7 ಸಾವಿರ ಕೈದಿಗಳ ಬಿಡುಗಡೆ ಮ್ಯಾನ್ಮಾರ್ ಸೇನಾಡಳಿತ ಘೋಷಣೆ

Update: 2023-01-04 17:40 GMT

ಯಾಂಗಾನ್, ಜ.4: ದೇಶದ 75ನೇ  ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ 7,012 ಕೈದಿಗಳಿಗೆ ಕ್ಷಮಾದಾನ ನೀಡಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ ಎಂದು ಮ್ಯಾನ್ಮಾರ್‍ನ ಸೇನಾಡಳಿತವನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಜನವರಿ 4(ಬುಧವಾರ) ಮ್ಯಾನ್ಮಾರ್‍ನ ಸ್ವಾತಂತ್ರ್ಯ ದಿನವಾಗಿದೆ. ಈ ಸಂದರ್ಭ ದೇಶವನ್ನುದ್ದೇಶಿಸಿ ಮಾತನಾಡಿದ ಸೇನಾಡಳಿತದ ಮುಖ್ಯಸ್ಥ ಜನರಲ್ ಮಿನ್ ಆಂಗ್ ಹ್ಲಾಂಗ್ ಸೇನಾಡಳಿತಕ್ಕೆ ಬೆಂಬಲ ನೀಡಿದ ಕೆಲವು ದೇಶಗಳಿಗೆ ಅಭಿನಂದನೆ ಸಲ್ಲಿಸಿದರು. ರಾಜಧಾನಿ ಯಾಂಗ್ಯಾಂಗ್‍ನಲ್ಲಿ ನಡೆದ ಪರೇಡ್ ಬಳಿಕ ಮಾತನಾಡಿದ ಅವರು `ಎಲ್ಲಾ ಒತ್ತಡ, ಟೀಕೆ, ಆಕ್ರಮಣಗಳ ನಡುವೆಯೂ ಧನಾತ್ಮಕವಾಗಿ  ನಮ್ಮೊಂದಿಗೆ ಸಹಕರಿಸಿದ ಕೆಲವು ದೇಶಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ನೆರೆಯ ದೇಶಗಳಾದ ಚೀನಾ, ಭಾರತ, ಥೈಲ್ಯಾಂಡ್, ಲಾವೋಸ್ ಮತ್ತು ಬಾಂಗ್ಲಾದೇಶಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಗಡಿ ಸ್ಥಿರತೆ ಮತ್ತು ಅಭಿವೃದ್ಧಿಗಾಗಿ ನಾವು ಒಗ್ಗೂಡಿ ಕಾರ್ಯ ನಿರ್ವಹಿಸಲಿದ್ದೇವೆ ಎಂದ ಅವರು, ಮ್ಯಾನ್ಮಾರ್ ಸೇನಾಡಳಿತದ ಮೇಲೆ ಹೆಚ್ಚುತ್ತಿರುವ ಅಂತರಾಷ್ಟ್ರೀಯ ಒತ್ತಡದ ಬಗ್ಗೆ ಪ್ರಸ್ತಾವಿಸಿ `ಕೆಲವು ದೇಶಗಳು ಮತ್ತು ಸಂಘಟನೆಗಳು ದೇಶದ ವ್ಯವಸ್ಥೆಗೆ ತೊಂದರೆ ಒಡ್ಡುತ್ತಿದ್ದು ಮ್ಯಾನ್ಮಾರ್‍ನ ಆಂತರಿಕ ವ್ಯವಹಾರದಲ್ಲಿ ಮೂಗು ತೂರಿಸುತ್ತಿವೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

2021ರ ಫೆಬ್ರವರಿ 1ರಂದು ಕ್ಷಿಪ್ರಕ್ರಾಂತಿಯ ಮೂಲಕ ಸೂಕಿ ನೇತೃತ್ವದ ಸರಕಾರವನ್ನು ಪದಚ್ಯುತಗೊಳಿಸಿದ್ದ ಸೇನೆ ಆಡಳಿತವನ್ನು ಕೈಗೆತ್ತಿಕೊಂಡಂದಿನಿಂದ ಅಲ್ಲಿ ವ್ಯಾಪಕ ಪ್ರತಿಭಟನೆ, ದಂಗೆ ನಡೆಯುತ್ತಿದೆ. ಸೂಕಿ ಸೇರಿದಂತೆ ಪ್ರಮುಖ ರಾಜಕೀಯ ಮುಖಂಡರನ್ನು ಬಂಧನದಲ್ಲಿಡಲಾಗಿದೆ. ಸೇನಾಡಳಿತ ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ದಮನಿಸಿದ ಹಿನ್ನೆಲೆಯಲ್ಲಿ ಅಮೆರಿಕ, ಯುರೋಪಿಯನ್ ಯೂನಿಯನ್, ಬ್ರಿಟನ್, ಕೆನಡಾ ಸೇರಿದಂತೆ ಹಲವು ದೇಶಗಳು ಮ್ಯಾನ್ಮಾರ್‍ನ ಸೇನಾಡಳಿತ ಹಾಗೂ ಸೇನಾಡಳಿತಕ್ಕೆ ನೆರವಾಗಿರುವ ಹಲವರ ಮೇಲೆ ನಿರ್ಬಂಧ ವಿಧಿಸಿದೆ. ಕಳೆದ ತಿಂಗಳು ವಿಶ್ವಸಂಸ್ಥೆಯ ಭದ್ರತಾ ಸಮಿತಿಯೂ ಮ್ಯಾನ್ಮಾರ್ ಸೇನಾಡಳಿತವನ್ನು ಖಂಡಿಸುವ ನಿರ್ಣಯ ಅಂಗೀಕರಿಸಿದೆ.

ಆದರೂ, ಸೇನಾಡಳಿತಕ್ಕೆ ಕೆಲವು ಅಂತರಾಷ್ಟ್ರೀಯ ಬೆಂಬಲ ದಕ್ಕಿದೆ. ಮ್ಯಾನ್ಮಾರ್ ಸೇನಾಡಳಿತದ ವಿರುದ್ಧ ಕಠಿಣ ಕ್ರಮಕ್ಕೆ ಚೀನಾ ಮತ್ತು ರಶ್ಯ ವಿರೋಧ ವ್ಯಕ್ತಪಡಿಸಿದೆ. ಮ್ಯಾನ್ಮಾರ್‍ನ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಥೈಲ್ಯಾಂಡ್ ಕಳೆದ ತಿಂಗಳು ಪ್ರಾದೇಶಿಕ ಸಮಾವೇಶವನ್ನು ಆಯೋಜಿಸಿತ್ತು.

Similar News