ಕೋವಿಡ್ ಮಾಹಿತಿಗೆ ಸ್ವಾಗತ: ಚೀನಾದಿಂದ ಇನ್ನಷ್ಟು ಸಹಕಾರದ ಅಪೇಕ್ಷೆ; ವಿಶ್ವ ಆರೋಗ್ಯ ಸಂಸ್ಥೆ

Update: 2023-01-15 17:56 GMT

ಜಿನೆವಾ, ಜ.15: ದೇಶದಲ್ಲಿ ಕೋವಿಡ್ ಸೋಂಕಿನ ಬಗ್ಗೆ ಚೀನಾವು ಮಾಹಿತಿ ನೀಡಿರುವುದನ್ನು ಸ್ವಾಗತಿಸುತ್ತಿದ್ದೇವೆ. ಕೋವಿಡ್ ಸಾಂಕ್ರಾಮಿಕದ ಮೂಲದ ಕುರಿತು ಆ ದೇಶದಿಂದ ಇನ್ನಷ್ಟು ಆಳವಾದ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಡಾ. ಟೆಡ್ರೋಸ್ ಅಧನಾಮ್ ಘೆಬ್ರಯೇಸಸ್ ಹೇಳಿದ್ದಾರೆ.

ಚೀನಾದ ರಾಷ್ಟ್ರೀಯ ಆರೋಗ್ಯ  ಸಚಿವ ಮಾ ಕ್ಸಿಯೊವೆಯ್ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ ಘೆಬ್ರಯೇಸಸ್, ಕೋವಿಡ್ ಸಾಂಕ್ರಾಮಿಕದ ಕುರಿತು ಚೀನಾ ಶನಿವಾರ ಅಂಕಿಅಂಶ ಬಿಡುಗಡೆಗೊಳಿಸಿರುವುದನ್ನು ಸ್ವಾಗತಿಸಿದರು. ಇದೇ ರೀತಿ ಮಾಹಿತಿ ಹಂಚಿಕೊಳ್ಳುವುದನ್ನು ಮುಂದುವರಿಸುವಂತೆ ಮತ್ತು ಕೋವಿಡ್ ಸೋಂಕಿನ ಮೂಲದ ಬಗ್ಗೆ ಅರಿತುಕೊಳ್ಳಲು ಇನ್ನಷ್ಟು ಪಾರದರ್ಶಕತೆ ಮತ್ತು  ಸಹಕಾರ ನೀಡುವಂತೆ ಚೀನಾ ಸಚಿವರನ್ನು ಕೇಳಿಕೊಂಡಿದ್ದೇನೆ ಎಂದು ಘೆಬ್ರಯೇಸಸ್ ಟ್ವೀಟ್ ಮಾಡಿದ್ದಾರೆ.

ಕಳೆದ ತಿಂಗಳು ಶೂನ್ಯ ಕೋವಿಡ್ ನೀತಿಯನ್ನು ಕೈಬಿಟ್ಟ ಬಳಿಕ ಇದೇ ಮೊದಲ ಬಾರಿಗೆ ಕೋವಿಡ್ ಸೋಂಕಿಗೆ ಸಂಬಂಧಿಸಿದ ಸಾವಿನ ಮಾಹಿತಿಯನ್ನು ಚೀನಾ ಪ್ರಕಟಿಸಿದ್ದು ಡಿಸೆಂಬರ್ 8ರಿಂದ 2023ರ ಜನವರಿ 12ರವರೆಗಿನ ಅವಧಿಯಲ್ಲಿ ಸುಮಾರು 60,000 ಕೋವಿಡ್ ಸೋಂಕಿಗೆ ಸಂಬಂಧಿಸಿದ ಮರಣದ  ಪ್ರಕರಣ ದಾಖಲಾಗಿದೆ ಎಂದು ಹೇಳಿದೆ.

ಈ ಒಂದು ತಿಂಗಳ ಅವಧಿಯಲ್ಲಿ ಕೋವಿಡ್ ಸೋಂಕಿನಿಂದ ಉಂಟಾದ  ಉಸಿರಾಟದ ವೈಫಲ್ಯದ ಪರಿಣಾಮ 5,503 ಮಂದಿ ಮೃತಪಟ್ಟಿದ್ದಾರೆ. ಇದಲ್ಲದೆ, ಕ್ಯಾನ್ಸರ್ ಅಥವಾ ಹೃದಯನಾಳದ ಕಾಯಿಲೆಯ ಜತೆ ಕೋವಿಡ್ ಸೋಂಕು ದೃಢಪಟ್ಟ 54,435 ಮಂದಿ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಚೀನಾ ನೀಡಿರುವ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ. ಈ ಮಾಹಿತಿಯು ಸಾಂಕ್ರಾಮಿಕ ರೋಗಶಾಸ್ತ್ರದ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅನುಮತಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

Similar News