ಮತ್ತೆ ಹಳಿ ತಪ್ಪಿದ ಸಾಹಿತ್ಯ ಪರಿಷತ್ತು

Update: 2023-01-02 04:57 GMT

ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭ ಸೇರಿದಂತೆ ಯಾವುದೇ ಮಹತ್ವದ ಗೋಷ್ಠಿಗಳಲ್ಲಿ ಮುಸ್ಲಿಮ್ ಸಮುದಾಯದ ಲೇಖಕರಿಗೆ ಪ್ರಾತಿನಿಧ್ಯ ನೀಡಿಲ್ಲ ಎಂಬ ಆಕ್ರೋಶ ಬೆಂಗಳೂರಿನಲ್ಲಿ ಪ್ರತಿರೋಧದ ಜನ ಸಾಹಿತ್ಯ ಸಮ್ಮೇಳನದ ರೂಪು ತಾಳಿದೆ.
ಶತಮಾನದ ಇತಿಹಾಸವಿರುವ ನಮ್ಮ ಹೆಮ್ಮೆಯ ಕನ್ನಡ ಸಾಹಿತ್ಯ ಪರಿಷತ್ತು ಈಗ ಮತ್ತೆ ವಿವಾದದ ಸುಳಿಗೆ ಸಿಲುಕಿದೆ. ವಿವಾದ ಎಂಬುದು ಹೊಸದಲ್ಲ. ಆದರೆ, ಈ ಬಾರಿಯದು ಬರೀ ವಿವಾದ ಮಾತ್ರವಲ್ಲ. ಅದೀಗ ರಂಗಾಯಣದಂಥ ಕೋಮುವಾದೀಕರಣದ ಅಪಾಯದ ಅಂಚಿನಲ್ಲಿದೆ ಎಂಬುದು ಸಾಹಿತ್ಯಾಸಕ್ತರ ಆತಂಕವಾಗಿದೆ. ಕನ್ನಡ ಮತ್ತು ಕರ್ನಾಟಕ ಕಟ್ಟಲು ಕೈ ಜೋಡಿಸಿದ ಕನ್ನಡಿಗರ ಒಂದು ಸಮುದಾಯಕ್ಕೆ ಪ್ರಾತಿನಿಧ್ಯ ನೀಡದೇ ಹಾವೇರಿ ಸಮ್ಮೇಳನ ನಡೆಸಲಾಗುತ್ತಿದೆ ಎಂಬುದು ಬರೀ ಆರೋಪವಲ್ಲ.

ಎಪ್ಪತ್ತರ ದಶಕದ ಕೊನೆಯಲ್ಲಿ ಹಂಪ ನಾಗರಾಜಯ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು.ಆಗ ಧರ್ಮಸ್ಥಳದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಸಮುದಾಯದ ಕುರಿತ ಪ್ರತ್ಯೇಕ ಗೋಷ್ಠಿ ಇಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದ ಚೆನ್ನಣ್ಣ ವಾಲೀಕಾರ ಪರಿಷತ್ತಿನ ಅಧ್ಯಕ್ಷರಿಗೆ ಪತ್ರ ಬರೆದರು. ಆದರೆ, ಹಂಪನಾ ಅವರು ಸಾಹಿತ್ಯದಲ್ಲಿ ದಲಿತ, ಬಲಿತ ಎಂದೆಲ್ಲ ಇಲ್ಲವೆಂದು ಆಕ್ಷೇಪವನ್ನು ತಳ್ಳಿ ಹಾಕಿದರು. ಇದರ ಪರಿಣಾಮವಾಗಿ 1979ರಲ್ಲಿ ದಲಿತ, ಪ್ರಗತಿಪರ ಲೇಖಕರು ಸೇರಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಸಿದ್ದು ಈಗ ಇತಿಹಾಸ. ಬೆಂಗಳೂರಿನ ದೇವಾಂಗ ಛತ್ರದಲ್ಲಿ ನಡೆದ ಈ ಸಮ್ಮೇಳನದಲ್ಲಿ ಆಂಧ್ರಪ್ರದೇಶದ ಕ್ರಾಂತಿಕಾರಿ ಕವಿ ಶ್ರೀ ಶ್ರೀ ಮತ್ತು ಕನ್ನಡದ ಹಿರಿಯ ಲೇಖಕ ನಿರಂಜನ, ಲಂಕೇಶ್, ಶೂದ್ರ ಶ್ರೀ ನಿವಾಸ,ಕವಿ ಸಿದ್ಧಲಿಂಗಯ್ಯ, ಬರಗೂರು ರಾಮಚಂದ್ರಪ್ಪ, ಡಿ.ಆರ್. ನಾಗರಾಜ್ ಮೊದಲಾದವರು ಪಾಲ್ಗೊಂಡಿದ್ದರು.

ಕನ್ನಡ ಸಾಹಿತ್ಯ ಪರಿಷತ್ತು ಪ್ರಭುತ್ವದ ತುತ್ತೂರಿಯಾಗಿದೆ ಎಂಬುದು ಬಂಡಾಯ ಲೇಖಕರ ಅಭಿಪ್ರಾಯವಾಗಿತ್ತು. ನಂತರದ ಕೆಲವು ವರ್ಷ ಪರಿಷತ್ತಿನ ಕಾರ್ಯಕ್ರಮಗಳಿಗೆ ಬಂಡಾಯ ಲೇಖಕರು ಬಹಿಷ್ಕಾರ ಹಾಕಿದ್ದರು. ಆ ನಂತರ ವಾಸ್ತವ ಸ್ಥಿತಿ ಅರಿತ ಹಂಪನಾ ಮತ್ತು ನಂತರ ಬಂದ ಅಧ್ಯಕ್ಷರು ದಲಿತರು ಸೇರಿದಂತೆ ತಳ ಸಮುದಾಯಗಳ ಲೇಖಕರ ಅಭಿವ್ಯಕ್ತಿ ಗಾಗಿ ಪ್ರತೇಕ ಗೋಷ್ಠಿ ಗಳನ್ನು ಸಾಹಿತ್ಯ ಸಮ್ಮೇಳನಗಳಲ್ಲಿ ನಡೆಸತೊಡಗಿದರು.

ಕರ್ನಾಟಕದಲ್ಲಿ ಬಿಜೆಪಿ ಪ್ರಾಬಲ್ಯ ಗಳಿಸಿ ರಾಜಕೀಯ ಅಧಿಕಾರ ಪಡೆದ ನಂತರ ಆರೆಸ್ಸೆಸ್ ಕಾರ್ಯಸೂಚಿಯನ್ನು ಜಾರಿಗೆ ತರಲು ಅದು ಮೊದಲು ಆರಿಸಿಕೊಂಡಿದ್ದು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳನ್ನು. ಇವರ ಅಜೆಂಡಾ ಜಾರಿಗೆ ತರಲು ಹೋಗಿ ಮೈಸೂರಿನಲ್ಲಿ ಬಿ.ವಿ.ಕಾರಂತರು ಕಟ್ಟಿದ ರಂಗಾಯಣ ಈಗ ಯಾವ ಸ್ಥಿತಿಗೆ ಬಂದಿದೆ ಎಂಬುವುದು ಎಲ್ಲರಿಗೂ ಗೊತ್ತಿದೆ. ಇನ್ನು ಉಳಿದದ್ದು ಕನ್ನಡ ಸಾಹಿತ್ಯ ಪರಿಷತ್ತು. ಕಳೆದ ಚುನಾವಣೆಯಲ್ಲಿ ಆಡಳಿತ ಪಕ್ಷ ನೇರ ಆದರೆ ಪರೋಕ್ಷ ಕಾರ್ಯಾಚರಣೆ ಮೂಲಕ ತನಗೆ ಅನುಕೂಲವಾಗುವ ವ್ಯಕ್ತಿಯನ್ನು ಅಧ್ಯಕ್ಷನಾಗುವಂತೆ ಮಾಡಿತು.

ಕರ್ನಾಟಕದಲ್ಲಿ ಜಾತ್ಯತೀತ ಜನತಾ ದಳ ಮತ್ತು ಬಿಜೆಪಿ ಸೇರಿಕೊಂಡು ಸರಕಾರ ರಚನೆ ಮಾಡಿದಾಗ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಮತ್ತು ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದರು. ಚಂಪಾ ಎಂದೇ ಹೆಸರಾದ ಚಂದ್ರಶೇಖರ ಪಾಟೀಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ದ್ದರು. ಆಗ ಶಿವಮೊಗ್ಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನ ನಡೆಯಿತು. ಕವಿ ನಿಸಾರ್ ಅಹ್ಮದ್ ಸಮ್ಮೇಳನಾಧ್ಯಕ್ಷರು. ಸಮ್ಮೇಳನದ ಒಂದು ಗೋಷ್ಠಿಯಲ್ಲಿ ಮಾತನಾಡಲು ಗೌರಿ ಲಂಕೇಶ್ ಮತ್ತು ಮಲೆನಾಡಿನ ಜನಪರ ಪರಿಸರ ಹೋರಾಟಗಾರ ಕಲ್ಕುಳಿ ವಿಠಲ್ ಹೆಗ್ಡೆ ಅವರನ್ನು ಚಂಪಾ ಆಹ್ವಾನಿಸಿದ್ದರು. ಇದು ಸಂಘಪರಿವಾರದ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಯಿತು. ಗೌರಿ ಮತ್ತು ಕಲ್ಕುಳಿ ವಿಠ್ಠಲ ಹೆಗ್ಡೆ ನಕ್ಸಲ್ ಬೆಂಬಲಿಗರು ಎಂದು ಎಬಿವಿಪಿ ಮತ್ತಿತರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದವು. ಚಂಪಾ ಸೊಪ್ಪು ಹಾಕಲಿಲ್ಲ. ಕೊನೆಗೆ ಶಿವಮೊಗ್ಗ ಜಿಲ್ಲೆಯವರೇ ಆದ ಅಂದಿನ ಉಪಮುಖ್ಯಮಂತ್ರಿ ಯಡಿಯೂರಪ್ಪ ನವರ ಮೂಲಕ ಚಂಪಾ ಅವರ ಮೇಲೆ ಒತ್ತಡ ತರಲಾಯಿತು.

ಸಾಮಾನ್ಯವಾಗಿ ಸರಕಾರದ ಅನುದಾನದಿಂದ ನಡೆಯುವ ಸಾಹಿತ್ಯ ಸಮ್ಮೇಳನಗಳು ಅಧಿಕಾರ ದಲ್ಲಿ ಇರುವವರ ಕಣ್ಸನ್ನೆಯಂತೆ ನಡೆಯಬೇಕಾಗುತ್ತದೆ. ಆದರೆ, ಚಂಪಾ ಉಳಿದವರಂತಲ್ಲ. ಯಡಿಯೂರಪ್ಪನವರು ಫೋನ್ ಮಾಡಿ ಗೌರಿ ಲಂಕೇಶ್ ಮತ್ತು ಕಲ್ಕುಳಿ ವಿಠಲ ಹೆಗ್ಡೆ ಅವರನ್ನು ಭಾಷಣಕಾರರ ಪಟ್ಟಿಯಿಂದ ತೆಗೆದು ಹಾಕಲು ಒತ್ತಾಯಿಸಿದರು.ಯಡಿಯೂರಪ್ಪನವರ ಒತ್ತಾಯಕ್ಕೆ ಮಣಿಯದ ಚಂಪಾ ಇವರಿಬ್ಬರನ್ನು ಗೋಷ್ಠಿಯಲ್ಲಿ ಮಾತಾಡಲು ಕರೆಯಬೇಕೆಂಬುದು ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ತೀರ್ಮಾನ. ಸರಕಾರ ಹೇಳುತ್ತದೆ ಎಂದು ನಮ್ಮ ತೀರ್ಮಾನ ಬದಲಿಸಲು ಸಾಧ್ಯವಿಲ್ಲ ಎಂದು ಮುಲಾಜಿಲ್ಲದೇ ಹೇಳಿದರು. ಯಡಿಯೂರಪ್ಪನವರೂ ಬಹಳ ಒತ್ತಡ ಹೇರಲಿಲ್ಲ. ಅಂದಿನ ಗೋಷ್ಠಿಯಲ್ಲಿ ಪಾಲ್ಗೊಳ್ಳಲು ಪೊಲೀಸ್ ರಕ್ಷಣೆಯಲ್ಲಿ ಬಂದ ಗೌರಿ ಲಂಕೇಶ್ ಮತ್ತು ವಿಠ್ಠಲ ಹೆಗ್ಡೆ ಹೇಳಬೇಕಾದುದನ್ನು ಹೇಳಿದರು. ಅಂದು ಪೊಲೀಸ್ ಭದ್ರತೆ ಇದ್ದರೂ ವೇದಿಕೆಯ ಸುತ್ತ ರಣರಂಗದ ಸನ್ನಿವೇಶ ನಿರ್ಮಾಣವಾಗಿತ್ತು. ಗಲಾಟೆ ಮಾಡಲು ನುಗ್ಗಿದ ಎಬಿವಿಪಿ ಮುಂತಾದ ಸಂಘಟನೆಗಳ ಕಾರ್ಯಕರ್ತರಿಗೂ ಪ್ರಗತಿಪರ ಸಂಘಟನೆಗಳ ಯುವಕರಿಗೂ ನೇರ ಘರ್ಷಣೆ ನಡೆಯಿತು. ಇದು ಪರಿಷತ್‌ಸೃಷ್ಟಿಸಿದ ವಿವಾದವಲ್ಲವಾದರೂ ಅದನ್ನು ನಿಯಂತ್ರಿಸಲು ಹೊರಟ ಕೋಮುವಾದಿ ಸಂಘಟನೆಗಳು ನಿರ್ಮಾಣ ಮಾಡಿದ ಗೊಂದಲ ಎಂದರೆ ತಪ್ಪಿಲ್ಲ.

ಸಂಘ ಪರಿವಾರಕ್ಕೆ ಹಣದ ಕೊರತೆಯಿಲ್ಲ. ಬಹುದೊಡ್ಡ ಕಾರ್ಯಕರ್ತರ ಪಡೆಯಿದೆ. ಮಠಾಧೀಶರ ಬೆಂಬಲವಿದೆ. ವಾಟ್ಸ್ ಆ್ಯಪ್ ಯುನಿವರ್ಸಿಟಿಗಳ ಮೂಲಕ ಅಮಾಯಕ ಯುವಕರ ಮೆದುಳಿಗೆ ಸುಳ್ಳು ಗಳನ್ನು ತುಂಬಿ ಗಾಂಧಿ, ನೆಹರೂ, ಅಂಬೇಡ್ಕರ್ ಮುಂತಾದ ರಾಷ್ಟ್ರ ನಾಯಕರ ಬಗ್ಗೆ ಕಟ್ಟುಕತೆಗಳನ್ನು ಕಟ್ಟಿ ಹರಿಬಿಡಲಾಗಿದೆ. ಪ್ರಧಾನಿ ಮೋದಿಯವರ ಮೋಡಿ ಎಲ್ಲೆಡೆ ಆವರಿಸಿದೆ.ಇದೆಲ್ಲ ಇದ್ದರೂ ಸಾಹಿತ್ಯ, ಸಾಂಸ್ಕೃತಿಕ ರಂಗದಲ್ಲಿ ಅದರ ಸಿದ್ಧಾಂತವನ್ನು ಒಪ್ಪಿಕೊಳ್ಳುವವರು ತುಂಬಾ ಕಡಿಮೆ. ಜಗತ್ತಿನ ಯಾವುದೇ ದೇಶವಿರಲಿ ಸಾಂಸ್ಕೃತಿಕ ರಂಗ ಮನುಷ್ಯರನ್ನು ಜಾತಿಮತ, ಭಾಷೆಯ ಆಧಾರದಲ್ಲಿ ವಿಭಜಿಸುವ ಸಿದ್ಧಾಂತವನ್ನು ಒಪ್ಪುವುದಿಲ್ಲ. ಹೀಗಾಗಿ ಲೇಖಕರು, ಕಲಾವಿದರು, ನಿರ್ದೇಶಕರು, ಮುಂತಾದ ಸಾಂಸ್ಕೃತಿಕ ರಂಗ ಪ್ರತಿಭಾವಂತರು ಸಂಘಪರಿವಾರದಲ್ಲಿ ಕಡಿಮೆ. ಆಗ ಅದು ಮೊರೆ ಹೋಗುವುದು ಈಗ ರಂಗಾಯಣ ನಿರ್ದೇಶಕನಾಗಿದ್ದಾನಲ್ಲ ಅಂಥವರಿಗೆ. ಪರಿಷತ್ತಿನ ಈಗಿನ ಅಧ್ಯಕ್ಷರು ಕೂಡ ಅದೇ ಸಾಲಿಗೆ ಸೇರಿದವರು.

ಕಳೆದ ಶತಮಾನದ 1915ನೇ ಇಸವಿಯಲ್ಲಿ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣ ರಾಜ ಒಡೆಯರ್, ದಿವಾನರಾದ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯೀಲ್ ಅವರ ವಿಶೇಷ ಆಸಕ್ತಿಯಿಂದ ಅಸ್ತಿತ್ವಕ್ಕೆ ಬಂದ ಕನ್ನಡ ಸಾಹಿತ್ಯ ಪರಿಷತ್ತು ಮೊದಲು ರಾಜ ಪ್ರಭುತ್ವ, ನಂತರ ಪ್ರಜಾಪ್ರಭುತ್ವದ ಆಸರೆಯಲ್ಲೇ ಬೆಳೆದ ಸಂಸ್ಥೆ. ಕನ್ನಡ ಭಾಷೆಯ ಅಭಿವೃದ್ಧಿಗಾಗಿ ರೂಪುಗೊಂಡ ಈ ಸಾಹಿತ್ಯ ಪರಿಷತ್ತಿನಲ್ಲಿ ಜಾತಿ, ಮತಗಳ ಸ್ಪರ್ಶ ಮತ್ತು ಯಾವುದೇ ವೈಷಮ್ಯ ಇರಬಾರದೆಂದು ಮೂಲ ಸ್ಥಾಪಕರ ನಿರೀಕ್ಷೆಯಾಗಿತ್ತೆಂದು ಡಿ.ವಿ.ಗುಂಡಪ್ಪ ತಮ್ಮ ಜ್ಞಾಪಕ ಚಿತ್ರಶಾಲೆಯಲ್ಲಿ ಬರೆಯುತ್ತಾರೆ. ನಂತರ ಕಳೆದ 123 ವರ್ಷಗಳಲ್ಲಿ ಘನತೆ, ಗೌರವ ಉಳಿಸಿಕೊಂಡು ಬಂದ ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ತೀವ್ರ ಆಕ್ಷೇಪಗಳು, ಟೀಕೆಗಳು ಬಂದಿದ್ದು ಹೊಟೇಲ್ ಉದ್ಯಮಿ ಹರಿಕೃಷ್ಣ ಪುನರೂರ ಅಧ್ಯಕ್ಷರಾಗಿದ್ದಾಗ.

ನಂತರ ಚಂಪಾ ಅವರು ಅಧ್ಯಕ್ಷರಾಗಿದ್ದಾಗ ಮತ್ತೆ ಹಳಿಗೆ ಬಂದ ಕಸಾಪ ಪುಂಡಲೀಕ ಹಾಲಂಬಿ ಅವರು ಅಧ್ಯಕ್ಷರಾಗಿದ್ದಾಗ ಜನಪರ ಕಾಳಜಿಯ ಹೊಸ ಸ್ಪರ್ಶ ಪಡೆಯಿತು. ನನಗಿನ್ನೂ ನೆನಪಿದೆ. ಬಿಜಾಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನದ ಉದ್ಘಾಟಕರಾಗಿದ್ದ ಮುಖ್ಯಮಂತ್ರಿಗಳಿಗೆ ಸುಮಂಗಲಿಯರಿಂದ ಆರತಿ ಬೆಳಗಿಸುವ ಮೂಲಕ ಸ್ವಾಗತ ನೀಡಲು ಸಿದ್ಧತೆ ನಡೆದಿತ್ತು. ಕೆಲವು ವಿಚಾರವಾದಿಗಳು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಯಾವುದೇ ಒಂದು ಧರ್ಮದ ಸಂಕೇತವನ್ನು ಬಳಸಿ ಸ್ವಾಗತಿಸುವುದು ಸರಿಯಲ್ಲ. ಅಷ್ಟೇ ಅಲ್ಲ, ಸುಮಂಗಲಿಯರೆಂದರೆ ಯಾರು? ಉಳಿದ ಹೆಣ್ಣು ಮಕ್ಕಳು ಅಮಂಗಲಿಯರೇ ಎಂದು ಮಹಿಳಾ ಸಂಘಟನೆಗಳ ಕೆಲವರು ಆಕ್ಷೇಪಿಸಿದ್ದರು. ಇದನ್ನೆಲ್ಲ ಗಮನಿಸಿದ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹೇಳಿ ಅದರಂತೆ ನಡೆದುಕೊಂಡರು. ಹಾಲಂಬಿಯವರ ಅಧಿಕಾರಾವಧಿ ಮುಗಿದ ನಂತರ ಮತ್ತೆ ಹಳಿ ತಪ್ಪಿದ ಕನ್ನಡ ಸಾಹಿತ್ಯ ಪರಿಷತ್ತು ಈಗ ಸಂಪೂರ್ಣ ಅಡ್ಡ ಹಾದಿ ಹಿಡಿದಿದೆ.

ಎರಡು ವರ್ಷಗಳ ಹಿಂದೆ ಶೃಂಗೇರಿಯಲ್ಲಿ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ. ಪರಿಷತ್ತಿನ ಜಿಲ್ಲಾ ಸಮಿತಿ ಸಮ್ಮೇಳನಾಧ್ಯಕ್ಷತೆಗೆ ಲೇಖಕರೂ ಆದ ಕಲ್ಕುಳಿ ವಿಠ್ಠಲ ಹೆಗ್ಡೆ ಅವರನ್ನು ಒಮ್ಮತದಿಂದ ಆರಿಸಿತು. ಇದು ಸ್ವಾಯತ್ತ ಸಂಸ್ಥೆಯಾದ ಸಾಹಿತ್ಯ ಪರಿಷತ್ತಿನ ಪರಮಾಧಿಕಾರ. ಆದರೆ, ಆಗ ಮಂತ್ರಿಯಾಗಿದ್ದ ಸಿ.ಟಿ.ರವಿಯವರಿಗೆ ಇದು ಇಷ್ಟವಾಗಲಿಲ್ಲ. ಸಮ್ಮೇಳನಾಧ್ಯಕ್ಷರನ್ನು ಬದಲಿಸಲು ಒತ್ತಡ ಹೇರಿದರು. ಬದಲಿಸದಿದ್ದರೆ ಸಮ್ಮೇಳನದ ಉದ್ಘಾಟನೆಗೆ ಬರುವುದಿಲ್ಲ ಎಂದು ಬೆದರಿಕೆ ಹಾಕಿದರು. ಆದರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಣಿಯಲಿಲ್ಲ. ಆಗ ಕಸಾಪ ಅಧ್ಯಕ್ಷರಾಗಿದ್ದ ಮನು ಬಳಿಗಾರ ಅವರ ಮೇಲೂ ಒತ್ತಡ ತಂದರು. ಅವರೂ ಅಸಹಾಯಕರಾಗಿದ್ದರು. ಸರಕಾರದ ಅನುದಾನ ನಿಲ್ಲಿಸುವ ಬೆದರಿಕೆ ಹಾಕಿದರು. ಆದರೂ ಚಿಕ್ಕಮಗಳೂರಿನ ಕಸಾಪ ಪದಾಧಿಕಾರಿಗಳು ಮಣಿಯಲಿಲ್ಲ. ಅನುದಾನ ಬರದಿದ್ದರೂ ಜನರೇ ಹಣವನ್ನು ಸಂಗ್ರಹಿಸಿ ವಿಠಲ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ಮಾಡಿದರು. ಇದು ರಾಜ್ಯದ ಸಾಂಸ್ಕೃತಿಕ ರಂಗದ ಇಂದಿನ ಪರಿಸ್ಥಿತಿ.

ಹೀಗೆ ಅಡ್ಡಹಾದಿ ಹಿಡಿದ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಮೂಲ ಆಶಯಗಳಿಗೆ ವ್ಯತಿರಿಕ್ತವಾಗಿ ರಾಜಕೀಯ ಪಕ್ಷವೊಂದರ ಕೋಮುವಾದಿ ಅಜೆಂಡಾವನ್ನು ಜಾರಿಗೆ ತರಲು ಬಳಕೆಯಾಗುತ್ತಿದೆ. ಮುಸ್ಲಿಮರನ್ನು ಮುಖ್ಯ ವಾಹಿನಿಯಿಂದ ಪ್ರತ್ಯೇಕಿಸಿ ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಬೇಕೆಂಬ ಗೊಳ್ವಾಲ್ಕರ್ ಸಿದ್ಧಾಂತದ ಭಾಗವಾಗಿ ಸಾಹಿತ್ಯ ಸಮ್ಮೇಳನದಿಂದ ಮುಸ್ಲಿಮ್ ಲೇಖಕರನ್ನು ದೂರವಿಡಲು ಮುಂದಾಗಿದೆ.
ಪರಿಷತ್ತಿನ ಶತಮಾನದ ಇತಿಹಾಸದಲ್ಲಿ ಹಿಂದೆಂದೂ ಇಂಥ ಅಪಚಾರ ನಡೆದಿರಲಿಲ್ಲ. ಬೋಳುವಾರು, ರಹಮತ್ ತರೀಕೆರೆ , ಮುಜಫ್ಪರ್ ಆಸಾದಿ, ಬಾನು ಮುಷ್ತಾಕ್, ರಮಜಾನ ದರ್ಗಾರಂಥ ಹೆಸರಾಂತ ಲೇಖಕರಿದ್ದರೂ ಯಾರನ್ನೂ ಆಹ್ವಾನಿಸಿಲ್ಲ. ಹೊಸ ಪೀಳಿಗೆಯಲ್ಲಂತೂ ನೂರಾರು ಸಂಖ್ಯೆಯಲ್ಲಿ ಬರೆಯುತ್ತಿದ್ದಾರೆ.

ಹೀಗೆ ಪಟ್ಟಿ ಮಾಡುತ್ತಾ ಹೋದರೆ ಶಿಶುನಾಳ ಶರೀಫರಿಂದ ಆರಂಭವಾಗಿ ಕೆ.ಎಸ್.ನಿಸಾರ್ ಅಹಮದ್, ಬೊಳುವಾರು, ಸಾರಾ ಅಬೂಬಕರ್, ಹಸನ್ ನಯೀಂ ಸುರಕೋಡ ಈ ಸಲದ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತರಾದ ದಾದಾಪೀರ್ ಜೈಮನ್, ಆರಿಫ್ ರಾಜಾ, ಎ.ಕೆ.ಕುಕ್ಕಿಲ, ಅಬ್ಬುಸ್ಸಲಾಮ್ ಪುತ್ತಿಗೆ, ಇಸ್ಮಾಯೀಲ್, ಬಿ.ಎಂ.ಬಶೀರ್, ಮುಹಮ್ಮದ್ ಕುಳಾಯಿ, ಕೆ.ಶರೀಫಾ, ರಜಿಯಾ, ಫಾತಿಮಾ ರಲಿಯಾ, ಪೀರ್ ಭಾಷಾ, ಎ.ಎಸ್ .ಮಕಾನದಾರ, ಮಕ್ತುಮಬಿ ಮುಲ್ಕಾ, ಶಿಜು ಪಾಶಾ, ಸಿರಾಜ್ ಬಿಸರಳ್ಳಿ, ಬಿ.ಎಂ.ಹನೀಫ್, ಅಸೀಫಾ ನೂರ್ ಜಹಾನ, ಸಕೀನಾ ಬೇಗಂ, ಅಮೀರ್ ಸಾಬ್ ಒಂಟಿ, ಉಮರ್ ದೇವರಮನಿ, ಚಾಂದ್ ಕವಿ ಇಮಾಮ್ ಗೋಡೆಕಾರ್, ಒಬ್ಬರಲ್ಲ, ಇಬ್ಬರಲ್ಲ ನೂರಾರು ಯುವ ಮುಸ್ಲಿಮ್ ಲೇಖಕರು ಬರೆಯುತ್ತಿದ್ದಾರೆ.
ಈ ಪೈಕಿ ಕವಿ ಸನದಿ, ಅಕ್ಬರ್ ಅಲಿ, ನಿಸಾರ್ ಅಹಮದ್ , ಬಿ.ಎಂ.ಇದಿನಬ್ಬ ಮುಂತಾದವರು ನಮ್ಮ ನಡುವೆಗಿಲ್ಲ.

ಸನ್ಮಾರ್ಗ ಸಂಪಾದಕರಾಗಿದ್ದ ಇಬ್ರಾಹಿಂ ಸಯೀದ್ ಅವರು ಈಗಿಲ್ಲ.ಅವರ ಅಸ್ಖಲಿತವಾದ ಕನ್ನಡ ಬರಹದ ಅಭಿಮಾನಿ ನಾನು. ನಾನು ಮೊದಲಿನಿಂದಲೂ ನಮ್ಮ ಸಂಯುಕ್ತ ಕರ್ನಾಟಕ ಆಫೀಸಿಗೆ ಬರುತ್ತಿದ್ದ ಸನ್ಮಾರ್ಗ ಪತ್ರಿಕೆಯನ್ನು ತಪ್ಪದೇ ಓದುತ್ತಿದೆ. ಈಗಲೂ ಆಗಾಗ ಸಿಕ್ಕಾಗ ಓದುತ್ತೇನೆ. ಈಗಿನ ಸಂಪಾದಕ ಕುಕ್ಕಿಲರ ಬರಹವೂ ತುಂಬಾ ಇಷ್ಟ. ಇನ್ನೊಬ್ಬರನ್ನು ಮರೆತೆ. ಯು.ಟಿ. ಫರ್ಝಾನಾ ಅಶ್ರಫ್ ಎಂಬ ಮಂಗಳೂರಿನ ಸಹೋದರಿ ಕೂಡ ಚೆನ್ನಾಗಿ ಬರೆಯುತ್ತಾರೆ. ಹನ್ನೆರಡನೇ ಶತಮಾನದ ವಚನ ಸಾಹಿತ್ಯದ ಬಗ್ಗೆ ಫರ್ಝಾನ ಅಶ್ರಫ್ ಅವರ ವೀಡಿಯೊ ಭಾಷಣವೊಂದನ್ನು ಕೇಳಿ ತುಂಬಾ ಮನಸೋತು ಹೋದೆ. ಲಿಂಗಾಯತ ಮಠಾಧೀಶರಿಂದಲೂ ವಚನ ಸಾಹಿತ್ಯದ ಬಗ್ಗೆ ಇಂಥ ಉಪನ್ಯಾಸವನ್ನು ನಾನು ಕೇಳಿರಲಿಲ್ಲ. ಹೀಗೇ ನೂರಾರು ಮುಸ್ಲಿಮ್ ಲೇಖಕರು ಬರೆಯುತ್ತಿದ್ದಾರೆ. ಇವರಾರು ಕಣ್ಣಿಗೆ ಕೋಮುವಾದದ ಕಪ್ಪು ಪಟ್ಟಿ ಕಟ್ಟಿಕೊಂಡ ಪರಿಷತ್ತಿನ ಅಧ್ಯಕ್ಷರಿಗೆ ಕಾಣಲಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಸಾಹಿತ್ಯ ಸಮ್ಮೇಳನದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ, ವಾಹನ ಚಾಲನೆ ಮಾಡುವ, ಕಸಗೂಡಿಸುವ ವ್ಯಕ್ತಿಗಳು ಮುಸ್ಲಿಮರೆಂದು ಪಟ್ಟಿ ನೀಡುತ್ತಾರೆ.

ಕನ್ನಡ ನಾಡು, ನುಡಿಗಾಗಿ ಶ್ರಮಿಸಿದ ಒಂದು ಸಮುದಾಯವನ್ನು ಕಡೆಗಣಿಸಿ ಮುಸ್ಲಿಮ್ ಲೇಖಕರಿಗೆ ಅವಕಾಶ ನೀಡದಿರುವುದು ಕೇವಲ ಮಹೇಶ್ ಜೋಶಿ ಅವರ ವೈಯಕ್ತಿಕ ನಿರ್ಧಾರ ಎಂದು ಹೇಳಿದರೆ ತಪ್ಪಾಗುತ್ತದೆ. ಇದು ನಾಗಪುರದ ಸಂವಿಧಾನೇತರ ಅಧಿಕಾರ ಕೇಂದ್ರದ ವೌಖಿಕ ಆದೇಶ. ಅದನ್ನು ಕಸಾಪ ಅಧ್ಯಕ್ಷರು ಜಾರಿಗೆ ತರುತ್ತಿದ್ದಾರೆ. ತಮ್ಮನ್ನು ಅಧ್ಯಕ್ಷನನ್ನಾಗಿ ಮಾಡಲು ಬಿಜೆಪಿ ತನ್ನ ಎಲ್ಲ ಸಾಮರ್ಥ್ಯವನ್ನು ವ್ಯಯಿಸಿದೆ.ಅದರ ಋಣವನ್ನು ಜೋಶಿ ತೀರಿಸುತ್ತಿದ್ದಾರೆ. ಕಸಾಪ ಮತ್ತೆ ಹಳಿ ತಪ್ಪಿದೆ. ಅದನ್ನು ಮತ್ತೆ ಹಳಿಗೆ ತರಬೇಕೆಂದರೆ ಕೋಮುವಾದಿ ಶಕ್ತಿಗಳಿಂದ ರಾಜಕೀಯ ಅಧಿಕಾರ ಕಿತ್ತುಕೊಳ್ಳುವುದೊಂದೇ ಉಳಿದ ದಾರಿಯಾಗಿದೆ.'

Similar News