ಜಾರಿದ ನಾಲಗೆಗಾಗಿ ತೆರಬೇಕಾದ ಬೆಲೆ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’ ಎನ್ನುವ ಗಾದೆಯೇ ಇದೆ. ‘ಸಂವಿಧಾನವನ್ನು ಉಳಿಸಬೇಕಾದರೆ ಮೋದಿಯನ್ನು ಸಾಯಿಸಿ’ ಎಂಬ ಅರ್ಥ ಬರುವ ಹೇಳಿಕೆಯನ್ನು ನೀಡುವ ಮೂಲಕ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕರೊಬ್ಬರು ಸುದ್ದಿಯಲ್ಲಿದ್ದಾರೆ. ಮಾಜಿ ಸಚಿವರೂ ಆಗಿರುವ ಕಾಂಗ್ರೆಸ್ ಮುಖಂಡ ರಾಜಾ ಪಟೇರಿಯಾ ಅವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ ಎಂದು ಪಟೇರಿಯಾ ಸ್ಪಷ್ಟೀಕರಣವನ್ನು ನೀಡಿದ್ದಾರೆ. ‘‘ಮೋದಿ ಜನರನ್ನು ಧರ್ಮ, ಜಾತಿ ಮತ್ತು ಭಾಷೆಯ ಆಧಾರದಲ್ಲಿ ವಿಭಜಿಸುತ್ತಿದ್ದಾರೆ. ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ಭವಿಷ್ಯ ಅಪಾಯದಲ್ಲಿದೆ. ನೀವು ಸಂವಿಧಾನವನ್ನು ಉಳಿಸಲು ಬಯಸುವಿರಾದರೆ ಮೋದಿಯನ್ನು ಇಲ್ಲವಾಗಿಸಬೇಕು ಅಂದರೆ ಸೋಲಿಸಬೇಕು’’ ಎಂದು ಹೇಳಿದ ವೀಡಿಯೊ ಒಂದು ವೈರಲ್ ಆಗಿದೆ. ಈ ವೀಡಿಯೊವನ್ನು ಹಂಚಿಕೊಂಡ ಹಲವು ಬಿಜೆಪಿ ನಾಯಕರು ಪಟೇರಿಯಾ ಅವರನ್ನು ಬಂಧಿಸುವಂತೆ ಸರಕಾರವನ್ನು ಒತ್ತಾಯಿಸಿದ್ದರು.
ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಪಟೇರಿಯಾ, ‘‘ನಾನು ಪ್ರಧಾನಿಯನ್ನು ಕೊಲ್ಲುವ ಅರ್ಥದಲ್ಲಿ ಅದನ್ನು ಹೇಳಿಲ್ಲ. ಚುನಾವಣೆಯಲ್ಲಿ ಅವರನ್ನು ಸೋಲಿಸಿ ಎನ್ನುವುದು ನನ್ನ ಮಾತಿನ ಅರ್ಥವಾಗಿತ್ತು. ಗಾಂಧೀಜಿಯವರನ್ನು ಕೊಂದ ನಾಥೂರಾಮ್ ಗೋಡ್ಸೆಯ ಸಿದ್ಧಾಂತವನ್ನು ಬೆಂಬಲಿಸುವ ಸರಕಾರವನ್ನು ಸೋಲಿಸುವಂತೆ ನೀಡಿದ ಕರೆ ಅದಾಗಿತ್ತು’’ ಎಂದಿದ್ದಾರೆ. ಅದೇನೇ ಇರಲಿ. ಒಬ್ಬ ಮಾಜಿ ಸಚಿವರೂ ಆಗಿರುವ ಪಟೇರಿಯಾ ಅವರಿಗೆ, ಪ್ರಧಾನಿಯ ಕುರಿತಂತೆ ಹೇಳಿಕೆ ನೀಡುವಾಗ ಯಾವ ಪದವನ್ನು ಬಳಸಬೇಕು, ಯಾವ ಪದವನ್ನು ಬಳಸಬಾರದು ಎನ್ನುವ ಅರಿವಿರಬೇಕು. ಸಾರ್ವಜನಿಕವಾಗಿ ಜನರನ್ನು ಕೊಲ್ಲಲು, ದ್ವೇಷಿಸಲು ಕಾರಣಗಳಿಗಾಗಿ ಕಾಯುತ್ತಿರುವ ಒಂದು ದೊಡ್ಡ ಗುಂಪೇ ನಮ್ಮ ನಡುವೆ ಇದೆ. ಇಂತಹ ವಾತಾವರಣದಲ್ಲಿ, ಯಾವ ಅರ್ಥದಲ್ಲೇ ‘ಕೊಲ್ಲಿ, ಸಾಯಿಸಿ’ ಎನ್ನುವ ಪದವನ್ನು ಸಾರ್ವಜನಿಕವಾಗಿ ಬಳಸುವುದು ಅಕ್ಷಮ್ಯವಾಗಿದೆ. ಪ್ರಧಾನಿಯ ಕುರಿತಂತೆ ಇಂತಹ ಹೇಳಿಕೆಯನ್ನು ನೀಡುವುದು ಯಾವ ರೀತಿಯಲ್ಲೂ ಸಮರ್ಥನೀಯವಲ್ಲ. ಕಾಂಗ್ರೆಸ್ ಪಕ್ಷ ಈಗಾಗಲೇ ಪಟೇರಿಯಾ ಹೇಳಿಕೆಯಿಂದ ಅಂತರವನ್ನು ಕಾಯ್ದುಕೊಂಡಿದೆ. ಅಷ್ಟೇ ಅಲ್ಲ, ಗಾಂಧೀಜಿಯ ಅಹಿಂಸೆಯನ್ನು ಪಕ್ಷ ಸದಾ ಎತ್ತಿ ಹಿಡಿಯುತ್ತದೆ ಎಂದು ಹೇಳಿಕೆಯನ್ನೂ ನೀಡಿದೆ. ದೇಶಾದ್ಯಂತ ರಾಹುಲ್ ಗಾಂಧಿ ‘ಹೃದಯ ಜೋಡಿಸುವ’ ಪಾದಯಾತ್ರೆಯಲ್ಲಿ ತೊಡಗಿರುವಾಗ, ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡರು ನೀಡಿರುವ ಈ ಬೇಜವಾಬ್ದಾರಿ ಹೇಳಿಕೆ, ಕಾಂಗ್ರೆಸ್ ಮುಖಂಡರಿಗೆ ಮುಜುಗರ ತಂದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
‘ನನ್ನ ಉದ್ದೇಶ ಅದಾಗಿರಲಿಲ್ಲ’ ಎನ್ನುವ ಸ್ಪಷ್ಟೀಕರಣದಿಂದ ಪ್ರಕರಣ ಮುಗಿಯುವುದಿಲ್ಲ. ಯಾವ ಕಾರಣಕ್ಕೇ ಇರಲಿ, ಪ್ರಧಾನಿಯ ವಿರುದ್ಧ ಅಂತಹದೊಂದು ಪದವನ್ನು ಬಳಕೆ ಮಾಡಿರುವುದಕ್ಕಾಗಿ ಮೊತ್ತ ಮೊದಲು ಕ್ಷಮೆಯನ್ನು ಯಾಚಿಸಬೇಕು. ಯಾರಿಗಾದರೂ ಅದರಿಂದ ನೋವಾಗಿದ್ದರೆ ಅದಕ್ಕಾಗಿ ವಿಷಾದಿಸಬೇಕು. ಆ ಬಳಿಕ ತನ್ನ ಹೇಳಿಕೆಯ ಹಿನ್ನೆಲೆ, ಮುನ್ನೆಲೆಯನ್ನು ವಿವರಿಸಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕನ ವಿರುದ್ಧ ಮೊಕದ್ದಮೆ ದಾಖಲಿಸಿರುವುದು, ಹೇಳಿಕೆಗಾಗಿ ಅವರನ್ನು ಬಂಧಿಸಿರುವುದು ಸರಿಯಾಗಿಯೇ ಇದೆ. ಇದೇ ಸಂದರ್ಭದಲ್ಲಿ ಪಟೇರಿಯಾ ಅವರ ಜಾರಿದ ನಾಲಗೆ ಕಾಂಗ್ರೆಸ್‌ನೊಳಗಿರುವ ಇತರ ನಾಯಕರಿಗೂ ಪಾಠವಾಗಬೇಕು. ಬಿಜೆಪಿಯವರು ತೋಡಿದ ಹೊಂಡಕ್ಕೆ ಹೋಗಿ ಕಾಂಗ್ರೆಸ್ ಮುಖಂಡರು ಬೀಳಬಾರದು. ಹೊಡಿ, ಬಡಿ, ಕೊಲ್ಲು ಎನ್ನುವ ದ್ವೇಷದ ಹೇಳಿಕೆಗಳಿಂದ ಸುಲಭದಲ್ಲಿ ರಾಜಕೀಯ ನಾಯಕನಾಗಿ ಹೊರಹೊಮ್ಮಬಹುದು ಎನ್ನುವ ವಾತಾವರಣ ಸಮಾಜದಲ್ಲಿದೆ. ಬಿಜೆಪಿಯೊಳಗಂತೂ ಇಂತಹ ದ್ವೇಷದ ಹೇಳಿಕೆಗಳ ಮೂಲಕವೇ ಅಣಬೆಗಳಂತೆ ನಾಯಕರು ಹುಟ್ಟುತ್ತಿದ್ದಾರೆ. ನಾಯಕನಾಗಲು ಇದು ಸುಲಭದ ದಾರಿಯಾಗಿರಬಹುದು. ಆದರೆ ಈ ದ್ವೇಷದ ದಾರಿ ಯಾರಿಗೂ ಒಳಿತನ್ನು ಮಾಡುವುದಿಲ್ಲ. ಇಂತಹ ನಾಯಕರು ಒಂದು ದಿನ ಈ ದೇಶದ ಪಾಲಿಗೆ ಕಂಟಕರಾಗಿ ಬೆಳೆಯುತ್ತಾರೆ. ಈಗಾಗಲೇ ಬೆಳೆಯುತ್ತಿದ್ದಾರೆ ಕೂಡ.
ಬಾಯಿ ತಪ್ಪಿ ಆಡಿದ ಮಾತಿಗಾಗಿ ಕಾಂಗ್ರೆಸ್ ನಾಯಕ ಜೈಲುಪಾಲಾಗಿದ್ದಾರೆ. ಆದರೆ, ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಈ ದೇಶದ ಗೃಹ ಸಚಿವ ಅಮಿತ್ ಶಾ ಅವರು, ‘೨೦೦೨ರಲ್ಲಿ ನಡೆದ ಗಲಭೆಯನ್ನು’ ಪಾತಕಿಗಳಿಗೆ ಕಲಿಸಿದ ಪಾಠ ಎಂದು ಬಣ್ಣಿಸುತ್ತಾರೆ. ಅಂದರೆ ಸಾವಿರಾರು ಜನರ ಮಾರಣ ಹೋಮವನ್ನು ಅವರು ಸಮರ್ಥಿಸುತ್ತಾರೆ ಮಾತ್ರವಲ್ಲ, ಆ ಕೊಲೆಯಲ್ಲಿ ಭಾಗವಹಿಸಿದವರನ್ನು ಬೆಂಬಲಿಸುತ್ತಾರೆ. ತಾನು ಆಡಿದ ಮಾತುಗಳಿಗಾಗಿ ಗೃಹ ಸಚಿವರು ಈವರೆಗೆ ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ. ಅಷ್ಟೇ ಅಲ್ಲ, ಇವರ ವಿರುದ್ಧ ಚುನಾವಣಾ ಆಯೋಗವಾಗಲಿ, ಪೊಲೀಸ್ ಇಲಾಖೆಯಾಗಲಿ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ದಿಲ್ಲಿ ಗಲಭೆಗೆ ಮುನ್ನ ಬಿಜೆಪಿಯ ನಾಯಕನೊಬ್ಬ ಸಾರ್ವಜನಿಕವಾಗಿ ಆಡಿದ ದ್ವೇಷ ಪೂರಿತ ಭಾಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ದಿಲ್ಲಿಯಲ್ಲಿ ಒಂದು ನಿರ್ದಿಷ್ಟ ಸಮುದಾಯದ ಜನರ ಹತ್ಯೆಗೆ ಆತ ಕರೆ ನೀಡಿದ್ದ. ಆದರೆ ಈವರೆಗೆ ಆತನನ್ನು ಬಂಧಿಸುವುದಕ್ಕೆ ಸರಕಾರಕ್ಕೆ ಸಾಧ್ಯವಾಗಿಲ್ಲ. ‘ಸಂವಿಧಾನವನ್ನು ರಕ್ಷಿಸಿ’ ಎನ್ನುವ ಪಟೇರಿಯಾ ಕರೆಯನ್ನು ನಿರ್ಲಕ್ಷಿಸಿ ಪೊಲೀಸರು ಅವರನ್ನು ಬಂಧಿಸುತ್ತಾರಾದರೆ, ‘ಗುಜರಾತ್ ಹತ್ಯಾಕಾಂಡವನ್ನು ಸಾಧನೆಯಾಗಿ ಬಿಂಬಿಸಿದ’ ಅಮಿತ್ ಶಾ ವಿರುದ್ಧ ಪೊಲೀಸರು ಯಾಕೆ ಕ್ರಮ ತೆಗೆದುಕೊಂಡಿಲ್ಲ? ಎನ್ನುವ ಪ್ರಶ್ನೆ ಎದುರಾಗುತ್ತದೆ. ಈ ದೇಶದ ಕಾನೂನು ಸುವ್ಯವಸ್ಥೆಯ ನೇತೃತ್ವವನ್ನು ವಹಿಸಿದ ನಾಯಕನೊಬ್ಬ, ಗುಜರಾತ್‌ನಲ್ಲಿ ನಡೆದ ಕಾನೂನು ಬಾಹಿರ ಕೃತ್ಯಗಳನ್ನು ಸಮರ್ಥಿಸುತ್ತಾರೆ ಎಂದ ಮೇಲೆ, ಗೃಹ ಇಲಾಖೆಯ ಗೌರವ ಏನಾಗಬೇಕು? ಈತನ ಹೇಳಿಕೆಯನ್ನು ಸಮರ್ಥಿಸುವ ಬಿಜೆಪಿ ನಾಯಕರಿಗೆ, ಪಟೇರಿಯಾರ ಹೇಳಿಕೆಯನ್ನು ಖಂಡಿಸುವ ನೈತಿಕತೆ ಇದೆಯೆ?
ಇದಿಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲೆಗೈಯಲು ಸಂಚು ನಡೆಸಿದ್ದಾರೆ ಎನ್ನುವ ಆರೋಪದಲ್ಲಿ ಹಲವು ಸಾಮಾಜಿಕ ಕಾರ್ಯಕರ್ತರನ್ನು ಸರಕಾರ ಬಂಧಿಸಿದೆ. ಈ ಕೊಲೆ ಆರೋಪವೇ ಈಗ ವಿವಾದದಲ್ಲಿದೆ. ಸ್ಟ್ಯಾನ್ ಸ್ವಾಮಿಯ ಕಂಪ್ಯೂಟರ್‌ನಲ್ಲಿದೆ ಎನ್ನಲಾದ ಈಮೇಲ್‌ಗಳನ್ನು ಅಕ್ರಮವಾಗಿ ಹ್ಯಾಕರ್‌ಗಳೇ ತುರುಕಿರುವ ಅಂಶ ಬಹಿರಂಗವಾಗಿದೆ. ಸರಕಾರದ ವಿರುದ್ಧ ಧ್ವನಿಯೆತ್ತಿದವರನ್ನು ಬಗ್ಗು ಬಡಿಯಲು ‘ಪ್ರಧಾನಿಯ ಕೊಲೆ ಸಂಚು’ ಎನ್ನುವ ‘ಕಥೆ’ಯನ್ನು ಹೆಣೆಯಲಾಯಿತು ಎಂದು ಕೆಲವರು ಆರೋಪಿಸುತ್ತಿದ್ದಾರೆ. ಈ ಆರೋಪ ನಿಜವೇ ಆಗಿದ್ದರೆ ಅತ್ಯಂತ ಆಘಾತಕಾರಿಯಾಗಿದೆ. ಪ್ರಧಾನಿಯ ವಿರುದ್ಧ ಕೊಲೆ ಸಂಚು ಎನ್ನುವ ಕಟ್ಟು ಕತೆ ಭವಿಷ್ಯದಲ್ಲಿ ಆಂತರಿಕ ಭದ್ರತೆಯ ಮೇಲೆ ಭಾರೀ ಪರಿಣಾಮವನ್ನು ಉಂಟು ಮಾಡಬಹುದು. ಹಾಗೆಯೇ, ಅಮಾಯಕರನ್ನು ಬಂಧಿಸಲು ಪ್ರಧಾನಿಹತ್ಯೆಯ ಆರೋಪಗಳನ್ನು ಹೊರಿಸುವುದು ಕೂಡ ಅನ್ಯಾಯದ ಪರಮಾವಧಿಯಾಗಿದೆ. ಸ್ಟ್ಯಾನ್ ಸ್ವಾಮಿಯನ್ನು ಬಂಧಿಸಲಾಯಿತು ಮಾತ್ರವಲ್ಲ, ಜೈಲಿನಲ್ಲೇ ಅವರನ್ನು ಮಾನಸಿಕ ಮತ್ತು ದೈಹಿಕವಾಗಿ ಜರ್ಜರಿತಗೊಳಿಸಿ ಸಾಯಿಸಲಾಯಿತು. ಇದೀಗ ನೋಡಿದರೆ, ಸ್ಟ್ಯಾನ್ ಸ್ವಾಮಿಯ ಕಂಪ್ಯೂಟರ್‌ನಲ್ಲಿ ಅವರ ಅರಿವಿಗೆ ಬಾರದಂತೆ ‘ದೋಷಾರೋಪಣೆಗೆ ಗುರಿ ಪಡಿಸುವಂತಹ ಫೈಲ್’ಗಳನ್ನು ಹ್ಯಾಕರ್‌ಗಳು ಅಳವಡಿಸಿದ್ದರು ಎನ್ನುವ ಅಂಶ ಮಾಧ್ಯಮಗಳ ಮೂಲಕ ಬಹಿರಂಗವಾಗುತ್ತಿದೆ. ಅಂದರೆ ಸ್ಟ್ಯಾನ್ ಸ್ವಾಮಿಯ ವಿರುದ್ಧವೇ ಪೂರ್ವನಿಯೋಜಿತ ಸಂಚು ನಡೆದಿತ್ತು. ಪ್ರಧಾನಿಯ ಹತ್ಯೆಯ ಸಂಚು ಹೇಗೆ ತನಿಖೆಗೆ ಅರ್ಹವೋ, ಹಾಗೆಯೇ ಜೈಲಿನಲ್ಲಿ ಬರ್ಬರವಾಗಿ ಸಾವಿಗೀಡಾಗಿರುವ ಸ್ಟ್ಯಾನ್ ಸ್ವಾಮಿಯ ಪ್ರಕರಣವೂ ಕೂಡ ತನಿಖೆಗೆ ಅರ್ಹವಲ್ಲವೆ?