ಮದ್ಯ ಮೇಲಿನ ತೆರಿಗೆ ಅಂತ್ಯಗೊಳಿಸಿದ ದುಬೈ
ದುಬೈ: ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದುಬೈ (Dubai) ಆಡಳಿತವು ಜನವರಿ 1. 2023 ರಿಂದ ಜಾರಿಗೆ ಬರುವಂತೆ ಮದ್ಯದ ಮೇಲೆ ಶೇ 30 ತೆರಿಗೆಯನ್ನು ವಾಪಸ್ ಪಡೆದಿದೆಯಲ್ಲದೆ ಮದ್ಯ ಪರವಾನಗಿಯನ್ನು ಪಡೆಯುವುದನ್ನೂ ಉಚಿತಗೊಳಿಸಿದೆ.
ಈ ಮೂಲಕ ದೇಶದ ಆಡಳಿತದ ಆದಾಯ ಮೂಲವೊಂದನ್ನು ಅಂತ್ಯಗೊಳಿಸಿ ಈ ಮೂಲಕ ಎಮಿರೇಟ್‌ನಲ್ಲಿ ಪ್ರವಾಸೋದ್ಯಮಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಮದ್ಯ ಮಾರಾಟವು ದುಬೈ ಆರ್ಥಿಕತೆಯನ್ನು ಅಳೆಯುವ ಮಾನದಂಡವಾಗಿದೆ. ಇತ್ತೀಚೆಗೆ ಖತರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ಪಂದ್ಯಾವಳಿ ನೋಡಲು ತೆರಳುತ್ತಿದ್ದ ಸಾಕಷ್ಟು ಅಭಿಮಾನಿಗಳು ದುಬೈನ ಬಾರ್‌ಗಳಿಗೂ ಭೇಟಿ ನೀಡಿದ್ದರು.
ಮದ್ಯದ ಮೇಲೆ ತೆರಿಗೆ ತೆಗೆದುಹಾಕಿರುವ ವಿಚಾರವನ್ನು ಅಲ್ಲಿನ ಪ್ರಮುಖ ಮದ್ಯ ವಿತರಕ ಸಂಸ್ಥೆ ಮೆರಿಟೈಮ್ ಎಂಡ್ ಮರ್ಕಂಟೈಲ್ ಇಂಟರ್‌ನ್ಯಾಷನಲ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
ತನ್ನ ಸ್ಟೋರ್‌ಗಳಲ್ಲಿ ಮದ್ಯ ಖರೀದಿಸುವಂತೆ ಹಾಗೂ ಇನ್ನು ಮುಂದೆ ಮದ್ಯಕ್ಕಾಗಿ ಎಮಿರೇಟ್ ಹೊರಗೆ ಹೋಗುವ ಅಗತ್ಯವಿಲ್ಲವೆಂದೂ ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ತೆರಿಗೆ ರಹಿತ ಮದ್ಯ ಖರೀದಿಗಳಿಗಾಗಿ ದುಬೈ ನಿವಾಸಿಗಳು ಹಿಂದಿನಿಂದಲೂ ಉಮ್ಮ್-ಅಲ್-ಖುವೈನ್ ಮತ್ತು ಇತರೆಡೆಗಳಿಗೆ ಪ್ರಯಾಣಿಸುತ್ತಿದ್ದರು.
ಇದನ್ನೂ ಓದಿ: ಕೇಂದ್ರ ಸರಕಾರದ ನೋಟು ನಿಷೇಧ ನಿರ್ಧಾರವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್