ನ್ಯಾಯಾಂಗದ ಮೇಲೆ ದುರುದ್ದೇಶಪೂರ್ವಕ ದಾಳಿ ಸಲ್ಲ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಭಾರತದ ನ್ಯಾಯಾಂಗದಲ್ಲಿ ಹಲವಾರು ದೋಷಗಳಿವೆ ಮತ್ತು ಅದು ವಿಮರ್ಶಾತೀತವಲ್ಲ. ಅದರಲ್ಲೂ ನ್ಯಾಯ ಒದಗಿಸುವುದರಲ್ಲಿ ಅಂತಿಮ ವೇದಿಕೆಯಾಗಿರುವ ಉನ್ನತ ನ್ಯಾಯಾಂಗ ತಮ್ಮ ಬಗ್ಗೆ ಆತ್ಮವಿಮರ್ಶಾತ್ಮಕವಾಗಿರಬೇಕು. ಪ್ರಾತಿನಿಧ್ಯ, ಪಾರದರ್ಶಕತೆಗಳನ್ನು ಒಳಗೊಂಡಂತೆ ನ್ಯಾಯವ್ಯವಸ್ಥೆಯನ್ನು ಇನ್ನಷ್ಟು ಪ್ರಜಾತಾಂತ್ರೀಕರಣಗೊಳಿಸುವ ಉದ್ದೇಶಕ್ಕಾಗಿ ತೆರೆದ ಮನವನ್ನು ಹೊಂದಿರಬೇಕು. ಆದರೆ ಮೋದಿ ಸರಕಾರ ನ್ಯಾಯಾಂಗದ ಮೇಲೆ ಮಾಡುತ್ತಿರುವ ದಾಳಿಗಳ ಹಿಂದೆ ಅಂಥಾ ಯಾವುದೇ ಸದುದ್ದೇಶವಿಲ್ಲ.
ಇದು ದಿನೇದಿನೇ ಸ್ಪಷ್ಟವಾಗುತ್ತಿದೆ. ಅದರಲ್ಲೂ ನ್ಯಾ. ಡಿ.ವೈ. ಚಂದ್ರಚೂಡ್ ಅವರು ಮುಖ್ಯ ನ್ಯಾಯಾಧೀಶರಾದ ನಂತರದಲ್ಲಿ ಪ್ರಧಾನಿ ಮೋದಿಯವರಿಂದ ಹಿಡಿದು ಅವರ ಕಾನೂನು ಮಂತ್ರಿ ಕಿರಣ್ ರಿಜಿಜು, ಅರೆಸ್ಸೆಸ್ ನಾಯಕರು, ಬಿಜೆಪಿ ನಾಯಕರು ನ್ಯಾಯಾಂಗದ ಸ್ವಾಯತ್ತತೆಯ ಮೇಲೆ ಒಂದೇ ಸಮನೆ ದಾಳಿ ನಡೆಸಿದ್ದಾರೆ. ಕಾನೂನು ಸಚಿವಾಲಯವಂತೂ ಸರ್ವೋಚ್ಚ ನ್ಯಾಯಾಲಯ ಉನ್ನತ ನ್ಯಾಯಾಲಯಗಳ ನೇಮಕಾತಿಗೆ ಕಳಿಸಿದ ಎಲ್ಲಾ ಶಿಫಾರಸುಗಳನ್ನು ದುರುದ್ದೇಶಪೂರ್ವಕವಾಗಿ ವಿಲೇವಾರಿ ಮಾಡದೆ ನ್ಯಾಯದಾನಕ್ಕೆ ತಡೆಯೊಡ್ಡುತ್ತಿದೆ.
ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರಂತೂ ಎಲ್ಲಾ ವೇದಿಕೆಗಳಲ್ಲೂ ಮತ್ತು ಎಲ್ಲಾ ಸಂದರ್ಭಗಳಲ್ಲೂ ನ್ಯಾಯಾಂಗದ ಸ್ವಾಯತ್ತತೆಯ ಮೇಲೆ ಮತ್ತು ಪರಮಾಧಿಕಾರಗಳ ಮೇಲೆ ದಾಳಿ ಮಾಡುವುದನ್ನು ಹವ್ಯಾಸ ಮಾಡಿಕೊಂಡಿದ್ದಾರೆ ಅಥವಾ ಅವರಿಗೆ ಆ ಬಗೆಯ ವಿಶೇಷ ಜವಾಬ್ದಾರಿಯನ್ನು ಆಳುವ ವ್ಯವಸ್ಥೆ ಹೊರಿಸಿದಂತಿದೆ. ತಮ್ಮ ಇತ್ತೀಚಿನ ದಾಳಿಯಲ್ಲಿ ಅವರು ಯಾವುದೇ ಪ್ರಜಾತಂತ್ರದಲ್ಲಿ ಜನರಿಂದ ಆಯ್ಕೆಯಾದ ಸಂಸತ್ತು ಪರಮೋಚ್ಚ. ಹೀಗಾಗಿ ಅದು ಸಂವಿಧಾನದ ಯಾವುದೇ ಅಂಶವನ್ನು ಬದಲಾಯಿಸುವ, ಸೇರಿಸುವ ಪರಮಾಧಿಕಾರವನ್ನು ಹೊಂದಿರಬೇಕು ಎಂದು ಘೋಷಿಸಿದ್ದಾರೆ ಮತ್ತು 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ ಪೂರ್ಣ ಪೀಠ ಸಂವಿಧಾನ ತಿದ್ದುಪಡಿಗಳ ಮೇಲೆ ಸಂಸತ್ತಿನ ಅಧಿಕಾರಕ್ಕೆ ವಿಧಿಸಿರುವ ಮಿತಿಗಳು ಅಪ್ರಜಾತಾಂತ್ರಿಕ ಎಂದೂ ಆಕ್ಷೇಪಿಸಿದ್ದಾರೆ. ಇದು ಅತ್ಯಂತ ಗಂಭೀರವಾದ ಬೆಳವಣಿಗೆಯಾಗಿದ್ದು, ಆರೆಸ್ಸೆಸ್-ಬಿಜೆಪಿಯ ಸಂವಿಧಾನ ಬದಲಾವಣೆಯ ಗುಪ್ತ ಅಜೆಂಡಾ ಇರಬಹುದೇ ಎಂದು ಕೆಲವರಲ್ಲಿ ಅನುಮಾನವನ್ನೂ ಹುಟ್ಟಿಸುವಂತಿದೆ.
ಭಾರತದ ಸಂವಿಧಾನದ ಪ್ರಕಾರ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳಿಗೆ ಅವುಗಳದ್ದೇ ಹಕ್ಕು ಬಾಧ್ಯತೆಗಳಿದ್ದು ಅವುಗಳ ಸಾರ್ವಭೌಮಿ ಅಧಿಕಾರಗಳ ಎಲ್ಲೆಯನ್ನೂ ಸಂವಿಧಾನ ಸ್ಪಷ್ಟಪಡಿಸಿದೆ. ದೇಶದ ಆಡಳಿತ ನಿರ್ವಹಣೆ ಹಾಗೂ ಭವಿಷ್ಯದ ದೃಷ್ಟಿಯಿಂದ ಯಾವುದೇ ಕಾನೂನು ಮಾಡುವ ಅಧಿಕಾರ ಸಂಸತ್ತಿಗೆ ಇದ್ದರೆ ಅವು ಸಂವಿಧಾನ ಹಾಗೂ ಕಾನೂನು ಬದ್ಧವಾಗಿವೆಯೇ ಎಂದು ಪರಿಶೀಲಿಸುವ ಅಧಿಕಾರ ಉನ್ನತ ನ್ಯಾಯಾಂಗಕ್ಕಿದೆ. ಆದರೆ 1969ರಲ್ಲಿ ಇಂದಿರಾಗಾಂಧಿಯವರ ನೇತೃತ್ವದಲ್ಲಿ ಬಲಿಷ್ಠವಾದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದ ಭೂಸುಧಾರಣೆ, ಬ್ಯಾಂಕ್ ರಾಷ್ಟ್ರೀಕರಣದಂತಹ ನೀತಿಗಳನ್ನು ಸಂವಿಧಾನ ಬಾಹಿರವೆಂದು ಸರ್ವೋಚ್ಚ ನ್ಯಾಯಾಲಯ ರದ್ದು ಮಾಡಿತು. ಆಗ ಇಂದಿರಾ ನೇತೃತ್ವದ ಸಂಸತ್ತು ಸಂವಿಧಾನಕ್ಕೆ ತಿದ್ದುಪಡಿ ತಂದು ಮತ್ತೆ ಆ ಕಾನೂನುಗಳನ್ನು ಜಾರಿ ಮಾಡುವ ಅಧಿಕಾರ ಪಡೆದುಕೊಂಡಿತು.
ಇದು ನ್ಯಾಯಾಂಗ ಹಾಗೂ ಕಾರ್ಯಾಂಗದ ನಡುವೆ ಘರ್ಷಣೆಯನ್ನು ಹುಟ್ಟುಹಾಕಿತು. ಮುಂದುವರಿದು ಇಂದಿರಾಗಾಂಧಿ ಸರಕಾರ ಸಂಸತ್ತಿನ ಪರಮಾಧಿಕಾರವನ್ನು ನ್ಯಾಯಾಂಗ ಪ್ರಶ್ನಿಸಬಾರದೆಂಬ ತಿದ್ದುಪಡಿಯನ್ನು ಸಂವಿಧಾನಕ್ಕೆ ಮಾಡಿತು. ಈ ಹಿನ್ನೆಲೆಯಲ್ಲೇ ಸಂಸತ್ತಿಗೆ ಸಂವಿಧಾನದ ಎಲ್ಲಾ ಭಾಗಗಳನ್ನು ತಿದ್ದುಪಡಿ ಮಾಡುವ ಅಪರಿಮಿತವಾದ ಅಧಿಕಾರವಿದೆಯೇ ಎಂಬ ಸಾಂವಿಧಾನಿಕ ಪ್ರಶ್ನೆ ಕೇಶವಾನಂದ ಭಾರತಿ ಪ್ರಕರಣದಲ್ಲಿ ನ್ಯಾಯಾಂಗದ ಮುಂದೆ ಬಂತು. ಆ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಪೂರ್ಣಪೀಠವು ಸಂಸತ್ತಿಗೆ ಸಂವಿಧಾನವನ್ನು ತಿದ್ದುಪಡಿ ಮಾಡುವ ಪರಮಾಧಿಕಾರವಿದ್ದರೂ ಸಂವಿಧಾನದ ಮೂಲ ಸ್ವರೂಪವನ್ನೇ ಬದಲಾಯಿಸುವಂತಹ ಅಧಿಕಾರವಿಲ್ಲ ಎಂದು ಬಹುಮತದ ತೀರ್ಪು ನೀಡಿತು.
ಸೆಕ್ಯುಲರಿಸಂ, ಸಂಸದೀಯ ಪ್ರಜಾತಂತ್ರ, ನ್ಯಾಯಾಂಗದ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ, ೆಡರಲಿಸಂ ಇತ್ಯಾದಿಗಳು ಸಂವಿಧಾನದ ಮೂಲ ಸ್ವರೂಪವಾಗಿದ್ದು ಅವುಗಳನ್ನು ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗಿಲ್ಲವೆಂದು ಸ್ಪಷ್ಟಪಡಿಸಿತು. ಇಂದು ಪ್ರಜಾತಂತ್ರ-ಸೆಕ್ಯುಲರಿಸಂ-ಫೆಡರಲಿಸಂ ಎಂಬ ಎಲ್ಲಾ ಮೌಲ್ಯಗಳನ್ನು ತಿರಸ್ಕರಿಸುವ ಸಿದ್ಧಾಂತವನ್ನುಳ್ಳ ಆರೆಸ್ಸೆಸನ್ನು ತನ್ನ ಮಾತೃ ಸಂಘಟನೆಯೆಂದು ಒಪ್ಪಿಕೊಳ್ಳುವ ಬಿಜೆಪಿ ಸರಕಾರ ಅಧಿಕಾರದಲ್ಲಿದೆ.
ಅದರ ಎಲ್ಲಾ ಪ್ರಮುಖ ನಾಯಕರು ಈ ಸಂವಿಧಾನವನ್ನು ಬದಲಾಯಿಸಬೇಕೆಂದು ಹಲವಾರು ಬಾರಿ ಬಹಿರಂಗವಾಗಿ ಘೋಷಿಸಿದ್ದಾರೆ. ಹಾಗೂ ಕಳೆದ ಎಂಟು ವರ್ಷಗಳಲ್ಲಿ ಅದರಲ್ಲೂ 2019ರಲ್ಲಿ ಎರಡನೇ ಬಾರಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಮೇಲಂತೂ ಸಂವಿಧಾನದ ಈ ಎಲ್ಲಾ ಮೌಲ್ಯಗಳ ಮೇಲೂ ನಿರಂತರ ದಾಳಿ ನಡೆಯುತ್ತಿದೆ. ಹೀಗಾಗಿ ದೇಶದ ಜನರು ಈ ದಾಳಿಯಿಂದ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಉನ್ನತ ನ್ಯಾಯಾಂಗವನ್ನು ಅಂತಿಮ ಆಸರೆಯಾಗಿ ಪರಿಗಣಿಸುತ್ತಿರುವಾಗ ಉಪರಾಷ್ಟ್ರಪತಿಯಂತಹ ಉನ್ನತ ಸಾಂವಿಧಾನಿಕ ಹುದ್ದೆಯಿಂದ ಹಿಡಿದು ಸರಕಾರದ ಮತ್ತು ಸಂಘಪರಿವಾರದ ಸಕಲರಿಂದಲೂ ನ್ಯಾಯಾಂಗದ ಸಾಂವಿಧಾನಿಕ ಅಧಿಕಾರದ ಮೇಲೆ ನಿರಂತರ ದಾಳಿ ಶುರುವಾಗಿದೆ.
1970ರ ದಶಕದಲ್ಲಿ ಸಂಸತ್ತು ಭೂ ಹಂಚಿಕೆ, ಬ್ಯಾಂಕ್ ರಾಷ್ಟ್ರೀಕರಣದಂತಹ ಅಲ್ಪಸ್ವಲ್ಪ ಜನಪರ ನೀತಿಗಳನ್ನು ರಕ್ಷಿಸಿಕೊಳ್ಳಲು ಮಾಡಿದ ಕಾನೂನುಗಳನ್ನು ಬಲಿಷ್ಠರ ಪರವಾಗಿ ನ್ಯಾಯಾಂಗ ರದ್ದು ಮಾಡಿತ್ತು. ಆಗ ಸಂಸತ್ತಿನ ಪರಮಾಧಿಕಾರವನ್ನು ರಕ್ಷಿಸಿಕೊಳ್ಳಲು ನ್ಯಾಯಾಂಗದ ಪರಮಾಧಿಕಾರವನ್ನು ಸೀಮಿತಗೊಳಿಸುವ ತಿದ್ದುಪಡಿಯನ್ನು ಮಾಡುವ ಪ್ರಯತ್ನವನ್ನು ಮಾಡಲಾಗಿತ್ತು. ಆದರೆ ಈಗ ಪಾತ್ರಗಳು ಅದಲು ಬದಲಾಗಿವೆ. ಈಗ ಹಿಂದುತ್ವದ ಅಮಲನ್ನು ಹಬ್ಬಿಸಿ ದ್ವೇಷ ರಾಜಕಾರಣದ ಆಧಾರದಲ್ಲಿ ಬಹುಮತವನ್ನು ಪಡೆದು ಅಧಿಕಾರಕ್ಕೆ ಬಂದಿರುವ ಮೋದಿ ಸರಕಾರಕ್ಕೆ ಸಂಖ್ಯಾ ಬಲವಿದೆ. ದುರದೃಷ್ಟವಶಾತ್ ಬಿಜೆಪಿ ಸರಕಾರ, ತನಗಿರುವ ಈ ದ್ವೇಷಾಧಾರಿತ ಜನಬೆಂಬಲವನ್ನೇ ಎಲ್ಲಾ ಜನವಿರೋಧಿ ನೀತಿಗಳನ್ನು ಜಾರಿಗೆ ತರಲು, ಎಲ್ಲಾ ಪ್ರಜಾತಾಂತ್ರಿಕ ಸಂಸ್ಥೆಗಳನ್ನು ನಾಶಗೊಳಿಸಲು ಹಾಗೂ ಸಂವಿಧಾನವನ್ನೇ ತಮ್ಮ ದುರುದ್ದೇಶಗಳಿಗೆ ತಕ್ಕಂತೆ ಮಣಿಸಲು ಒಂದು ಮುಕ್ತ ಪರವಾನಿಗೆಯಂತೆ ಬಳಸಿಕೊಳ್ಳುತ್ತಿದೆ.
ಪ್ರಜಾತಂತ್ರ, ಸೆಕ್ಯುಲರಿಸಂ, ಫೆಡರಲಿಸಂ, ಸ್ವತಂತ್ರ ನ್ಯಾಯಾಂಗ ಇವೆಲ್ಲವೂ ಸಂವಿಧಾನದ ಮೂಲ ರಚನೆಯೂ ಹೌದು. ಈ ದೇಶದ ಸ್ವಾತಂತ್ರ್ಯ ಹೋರಾಟದ ಕನಸುಗಳೂ ಹೌದು. ಅದರ ನಾಶವೆಂದರೆ ಈ ದೇಶದ ಬುನಾದಿಯ ನಾಶವೇ ಆಗಿದೆ. ಹೀಗಾಗಿ ನ್ಯಾಯಾಂಗದ ಅಧಿಕಾರದ ವ್ಯಾಪ್ತಿಯ ಮೇಲೆ ನಡೆಯುತ್ತಿರುವ ಈ ವ್ಯವಸ್ಥಿತ ದಾಳಿಯು ಬಿಜೆಪಿ ಸರಕಾರ ಸಂವಿಧಾನದ ಮೇಲೆ ನಡೆಸುತ್ತಿರುವ ದಾಳಿಯ ಮುಂದುವರಿಕೆಯೇ ಆಗಿದೆ. ಇದನ್ನು ತಡೆಗಟ್ಟಬೇಕು. ಆದರೆ ಅದೇ ಸಮಯದಲ್ಲಿ ನ್ಯಾಯಾಂಗದಲ್ಲಿ ದಮನಿತ ಸಮುದಾಯಗಳ ಪ್ರಾತಿನಿಧ್ಯಗಳನ್ನೂ ಒಳಗೊಂಡಂತೆ, ಪಾರದರ್ಶಕತೆ, ಉತ್ತರದಾಯಿತ್ವ ಇನ್ನಿತರ ಹಲವಾರು ಸುಧಾರಣೆಗಳು, ಬದಲಾವಣೆಗಳು ಅವಶ್ಯವಾಗಿ ಬರಬೇಕಾಗಿದೆ. ಆದರೆ ಅಂತಹ ಬದಲಾವಣೆಗಳು ಇರುವ ಪ್ರಜಾತಂತ್ರವನ್ನು ಇನ್ನಷ್ಟು ಗಟ್ಟಿಗೊಳಿಸುವ ಭಾಗವಾಗಿ ಮುಂದಿಟ್ಟರೆ ಅದು ಸ್ವಾಗತಾರ್ಹವೇ ವಿನಾ, ಆ ನೆಪದಲ್ಲಿ ಇರುವ ಪ್ರಜಾತಂತ್ರವನ್ನು ನಾಶಮಾಡುವ ದುರುದ್ದೇಶಗಳು ಎಂದಿಗೂ ಸಮರ್ಥನೀಯವಲ್ಲ