೇತ್ರಗಳಲ್ಲಿ ಎಲ್ಲ ಜಾತಿ, ಧರ್ಮದ ಜನರು ಗುರುತಿಸಿಕೊಳ್ಳುವಂತಾಯಿತು. ಸಾಧನೆಗಳನ್ನು ಮಾಡುವಂತಾಯಿತು.
ಒಂದು ವೇಳೆ ಮೀಸಲಾತಿ ಜಾರಿಗೆ ಬರದೇ ಇದ್ದಿದ್ದರೆ, ಇಂದು ಶೇ. 2ರಷ್ಟಿರುವ ಸಮುದಾಯದ ಜನರೇ ದೇಶದ ಎಲ್ಲ ಪ್ರಮುಖ ಹುದ್ದೆಗಳನ್ನು ಅಲಂಕರಿಸುತ್ತಿದ್ದರು. ಇಡೀ ದೇಶ ಈ ಶೇ. 2ರಷ್ಟು ಸಮುದಾಯವನ್ನು ಅವಲಂಬಿಸಬೇಕಾಗಿತ್ತು. ಇಂದು ಮೀಸಲಾತಿಯ ಕಾರಣದಿಂದ ಬಹುಸಂಖ್ಯಾತ ಸಮುದಾಯ ದೇಶ ಕಟ್ಟುವಲ್ಲಿ ತನ್ನ ಕೊಡುಗೆಗಳನ್ನು ನೀಡಲು ಸಾಧ್ಯವಾಗಿದೆ. ತಳಸ್ತರದ ಸಮುದಾಯವನ್ನು ಮೇಲೆತ್ತುವ ಮೂಲಕ ಈ ದೇಶ ಅಭಿವೃದ್ಧಿಯ ಕಡೆಗೆ ಮುನ್ನಡೆಯಿತು. ಆದರೆ ತಳಸಮುದಾಯ ಶಿಕ್ಷಣ ಪಡೆದು ತಮ್ಮೆದುರಿಗೆ ತಲೆಯೆತ್ತಿ ನಿಲ್ಲುವುದನ್ನು ಇಂದಿಗೂ ಈ ದೇಶದ ಮೇಲ್‌ಜಾತಿಯ ಕೆಲವು ಶಕ್ತಿಗಳು ಸಹಿಸುತ್ತಿಲ್ಲ. ಆ ಕಾರಣದಿಂದಲೇ ಮೀಸಲಾತಿಯ ಮೇಲೆ ದಾಳಿಗಳು ನಡೆಯುತ್ತಿವ.ಎ ಮೀಸಲಾತಿಯ ದೆಸೆಯಿಂದಾಗಿ ಶೋಷಿತ ಸಮುದಾಯ ಮುಖ್ಯವಾಹಿನಿಗೆ ಬಂದು ಭಾರತವನ್ನು ಹೇಗೆ ಅಭಿವೃದ್ಧಿಯ ಕಡೆಗೆ ಮುನ್ನಡೆಸಿತು ಎನ್ನುವುದನ್ನು ಮರೆ ಮಾಚಿ, ಈ ದೇಶದ ಪ್ರತಿಭಾವಂತರ ಅವಕಾಶಗಳನ್ನು ಮೀಸಲಾತಿಯ ಮೂಲಕ ದಲಿತರು , ದುರ್ಬಲ ವರ್ಗದ ಜನರು ಕಿತ್ತುಕೊಂಡರು ಎನ್ನುವ ಸುಳ್ಳನ್ನು ಹರಡಲಾಗುತ್ತಿದೆ. ಇವುಗಳ ಜೊತೆ ಜೊತೆಗೇ, ಇನ್ನೊಂದೆಡೆ ಸಾಮಾಜಿಕ, ಆರ್ಥಿಕ, ರಾಜಕೀಯದಲ್ಲಿ ಹೆಚ್ಚಿನ ಪ್ರಾತಿನಿಧ್ಯವನ್ನು ಪಡೆದಿರುವ ಮೇಲ್ ಜಾತಿಗಳು ಬೀದಿಗಿಳಿದು ಮೀಸಲಾತಿಯಲ್ಲಿ ಪಾಲು ಕೇಳುತ್ತಿವೆ. ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಸಂಘಟಿತರಾಗಿರುವ, ಸಬಲರಾಗಿರುವ ಇವರ ಧ್ವನಿಗೆ ಸರಕಾರ ಕಿವಿಯಾಗುತ್ತಿದೆ.
ಶೋಷಿತ ಸಮುದಾಯದ ಧ್ವನಿ ದಿನದಿಂದ ದಿನಕ್ಕೆ ಉಡುಗುತ್ತಿದೆ. ಪರಿಣಾಮವಾಗಿ, ಮೇಲ್‌ಜಾತಿಯ ಬಡವರಿಗೆ ಶೇ. 10 ಮೀಸಲಾತಿ ಇದೀಗ ಜಾರಿಗೆ ಬಂದಿದೆ. ಒಂದೆಡೆ ಮೀಸಲಾತಿಯಿಂದ ಪ್ರತಿಭೆಗಳಿಗೆ ಅನ್ಯಾಯವಾಗುತ್ತಿದೆ ಎನ್ನುವ ಹುಯಿಲನ್ನು ಎಬ್ಬಿಸುತ್ತಲೇ, ಇನ್ನೊಂದೆಡೆ ತಮಗೂ ಮೀಸಲಾತಿ ಬೇಕು ಎಂದು ಮೇಲ್‌ಜಾತಿಯ ಜನರು ಕೇಳುತ್ತಿರುವುದೇ ವಿರೋಧಾಭಾಸವಾಗಿದೆ. ಅಕ್ರಮ ದಾರಿಯ ಮೂಲಕ ಮೀಸಲಾತಿಯ ಸೌಲಭ್ಯಗಳನ್ನು ತನ್ನದಾಗಿಸಿಕೊಳ್ಳುತ್ತಲೇ ದಲಿತರು ಮತ್ತು ಹಿಂದುಳಿದ ವರ್ಗದ ಜನರ ಮೀಸಲಾತಿಯನ್ನು ಇವರು ಅಣಕಿಸುತ್ತಿದ್ದಾರೆ. ಮೀಸಲಾತಿ ಸರಿಯಾಗಿ ಅನುಷ್ಠಾನಗೊಳ್ಳದೇ ಇರುವುದರಿಂದ, ದಲಿತರು, ದುರ್ಬಲ ಸಮುದಾಯದ ಜನರು ಇನ್ನೂ ದುರ್ಬಲರಾಗಿಯೇ ಬದುಕುತ್ತಿರುವುದು ಇಂದಿನ ಚರ್ಚೆಯ ವಿಷಯವಾಗಬೇಕಾಗಿತ್ತು. ಆದರೆ 'ದಲಿತರು ಮೀಸಲಾತಿಯಿಂದ ಕೊಬ್ಬಿದ್ದಾರೆ' 'ಅನರ್ಹರು ಮೀಸಲಾತಿಯಿಂದ ಸ್ಥಾನಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ' ಎಂಬಿತ್ಯಾದಿ ಸುಳ್ಳುಗಳನ್ನು ಹರಡಿ ಮೀಸಲಾತಿಯನ್ನು ದುರ್ಬಲಗೊಳಿಸುವ ಪ್ರಯತ್ನ ಇಂದು ನಡೆಯುತ್ತಿದೆ.
ಪಾಟ್ನಾ ಹೈಕೋರ್ಟ್‌ನ ನ್ಯಾಯಾಧೀಶರ ಮಾತುಗಳು ಇಂತಹದೇ ಹಿನ್ನೆಲೆಯಿಂದ ಹೊರ ಬಂದಿರುವುದಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ 'ಪೇಮೆಂಟ್ ಸೀಟ್' ಎನ್ನುವುದಿದೆ. ದೇಶದ ಶ್ರೀಮಂತ ವರ್ಗ, ತಾವು ಅರ್ಹರಲ್ಲದೇ ಇದ್ದರೂ ಹಣದ ಮೂಲಕ ಸೀಟ್‌ಗಳನ್ನು ಕೊಂಡುಕೊಳ್ಳುತ್ತಾ ಬರುತ್ತಿದೆ. ಆದರೆ ಇದರಿಂದ 'ಪ್ರತಿಭೆಗಳಿಗೆ ಅನ್ಯಾಯವಾಗುತ್ತದೆ' ಎಂದು ಯಾರೂ ಹುಯಿಲೆಬ್ಬಿಸುತ್ತಿಲ್ಲ. ಪಾಟ್ನಾದ ಹೈಕೋರ್ಟ್ ನ್ಯಾಯಾಧೀಶರು ಅಧಿಕಾರಿಯ ಬಳಿ 'ನೀವು ಪೇಮೆಂಟ್ ಸೀಟ್‌ನ ಮೂಲಕ ಶಿಕ್ಷಣವನ್ನು ಪಡೆದಿರಾ?' ಎಂದು ಕೇಳುವುದಕ್ಕೆ ಮುಂದಾಗುವುದಿಲ್ಲ. ಮೀಸಲಾತಿಯಿಂದ ಭ್ರಷ್ಟರು, ಅನರ್ಹರು ಸೃಷ್ಟಿಯಾಗುತ್ತಾರೆ ಎನ್ನುವುದನ್ನು ತಮ್ಮ ತೀರ್ಪುಗಳಲ್ಲಿ, ನಡೆವಳಿಕೆಗಳಲ್ಲಿ ವ್ಯಕ್ತಪಡಿಸುವ ಇದೇ ನ್ಯಾಯಧೀಶರು ಮಗದೊಂದೆಡೆ ಮೇಲ್‌ಜಾತಿಯ ಬಡವರಿಗೆ ಮೀಸಲಾತಿಯನ್ನು ಘೋಷಿಸುತ್ತಾರೆ. ಈ ಮೀಸಲಾತಿ, ಕೆಳಜಾತಿಯಲ್ಲಿರುವ ಬಡವರಿಗೆ, ಪ್ರತಿಭೆಗಳಿಗೆ ಅನ್ಯಾಯ ಮಾಡುವುದಿಲ್ಲವೆ? ಎನ್ನುವ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ.
ಮೀಸಲಾತಿಯ ಕುರಿತಂತೆ ನ್ಯಾಯಾಧೀಶರೇ ಇಂತಹ ಮನಸ್ಥಿತಿಯನ್ನು ಹೊಂದಿದ ಮೇಲೆ, ಈ ದೇಶದಲ್ಲಿ ಜಾತಿ ಕಾರಣದಿಂದ ಇಂದಿಗೂ ಅಸಮಾನತೆಯನ್ನು ಅನುಭವಿಸುತ್ತಿರುವ ಕೆಳಜಾತಿಯ ಜನರು ನ್ಯಾಯವನ್ನು ಪಡೆಯುವುದು ಸಾಧ್ಯವೇ? ಎನ್ನುವ ಪ್ರಶ್ನೆಯೊಂದು ಎದ್ದಿದೆ. ಮೀಸಲಾತಿಯಿಂದ ದಲಿತನೋ, ಶೂದ್ರನೋ ಕೆಲಸ ಪಡೆಯುವುದು ಅವಮಾನದ ವಿಷಯವಾದರೆ, ಮೇಲ್ವರ್ಣೀಯನೊಬ್ಬ ತನ್ನ ಜಾತಿಯ ಕಾರಣಕ್ಕಾಗಿ ತಲೆತಲಾಂತರಗಳಿಂದ ಪಡೆದುಕೊಂಡು ಬಂದ ಸವಲತ್ತುಗಳ ಬಗ್ಗೆ ಇವರೇನು ಹೇಳುತ್ತಾರೆ? ಅದರ ಕುರಿತಂತೆ ಇವರಿಗೇಕೆ ನಾಚಿಕೆ, ಅವಮಾನವಾಗುವುದಿಲ್ಲ? ಜಾತಿಯ ಹಿರಿಮೆಯನ್ನು ಮುಂದಿಟ್ಟುಕೊಂಡು ಬಹುಸಂಖ್ಯಾತ ಸಮುದಾಯವನ್ನು ಶೋಷಿಸುತ್ತಾ ಬಂದಿರುವುದು ಇವರಿಗೆ ಹೆಮ್ಮೆಯ ವಿಷಯವೇ? ಶಿಕ್ಷಣ, ಆರೋಗ್ಯ, ರಾಜಕೀಯ ಕ್ಷೇತ್ರಗಳಲ್ಲಿ ಎಲ್ಲ ಸಮುದಾಯಗಳು ಸಮಾನ ಪಾಲನ್ನು ಪಡೆಯದೇ ಇದ್ದರೆ ಈ ದೇಶ ಅಭಿವೃದ್ಧಿಯ ಕಡೆಗೆ ಮುನ್ನಡೆಯುವುದು ಅಸಾಧ್ಯ ಎನ್ನುವ ಸತ್ಯವನ್ನು ಇವರಿಗೆ ಯಾರು ಮನವರಿಕೆ ಮಾಡಿ ಕೊಡಬೇಕು? ಪಾಟ್ನಾ ಹೈಕೋರ್ಟ್‌ನಲ್ಲಿ ಹೈಕೋರ್ಟ್ ನ್ಯಾಯಾಧೀಶರು ಅವಮಾನಿಸಿರುವುದು, ವ್ಯಂಗ್ಯವಾಡಿರುವುದು ಮೀಸಲಾತಿಯನ್ನಲ್ಲ, ಈ ದೇಶದ ಸಂವಿಧಾನವನ್ನು.