ಕೆನಡಾದಲ್ಲಿ ಸಿಕ್ಖ್ ಮಹಿಳೆ ಹತ್ಯೆ: ಪತಿಯ ಬಂಧನ

Update: 2022-12-12 03:11 GMT

ಸರ್ರೆ: ಕೆನಡಾದ ಸರ್ರೆಯಲ್ಲಿ ಮನೆಯಲ್ಲಿದ್ದ ಸಿಕ್ಖ್ ಮಹಿಳೆಯೊಬ್ಬರನ್ನು ಹತ್ಯೆ ಮಾಡಲಾಗಿದ್ದು, ಈ ಸಂಬಂಧ ಪತಿಯನ್ನು ಬಂಧಿಸಲಾಗಿದೆ ಎಂದು ತನಿಖಾಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಸಿಬಿಸಿ ನ್ಯೂಸ್ ವರದಿ ಮಾಡಿದೆ.

ಮೃತ ಮಹಿಳೆಯನ್ನು 40 ವರ್ಷ ವಯಸ್ಸಿನ ಹರ್‌ಪ್ರೀತ್‌ ಕೌರ್ ಎಂದು ಗುರುತಿಸಲಾಗಿದ್ದು, ಬಂಧಿತ ಪತಿ ಕೂಡಾ ಇದೇ ವಯಸ್ಸಿನವರು. ಹರ್‌ಪ್ರೀತ್‌ ಕೌರ್ ಅವರ ಸಾವಿನ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಜನತೆ ಇದನ್ನು ಹಂಚಿಕೊಂಡು ತನಿಖೆಗೆ ಸಹಕರಿಸಬೇಕು ಎಂದು ಇಂಟಗ್ರೇಟೆಡ್ ಹೊಮಿಸೈಡ್ ಇನ್‍ವೆಸ್ಟಿಗೇಶನ್ ತಂಡದ ಸಾರ್ಜೆಂಟ್ ತಿಮೋತಿ ಪಿರೋಟ್ಟಿ ಮನವಿ ಮಾಡಿದ್ದಾರೆ.

ಪ್ರಕರಣದ ಬಗ್ಗೆ ತನಿಖೆ ನಿರಂತರವಾಗಿ ಮುಂದುವರಿದಿದೆ. ಇಂಥ ಘಟನೆಗಳು ಕೇವಲ ಸಂತ್ರಸ್ತೆಯ ಕುಟುಂಬ ಮತ್ತು ಸ್ನೇಹಿತರ ಮೇಲೆ ಮಾತ್ರವಲ್ಲದೇ ಇಡೀ ಸಮುದಾಯದ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತವೆ. ಸರ್ರೆಯ ಆರ್‍ಸಿಎಂಪಿಯ ಸಂತ್ರಸ್ತರ ಸೇವಾ ವಿಭಾಗ ಕೂಡಾ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ನೆರವಿನ ಅಗತ್ಯವಿರುವ ಎಲ್ಲರಿಗೂ ಸೇವೆ ಲಭ್ಯ ಎಂದು ಸ್ಪಷ್ಟಪಡಿಸಿದ್ದಾರೆ.

ಸರ್ರೆ ನಗರ ಬ್ರಿಟಿಷ್ ಕೊಲಂಬಿಯಾದ ನಗರವಾಗಿದ್ದು, ಸುಮಾರು 6 ಲಕ್ಷ ಜನಸಂಖ್ಯೆ ಹೊಂದಿದೆ. ಇದಕ್ಕೂ ಮುನ್ನ ರಾಯನ್ ಕೆನಡಿಯನ್ ಮೌಂಟೆಡ್ ಪೊಲೀಸರಿಗೆ ನ್ಯೂಟೌನ್ ಮನೆಯಿಂದ ರಾತ್ರಿ 9.30ರ ಸುಮಾರಿಗೆ ಕರೆ ಬಂದಿದ್ದು, ಇರಿತದ ಘಟನೆ ಬಗ್ಗೆ ದೂರು ನೀಡಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೆನಡಾದ ಮಿಸ್ಸಿಸುಗಾ ನಗರದಲ್ಲಿ ಇತ್ತೀಚೆಗಷ್ಟೇ 21 ವರ್ಷದ ಸಿಕ್ಖ್ ಮಹಿಳೆಯ ಹತ್ಯೆಯಾಗಿತ್ತು. ಈ ಬಗ್ಗೆ ndtv.com ವರದಿ ಮಾಡಿದೆ. 

Similar News