ಕಾಡು ಮತ್ತು ನಾಡಿನ ಸಂಘರ್ಷದ ಮೂಲ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಜನಸಂಖ್ಯೆ ಹೆಚ್ಚಾಗುತ್ತಿರುವಂತೆ ಮನುಷ್ಯರು ತಮ್ಮ ನೆಲೆ ವಿಸ್ತರಿಸಿಕೊಂಡು ವನ್ಯ ಜೀವಿಗಳ ತಾಣವಾದ ಕಾಡಿನತ್ತ ಕಾಲು ಚಾಚತೊಡಗಿದ್ದಾರೆ. ಅಷ್ಟೇ ಅಲ್ಲ ಆಧುನಿಕತೆಯೊಂದಿಗೆ ಜೀವನ ಶೈಲಿಯೂ ಬದಲಾಗತೊಡಗಿದೆ. ಇದಕ್ಕೆ ತಕ್ಕಂತೆ ಪ್ರಭುತ್ವದ ಅಭಿವೃದ್ಧಿ ಮಾರ್ಗದ ದೃಷ್ಟಿಕೋನ ಮಾರ್ಪಾಟಾಗತೊಡಗಿದೆ.ವಿಪರೀತ ನಗರೀಕರಣ ಮತ್ತು ಔದ್ಯಮೀಕರಣದ ಪರಿಣಾಮವಾಗಿ ಕಾಡು, ಬೆಟ್ಟ, ಕಣಿವೆ, ನದಿ, ಕೆರೆಗಳು 'ಅಭಿವೃದ್ಧಿ'ಯ ದಾಹಕ್ಕೆ ಬಲಿಯಾಗತೊಡಗಿವೆ. ಶತಮಾನಗಳ ಕಾಲ ಪ್ರಾಣಿ, ಪಕ್ಷಿಗಳ ಜೊತೆಗೆ ಸಹಬಾಳ್ವೆ ನಡೆಸುತ್ತಾ ಬಂದ ಅರಣ್ಯ ಪ್ರದೇಶಗಳ ನಿವಾಸಿಗಳೂ ಐಷಾರಾಮಿ ಜೀವನ ಶೈಲಿಗೆ ಮಾರು ಹೋಗುತ್ತಿದ್ದಾರೆ. ಹೀಗಾಗಿ ಕಾಡು ಪ್ರಾಣಿಗಳು ಮತ್ತು ಮನುಷ್ಯರ ನಡುವೆ ನಿತ್ಯವೂ ಸಂಘರ್ಷ ನಡೆಯುತ್ತಲೇ ಇದೆ.
ನಿತ್ಯವೂ ಆನೆಗಳ ಹಾವಳಿ, ಚಿರತೆಗಳ ದಾಳಿಯಂಥ ಘಟನೆಗಳು ಸಂಭವಿಸುತ್ತಲೇ ಇವೆ. ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ರಾಜಧಾನಿ ಬೆಂಗಳೂರು, ಹಾವೇರಿ, ರಾಮನಗರ, ಚಿಕ್ಕ ಬಳ್ಳಾಪುರ, ಬೆಳಗಾವಿ, ಚಿತ್ರದುರ್ಗ, ದಾವಣಗೆರೆ, ಹಾಸನ, ಮೈಸೂರು ಮುಂತಾದ ಕಡೆ ಚಿರತೆಗಳು ಗೋಚರಿಸುತ್ತಿರುವ ವರದಿಗಳು ಬರುತ್ತಲೇ ಇವೆ.ಕೇಂದ್ರ ಪರಿಸರ ಸಚಿವಾಲಯದ ಮಾಹಿತಿಯ ಪ್ರಕಾರ 2021ರಲ್ಲಿ ಕರ್ನಾಟಕದಲ್ಲಿ 1,783 ಚಿರತೆಗಳಿವೆ. ಮಧ್ಯಪ್ರದೇಶ ಹೊರತು ಪಡಿಸಿದರೆ ಅತಿ ಹೆಚ್ಚು ಚಿರತೆಗಳನ್ನು ಹೊಂದಿರುವ ಎರಡನೇ ರಾಜ್ಯ ಕರ್ನಾಟಕವಾಗಿದೆ.
ಹುಲಿಯಾಗಲಿ, ಚಿರತೆಯಾಗಲಿ, ಆನೆಯಾಗಲಿ ಮನುಷ್ಯನ ವಸತಿ ಪ್ರದೇಶದಲ್ಲಿ ನುಸುಳಿದರೆ ಅದು ಅವುಗಳ ತಪ್ಪಲ್ಲ. ಈ ಸೃಷ್ಟಿಯಲ್ಲಿ ಮನುಷ್ಯನಂತೆ ಅವುಗಳಿಗೂ ಬದುಕುವ ಹಕ್ಕಿದೆ. ಈ ಭೂಮಿ ಮನುಷ್ಯನಿಗೆ ಮಾತ್ರ ಸೇರಿದ್ದಲ್ಲ. ಮನುಷ್ಯ ಮತ್ತು ಪ್ರಾಣಿಗಳ ನಡುವೆ ಸಂಘರ್ಷಕ್ಕೆ ಕಾರಣವೇನೆಂದು ಪರಾಮರ್ಶೆ ಮಾಡಿ ಉತ್ತರ ಮತ್ತು ಪರಿಹಾರ ಕಂಡುಕೊಂಡರೆ ಸಮಸ್ಯೆ ಉಲ್ಬಣಿಸುವುದಿಲ್ಲ. ಅದರ ಬದಲಾಗಿ ಜನವಸತಿ ಪ್ರದೇಶಗಳಲ್ಲಿ ಕಾಣಿಸುವ ಹುಲಿ, ಚಿರತೆಗಳನ್ನು ಗುಂಡಿಕ್ಕಿ ಸಾಯಿಸುವುದು ಇದಕ್ಕೆ ಪರಿಹಾರವಲ್ಲ.
ವಾಸ್ತವವಾಗಿ ಹುಲಿ, ಚಿರತೆ, ಜಿಂಕೆ, ಆನೆ ಮುಂತಾದ ಪ್ರಾಣಿ ಸಂಕುಲದ ಶತಮಾನಗಳ ಕಾಲದ ವಾಸ ಸ್ಥಾನವಾದ ಅರಣ್ಯ ಪ್ರದೇಶದಲ್ಲಿ ಮನುಷ್ಯನ ಅತಿಕ್ರಮಣ ಹೆಚ್ಚಾಗುತ್ತಿದೆ. ಹೀಗಾಗಿ ಅವುಗಳ ವಾಸಸ್ಥಾನದ ವ್ಯಾಪ್ತಿ ಕಿರಿದಾಗುತ್ತಿದೆ. ಪ್ರಾಣಿಗಳಿಗೆ ಮುಂಚಿನಂತೆ ಕಾಡಿನಲ್ಲಿ ಆಹಾರ ಸಿಗುತ್ತಿಲ್ಲ. ನೀರಿನ ಕೊರತೆಯೂ ಉಂಟಾಗಿದೆ. ಹೀಗಾಗಿ ಪ್ರಾಣಿಗಳು ಹಸಿವನ್ನು ನೀಗಿಸಿಕೊಳ್ಳಲು ತಮ್ಮ ಸಹಜ ನೆಲೆಯನ್ನು ಬಿಟ್ಟು ಕಾಡಿನ ಹತ್ತಿರದ ನಗರಗಳಿಗೆ, ಊರುಗಳಿಗೆ ಬರುತ್ತಿವೆ. ಅಲ್ಲಿ ಅವುಗಳಿಗೆ ಮನುಷ್ಯ ತಿಂದು ಚೆಲ್ಲಿದ ಮಾಂಸದ ತ್ಯಾಜ್ಯ, ಮಾತ್ರವಲ್ಲ ಕುರಿ, ಕೋಳಿ, ನಾಯಿ, ಮುಂತಾದ ಸಾಕು ಪ್ರಾಣಿಗಳು ಸಾಕಷ್ಟು ಸಿಗುತ್ತವೆ. ಅವುಗಳನ್ನು ತಿಂದು ಹಸಿವು ನೀಗಿಸಿಕೊಳ್ಳುತ್ತವೆ. ಜಗತ್ತಿನಲ್ಲಿ ಮನುಷ್ಯನಿಗೆ ಬದುಕುವ ಹಕ್ಕಿರುವಂತೆ ಸಕಲ ಜೀವಚರಗಳಿಗೂ ಬದುಕುವ ಹಕ್ಕಿದೆ. ಈಗ ನಗರೀಕರಣದಿಂದಾಗಿ ಕಾಡಿನ ಅಂಚಿನಲ್ಲಿ ಮಾತ್ರವಲ್ಲ ಕಾಡಿನ ಒಳಗೂ ಮನುಷ್ಯ ನುಗ್ಗಿ ಮನೆ, ಬೇಸಾಯಕ್ಕೆ ಭೂಮಿ ಮಾಡಿಕೊಳ್ಳುತ್ತಿದ್ದಾನೆ. ಇದರಿಂದ ಪ್ರಾಣಿಗಳ ಸಹಜ ಚಲನ ವಲನಗಳಿಗೆ ವ್ಯತ್ಯಯ ಉಂಟಾಗುತ್ತಿದೆ.
ಇನ್ನು ಹುಲಿ ಮತ್ತು ಚಿರತೆಗಳು ಮಾತ್ರವಲ್ಲ ಆನೆಗಳು ಮತ್ತು ಮನುಷ್ಯನ ನಡುವೆ ಸಂಘರ್ಷಕ್ಕೆ ಕಾರಣ ಆನೆಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಲು ಗುರುತಿಸಿಕೊಂಡಿರುವ ಆನೆ ಕಾರಿಡಾರ್‌ಗಳ ಜಾಗದಲ್ಲಿ ರೆಸಾರ್ಟ್, ಐಷಾರಾಮಿ ಹೊಟೇಲ್‌ಗಳು ತಲೆ ಎತ್ತಿರುವುದರಿಂದ ದಾರಿ ತಪ್ಪಿದ ಆನೆಗಳು ನಗರಗಳ, ಗ್ರಾಮಗಳ ಜನ ವಸತಿ ಪ್ರದೇಶಕ್ಕೆ ನುಗ್ಗುತ್ತವೆ. ಇದರ ನೈಜ ಕಾರಣವನ್ನು ಕಂಡು ಹಿಡಿಯದೆ ಆನೆಗಳ ಹಾವಳಿ ಎಂದು ಮನುಷ್ಯ ವ್ಯಾಖ್ಯಾನಿಸುತ್ತಾ ಬಂದಿದ್ದಾನೆ.
ಕಾಡು ಪ್ರಾಣಿಗಳು ಮತ್ತು ಮನುಷ್ಯನ ನಡುವಿನ ಸಂಘರ್ಷಕ್ಕೆ ಪ್ರಾಣಿಗಳನ್ನು ಕೊಲ್ಲುವುದು ಪರಿಹಾರವಲ್ಲ. ಅದರ ಬದಲಿಗೆ ಮನುಷ್ಯನ ಜೀವನ ಶೈಲಿಯಲ್ಲಿ ಬದಲಾವಣೆ ಆಗಬೇಕಾಗಿದೆ. ನಿಸರ್ಗದಲ್ಲಿ ಇರುವುದೆಲ್ಲ ತನ್ನ ಐಷಾರಾಮಿ ಜೀವನಕ್ಕೆ ಎಂಬ ದೃಷ್ಟಿ ಕೋನದ ಬದಲಾಗಿ ಈ ಇಳೆಯಲ್ಲಿ ಪ್ರಾಣಿ, ಪಕ್ಷಿಗಳಿಗೂ ಬದುಕುವ ಹಕ್ಕಿದೆ ಎಂಬುದನ್ನು ಒಪ್ಪಿಕೊಳ್ಳಬೇಕಾಗಿದೆ. ಕಾಡು ಉಳಿದರೆ ನಾಡು ಉಳಿಯುತ್ತದೆ.ಮಳೆಯಾಗುತ್ತದೆ. ಅದರ ಬದಲಾಗಿ ತನ್ನ ಐಷಾರಾಮಿ ಜೀವನಕ್ಕಾಗಿ ಕಾಡನ್ನು ಆಕ್ರಮಿಸುತ್ತ ಹೋದರೆ ನಾಳೆ ನಾಡೂ ಉಳಿಯುವುದಿಲ್ಲ.
ಅಮೆಝಾನ್ ಮಳೆ ಕಾಡುಗಳ ಉಳಿವಿಗಾಗಿ ಬ್ರೆಝಿಲ್, ಕೊಲಂಬಿಯಾ, ಪೆರು ಮುಂತಾದ ದೇಶಗಳು ತಮ್ಮ ಅಭಿವೃದ್ಧಿ ಮಾರ್ಗವನ್ನು ಬದಲಿಸಿಕೊಂಡಿವೆ. ಆದರೆ ನಮ್ಮ ದೇಶದಲ್ಲಿ ಮನುಷ್ಯನ ಸಂಪತ್ತಿನ ದಾಹ ಕಡಿಮೆಯಾಗುತ್ತಲೇ ಇಲ್ಲ. ಅದರಲ್ಲೂ ಮಾರುಕಟ್ಟೆ ಆರ್ಥಿಕತೆಯನ್ನೇ ಅಭಿವೃದ್ಧಿ ಮಾರ್ಗವನ್ನಾಗಿ ಮಾಡಿಕೊಂಡ ನಂತರ ಕಾಡುಗಳ ಸಹಜ ತಾಣಗಳು ಮನುಷ್ಯನ ವಿಲಾಸಿ ಜೀವನಕ್ಕೆ ಬಲಿಯಾಗುತ್ತಿವೆ.
ವಾಸ್ತವವಾಗಿ ಚಿರತೆ ಮತ್ತು ಹುಲಿಗಳ ಸಂಖ್ಯೆ ಹೆಚ್ಚಾದರೂ ಅರಣ್ಯದ ವಿಸ್ತೀರ್ಣ ಮೊದಲಿದ್ದಷ್ಟೇ ಇದೆ. ಹೀಗಾಗಿ ವನ್ಯಜೀವಿಗಳು ನಗರಗಳತ್ತ, ಜನವಸತಿ ಪ್ರದೇಶಗಳತ್ತ ಬರಲು ಇದೂ ಒಂದು ಕಾರಣವಾಗಿದೆ. ವಾಸ್ತವವಾಗಿ ಚಿರತೆಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಅವುಗಳೇನೂ ಜನರಿರುವ ಜಾಗಕ್ಕೆ ಬರುತ್ತಿಲ್ಲ. ಜನರೇ ಚಿರತೆಗಳಿರುವ ಜಾಗಕ್ಕೆ ಹೋಗಿ ರೆಸಾರ್ಟ್‌ಗಳನ್ನು, ಮನೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ವನ್ಯಜೀವಿ ತಜ್ಞರು ಹೇಳುತ್ತಾರೆ. ಹಾಗಾಗಿ ತಾತ್ಕಾಲಿಕ ಪರಿಹಾರ ಎಂದು ಚಿರತೆ, ಹುಲಿಗಳನ್ನು ಕೊಲ್ಲುವುದು ಸರಿಯಲ್ಲ. ಈ ಸಮಸ್ಯೆಗೆ ದೂರದೃಷ್ಟಿಯ ದೀರ್ಘಾವಧಿಯ ಪರಿಹಾರ ಕಂಡುಕೊಳ್ಳಬೇಕಾಗಿದೆ.
ವನ್ಯಜೀವಿಗಳ ಜೀವಿಸುವ ಹಕ್ಕುಗಳನ್ನು ರಕ್ಷಿಸಬೇಕಾಗಿದೆ. ಇದು ಜಟಿಲ ಸಮಸ್ಯೆಯಾದರೂ ನಿರ್ಲಕ್ಷ ಮಾಡುವುದು ಸರಿಯಲ್ಲ. ಊರುಗಳಲ್ಲಿ ಚಿರತೆಗಳು ಕಾಣಿಸಿಕೊಂಡರೆ ಅರಣ್ಯ ಇಲಾಖೆ ಬೋನುಗಳನ್ನು ಇರಿಸಿ ಚಿರತೆಗಳನ್ನು ಹಿಡಿಯುತ್ತದೆ. ಈ ರೀತಿ ಹಿಡಿದ ಚಿರತೆಗಳನ್ನು ಏನು ಮಾಡುತ್ತದೆ? ಎಲ್ಲಿ ಬಿಡುತ್ತದೆ? ಎಂಬುದು ಪಾರದರ್ಶಕವಾಗಿಲ್ಲ. ಅರಣ್ಯ ಇಲಾಖೆ ಹೇಳುವ ಪ್ರಕಾರ ಹಿಡಿದ ಚಿರತೆಗಳನ್ನು ದೂರದ ಅರಣ್ಯ ಪ್ರದೇಶದಲ್ಲಿ ಬಿಡಲಾಗುತ್ತದೆ. ಹೀಗೆ ಬಿಟ್ಟು ಬಂದ ಚಿರತೆಗಳು ವಾಪಸು ಬರುತ್ತವೆಯೇ ಎಂಬುದರ ಬಗ್ಗೆ ಕೂಡ ಸ್ಪಷ್ಟತೆ ಇಲ್ಲ. ಕಾರಣ ಸರಕಾರ ಇಂತಹ ತರಾತುರಿಯ ಪರಿಹಾರ ಮಾರ್ಗಗಳನ್ನು ಕೈ ಬಿಟ್ಟು ಅಭಿವೃದ್ಧಿ ಮಾರ್ಗವನ್ನು ಬದಲಿಸುವ ದಿಕ್ಕಿನತ್ತ ಚಿಂತಿಸಲಿ.
ಆದರೆ ಈಗಿರುವ ಮಾರುಕಟ್ಟೆ ಪ್ರಧಾನ ಅಭಿವೃದ್ಧಿ ಮಾರ್ಗವನ್ನು ಆಳುವವರು ಬಿಟ್ಟು ಕೊಡುವುದು ಅಷ್ಟು ಸುಲಭವಲ್ಲ. ಪರಿಸರದ ಬಗ್ಗೆ ವೇದಿಕೆಯ ಮೇಲೆ ಗಂಟೆಗಟ್ಟಲೆ ಮಾತಾಡುವ ನಮ್ಮ ಅಧಿಕಾರಸ್ಥ ರಾಜಕಾರಣಿಗಳು ಕಾರ್ಪೊರೇಟ್ ಲಾಬಿಯ ಕೈಗೊಂಬೆಗಳಾಗಿದ್ದಾರೆ. ಕಾರ್ಪೊರೇಟ್ ಲಾಬಿಗೆ ಲಾಭ ಬೇಕು. ಅವರ ಒತ್ತಡಕ್ಕೆ ಮಣಿದು ಕೇಂದ್ರ ಸರಕಾರ ಛತ್ತೀಸ್‌ಗಡದಂಥ ಅಮೂಲ್ಯ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದೆ.
ಈ ಪರಿಸರ ಮಾರಕ ಅಭಿವೃದ್ಧಿ ಮಾರ್ಗವನ್ನು ಬದಲಿಸಬೇಕೆಂದರೆ ಜನ ಸಮುದಾಯದ ಒತ್ತಡ ಬರಬೇಕು. ಜನ ಪ್ರತಿರೋಧಕ್ಕೆ ಮುಂದಾದರೆ ನಮ್ಮ ಕಾಡು ಸುರಕ್ಷಿತವಾಗಿ ಉಳಿಯುತ್ತದೆ. ಕಾಡಿನಲ್ಲಿನ ಪ್ರಾಣಿಗಳು ಸುರಕ್ಷಿತವಾಗಿ ಇರುತ್ತವೆ.