ವಿಧಾನ ಮಂಡಲ ಕಲಾಪ ನಿರರ್ಥಕವಾಗದಿರಲಿ

Update: 2022-12-20 04:14 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಸೋಮವಾರದಿಂದ ಬೆಳಗಾವಿಯಲ್ಲಿ ವಿಧಾನ ಸಭೆ ಅಧಿವೇಶನ ಆರಂಭವಾಗಿದೆ. ಈ ಅಧಿವೇಶನದಲ್ಲಿ ನಾಡಿನ ಅದರಲ್ಲೂ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆಯಾಗಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಆದರೆ ಅಧಿಕಾರದಲ್ಲಿದ್ದವರಿಗೆ ಅದು ಬೇಕಾಗಿಲ್ಲ. ಯಾಕೆಂದರೆ ಸಮಸ್ಯೆಗಳಿಗೆ ಅವರ ಬಳಿ ಪರಿಹಾರವಾಗಲಿ, ಉತ್ತರವಾಗಲಿ ಇಲ್ಲ. ಅದಕ್ಕಾಗಿ ಚರ್ಚೆಯ ದಿಕ್ಕು ಬದಲಿಸಲು ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೊ ಹಾಕುವ ಮೂಲಕ ಕಲಾಪದ ದಿಕ್ಕು ತಪ್ಪಿಸಲು ಹೊರಟಿದ್ದಾರೆ. ಪ್ರತಿಪಕ್ಷಗಳ ಸದಸ್ಯರಿಗೆ ಆಹ್ವಾನ ನೀಡದೇ ಸಾವರ್ಕರ್ ಫೋಟೊವನ್ನು ಸ್ಪೀಕರ್ ಪೀಠದ ಮೇಲ್ಭಾಗದ ಗೋಡೆಯಲ್ಲಿ ಹಾಕಿದ್ದಾರೆ. ಸಹಜವಾಗಿ ಇದರಿಂದ ಕೆರಳಿದ ಪ್ರತಿಪಕ್ಷ ಸದಸ್ಯರು ಸುವರ್ಣ ಸೌಧದ ದ್ವಾರದಲ್ಲಿ ಧರಣಿ ನಡೆಸಿದರು. ಸದನದ ಮುಂದಿನ ಕಲಾಪದಲ್ಲೂ ಇದು ಕೋಲಾಹಲಕ್ಕೆ ಕಾರಣವಾಗಬಹುದು. ಅಲ್ಲಿಗೆ ಜನರನ್ನು ಬಾಧಿಸುತ್ತಿರುವ ನಿಜವಾದ ಸಮಸ್ಯೆಗಳು ಚರ್ಚೆಗೆ ಅವಕಾಶ ಸಿಗುವುದಿಲ್ಲ.

ಬೆಳಗಾವಿ ಅಧಿವೇಶನದಲ್ಲಿ ತಮ್ಮ ಸಮಸ್ಯೆಗಳನ್ನು ಮುಂದಿಟ್ಟು ಸುಮಾರು ಐವತ್ತು ರೈತ, ಕಾರ್ಮಿಕ, ವಿದ್ಯಾರ್ಥಿ ಸಂಘಟನೆಗಳು ಸತ್ಯಾಗ್ರಹದ ಸಿದ್ಧತೆ ನಡೆಸಿವೆ. ಜನರ ಬೇಡಿಕೆಗಳಿಗಾಗಿ ಸ್ಪಂದಿಸಬೇಕಾದವರು ಅದನ್ನು ಬಿಟ್ಟು ಕರ್ನಾಟಕಕ್ಕೆ ಸಂಬಂಧವಿಲ್ಲದ, ವಿವಾದಾತ್ಮಕ ವ್ಯಕ್ತಿ ಸಾವರ್ಕರ್ ಫೋಟೊ ಹಾಕಲು ಹೊರಟಿದ್ದಾರೆ. ಕಳೆದ ಅರವತ್ತು ವರ್ಷಗಳಲ್ಲಿ ಸದನದಲ್ಲಿ ಸಾವರ್ಕರ್ ಫೋಟೊ ಇರಲಿಲ್ಲ. ಈಗ ಒಮ್ಮೆಲೇ ಅವರ ನೆನಪಾಗಿ ಹಾಕಲು ಹೊರಟಿದ್ದು ಏಕೆ? ಜನರ ಸಮಸ್ಯೆಗಳ ಬದಲಾಗಿ ಇಂಥ ವಿವಾದಾತ್ಮಕ ವಿಷಯಗಳ ಸುತ್ತ ಚರ್ಚೆ ನಡೆಯಬೇಕೆಂಬ ಉದ್ದೇಶವೇ? ಬೆಳಗಾವಿ ಗಡಿ ಸಮಸ್ಯೆ ಕೂಡ ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳಲ್ಲಿ ಅಧಿಕಾರದಲ್ಲಿರುವರ ಸೃಷ್ಟಿ. ಪ್ರತಿಪಕ್ಷಗಳು ಸಾವರ್ಕರ್ ಫೋಟೊದಂಥ ವಿಷಯಗಳ ಬಗ್ಗೆ ಕಾಲಹರಣ ಮಾಡದೇ ಜನರ ಸಮಸ್ಯೆಗಳ ಬಗ್ಗೆ ಚರ್ಚೆಗೆ ಒತ್ತಾಯಿಸುವುದು ಸೂಕ್ತ.

ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ನಡೆಸುವ ಉದ್ದೇಶ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಆದ್ಯತೆ ನೀಡಿ ಚರ್ಚೆ ಮಾಡಲು. ಇದರ ಜೊತೆಗೆ ರಾಜ್ಯದ ಜ್ವಲಂತ ಸಮಸ್ಯೆಗಳ ಬಗೆಗೂ ಚರ್ಚೆ ನಡೆಯಬೇಕಾಗಿದೆ. ಮುಖ್ಯವಾಗಿ ಮುಂಬೈ ಕರ್ನಾಟಕದ ಜಿಲ್ಲೆಗಳಿಗೆ ಅನುದಾನ ಹರಿದು ಬರಬೇಕಾಗಿದೆ. ಈ ಭಾಗಕ್ಕೆ ‘ಕಿತ್ತೂರು ಕರ್ನಾಟಕ’ ಎಂದು ಮರು ನಾಮಕರಣ ಮಾಡಲಾಗಿದೆ. ಆದರೆ ಹೆಸರು ಬದಲಿಸಿದ್ದನ್ನು ಬಿಟ್ಟರೆ ಈ ಪ್ರದೇಶದ ಅಭಿವೃದ್ಧಿಗಾಗಿ ಯಾವುದೇ ಯೋಜನೆಯನ್ನು ಸರಕಾರ ರೂಪಿಸಿಲ್ಲ. ಹಿಂದೆ ಹೈದರಾಬಾದ್ ಪ್ರಾಂತದಲ್ಲಿದ್ದ ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಯಾದಗಿರಿ, ವಿಜಯನಗರ ಜಿಲ್ಲೆಗಳನ್ನೊಳಗೊಂಡ ಪ್ರದೇಶಕ್ಕೆ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿದ್ದು ಮಾತ್ರವಲ್ಲ ವಿಶೇಷ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಆದರೆ ಕಿತ್ತೂರು ಕರ್ನಾಟಕ ಭಾಗದವರೇ ಆದ ಬಸವರಾಜ ಬೊಮ್ಮಾಯಿಯವರು ಮುಖ್ಯ ಮಂತ್ರಿಯಾಗಿದ್ದರೂ ಈ ಭಾಗದಲ್ಲಿ ಹೇಳಿಕೊಳ್ಳುವಂಥ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ.

ರಾಜ್ಯದ ಬಿಜೆಪಿ ಸರಕಾರ ನುಡಿದಂತೆ ನಡೆದುಕೊಂಡಿಲ್ಲ. ವಿಶೇಷವಾಗಿ ಈ ಭಾಗದ ಮಹಾದಾಯಿ ಯೋಜನೆಯ ವಿಷಯದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ 24 ತಾಸುಗಳಲ್ಲಿ ಮಹಾದಾಯಿ ಯೋಜನೆಯನ್ನು ಕಾರ್ಯಗತಗೊಳಿಸುವುದಾಗಿ 1918ರ ವಿಧಾನಸಭಾ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪನವರು ಘೋಷಿಸಿದ್ದರು. ನಂತರ ನಡೆದ 2019ರ ಲೋಕಸಭಾ ಚುನಾವಣೆಯಲ್ಲಿ ಕೂಡ ಇದೇ ಭರವಸೆಯನ್ನು ನೀಡಲಾಗಿತ್ತು. ಇದಲ್ಲದೆ ಬಾಕಿ ಉಳಿದ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವುದಾಗಿ ಆಶ್ವಾಸನೆ ನೀಡಲಾಗಿತ್ತು. ಆದರೆ ಈ ಯಾವ ಭರವಸೆಗಳೂ ಈಡೇರಲಿಲ್ಲ. ಮಹಾದಾಯಿ ಯೋಜನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರ ಬಳಿ ನಿಯೋಗ ತೆಗೆದುಕೊಂಡು ಹೋದರೂ ಪ್ರಯೋಜನವಾಗಲಿಲ್ಲ. ಕಾರಣ ಮೋದಿಯವರ ಎದುರು ದಿಟ್ಟತನದಿಂದ, ಧೈರ್ಯದಿಂದ ಮಾತಾಡುವ ಸಾಮರ್ಥ್ಯ ರಾಜ್ಯದ ಬಿಜೆಪಿ ನಾಯಕರಿಗೆ, ಮಂತ್ರಿಗಳಿಗೆ, ಸಂಸದರಿಗೆ ಇಲ್ಲ. ಹೀಗಾಗಿ ರಾಜ್ಯಕ್ಕೆ ಅನ್ಯಾಯವಾಗುತ್ತಲೇ ಇದೆ.

ಈ ಅಧಿವೇಶನದಲ್ಲಿ ಹಲವಾರು ಪ್ರಮುಖ ವಿಧೇಯಕಗಳನ್ನು ತರಲು ಸರಕಾರ ಉದ್ದೇಶಿಸಿದೆ. ಅವುಗಳಲ್ಲಿ ಮುಖ್ಯವಾದುದು ಪರಿಶಿಷ್ಟ ಜಾತಿ, ವರ್ಗದ ಮೀಸಲಾತಿ ಪ್ರಮಾಣವನ್ನು ಶೇ.18ರಿಂದ 24ಕ್ಕೆ ಹೆಚ್ಚಳ ಮಾಡಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಈ ಕುರಿತು ಶಾಸನ ತಿದ್ದುಪಡಿ ವಿಧೇಯಕ ಮಂಡಿಸಲು ಸರಕಾರ ಉದ್ದೇಶಿಸಿದೆ. ಆದರೆ ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ತಮ್ಮ ಸಮುದಾಯದ ಮೀಸಲಾತಿ ಬೇಡಿಕೆಗಾಗಿ ಲಿಂಗಾಯತ ಪಂಚಮಸಾಲಿ ಸಮುದಾಯ ಹೋರಾಟಕ್ಕೆ ಇಳಿದಿದೆ. ಪರಿಶಿಷ್ಟ ಮೀಸಲಾತಿಯಲ್ಲಿ ಒಳ ಮೀಸಲಾತಿಗಾಗಿ ಬೇಡಿಕೆ ಇಟ್ಟು ಚಳವಳಿ ನಡೆದಿದೆ. ಒಳ ಮೀಸಲಾತಿಗಾಗಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕೆಂದು ವಂಚಿತ ಸಮುದಾಯಗಳು ಒಂದೆಡೆ ಒತ್ತಾಯಿಸಿದ್ದರೆ, ಕೆಲವು ಸಂಘಟನೆಗಳು ಮೀಸಲಾತಿ ರಕ್ಷಣಾ ವೇದಿಕೆ ಹೆಸರಿನಲ್ಲಿ ಸದಾಶಿವಯ್ಯ ಆಯೋಗದ ಜಾರಿ ವಿರುದ್ಧ ಪ್ರತಿಭಟನೆಯ ಬೆದರಿಕೆ ಹಾಕಿವೆ. ಇವೆಲ್ಲ ಅಂಶಗಳು ಸದನದಲ್ಲಿ ಪ್ರಸ್ತಾಪವಾಗಬಹುದು.

ಇದಲ್ಲದೆ ಸದನದಲ್ಲಿ ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜಾಗಿವೆ. ಮುಖ್ಯವಾಗಿ ಮತದಾರರ ವೈಯಕ್ತಿಕ ಮಾಹಿತಿಯ ಕಳವು ಪ್ರಕರಣ, ಪಿಎಸ್‌ಐ ನೇಮಕಾತಿ ಹಗರಣ, ಶೇ.40 ಪರ್ಸೆಂಟ್ ಲಂಚದ ಅವ್ಯವಹಾರಗಳನ್ನು ಸದನದಲ್ಲಿ ಪ್ರಸ್ತಾಪಿಸಲು ಪ್ರತಿಪಕ್ಷಗಳು ಸಿದ್ಧತೆ ನಡೆಸಿವೆ. ಇದರಿಂದ ಹೆದರಿದ ಸರಕಾರ ಚರ್ಚೆಯ ದಿಕ್ಕು ತಪ್ಪಿಸಲು, ಜನರ ಗಮನವನ್ನು ಬೇರೆಡೆ ಸೆಳೆಯಲು ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ತನ್ನ ವೋಟ್ ಬ್ಯಾಂಕ್ ಭದ್ರಗೊಳಿಸಲು ಏಕರೂಪ ನಾಗರೀಕ ಸಂಹಿತೆಯನ್ನು ಜಾರಿಗೆ ತರುವ ವಿಧೇಯಕ ಮಂಡಿಸುವ ಸಿದ್ದತೆ ನಡೆಸಿದೆ. ಗುಜರಾತ್ ವಿಧಾನಸಭಾ ಚುನಾವಣೆಗೆ ಮುನ್ನ ಅಲ್ಲಿನ ಸರಕಾರ ಕೊನೆಯ ಸಚಿವ ಸಂಪುಟ ಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆಯ ಜಾರಿಗೆ ಸಮಿತಿಯೊಂದನ್ನು ರಚಿಸಿತ್ತು. ಇದರಿಂದ ಕೋಮು ಧ್ರುವೀಕರಣ ಮಾಡಿ ಗೆದ್ದು ಬರಬಹುದೆಂಬುದು ಬಿಜೆಪಿ ಲೆಕ್ಕಾಚಾರ. ಆದರೆ ಪ್ರತಿಪಕ್ಷ ಗಳು ಇದಕ್ಕೆ ಅವಕಾಶ ನೀಡುವುದಿಲ್ಲ ಆಗ ಸದನದಲ್ಲಿ ಕೋಲಾಹಲ ಉಂಟಾಗುತ್ತದೆ. ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಮಸ್ಯೆಗಳು ಚರ್ಚೆಯಾಗದಂತೆ ಸರಕಾರ ನೋಡಿಕೊಳ್ಳಬಹುದು.

ಪ್ರತೀ ವರ್ಷದಂತೆ ಈ ವರ್ಷವೂ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲೇ ಭುಗಿಲೆದ್ದಿದೆ.ಕಳೆದ ವಿಧಾನಸಭಾ ಅಧಿವೇಶನ ಬೆಳಗಾವಿಯಲ್ಲಿ ನಡೆದಾಗಲೂ ಬೆಳಗಾವಿಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವಿವಾದಕ್ಕೆ ಸಂಬಂಧಿಸಿದಂತೆ ಆಗ ಸದನದಲ್ಲಿ ಸರಕಾರ ನೀಡಿದ ಭರವಸೆ ಇನ್ನೂ ಈಡೇರಿಲ್ಲ. ಮಹಾರಾಷ್ಟ್ರ_ ಕರ್ನಾಟಕ ಗಡಿ ಪ್ರದೇಶದ ಕನ್ನಡ ಭಾಷಿಕ ಪ್ರದೇಶಗಳು ಅಭಿವೃದ್ಧಿ ಕಾರ್ಯದಲ್ಲಿ ಸದಾ ನಿರ್ಲಕ್ಷಕ್ಕೆ ಒಳಗಾಗಿವೆ. ಇದು ಕೂಡ ಸದನದಲ್ಲಿ ಪ್ರಸ್ತಾಪಕ್ಕೆ ಬರಬಹುದು.

ಇದಲ್ಲದೆ ರಾಜ್ಯಕ್ಕೆ ಸಂಬಂಧಿಸಿದಂತೆ ಕೇಂದ್ರದ ಮೋದಿ ಸರಕಾರದ ತಾರತಮ್ಯ ನೀತಿಯ ಬಗ್ಗೆ ಕೂಡ ಸದನದಲ್ಲಿ ಪ್ರತಿಪಕ್ಷಗಳು ಪ್ರಸ್ತಾಪಿಸಬಹುದು. ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲಿನ ಹಣ ಬಂದಿಲ್ಲ. ಮಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರ ನೀಡುವಾಗಲೂ ತಾರತಮ್ಯ ಮಾಡಲಾಗಿದೆ. ಏಕ ಪಕ್ಷೀಯವಾಗಿ ಹಿಂದಿ ಭಾಷೆಯ ಹೇರಿಕೆ, ಹೀಗೆ ಹಲವಾರು ವಿಷಯಗಳ ಕುರಿತು ಪ್ರತಿಪಕ್ಷಗಳು ಸರಕಾರವನ್ನು ತುದಿಗಾಲಿನಲ್ಲಿ ನಿಲ್ಲಿಸಬಹುದು.
ಇದು ಈ ವಿಧಾನಸಭೆಯ ಬೆಳಗಾವಿಯಲ್ಲಿ ನಡೆಯುವ ಕೊನೆಯ ಅಧಿವೇಶನ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಸದನದ ಕಲಾಪಗಳು ತುಂಬಾ ಪ್ರಾಮುಖ್ಯತೆ ಪಡೆದಿವೆ.ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಹಣಾ ಹಣಿ ನಡೆಯಲಿ ಆದರೆ ಹತ್ತು ದಿನಗಳ ಈ ಅಧಿವೇಶನದಲ್ಲಿ ಬರೀ ಕೋಲಾಹಲ ನಡೆದು ಸದನದ ಕಲಾಪ ವ್ಯರ್ಥವಾಗದಿರಲಿ.

Similar News