ಕೇಳಿಸದೆ ಕಾಶ್ಮೀರಿ ಪಂಡಿತರ ಕೂಗು!?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕಣಿವೆಯಲ್ಲಿ ಕಾಶ್ಮೀರಿ ಪಂಡಿತರ ಗಾಯಗಳಿಗೆ ಬಿಜೆಪಿ ಸರಕಾರ ಬರೆ ಎಳೆಯುವುದಕ್ಕೆ ಹೊರಟಿದೆ. ಹೆಚ್ಚುತ್ತಿರುವ ಉಗ್ರರ ದಾಳಿಯಿಂದ ಜೀವಭಯದಲ್ಲಿರುವ ಪಂಡಿತರಿಗೆ ಭದ್ರತೆಯನ್ನು ಒದಗಿಸಿ ಅವರಲ್ಲಿ ಆತ್ಮವಿಶ್ವಾಸ ನೀಡಬೇಕಾಗಿದ್ದ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್, ಉಗ್ರರ ಪರವಾಗಿ ಬ್ಯಾಟಿಂಗ್ ಮಾಡಲು ಮುಂದಾಗಿದ್ದಾರೆ. ''ನಮಗೆ ಕಾಶ್ಮೀರದಲ್ಲಿ ಜೀವ ಭಯವಿದೆ. ಪಂಡಿತರ ಮೇಲೆ ಪದೇ ಪದೇ ದಾಳಿಗಳು ನಡೆಯುತ್ತಿವೆ. ಆದುದರಿಂದ ನಮ್ಮನ್ನು ಜಮ್ಮುವಿನ ತವರು ಜಿಲ್ಲೆಗೆ ವರ್ಗಾವಣೆಗೊಳಿಸಿ'' ಎಂದು ನೂರಾರು ಪಂಡಿತ ಸಮುದಾಯದ ಸರಕಾರಿ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ತಿಂಗಳು ಉಗ್ರರು ಓರ್ವ ಪಂಡಿತನನ್ನು ಕೊಂದು ಹಾಕಿದ ಬಳಿಕ ಈ ಪ್ರತಿಭಟನೆ ತೀವ್ರವಾಗಿದೆ.
ಪಂಡಿತರ ಅಧಿಕೃತ ರಕ್ಷಕನಂತೆ ಬಿಂಬಿಸಿಕೊಳ್ಳುತ್ತಿದ್ದ ಬಿಜೆಪಿ ಸರಕಾರ ಇದೀಗ ಅದೇ ಪಂಡಿತರಿಗೆ ತಿರುಗಿ ನಿಂತಿದೆ. ಪಂಡಿತರ ಅಳಲನ್ನು ಆಲಿಸಿ ಅದಕ್ಕೆ ಸ್ಪಂದಿಸುವ ಬದಲಿಗೆ ''ಮುಷ್ಕರ ನಿರತ ಪಂಡಿತರು ತಕ್ಷಣ ಕೆಲಸಕ್ಕೆ ವಾಪಸಾಗಬೇಕು. ಇಲ್ಲವಾದರೆ ವೇತನ ಮತ್ತು ಕೆಲಸವನ್ನು ಕಳೆದುಕೊಳ್ಳಲು ಸಿದ್ಧರಾಗಿ'' ಎಂದು ಉಗ್ರವಾದಿ ಬೆದರಿಕೆಯೊಂದು ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರಿಂದ ಹೊರ ಬಿದ್ದಿದೆ. ಇಲ್ಲಿ ರಾಜ್ಯಪಾಲರು ಕೇಂದ್ರ ಸರಕಾರವನ್ನೇ ಪ್ರತಿನಿಧಿಸುತ್ತಿರುವುದರಿಂದ ಪಂಡಿತರಿಗೆ ನೀಡಲಾಗಿರುವ ಎಚ್ಚರಿಕೆ ಪ್ರಧಾನಿ ಕಚೇರಿಯಿಂದಲೇ ಬಂದಿದೆ ಎನ್ನುವುದನ್ನು ನಾವು ಮರೆಯಬಾರದು. ಒಂದೆಡೆ ಸರಕಾರದ ಎಚ್ಚರಿಕೆ, ಮಗದೊಂದೆಡೆ ಉಗ್ರರ ಜೀವ ಬೆದರಿಕೆ ಇವರೆಡರ ನಡುವೆ ಪಂಡಿತರ ಬದುಕು ಅತ್ತ ಧರಿ- ಇತ್ತ ಪುಲಿ ಎನ್ನುವಂತಾಗಿದೆ. ಆದರೆ ಸರಕಾರದ ಬೆದರಿಕೆಗೆ ಮಣಿಯದೆ ಪಂಡಿತರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಈ ಹಿಂದೆ ಕಾಶ್ಮೀರದಲ್ಲಿ ನಡೆದ ದಾಳಿಗಳನ್ನೆಲ್ಲ , 'ಹಿಂದೂಗಳ ಮೇಲೆ ಮುಸ್ಲಿಮ್ ಉಗ್ರರು ನಡೆಸಿದ ದಾಳಿ' ಎಂದು ಬಿಂಬಿಸಿದ್ದ ಬಿಜೆಪಿ ಸರಕಾರ, ಇದೀಗ ನಡೆಯುತ್ತಿರುವ ದಾಳಿಗಳಿಗೆ ಬೇರೆಯೇ ವ್ಯಾಖ್ಯಾನ ನೀಡಲು ಮುಂದಾಗಿದೆ. ಕಾಶ್ಮೀರಿ ಪಂಡಿತರು ಕಣಿವೆಯಲ್ಲಿ ಸುರಕ್ಷಿತವಾಗಿದ್ದಾರೆ. ಒಂದೆರಡು ದಾಳಿಗಳು ಉಗ್ರರಿಂದ ನಡೆದಿವೆಯಾದರೂ, ಅದಕ್ಕೆ ಧಾರ್ಮಿಕ ಬಣ್ಣ ನೀಡುವುದು ಸರಿಯಲ್ಲ ಎನ್ನುವ ವಾದವನ್ನು ರಾಜ್ಯಪಾಲರು ಮಂಡಿಸುತ್ತಿದ್ದಾರೆ.
'ನಾವು ಸುರಕ್ಷಿತರಾಗಿಲ್ಲ, ನಮ್ಮನ್ನು ತವರು ಜಿಲ್ಲೆಗೆ ವರ್ಗಾವಣೆ ಮಾಡಿ' ಎಂದು ಪಂಡಿತರು ಆಗ್ರಹಿಸುತ್ತಿದ್ದರೆ, ಇತ್ತ ಸರಕಾರ 'ಇಲ್ಲ, ನೀವು ಸುರಕ್ಷಿತರಾಗಿದ್ದೀರಿ' ಎಂದು ಅವರನ್ನು ಬೆದರಿಸಿ ಬಾಯಿ ಮುಚ್ಚಿಸಲು ನೋಡುತ್ತಿದೆ. ಕಾಶ್ಮೀರದಲ್ಲಿ ಪಂಡಿತರ ಮೇಲೆ ಅತಿ ಹೆಚ್ಚು ದಾಳಿಗಳು ನಡೆದಿರುವುದು ಬಿಜೆಪಿ ಬೆಂಬಲಿತ ವಿ. ಪಿ. ಸಿಂಗ್ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಸ್ತಿತ್ವದಲ್ಲಿದ್ದಾಗ. ಆಗಿನ ಪಂಡಿತರ ಸಾವುನೋವುಗಳನ್ನು ಅಂದಿನ ರಾಜ್ಯಪಾಲ ಜಗ್‌ಮೋಹನ್ ಅವರು ಬಿಜೆಪಿಯ ಹಿಂದುತ್ವ ರಾಜಕಾರಣಕ್ಕೆ ಬಳಸಿದರು ಎನ್ನುವ ಆರೋಪಗಳಿವೆ. ಕಾಶ್ಮೀರದ ಉಗ್ರವಾದಿ ದಾಳಿಗಳನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಿ ಕಾಶ್ಮೀರಿಗಳನ್ನು ಮಾನಸಿಕವಾಗಿ ಒಡೆದಿರುವುದು ಕೂಡ ಬಿಜೆಪಿ. ಇದೀಗ ಅದೇ ಬಿಜೆಪಿ, ಉಗ್ರರ ದಾಳಿಗಳಿಗೆ ಧಾರ್ಮಿಕ ಬಣ್ಣವನ್ನು ನೀಡಬಾರದು ಎಂದು ಕರೆ ನೀಡುತ್ತಿದೆ. ಅಷ್ಟೇ ಅಲ್ಲ, ಜೀವಭಯದಿಂದ ತವರಿಗೆ ಮರಳಲು ಸಿದ್ಧರಾಗಿರುವ ಪಂಡಿತರನ್ನು, ಸರಕಾರದ ಪ್ರತಿಷ್ಠೆ ಮಣ್ಣು ಪಾಲಾಗಬಾರದು ಎನ್ನುವ ಕಾರಣಕ್ಕೆ ಕಾಶ್ಮೀರದಲ್ಲೇ ಉಳಿಸಲು ನೋಡುತ್ತಿದೆ. ಯುಪಿಎ ಸರಕಾರದ ಅವಧಿಯಲ್ಲಿ ಇಲ್ಲಿ ಸರಕಾರಿ ಉದ್ಯೋಗಿಗಳಾಗಿ ಬೇರು ಬಿಟ್ಟಿದ್ದ ಪಂಡಿತರು, ಇದೀಗ ಬಿಜೆಪಿ ಸರಕಾರದ ಅವಧಿಯಲ್ಲಿ ಯಾಕೆ ಅಲ್ಲಿಂದ ವಲಸೆ ಹೋಗಲು ಸಿದ್ಧರಾಗಿ ನಿಂತಿದ್ದಾರೆ? ಎನ್ನುವ ಪ್ರಶ್ನೆಗೆ ಕೇಂದ್ರ ಸರಕಾರ ಉತ್ತರ ನೀಡಬೇಕಾಗಿದೆ. ತನ್ನ ಪ್ರತಿಷ್ಠೆಗಾಗಿ ಬಿಜೆಪಿ ಸರಕಾರ ಪಂಡಿತರನ್ನು ಬಲಿಪಶು ಮಾಡಲು ಹೊಟಂತಿದೆ. ನೋಟು ನಿಷೇಧದ ಮೂಲಕ ಕಾಶ್ಮೀರದಲ್ಲಿ ಕಲ್ಲುತೂರಾಟ ಶಾಶ್ವತವಾಗಿ ನಿಂತಿತು ಎಂದು ಬಿಜೆಪಿ ಸರಕಾರ ಸುಳ್ಳು ಮಾಹಿತಿಗಳನ್ನು ಜನರಿಗೆ ನೀಡುತ್ತಾ ಬಂತು. ನೋಟು ನಿಷೇಧದ ಬಳಿಕವೇ ಕಾಶ್ಮೀರದಲ್ಲಿ ಶಾಶ್ವತವಾಗಿ ಕರ್ಫ್ಯೂ ಹೇರುವ ಸ್ಥಿತಿ ನಿರ್ಮಾಣವಾಯಿತು. ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಿತ್ತು ಸೇನೆಯ ಕೈಗೆ ಅಲ್ಲಿನ ಸಂಪೂರ್ಣ ಶಾಂತಿ ಸುಭದ್ರತೆಯ ಹೊಣೆಯನ್ನು ವಹಿಸಿತು. ಆ ಮೂಲಕ ಕಾಶ್ಮೀರವನ್ನು ಭಾರತ ಸಂಪೂರ್ಣವಾಗಿ ತನ್ನ ವಶಕ್ಕೆ ತೆಗೆದುಕೊಂಡಿತು ಎಂದು ಜನರ ಮುಂದೆ ಪ್ರತಿಪಾದಿಸಿತು. ಆದರೆ, 'ಭಾರತದ ಕೈವಶವಾಗಿರುವ ಕಾಶ್ಮೀರದಲ್ಲಿ ನಾವು ನೆಲೆಸುವುದಿಲ್ಲ' ಎಂದು ಕಾಶ್ಮೀರದ ಪಂಡಿತರು ಬೀದಿಗಿಳಿದಿದ್ದಾರೆ. ಇದು ಕೇಂದ್ರ ಸರಕಾರಕ್ಕೆ ನುಂಗಲಾರದ ತುತ್ತಾಗಿದೆ. 1990ರ ಬಳಿಕ ಸಾರ್ವಜನಿಕವಾಗಿ ಪಂಡಿತರು ಮತ್ತೆ ಜೀವಭಯದಿಂದ ಬೀದಿಗಿಳಿದಿರುವುದು ಇದೇ ಮೊದಲು. ಕಾಶ್ಮೀರದ ವಿಶೇಷ ಸ್ಥಾನಮಾನ ಕಿತ್ತೊಗೆದ ಬಳಿಕ ಅಲ್ಲಿ ಉಗ್ರರ ದಮನವಾಗಿ ಶಾಂತಿ ಸುವ್ಯವಸ್ಥೆ ನೆಲೆಸಿರುವುದು ನಿಜವೇ ಆಗಿದ್ದರೆ ಈ ಪಂಡಿತರ ಪ್ರತಿಭಟನೆಗೆ ಕಾರಣವೇನು ಎನ್ನುವುದನ್ನು ದೇಶದ ಜನರಿಗೆ ಸ್ಪಷ್ಟಪಡಿಸುವ ಹೊಣೆಗಾರಿಕೆ ಕೇಂದ್ರ ಸರಕಾರಕ್ಕೆ ಸೇರಿದ್ದಾಗಿದೆ.
ವಿಪರ್ಯಾಸವೆಂದರೆ, ಕೇಂದ್ರದ ಪ್ರತಿನಿಧಿಯಾಗಿರುವ ರಾಜ್ಯಪಾಲರು ಕಾಶ್ಮೀರಿ ಪಂಡಿತರನ್ನು ಬೆದರಿಸಿ ಅವರ ಪ್ರತಿಭಟನೆಗಳನ್ನು ದಮನಿಸುತ್ತಿದ್ದರೆ, ಇತ್ತ ಕೇಂದ್ರ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಡಾ. ಜಿತೇಂದ್ರ ಸಿಂಗ್ ಅವರು ಕಾಶ್ಮೀರಿ ಪಂಡಿತರ ಪರವಾಗಿ ಹೇಳಿಕೆಯನ್ನು ನೀಡಿದ್ದಾರೆ. ''ನಮ್ಮನ್ನು ತವರು ಜಿಲ್ಲೆಗೆ ವರ್ಗಾಯಿಸಿ'' ಎನ್ನುವ ಕಾಶ್ಮೀರಿ ಪಂಡಿತರ ಬೇಡಿಕೆಯ ಪರವಾಗಿ ಅವರು ಮಾತನಾಡುವ ಮೂಲಕ, ಕಾಶ್ಮೀರದಲ್ಲಿ ಪಂಡಿತರ ಜೀವಕ್ಕೆ ಅಪಾಯವಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಒಂದೆಡೆ ಕೇಂದ್ರಸರಕಾರವನ್ನು ಪ್ರತಿನಿಧಿಸುತ್ತಿರುವ ರಾಜ್ಯಪಾಲ ಮನೋಜ್ ಸಿನ್ಹಾ, ''ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ಕಾಶ್ಮೀರಿ ಪಂಡಿತರು ವಲಸೆ ಹೋಗಬಾರದು'' ಎಂದು ಎಚ್ಚರಿಕೆ ನೀಡಿದ್ದರೆ, ಮಗದೊಂದೆಡೆ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ''ಕಾಶ್ಮೀರದಲ್ಲಿ ಪಂಡಿತರ ಜೀವಕ್ಕೆ ಅಪಾಯವಿದೆ. ಆದುದರಿಂದ ಕಚೇರಿಗಳನ್ನು ಮುಚ್ಚಿದರೂ ಚಿಂತೆಯಿಲ್ಲ. ಕಾಶ್ಮೀರಿ ಪಂಡಿತರ ಜೀವ ಮುಖ್ಯ'' ಎಂಬ ಹೇಳಿಕೆಯನ್ನು ನೀಡಿದ್ದಾರೆ. ಶನಿವಾರ ಜಮ್ಮುವಿಗೆ ಆಗಮಿಸಿ ಪ್ರತಿಭಟನಾ ನಿರತ ಕಾಶ್ಮೀರಿ ಪಂಡಿತರನ್ನು ಭೇಟಿ ಮಾಡಿದ್ದಾರೆ. ಅಷ್ಟೇ ಅಲ್ಲ ಬಿಜೆಪಿಯ ಪ್ರಧಾನ ಕಾರ್ಯದರ್ಶಿಗಳಾಗಿರುವ ತರುಣ್ ಛುಗ್ ಮತ್ತು ದಿಲೀಪ್ ಸೈಕಾಯಿಯವರೂ ಈ ಕಾಶ್ಮೀರಿ ಪಂಡಿತರ ಬೇಡಿಕೆಗೆ ಧ್ವನಿಗೂಡಿಸಿದ್ದಾರೆ.
ಈ ಬಿಜೆಪಿ ನಾಯಕರಿಗೆ ಮತ್ತು ಕೇಂದ್ರ ಸಚಿವರಿಗೆ ಕಾಶ್ಮೀರಿ ಪಂಡಿತರ ಬೇಡಿಕೆಯ ಬಗ್ಗೆ ಕಾಳಜಿಯಿದ್ದರೆ ಅವರು ಪ್ರತಿಭಟನೆಯನ್ನು ಬೆಂಬಲಿಸುವ ನಾಟಕ ಮಾಡುವ ಅಗತ್ಯವಿಲ್ಲ. ತಮ್ಮದೇ ಸರಕಾರದ ನಿಯಂತ್ರಣದಲ್ಲಿ ಕಾಶ್ಮೀರವಿರುವಾಗ, ಕೇಂದ್ರ ಸಚಿವರಾಗಲಿ, ಬಿಜೆಪಿಯ ನಾಯಕರಾಗಲಿ ಕಾಶ್ಮೀರಿ ಪಂಡಿತರ ಪರವಾಗಿ ಯಾರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ? ಕಾಶ್ಮೀರಿ ಪಂಡಿತರ ಜೀವದ ಮೇಲೆ ಕಾಳಜಿಯಿದ್ದರೆ, ಕೇಂದ್ರ ಸಚಿವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಆ ಮೂಲಕ ಸರಕಾರದ ಮೇಲೆ ಒತ್ತಡ ಹಾಕಬೇಕು. ಸರಕಾರದ ಭಾಗವೇ ಆಗಿರುವ ಕೇಂದ್ರ ಸಚಿವರು ತನ್ನ ವಿರುದ್ಧ ತಾನೇ ಪ್ರತಿಭಟನೆ ನಡೆಸಿದರೆ ಅದಕ್ಕೇನು ಅರ್ಥವಿದೆ?
ಕಾಶ್ಮೀರಿ ಪಂಡಿತರ ಜೀವವನ್ನು ತನ್ನ ಒಡೆದು ಆಳುವ ಹಿಂದುತ್ವದ ರಾಜಕಾರಣಕ್ಕೆ ಬಲಿಯಾಗಿಸುವುದನ್ನು ಸರಕಾರ ಇನ್ನಾದರೂ ನಿಲ್ಲಿಸಬೇಕು. ಕಾಶ್ಮೀರದಲ್ಲಿ ಪಂಡಿತರ ಬದುಕು ಇನ್ನಷ್ಟು ಅಧ್ವಾನವಾಗಿರುವುದನ್ನು ಮೊದಲು ಸರಕಾರ ಒಪ್ಪಿಕೊಳ್ಳಬೇಕು. ಎಲ್ಲಿಯವರೆಗೆ ಪಂಡಿತರಿಗೆ ಜೀವ ಭದ್ರತೆ ಕೊಡಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಅವರನ್ನು ಅವರ ತವರು ಜಿಲ್ಲೆಗೆ ವರ್ಗಾವಣೆ ಮಾಡುವುದೇ ಸೂಕ್ತ. ತನ್ನ ಪ್ರತಿಷ್ಠೆಗಾಗಿ ಅಮಾಯಕ ಕಾಶ್ಮೀರಿ ಪಂಡಿತರನ್ನು ಬಲಿಕೊಡುವ ಹೇಯ ಕೆಲಸಕ್ಕೆ ಸರಕಾರ ಮುಂದಾಗಬಾರದು. ಹಾಗೆಯೇ, ಕಾಶ್ಮೀರದ ಜನರನ್ನು ತನ್ನವರನ್ನಾಗಿಸಿಕೊಳ್ಳದೆ ಕಾಶ್ಮೀರವನ್ನು ತನ್ನದಾಗಿಸಿಕೊಳ್ಳುವುದು ಸಾಧ್ಯವಿಲ್ಲ ಎನ್ನುವುದನ್ನು ಸರಕಾರ ಇನ್ನಾದರೂ ಮನವರಿಕೆ ಮಾಡಿಕೊಂಡು, ಅಲ್ಲಿನ ಜನರನ್ನು ಮಾನಸಿಕವಾಗಿ ಭಾರತದ ಭಾಗವಾಗಿಸುವ ದಾರಿಯೊಂದನ್ನು ಕಂಡುಕೊಳ್ಳಬೇಕು. ಹಿಂದೂ ಮುಸ್ಲಿಮರನ್ನು ಮಾನಸಿಕವಾಗಿ ಒಂದಾಗಿಸಿ, ಮತ್ತೆ ಕಾಶ್ಮೀರಿಯತ್‌ನ್ನು ಪುನರ್ ಸ್ಥಾಪಿಸುವುದೇ ಸರಕಾರದ ಮುಂದಿರುವ ಏಕೈಕ ಮಾರ್ಗವಾಗಿದೆ