ಮಹಬ್ಬ 2022: ಕೆಸಿಎಫ್ ಫ್ಯಾಮಿಲಿ ಫೆಸ್ಟ್
ಅಬುದಾಬಿ: ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ಯುಎಇ ಇದರ ವತಿಯಿಂದ ರಾಷ್ಟ್ರೀಯ ಮಟ್ಟದ ಕುಟುಂಬ ಸಮ್ಮಿಲನ ಕಾರ್ಯಕ್ರಮ ಅಬುದಾಬಿ ಹೊರವಲಯದ ಉಮ್ಮುಲ್ ಬಸಾತೀನ್ ವಿಹಾರಧಾಮದಲ್ಲಿಇತ್ತೀಚೆಗೆ ನಡೆಯಿತು. ಈ ಸಮಾರಂಭದಲ್ಲಿ ಕರ್ನಾಟಕದ ಸುಮಾರು 150ಕ್ಕೂ ಮಿಕ್ಕಿದ ಅನಿವಾಸಿ ಕುಟುಂಬಗಳು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚಿನ ಜನರು ಪಾಲ್ಗೊಂಡರು.
ಬೆಳಗ್ಗೆ 10 ಗಂಟೆಗೆ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಇಬ್ರಾಹೀಂ ಸಖಾಫಿ ಕೆದುಂಬಾಡಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮಹಿಳೆಯರು, ಮಕ್ಕಳು ಹಾಗೂ ಪುರುಷರಿಗೆ ವಿವಿಧ ರೀತಿಯ ಕ್ರೀಡೆ, ಸಾಂಸ್ಕೃತಿಕ ಸ್ಫರ್ಧೆ ಸೇರಿದಂತೆ ಹಲವು ರೀತಿಯ ಕಾರ್ಯಕ್ರಮಗಳು ವಿವಿಧ ವೇದಿಕೆಗಳಲ್ಲಿ ಜರಗಿತು.
ಪುರುಷರಿಗೆ ಲಗೋರಿ, ಹಗ್ಗಜಗ್ಗಾಟ ಸೇರಿದಂತೆ ಗ್ರಾಮೀಣ ಕ್ರೀಡೆಗಳು ಮಹಿಳೆಯರಿಗೆ ಆಹಾರ ಪಾಕ ಹಾಗೂ ಮೆಹಂದಿ ಹಚ್ಚುವ ಸ್ಫರ್ಧೆಗಳನ್ನು ಏರ್ಪಡಿಸಲಾಗಿತ್ತು. "ಆರೋಗ್ಯ ಸವಾಲು" ಕಾರ್ಯಕ್ರಮದಲ್ಲಿ ಆರೋಗ್ಯ ಕಾಪಾಡುವುದರ ಕುರಿತಾದ ಮಾಹಿತಿಗಳನ್ನು ನೀಡಲಾಯಿತು. ರಕ್ತದೊತ್ತಡ, ಸಕ್ಕರೆ ಅಂಶ ಪರೀಕ್ಷೆಗಳನ್ನು ಉಚಿತವಾಗಿ ಒದಗಿಸಿಕೊಡಲಾಯಿತು. ಮೂರು ಹೊತ್ತಿನ ಊಟೋಪಚಾರ, ಫುಡ್ ಕೋರ್ಟ್ ಮಾದರಿಯಲ್ಲಿ ವಿವಿಧ ಖಾದ್ಯ ತಿಂಡಿ ತಿನಿಸುಗಳ ಮತ್ತು ವಿವಿಧ ರೀತಿಯ ಜ್ಯೂಸ್ ಪಾನೀಯಗಳ ಟೆಂಟ್‍ಗಳು ರಾರಾಜಿಸುತ್ತಿದ್ದವು.
ಯುಎಇಯ ವಿವಿಧ ಪ್ರಾಂತ್ಯಗಳಿಂದ ಬಂದ ಅತಿಥಿಗಳನ್ನು ದಫ್ ಹಾಡಿನೊಂದಿಗೆ ಸ್ವಾಗತಿಸಲಾಯಿತು.
ಸಮಾರೋಪ ಸಮಾರಂಭವು ಸಂಜೆ 7 ಗಂಟೆಗೆ ನಡೆಯಿತು. ಉಲಮಾ ನೇತಾರ ಮಾಡವನ ಮುಹಿಯುದ್ದೀನ್ ಬಾಖವಿ ಉಸ್ತಾದರು ಮುಖ್ಯಅತಿಥಿಯಾಗಿ ಭಾಗವಹಿಸಿದರು.
ಬ್ಯಾರೀಸ್ ವಲ್ಫೇರ್ ಫಾರಂ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ, ಕಾರ್ಯದರ್ಶಿ ಸಿ.ಎ.ಅಬ್ದುಲ್ಲಾ ಮದುಮೂಲೆ ಉಪಸ್ಥಿತರಿದ್ದರು. ಆಟೋಟ ಸ್ಫರ್ಧೆಗಳಲ್ಲಿ ವಿಜಯಿ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಮೂಸಾಹಾಜಿ ಬಸರಾ, ಅಬ್ದುಲ್ ಜಲೀಲ್ ನಿಝಾಮಿ, ಇಬ್ರಾಹೀಂ ಹಾಜಿ ಬ್ರೈಟ್ ಮಾರ್ಬಲ್, ಅಬ್ದುಲ್ ಹಮೀದ್ ಸಅದಿ, ಹಸೈನಾರ್ ಅಮಾನಿ ತುರ್ಕಳಿಕೆ, ರಪೀಕ್ ಮುಸ್ಲಿಯಾರ್ ತೆಕ್ಕಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕ ಕಬೀರ್ ಬಾಯಂಬಾಡಿ ಧನ್ಯವಾದ ಸಮರ್ಪಿಸಿದರು.