ರಸ್ತೆ ಗುಂಡಿಗಳ ಸಾವುಗಳಿಗೆ ಕೊನೆಯೆಂದು?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಜ್ಯದಲ್ಲಿ ಇತ್ತೀಚೆಗೆ ರಸ್ತೆ ಗುಂಡಿಗೆ ಬಿದ್ದು ಅಸು ನೀಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ರಾಜಧಾನಿ ಬೆಂಗಳೂರು ಮಾತ್ರವಲ್ಲ ದಾವಣಗೆರೆ, ಹುಬ್ಬಳ್ಳಿ ಮುಂತಾದ ನಗರಗಳಲ್ಲೂ ಸಾವುಗಳು ಸಂಭವಿಸುತ್ತಲೇ ಇವೆ. ಈ ವರ್ಷವೂ ಹಲವಾರು ಮಂದಿ ರಸ್ತೆ ಗುಂಡಿಯಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗೆ ಪ್ರಾಣ ಕಳೆದುಕೊಂಡವರ ಸಂತ್ರಸ್ತರಿಗೆ ಸರಕಾರ ಇಲ್ಲವೇ ಸ್ಥಳೀಯ ಸಂಸ್ಥೆಗಳು ಪರಿಹಾರ ನೀಡಿಲ್ಲ. ಇದಕ್ಕೆ ಪೊಲೀಸರು ದಾಖಲಿಸುವ ಮೊದಲ ಮಾಹಿತಿ ವರದಿಯಲ್ಲಿ ‘‘ಅಪಘಾತಕ್ಕೆ ಚಾಲಕರ ಅಜಾಗರೂಕತೆ ಕಾರಣ’’ ಎಂದು ನಮೂದಾಗಿರುವದರಿಂದ ಅಸು ನೀಗಿದವರ ಕುಟುಂಬಗಳಿಗೆ ಪರಿಹಾರ ಕೂಡ ಲಭ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಹುಡುಕಲು ಸಂಶೋಧನೆ ನಡೆಸಬೇಕಾಗಿಲ್ಲ, ಈ ರಸ್ತೆ ಗುಂಡಿಗಳಿಗೆ ಕಾರಣ ಗುಣಮಟ್ಟವಿಲ್ಲದ ಕಳಪೆ ಕಾಮಗಾರಿಯಲ್ಲದೆ ಬೇರೇನೂ ಅಲ್ಲ. ಈ ಕಳಪೆ ಕಾಮಗಾರಿಗೆ ಗುತ್ತಿಗೆದಾರರು ಮತ್ತು ಭ್ರಷ್ಟ ಇಂಜಿನಿಯರುಗಳು ಕಾರಣ. ಈ ಪಾತಕಿಗಳ ಮೇಲೆ ಯಾವುದೇ ಕ್ರಮವನ್ನು ಸರಕಾರ ತೆಗೆದುಕೊಳ್ಳದಿರುವುದರಿಂದ ಏನು ಮಾಡಿದರೂ ದಕ್ಕಿಸಿಕೊಳ್ಳಬಹುದು ಎಂದು ಇಂಥ ಅವ್ಯವಹಾರವನ್ನು ಇವರು ಮುಂದುವರಿಸುತ್ತಾರೆ.
ರಸ್ತೆ ಗುಂಡಿಯ ಸಾವುಗಳಿಗೆ ಕಾರಣ ವಾಹನ ಚಾಲಕರಲ್ಲ, ಅವರಿಂದ ನಿರ್ಲಕ್ಷ ವಾಹನ ಚಾಲನೆ ಆಗಿಲ್ಲವೆಂದಲ್ಲ. ಅಂಥ ಪ್ರಕರಣಗಳು ತುಂಬಾ ಕಡಿಮೆ. ವಾಸ್ತವವಾಗಿ ಈ ದುರಂತಕ್ಕೆ ಕಾರಣ ಸರಿಯಾಗಿ ಕಾಮಗಾರಿ ಮಾಡದ ನಿರ್ವಹಣೆ ಇಲ್ಲದ ರಸ್ತೆಗಳು. ಹಾಗಾಗಿ ಹೈಕೋರ್ಟ್ ನಿರ್ದೇಶನದ ಪ್ರಕಾರ ರಸ್ತೆ ನಿರ್ವಹಣೆಯ ಹೊಣೆ ಹೊತ್ತವರೇ ಸಂತ್ರಸ್ತರಿಗೆ ಪರಿಹಾರ ನೀಡಬೇಕಾಗುತ್ತದೆ. ರಸ್ತೆ ನಿರ್ವಹಣೆಯ ಜವಾಬ್ದಾರಿ ಹೊತ್ತ ಆಯಾ ನಗರದ ನಗರ ಪಾಲಿಕೆ ಹಾಗೂ ಸಂಬಂಧಿಸಿದ ಇಲಾಖೆಯು ಹೈಕೋರ್ಟ್ ನಿರ್ದೇಶನವನ್ನು ಜಾರಿಗೆ ತಂದ ಉದಾಹರಣೆಗಳಿಲ್ಲ.
ರಸ್ತೆ ನಿರ್ಮಾಣದ ಗುಣಮಟ್ಟದ ಬಗ್ಗೆ ಇಂಡಿಯನ್ ರೋಡ್ ಕಾಂಗ್ರೆಸ್ ಕೆಲವು ನಿಯಮಾವಳಿಗಳನ್ನು ರೂಪಿಸಿದೆ. ಆದರೆ ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ನಗರದಲ್ಲಿ ಗುಣಮಟ್ಟದ ರಸ್ತೆಗಳು ನಿರ್ಮಾಣವಾಗುವುದಿಲ್ಲ. ನಿಯಮಾವಳಿಗಳ ಪ್ರಕಾರ ನಿರ್ಮಾಣ ಮಾಡಲ್ಪಟ್ಟ ಒಂದು ರಸ್ತೆ ಕನಿಷ್ಠ ಹತ್ತು ವರ್ಷವಾದರೂ ಬಾಳಿಕೆ ಬರುವಂತೆ ಇರಬೇಕು. ಆದರೆ ಒಂದು ರಸ್ತೆ ನಿರ್ಮಾಣವಾದ ನಂತರ ಮಳೆ ಬಂದರೆ ಸಾಕು ರಸ್ತೆಗಳಲ್ಲಿ ಗುಂಡಿಗಳು ಬೀಳುತ್ತವೆ. ಒಂದು ರಸ್ತೆಯ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತದೆ. ಟೆಂಡರ್ ನೀಡುವಾಗಲೇ ನಿಯಮಗಳನ್ನು ದಾಖಲಿಸಲಾಗುತ್ತದೆ. ಆದರೆ ಈ ನಿಯಮಗಳನ್ನು ಕಸದ ಬುಟ್ಟಿಗೆ ಹಾಕುವ ಗುತ್ತಿಗೆದಾರರು, ಇಂಜಿನಿಯರ್‌ಗಳನ್ನು ಬುಟ್ಟಿಗೆ ಹಾಕಿಕೊಂಡು ಕಳಪೆ ಕಾಮಗಾರಿ ಮಾಡುತ್ತಾ ಬಂದಿದ್ದಾರೆ. ಇವರ ಮೇಲೆ ಸರಕಾರ ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ. ಯಾಕೆ ಕ್ರಮ ಕೈಗೊಳ್ಳುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ವಿಶೇಷವೆಂದರೆ ನಮ್ಮ ರಾಜ್ಯದಲ್ಲಿ ರಸ್ತೆ ನಿರ್ಮಾಣವಾದ ಒಂದೇ ವರ್ಷದಲ್ಲಿ ಗುಂಡಿಗಳು ಕಾಣಿಸಿಕೊಳ್ಳುತ್ತವೆ ಎಂಬುದು ಸ್ಥಳೀಯಾಡಳಿತಗಳಿಗೆ ಮೊದಲೇ ತಿಳಿದಿರುವಂತೆ ಅವುಗಳು ಪ್ರತಿವರ್ಷ ತಮ್ಮ ಮುಂಗಡಪತ್ರದಲ್ಲಿ ಹತ್ತಾರು ಕೋಟಿ ರೂಪಾಯಿಗಳನ್ನು ರಸ್ತೆ ಗುಂಡಿಗಳ ದುರಸ್ತಿಗೆ ಮೀಸಲಾಗಿಡುತ್ತವೆ. ರಸ್ತೆ ಗುಂಡಿಗಳನ್ನು ಮುಚ್ಚಲು ಬೆಂಗಳೂರು ಮಹಾನಗರ ಪಾಲಿಕೆ 33 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಿದೆ.
ರಸ್ತೆ ಗುಂಡಿ ಮುಚ್ಚಲು ಬೆಂಗಳೂರು ಮಾತ್ರವಲ್ಲ ರಾಜ್ಯದ ಕೆಲವು ನಗರ ಪಾಲಿಕೆಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡಿವೆ. ಮೈಸೂರು ಮಹಾನಗರ ಪಾಲಿಕೆ 5.80 ಕೋಟಿ ರೂಪಾಯಿ, ಮಂಗಳೂರು ಮಹಾನಗರ ಪಾಲಿಕೆ 5.25 ಕೋಟಿ ರೂಪಾಯಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ 3.21 ಕೋಟಿ ರೂಪಾಯಿ ಹಾಗೂ ಯಾದಗಿರಿ ನಗರ ಸಭೆ 6 ಕೋಟಿ ರೂಪಾಯಿಗಳನ್ನು ರಸ್ತೆ ಗುಂಡಿ ಮುಚ್ಚಲು ವ್ಯಯಿಸಿವೆ. ಆದರೆ ಗುಂಡಿ ಅಪಘಾತದಲ್ಲಿ ಸಾವಿಗೀಡಾದವರಿಗೆ ಸೂಕ್ತ ಪರಿಹಾರ ನೀಡಬೇಕೆಂಬ ಮಾನವೀಯತೆ ಕೂಡ ಇವರಿಗೆ ಇಲ್ಲವಾಗಿದೆ. ಗುಂಡಿ ಮುಚ್ಚಿ ಕೈ ತೊಳೆದುಕೊಳ್ಳುವ ಸ್ಥಳೀಯಾಡಳಿತಗಳು ಜನರ ತೆರಿಗೆಯ ಹಣವನ್ನು ಈ ರೀತಿ ಕಳಪೆ ಕಾಮಗಾರಿಗಾಗಿ ಮತ್ತು ಗುಂಡಿ ಮುಚ್ಚಲು ವ್ಯಯಿಸುತ್ತಿರುವುದು ಜನದ್ರೋಹವಲ್ಲದೆ ಬೇರೇನೂ ಅಲ್ಲ.
ಈ ಗುಂಡಿ ಅಪಘಾತದಲ್ಲಿ ಯಾರ ತಪ್ಪಿದೆ? ಯಾರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕು ಎಂದು ಹುಡುಕುತ್ತಾ ಹೋದರೆ ಬ್ರಹ್ಮಾಂಡ ಭ್ರಷ್ಟಾಚಾರ ಗೋಚರಿಸುತ್ತದೆ. ನಿಯಮಾವಳಿಗಳ ಪ್ರಕಾರ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಬೇಕಾದರೆ ಪರ್ಸೆಂಟೇಜ್ ಎಂಬ ಹಗಲು ದರೋಡೆ ನಿಲ್ಲಬೇಕು. ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುತ್ತಾರೆಂದರೆ ಅದಕ್ಕೆ ಕಾರಣ ಅವರಿಂದ ಒಂದು ಬಿಲ್‌ಗೆ ಸಹಿ ಹಾಕಲು ಇಷ್ಟು ಪರ್ಸೆಂಟೇಜ್ ಕೇಳುತ್ತಾರಲ್ಲ, ಅವರು ಕಾರಣ. ಒಂದು ಬಿಲ್ ಪಾಸಾಗಲು ನಾನಾ ಕಡೆ ಲಂಚ ನೀಡುವ ಗುತ್ತಿಗೆದಾರ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ಹೇಗೆ ಸಾಧ್ಯ? ಹಾಗಾಗಿಯೇ ಕಪ್ಪ ಕಾಣಿಕೆ ಸಲ್ಲಿಸದ ತಮ್ಮ ಕಾಮಗಾರಿಯ ಬಿಲ್ಲುಗಳು ಪಾಸಾಗುತ್ತಿಲ್ಲ ಎಂಬ ಆರೋಪವಿದೆ. ಕೋಟ್ಯಂತರ ರೂಪಾಯಿ ಬಿಲ್ಲುಗಳನ್ನು ತಡೆ ಹಿಡಿಯಲಾಗಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು. ಆದರೆ ಪ್ರಧಾನಿ ಕಚೇರಿಯಿಂದ ಈವರೆಗೆ ಉತ್ತರ ಬಂದಿಲ್ಲ. ಇದು ಕಾಂಗ್ರೆಸ್‌ಗಿಂತ ಭಿನ್ನ ಸಂಸ್ಕೃತಿ ತಮ್ಮದು ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುಕೊಳ್ಳುವವರ ಆಡಳಿತದ ವೈಖರಿಯೇ?
ಕಳಪೆ ಕಾಮಗಾರಿಯ ಹಗರಣದಲ್ಲಿ ಗುತ್ತಿಗೆದಾರರು ಮತ್ತು ಎಂಜಿನಿಯರುಗಳು ಮಾತ್ರವಲ್ಲ, ಜನ ಪ್ರತಿನಿಧಿಗಳೆಂದು ಕರೆದುಕೊಳ್ಳುವವರೂ ಶಾಮೀಲಾಗಿದ್ದಾರೆ.ಮಹಾನಗರ ಪಾಲಿಕೆಗಳು ಹಾಗೂ ನಗರ ಪಾಲಿಕೆಗಳ ಚುನಾವಣೆಯಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡುವವರು, ಜನ ಸೇವೆಗೆಂದು ಚುನಾವಣೆಗೆ ಸ್ಪರ್ಧಿಸುವುದು ದೂರದ ಮಾತು. ಚುನಾವಣೆಯಲ್ಲಿ ಜಯಶಾಲಿಯಾದ ನಂತರ ಖರ್ಚು ಮಾಡಿದ ಹಣವನ್ನು ಮಾತ್ರವಲ್ಲ ಮುಂದಿನ ಐದಾರು ತಲೆಮಾರುಗಳಿಗಾಗುವಷ್ಟು ಹಣ ಮಾಡಿಕೊಳ್ಳುತ್ತಾರೆ. ಹಾಗಾಗಿಯೇ ಈಗ ನಗರ ಪಾಲಿಕೆ ಹಾಗೂ ಪಂಚಾಯತ್ ಅಧ್ಯಕ್ಷರ ಚುನಾವಣೆಗಳ ಸಂದರ್ಭಗಳಲ್ಲೂ ರೆಸಾರ್ಟ್ ರಾಜಕೀಯ ವ್ಯಾಪಕವಾಗಿ ನಡೆಯುತ್ತಿದೆ.
ನಮ್ಮ ದೇಶಕ್ಕಿಂತ ಹೆಚ್ಚು ಮಳೆಯಾಗುವ ಶ್ರೀಲಂಕಾ, ಥಾಯ್ಲೆಂಡ್ ಮುಂತಾದ ದೇಶಗಳಲ್ಲಿ ರಸ್ತೆಗಳು ಹಾಳಾಗದಿರುವುದಕ್ಕೆ ಕಾರಣ ರಸ್ತೆಗಳ ಗುಣಮಟ್ಟ. ಕಳಪೆ ಕಾಮಗಾರಿಗೆ ಕಾರಣರಾದವರಿಗೆ ಅಲ್ಲಿ ಉಗ್ರ ದಂಡನೆ ಕಾದಿದೆ. ನಮ್ಮ ದೇಶದಲ್ಲಿ ಎಂಥ ಹಗರಣವನ್ನಾದರೂ ಮಾಡಿ ದಕ್ಕಿಸಿಕೊಳ್ಳುತ್ತೇವೆ ಎಂಬ ಭಂಡ ಧೈರ್ಯ ಈ ಕಳಪೆ ಕಾಮಗಾರಿಗಳಿಗೆ ಮುಖ್ಯ ಕಾರಣ. ಒಮ್ಮೆ ರಸ್ತೆ ನಿರ್ಮಾಣವಾದ ನಂತರ ಮೂರನೇ ಸಂಸ್ಥೆಯಿಂದ ಅದರ ಗುಣಮಟ್ಟವನ್ನು ಪರೀಕ್ಷಿಸುವ ವ್ಯವಸ್ಥೆಯೂ ನಮ್ಮಲ್ಲಿ ಇಲ್ಲ. ಈ ರಸ್ತೆ ಗುಂಡಿಯ ಸಾವುಗಳನ್ನು ತಡೆಯಬೇಕೆಂದರೆ ಗುಣಮಟ್ಟದ ರಸ್ತೆಗಳು ನಿರ್ಮಾಣವಾಗಬೇಕು. ಕಳಪೆ ಕಾಮಗಾರಿ ಕಂಡು ಬಂದರೆ ಗುತ್ತಿಗೆದಾರರು ಮತ್ತು ಅದರ ಮೇಲ್ವಿಚಾರಣೆ ವಹಿಸಿದ ಇಂಜಿನಿಯರುಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ಬರಬೇಕು. ಇಂತಹ ಹಗರಣದಲ್ಲಿ ಜನಪ್ರತಿನಿಧಿಗಳು ಶಾಮೀಲಾಗಿದ್ದರೆ ಅವರ ಮೇಲೂ ಪ್ರಕರಣ ದಾಖಲಿಸಬೇಕು. ಆಗ ಮಾತ್ರ ರಸ್ತೆ ಗುಣಮಟ್ಟ ಸುಧಾರಿಸಿ ಅನಾಹುತಗಳು ಕಡಿಮೆಯಾಗಬಹುದು.