ಶಿಕ್ಷಣದ ಹಕ್ಕಿನ ಉಲ್ಲಂಘನೆ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸ್ವಾತಂತ್ರ್ಯೋತ್ತರ ಭಾರತದ ಅಡಿಗಲ್ಲು ಶಿಕ್ಷಣ. ತಲೆತಲಾಂತರಗಳಿಂದ ಭಾರತದಲ್ಲಿ ಶಿಕ್ಷಣವೆನ್ನುವುದು ಮೇಲ್‌ವರ್ಗದ ಮತ್ತು ಮೇಲ್ ಜಾತಿಯ ಸೊತ್ತಾಗಿತ್ತು. ಶೇ. 10ರಷ್ಟಿರುವ ಸಣ್ಣ ವರ್ಗ ಶಿಕ್ಷಣದ ಸಕಲ ಸವಲತ್ತುಗಳನ್ನು ತನ್ನದಾಗಿಸಿಕೊಂಡು ಬೆಳೆಯುತ್ತಿದ್ದರೆ, ಶೇ. 90ರಷ್ಟು ಜನರು ಶಿಕ್ಷಣ ವಂಚಿತರಾಗಿದ್ದರು. ಪರಿಣಾಮವಾಗಿ, ದೇಶದ ಅಭಿವೃದ್ಧಿಯೂ ಶೇ. 10ರಷ್ಟು ಜನರಿಗೆ ಸೀಮಿತವಾಗಿತ್ತು. ಶಿಕ್ಷಣವನ್ನು ಸರ್ವರ ಹಕ್ಕಾಗಿಸದೇ ದೇಶವನ್ನು ಮುನ್ನಡೆಸುವುದು ಸಾಧ್ಯವಿಲ್ಲ ಎನ್ನುವುದನ್ನು ಅರಿತು, ದಲಿತರು, ಶೂದ್ರರು, ಅಲ್ಪಸಂಖ್ಯಾತರಿಗೆ ಶಿಕ್ಷಣದಲ್ಲಿ ಆದ್ಯತೆಯನ್ನು ನೀಡಲಾಯಿತು. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಈ ಸಮುದಾಯವನ್ನು ಶೈಕ್ಷಣಿಕವಾಗಿ ಮೇಲೆತ್ತುವುದಕ್ಕಾಗಿ ಅವರಿಗೆ ವಿವಿಧ ರೀತಿಯಲ್ಲಿ ಸರಕಾರ ಸಹಾಯ ಹಸ್ತವನ್ನು ಚಾಚಿತು. ಸಿಖ್ಖರು, ಬೌದ್ಧರು, ಜೈನರು, ಮುಸ್ಲಿಮರ ಶಿಕ್ಷಣಕ್ಕಾಗಿಯೂ ಸರಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿತು. ಅದರ ಭಾಗವಾಗಿ ವೌಲಾನಾ ಆಝಾದ್ ನ್ಯಾಶನಲ್ ಫೆಲೋಶಿಪ್‌ಅನ್ನು 2009ರಲ್ಲಿ ಸ್ಥಾಪಿಸಲಾಯಿತು.ಭಾರತದಲ್ಲಿ ಅಲ್ಪಸಂಖ್ಯಾತರು ಮತ್ತು ಇತರ ಸಮುದಾಯಗಳ ನಡುವಿನ ಶೈಕ್ಷಣಿಕ ಅಂತರವನ್ನು ಹೋಗಲಾಡಿಸಲು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳುವಂತೆ ಉನ್ನತಾಧಿಕಾರದ ಸಮಿತಿಯೊಂದು ಸರಕಾರಕ್ಕೆ ಶಿಫಾರಸು ಮಾಡಿದ ಬಳಿಕ ಈ ಸ್ಕಾಲರ್‌ಶಿಪ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಆದರೆ ಇದೀಗ ಸರಕಾರ ಅಲ್ಪಸಂಖ್ಯಾತರ ಉನ್ನತ ಶಿಕ್ಷಣಕ್ಕೂ ದೇಶದ ಅಭಿವೃದ್ಧಿಗೂ ಯಾವ ಸಂಬಂಧವೂ ಇಲ್ಲ ಎಂದು ಭಾವಿಸಿ ಆ ಫೆಲೋಶಿಪ್‌ನ್ನು ರದ್ದು ಮಾಡಲು ಮುಂದಾಗಿದೆ. ಇದರ ವಿರುದ್ಧವಿರೋಧ ಪಕ್ಷಗಳು ಸದನಗಳಲ್ಲಿ ಧ್ವನಿಯೆತ್ತಿವೆಯಾದರೂ, ಸರಕಾರ ಅದಕ್ಕೆ ಕಿವುಡಾಗಿದೆ.
ಭಾರತದ ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣ 14.2 ಶೇ. ಆದರೆ, ದೇಶದ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಿಗೆ ಆ ಸಮುದಾಯದ ವಿದ್ಯಾರ್ಥಿಗಳ ಸೇರ್ಪಡೆ ಪ್ರಮಾಣ ಕೇವಲ ಶೇ. 5.5. ದೇಶದ ಮೊದಲ ಶಿಕ್ಷಣ ಸಚಿವ ಅಬುಲ್ ಕಲಾಮ್ ಆಝಾದ್ ಹೆಸರಿನಲ್ಲಿ ಸ್ಥಾಪನೆಯಾಗಿರುವ ವೌಲಾನಾ ಆಝಾದ್ ನ್ಯಾಶನಲ್ ಫೆಲೋಶಿಪ್ ಭಾರತದ ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತರಿಗೆ ಮುಕ್ತವಾಗಿದೆ. ಆದರೆ, ಈ ಕಾರ್ಯಕ್ರಮದ ಹೆಚ್ಚಿನ ಫಲಾನುಭವಿಗಳು ಮುಸ್ಲಿಮರೇ ಆಗಿದ್ದಾರೆ. ಸರಕಾರದ ಅಂಕಿಅಂಶಗಳ ಪ್ರಕಾರ, 2018-19ರಲ್ಲಿ ವಿದ್ಯಾರ್ಥಿವೇತನ ಪಡೆದ 1,000 ಮಂದಿಯಲ್ಲಿ 733 ಮುಸ್ಲಿಮರು ಆಗಿದ್ದರು.ಈ ವಿದ್ಯಾರ್ಥಿವೇತನವನ್ನು ನಿಲ್ಲಿಸುವ ಸರಕಾರದ ನಿರ್ಧಾರಕ್ಕೆ ವಿದ್ಯಾರ್ಥಿ ಗುಂಪುಗಳಿಂದ ಪ್ರತಿಭಟನೆ ವ್ಯಕ್ತವಾಗಿದೆ. ಇದು ಅಲ್ಪಸಂಖ್ಯಾತರ ಶೈಕ್ಷಣಿಕ ಭವಿಷ್ಯದ ಮೇಲೆ ನಡೆದ ದಾಳಿಯಾಗಿದೆ. ಮುಸ್ಲಿಮರ ವಿರುದ್ಧದ ದ್ವೇಷವೇ ಸರಕಾರದ ಸಾಧನೆಯೆಂದು ಬಿಂಬಿಸಲ್ಪಡುತ್ತಿರುವ ಈ ದಿನಗಳಲ್ಲಿ, ಆ ಸಾಧನೆಯ ಭಾಗವಾಗಿಯೇ ಫೆಲೋಶಿಪ್‌ನ್ನು ಸರಕಾರ ಹಿಂದೆಗೆಯಲು ಮುಂದಾಗಿದೆ. ಆದರೆ ಇದು ಅಂತಿಮವಾಗಿ ಭಾರತದ ಅಭಿವೃದ್ಧಿಯ ಮೇಲೆ ಬೀರುವ ದುಷ್ಪರಿಣಾಮಗಳನ್ನು ಸರಕಾರ ಮರೆತಂತಿದೆ.
2005ರಲ್ಲಿ, ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು, ಭಾರತದ ಮುಸ್ಲಿಮರ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಅಧ್ಯಯನ ಮಾಡುವುದಕ್ಕಾಗಿ ದಿಲ್ಲಿ ಹೈಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಾಧೀಶ ರಾಜಿಂದರ್ ಸಾಚಾರ್ ನೇತೃತ್ವದಲ್ಲಿ ಏಳು ಸದಸ್ಯರ ಸಮಿತಿಯೊಂದನ್ನು ಸ್ಥಾಪಿಸಿತು. ಸಮಿತಿಯು 2006ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ಭಾರತದಲ್ಲಿ ಮುಸ್ಲಿಮರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಇತರ ಸಮುದಾಯಗಳಿಗಿಂತ ಹಿಂದಿದ್ದಾರೆ ಎಂದು ಅದು ತನ್ನ ವರದಿಯಲ್ಲಿ ಹೇಳಿತು. 2001ರ ಜನಗಣತಿಯನ್ನು ಉಲ್ಲೇಖಿಸಿದ ಅದು, ಭಾರತದ ಜನಸಂಖ್ಯೆಯಲ್ಲಿ 20 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಪ್ರಾಯದವರ ಪೈಕಿ 7 ಶೇ. ಮಂದಿ ಪದವಿ ಮತ್ತು ಡಿಪ್ಲೊಮಾಗಳನ್ನು ಹೊಂದಿದ್ದರೆ, ಮುಸ್ಲಿಮರಲ್ಲಿ ಈ ಪ್ರಮಾಣ 4 ಶೇ. ಆಗಿದೆ ಎಂದು ವರದಿ ಹೇಳಿದೆ. ಭಾರತದಲ್ಲಿನ ಇತರ ಶೋಷಿತ ಸಮುದಾಯಗಳಿಗೆ ಹೋಲಿಸಿದರೂ, ಶಿಕ್ಷಣದಲ್ಲಿ ಮುಸ್ಲಿಮರು ಅವರಿಗಿಂತಲೂ ಕೆಳಗಿದ್ದಾರೆ. ಒಂದೂವರೆ ದಶಕದ ಬಳಿಕವೂ, ಪರಿಸ್ಥಿತಿ ಹಾಗೆಯೇ ಮುಂದುವರಿದಿದೆ ಎನ್ನುವುದನ್ನು ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ ತಿಳಿಸಿದೆ. ಭಾರತದ ಜನಸಂಖ್ಯೆಯ 16.5 ಶೇ.ಕ್ಕಿಂತಲೂ ಹೆಚ್ಚಿರುವ ಪರಿಶಿಷ್ಟ ಜಾತಿಗಳ ಸಮುದಾಯದಲ್ಲಿ ಉನ್ನತ ಶಿಕ್ಷಣ ಪಡೆದವರ ಪ್ರಮಾಣ 14.7 ಶೇ. ಹಾಗೂ ಉನ್ನತ ಶಿಕ್ಷಣ ಪಡೆಯುತ್ತಿರುವ ಪರಿಶಿಷ್ಟ ಪಂಗಡಗಳ ಸಮುದಾಯದ ವಿದ್ಯಾರ್ಥಿಗಳ ಪ್ರಮಾಣವೂ ಮುಸ್ಲಿಮರಿಗಿಂತ ಹೆಚ್ಚಿದೆ.
ಡಿಸೆಂಬರ್ 8ರಂದು ವಿದ್ಯಾರ್ಥಿವೇತನ ರದ್ದತಿಯ ನಿರ್ಧಾರವನ್ನು ಪ್ರಕಟಿಸಿದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮತಿ ಇರಾನಿ, ಇಂಥದೇ ಇತರ ವಿದ್ಯಾರ್ಥಿವೇತನಗಳನ್ನು ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳು ಪಡೆಯುತ್ತಿರುವ ಕಾರಣಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಆದರೆ, ವೌಲಾನಾ ಆಝಾದ್ ನ್ಯಾಶನಲ್ ಫೆಲೋಶಿಪ್ ವಿದ್ಯಾರ್ಥಿವೇತನವನ್ನು ಪಡೆಯುತ್ತಿರುವ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿಗಳು ಈ ವಾದವನ್ನು ತಳ್ಳಿಹಾಕಿದ್ದಾರೆ. ವಿದ್ಯಾರ್ಥಿಯೊಬ್ಬ ಒಂದಕ್ಕಿಂತ ಹೆಚ್ಚು ವಿದ್ಯಾರ್ಥಿವೇತನಗಳಿಗೆ ಅರ್ಹನಾದರೂ, ಅವರು ಯಾವುದಾದರೂ ಒಂದನ್ನು ಮಾತ್ರ ಪಡೆಯಬಹುದಾಗಿದೆ ಎನ್ನುವುದನ್ನು ಸರಕಾರ ಮರೆತಿದೆ. ಮೀಸಲಾತಿಗೆ ಅರ್ಹವಾಗಿರುವ ವರ್ಗಗಳ ವಿದ್ಯಾರ್ಥಿಗಳಿಗೆ ಈಗ ಒಂದು ಅವಕಾಶ ನಷ್ಟವಾಗಿದೆ.
ಒಂದೆಡೆ ಈಗಾಗಲೇ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮುಂದುವರಿದ ಮೇಲ್‌ಜಾತಿಯ ವರ್ಗಗಳ ಬಡವರಿಗೆ ಶೇ. 10 ಮೀಸಲಾತಿಯನ್ನು ಘೋಷಿಸಿ ಅವರನ್ನು ಇನ್ನಷ್ಟು ಬಲಿಷ್ಠರನ್ನಾಗಿಸುವ ಕೆಲಸ ಬಿರುಸಿನಿಂದ ಸಾಗಿದೆ. ಮೇಲ್‌ಜಾತಿಯನ್ನು ಇನ್ನಷ್ಟು ಬಲಿಷ್ಠವಾಗಿಸುವುದರ ಇನ್ನೊಂದು ಮುಖವೇ, ದುರ್ಬಲ ವರ್ಗವನ್ನು ಇನ್ನಷ್ಟು ದುರ್ಬಲವಾಗಿಸುವುದು. ಈ ದೇಶದ ಅಲ್ಪಸಂಖ್ಯಾತರೆಂದರೆ, ಒಂದು ಕಾಲದಲ್ಲಿ ತುಳಿತಕ್ಕೆ, ಶೋಷಣೆಗೊಳಗಾಗಿ ಮತಾಂತರಗೊಂಡವರು. ಅಲ್ಪಸಂಖ್ಯಾತರಲ್ಲಿ ಬೌದ್ಧ, ಇಸ್ಲಾಂ, ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರಲ್ಲಿ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶಿಕ್ಷಣವನ್ನು ಅವರ ಕೈಯಿಂದ ಕಿತ್ತುಕೊಂಡರೆ ಅವರನ್ನು ಮತ್ತೆ ಶತಮಾನದಷ್ಟು ಹಿಂದಕ್ಕೆ ಕೊಂಡೊಯ್ಯಬಹುದು ಎಂದು ಸರಕಾರ ಭಾವಿಸಿದೆ. ಆ ಕಾರಣಕ್ಕಾಗಿಯೇ ದಲಿತರು ಮತ್ತು ಅಲ್ಪಸಂಖ್ಯಾತರ ಶಿಕ್ಷಣಕ್ಕೆ ನೀಡುತ್ತಿರುವ ನೆರವುಗಳನ್ನು ಸರಕಾರ ಒಂದೊಂದಾಗಿ ಹಿಂದೆಗೆದುಕೊಳ್ಳುತ್ತಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಲು ಹಲವು ದಶಕಗಳಿಂದ ಜಾರಿಯಲ್ಲಿದ್ದ ಮೆಟ್ರಿಕ್-ಪೂರ್ವ ವಿದ್ಯಾರ್ಥಿವೇತನವನ್ನು ಸರಕಾರ ಈಗಾಗಲೇ ನಿಲ್ಲಿಸಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮೀಸಲಾದ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು ನಿಲ್ಲಿಸುವ ಮೂಲಕ ಸಂವಿಧಾನದ ಪರಿಚ್ಛೇದ 21ಎ ಅನ್ವಯ ಕೊಡಮಾಡಿರುವ ಶಿಕ್ಷಣದ ಮೂಲಭೂತ ಹಕ್ಕು ಉಲ್ಲಂಘನೆಯಾಗಿದೆ. ಒಟ್ಟಿನಲ್ಲಿ ಸಂವಿಧಾನ ನೀಡಿರುವ ಒಂದೊಂದೆ ಹಕ್ಕುಗಳನ್ನು ದುರ್ಬಲವರ್ಗಗಳಿಂದ ಕಿತ್ತು, ಅವರ ಮೇಲೆ ಮನುಸಂವಿಧಾನವನ್ನು ಜಾರಿಗೊಳಿಸಲು ಕೇಂದ್ರ ಸರಕಾರ ಮುಂದಾಗಿರುವುದು ಸ್ಪಷ್ಟವಾಗಿದೆ. ಇದರ ವಿರುದ್ಧ ದಲಿತರು, ಅಲ್ಪಸಂಖ್ಯಾತರು ಮತ್ತು ತಳಸ್ತರದ ಶೂದ್ರರು ಒಂದಾಗಿ ಧ್ವನಿಯೆತ್ತ ಬೇಕಾ ಗಿದೆ. ಇಲ್ಲವಾದರೆ ಶಿಕ್ಷಣದ ಹಕ್ಕಿನ ಜೊತೆ ಜೊತೆಗೇ ಸಾಮಾಜಿಕ ಮತ್ತು ರಾಜಕೀಯವಾದ ಉಳಿದೆಲ್ಲ ಹಕ್ಕುಗಳನ್ನು ಈ ವರ್ಗ ಹಂತ ಹಂತವಾಗಿ ಕಳೆದುಕೊಳ್ಳಬೇಕಾಗುತ್ತದೆ.