ತಮಿಳುನಾಡು ರಾಜ್ಯಪಾಲರ ಸಲ್ಲದ ಹಸ್ತಕ್ಷೇಪ

Update: 2023-01-17 04:12 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಅಲ್ಲಿನ ಸರಕಾರದೊಂದಿಗೆ ಸಂಘರ್ಷಕ್ಕಿಳಿದು ಕಿರಿಕಿರಿ ಮಾಡುತ್ತಿರುವುದು ಅತಿರೇಕದ ಅಸಾಂವಿಧಾನಿಕ ವರ್ತನೆಯಾಗಿದೆ. ಒಕ್ಕೂಟ ಸರಕಾರದ ಏಜೆಂಟರಂತೆ ಕಾರ್ಯನಿರ್ವಹಿಸುತ್ತ ಅಲ್ಲಿನ ಚುನಾಯಿತ ಸರಕಾರದ ದೈನಂದಿನ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಸಲ್ಲದ ನಡೆಯಾಗಿದೆ. ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ ಅವರ ಅಸಮರ್ಥನೀಯ ವರ್ತನೆ. ತಮಿಳುನಾಡು ವಿಧಾನಸಭೆಯ ವರ್ಷದ ಮೊದಲ ಅಧಿವೇಶನದಲ್ಲಿ ಅವರು ತಮ್ಮ ಅಧಿಕಾರವ್ಯಾಪ್ತಿಯನ್ನು ಮೀರಿ ಅಸಡ್ಡೆಯಿಂದ ನಡೆದುಕೊಂಡ ರೀತಿ ಖಂಡನೀಯ.

ಭಾರತದ ಶಾಸಕಾಂಗ ಇತಿಹಾಸದ ಸಂಪ್ರದಾಯದ ಪ್ರಕಾರ ಚುನಾಯಿತ ಸರಕಾರ ಸಿದ್ಧಪಡಿಸಿದ ಭಾಷಣವನ್ನು ರಾಜ್ಯಪಾಲರು ಸದನದಲ್ಲಿ ಓದಬೇಕು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ರಾಜ್ಯದ ಡಿಎಂಕೆ ಸರಕಾರ ಸಿದ್ಧಪಡಿಸಿದ ಭಾಷಣದ ಕೆಲವು ಭಾಗಗಳನ್ನು ಓದಲು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲ ತಮ್ಮ ಕಾರ್ಯ ವ್ಯಾಪ್ತಿಯನ್ನು ಮೀರಿ ತಮ್ಮದೇ ಕೆಲವು ಮಾತುಗಳನ್ನು ಭಾಷಣದಲ್ಲಿ ಸೇರಿಸಿದ್ದಾರೆ. ಇದನ್ನು ಗಮನಿಸಿದ ರಾಜ್ಯ ಸರಕಾರ ರಾಜ್ಯಪಾಲರ ಮೂಲ ಭಾಷಣವನ್ನು ಮಾತ್ರ ಸದನದ ಕಡತದಲ್ಲಿ ಸೇರಿಸಿಕೊಳ್ಳಬೇಕೆಂಬ ಗೊತ್ತುವಳಿಯನ್ನು ಸದನದಲ್ಲಿ ಮಂಡಿಸಿದೆ. ಸದನ ಅದನ್ನು ಅಂಗೀಕರಿಸಿದೆ. ಇದರಿಂದ ತಾಳ್ಮೆ ಕಳೆದುಕೊಂಡ ರಾಜ್ಯಪಾಲ ರವಿ ಸದನದಿಂದ ಹೊರಗೆ ನಡೆದಿದ್ದಾರೆ. ಇದು ಸಮರ್ಥನೀಯವಲ್ಲ. ಸಂವಿಧಾನದ ಪ್ರಕಾರ ಯಾವುದೇ ರಾಜ್ಯ ಸರಕಾರ ತನ್ನ ನೀತಿ, ನಿಲುವು, ಕಾರ್ಯಕ್ರಮಗಳ ಕುರಿತು ಭಾಷಣವನ್ನು ಸಿದ್ಧಪಡಿಸಿ ರಾಜ್ಯಪಾಲರಿಗೆ ಸದನದಲ್ಲಿ ಓದಲು ಕಳುಹಿಸುತ್ತದೆ. ಚುನಾಯಿತ ಸರಕಾರ ಸಿದ್ಧಪಡಿಸಿದ ಭಾಷಣದಲ್ಲಿ ಏನನ್ನಾದರೂ ತೆಗೆದುಹಾಕುವ ಇಲ್ಲವೇ ಸೇರಿಸುವ ಅಧಿಕಾರ ರಾಜ್ಯಪಾಲರಿಗಿಲ್ಲ. ಈ ಸಂಪ್ರದಾಯ ಸಾಮಾನ್ಯವಾಗಿ ಉಲ್ಲಂಘನೆಯಾದ ಉದಾಹರಣೆಗಳು ಇಲ್ಲವೇ ಇಲ್ಲವೆನ್ನುವಷ್ಟು ವಿರಳ. ಭಾರತದ ಸಂಸದೀಯ ಇತಿಹಾಸದಲ್ಲಿ ರಾಜ್ಯಪಾಲರು ರಾಜ್ಯ ಸರಕಾರ ಸಿದ್ಧಪಡಿಸಿದ ಭಾಷಣದಲ್ಲಿ ತಮ್ಮ ಮಾತುಗಳನ್ನು ಸೇರಿಸಿರುವ ಒಂದೇ ಒಂದು ಉದಾಹರಣೆ ಇಲ್ಲ. ತಮಿಳುನಾಡಿನ ರಾಜ್ಯಪಾಲರು ಇಂತಹ ಅತಿರೇಕದ ವರ್ತನೆಯ ಮೂಲಕ ಕೇಂದ್ರದ ಮೋದಿ ಸರಕಾರದ ಏಜೆಂಟರಂತೆ ವರ್ತಿಸಿದ್ದಾರೆ.

ರಾಜ್ಯಪಾಲರ ಹುದ್ದೆಯ ಔಚಿತ್ಯದ ಬಗ್ಗೆ ಆಗಾಗ ಟೀಕೆ-ಟಿಪ್ಪಣಿಗಳು ಬರುತ್ತಲೇ ಇವೆ. ಈಗಿನ ಬಿಜೆಪಿ ಸರಕಾರ ಮಾತ್ರವಲ್ಲ ಹಿಂದಿನ ಕಾಂಗ್ರೆಸ್ ಸರಕಾರದ ಕಾಲದಲ್ಲೂ ರಾಜ್ಯಪಾಲರು ಆಯಾ ರಾಜ್ಯದ ಚುನಾಯಿತ ಸರಕಾರಗಳ ಜೊತೆ ಸಂಘರ್ಷಕ್ಕೆ ಇಳಿದ ಉದಾಹರಣೆಗಳಿವೆ. ಬೊಕ್ಕಸಕ್ಕೆ ಭಾರವಾದ ಈ ಹುದ್ದೆಯನ್ನು ರದ್ದು ಪಡಿಸುವ ಸಲಹೆಗಳು ಆಗಾಗ ರಾಜಕೀಯ ಶಾಸ್ತ್ರ ಪರಿಣಿತರಿಂದ ಬರುತ್ತಲೇ ಇವೆ. ಆದರೂ ಒಕ್ಕೂಟ ಸರಕಾರದ ಸೂತ್ರ ಹಿಡಿದಿರುವ ಪಕ್ಷಗಳು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಹಾಗೂ ವಯಸ್ಸಾದ ಮತ್ತು ಅತೃಪ್ತ ರಾಜಕಾರಣಿಗಳಿಗೆ ಪುನರ್ವಸತಿ ಕಲ್ಪಿಸಲು ಈ ರಾಜ್ಯಪಾಲರ ಹುದ್ದೆಯನ್ನು ಉಳಿಸಿಕೊಂಡು ಬರಲಾಗಿದೆ. ಅದೇನೇ ಇರಲಿ ರಾಜ್ಯಪಾಲರಿಗೆ ಇರುವ ಅಧಿಕಾರದ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯ ನೀಡಿರುವ ಹಲವಾರು ತೀರ್ಪುಗಳಲ್ಲಿ ಕೂಡ ಸ್ಪಷ್ಟವಾಗಿ ಹೇಳಲಾಗಿದೆ. ಸಂವಿಧಾನದ ಪ್ರಕಾರ ರಾಜ್ಯಪಾಲರಿಗೆ ಸ್ವತಂತ್ರ ಅಧಿಕಾರ ಇಲ್ಲ. ರಾಜ್ಯದ ಚುನಾಯಿತ ಸರಕಾರದ ನೀತಿ, ಧೋರಣೆಗೆ ಅನುಗುಣವಾಗಿ ರಾಜ್ಯಪಾಲರು ಕಾರ್ಯ ನಿರ್ವಹಿಸಬೇಕು. ಇದು ಹಲವಾರು ಬಾರಿ ಚರ್ಚೆಯಾಗಿ ಎಲ್ಲರೂ ಒಮ್ಮತದಿಂದ ಒಪ್ಪಿಕೊಂಡ ಅಂಶ.

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ವಿಧೇಯತೆಯನ್ನು ತೋರಿಸುವ ಅತ್ಯುತ್ಸಾಹದಲ್ಲಿ ರಾಜ್ಯಪಾಲರು ಬಿಜೆಪಿಯೇತರ ರಾಜ್ಯ ಸರಕಾರಗಳಿಗೆ ತೊಂದರೆ ಕೊಡುವುದು, ಕಿರಿ ಕಿರಿ ಉಂಟು ಮಾಡುವುದು ಹೆಚ್ಚಾಗುತ್ತಿದೆ. ರಾಜ್ಯಪಾಲರ ಈ ಅತಿರೇಕದ ವರ್ತನೆಗೆ ಕೇಂದ್ರದ ಮೋದಿ ಸರಕಾರದ ಸಮ್ಮತಿ ಮತ್ತು ಬೆಂಬಲವೂ ಕಾರಣವಿರಬಹುದು.

ಕೆಲವು ರಾಜ್ಯಪಾಲರು ಕೇಂದ್ರ ಸರಕಾರವನ್ನು ಓಲೈಸಲು ನೀತಿ ನಿಯಮಗಳನ್ನು ಮೀರಿ ವರ್ತಿಸುತ್ತಿರುವುದಕ್ಕೆ ಅವರ ವೈಯಕ್ತಿಕ ರಾಜಕೀಯ ಮಹತ್ವಾಕಾಂಕ್ಷೆ ಕಾರಣವಾಗಿದೆ. ಇನ್ನು ಕೆಲ ರಾಜ್ಯಪಾಲರು ಕೇಂದ್ರದ ಆಡಳಿತ ಪಕ್ಷದ ಸಿದ್ಧಾಂತದ ಪರ ಒಲವಿನ ಕಾರಣಕ್ಕಾಗಿ ಈ ರೀತಿ ವರ್ತಿಸುತ್ತಿದ್ದಾರೆ. ರವಿ ಸೇರಿದಂತೆ ಕೆಲವು ರಾಜ್ಯಪಾಲರು ಸದನ ಬಹುಮತದಿಂದ ಅಂಗೀಕರಿಸಿದ ವಿಧೇಯಕಗಳಿಗೆ ಅಂಕಿತ ಹಾಕಲು ನಿರಾಕರಿಸುತ್ತಿರುವುದು ವಿವೇಚನಾರಹಿತ ವರ್ತನೆಯಾಗಿದೆ. ಅದೇ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಮತ್ತು ಅಲ್ಲಿನ ಸರಕಾರದ ಸಂಬಂಧ ಸೌಹಾರ್ದಯುತವಾಗಿದೆ. ರಾಜ್ಯಪಾಲರ ಇಂತಹ ಅತಿರೇಕದ ವರ್ತನೆಯಿಂದ ಭಾರತದ ಒಕ್ಕೂಟ ವ್ಯವಸ್ಥೆಗೆ ತೀವ್ರ ಸ್ವರೂಪದ ಧಕ್ಕೆ ಉಂಟಾಗುತ್ತದೆ.

ಅಷ್ಟಕ್ಕೂ ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ ಅವರು ತಮ್ಮ ಭಾಷಣದಲ್ಲಿ ಯಾವ ಅಂಶಗಳನ್ನು ಕೈ ಬಿಟ್ಟಿದ್ದಾರೆ ಎಂಬುದನ್ನು ಗಮನಿಸಿದರೆ ಇವರು ರಾಜ್ಯಪಾಲರೋ ಅಥವಾ ಬಿಜೆಪಿ ಕಾರ್ಯಕರ್ತರೋ ಎಂಬ ಸಂದೇಹ ಉಂಟಾಗುತ್ತದೆ. ರಾಜ್ಯ ಸರಕಾರ ಸಿದ್ಧಪಡಿಸಿದ ಭಾಷಣದಲ್ಲಿ ಇದ್ದ ಜಾತ್ಯತೀತತೆ ಮತ್ತು ದ್ರಾವಿಡ ಮಾದರಿ ಎಂಬ ಪದಗಳನ್ನು ರವಿ ಕೈ ಬಿಟ್ಟಿದ್ದಾರೆ. ಪೆರಿಯಾರ್ ರಾಮಸ್ವಾಮಿ ನಾಯ್ಕರ್, ಅಂಬೇಡ್ಕರ್, ಕೆ.ಕಾಮರಾಜ್, ಸಿ.ಎನ್. ಅಣ್ಣಾದೊರೈ, ಕರುಣಾನಿಧಿ ಮುಂತಾದವರಿಗೆ ಸಂಬಂಧಿಸಿದ ಉಲ್ಲೇಖಗಳನ್ನು ರವಿ ಕೈ ಬಿಟ್ಟಿದ್ದಾರೆ. ರವಿ ಅವರು ಕೈ ಬಿಟ್ಟಿರುವ ಈ ಹೆಸರು ಮತ್ತು ವಿಚಾರಗಳನ್ನು ಗಮನಿಸಿದರೆ ರವಿ ಅವರ ನಿಷ್ಠೆ ಇರುವುದು ಸಂವಿಧಾನಕ್ಕೆ ಅಲ್ಲ, ಸಂಘ ಪರಿವಾರಕ್ಕೆ ಎಂಬುದು ಸ್ಪಷ್ಟವಾಗುತ್ತದೆ. ದ್ರಾವಿಡ ಮಾದರಿ ಅಥವಾ ತಮಿಳುನಾಡು ಎಂಬುದು ಸರಿಯಲ್ಲ, ಹಾಗಾಗಿ ರಾಜ್ಯದ ಹೆಸರನ್ನು ತಮಿಳಗಂ ಎಂದು ಬದಲಿಸಬೇಕೆಂದು ರವಿ ಪ್ರತಿಪಾದಿಸುತ್ತಾರೆ. ಈ ರೀತಿ ವರ್ತಿಸುವುದಾದರೆ ಅವರು ರಾಜ್ಯಪಾಲರ ಸ್ಥಾನವನ್ನು ತ್ಯಜಿಸಿ ಬಿಜೆಪಿಯ ಪೂರ್ಣಾವಧಿ ಕಾರ್ಯಕರ್ತರಾಗುವುದು ಸೂಕ್ತ ಎಂದು ಹೇಳಿದರೆ ತಪ್ಪಿಲ್ಲ.

ಇದು ತಮಿಳುನಾಡಿನ ಸಮಸ್ಯೆ ಮಾತ್ರವಲ್ಲ, ಬಹುತೇಕ ಬಿಜೆಪಿಯೇತರ ರಾಜ್ಯಗಳಲ್ಲಿ ರಾಜ್ಯಪಾಲರು ರಾಜ್ಯದ ಚುನಾಯಿತ ಸರಕಾರಗಳ ಜೊತೆಗೆ ಸಂಘರ್ಷಕ್ಕೆ ಇಳಿದಿದ್ದಾರೆ. ಈಗ ಉಪರಾಷ್ಟ್ರಪತಿಯಾಗಿರುವ ಸಂವಿಧಾನದ ಮೇಲೆ ದಾಳಿ ನಡೆಸಿರುವ ಜಗದೀಪ್ ಧನ್ಕರ್ ಅವರು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದಾಗ ಅಲ್ಲಿನ ಮಮತಾ ಬ್ಯಾನರ್ಜಿಯವರ ನೇತೃತ್ವದ ಸರಕಾರದ ಜೊತೆಗೆ ಸಂಘರ್ಷ ಸಾಮಾನ್ಯವಾಗಿತ್ತು. ಅದೇ ರೀತಿ ದಿಲ್ಲಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಅನಿಲ್ ಬೈಜಲ್ ಮತ್ತು ಅರವಿಂದ ಕೇಜ್ರಿವಾಲ್ ಸರಕಾರದ ನಡುವೆ ತಿಕ್ಕಾಟ ನಡೆಯುತ್ತಿತ್ತು. ಕಿರಣ್ ಬೇಡಿ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿದ್ದಾಗ ಅಲ್ಲಿನ ಕಾಂಗ್ರೆಸ್ ಸರಕಾರದ ವಿರುದ್ಧ ಬಹಿರಂಗವಾಗಿ ಕೆಂಡ ಕಾರುತ್ತಿದ್ದರು. ಕೇರಳದ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅಲ್ಲಿನ ಎಡರಂಗ ಸರಕಾರದ ದೈನಂದಿನ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುತ್ತಲೇ ಇದ್ದಾರೆ. ಮಹಾರಾಷ್ಟ್ರ, ತೆಲಂಗಾಣದಲ್ಲೂ ಇದೇ ಪರಿಸ್ಥಿತಿ ಇದೆ.

ಈ ವಿದ್ಯಮಾನಗಳನ್ನು ಗಮನಿಸಿದರೆ ಬಿಳಿಯಾನೆಗಳನ್ನು ಸಾಕಲು ಹಾಗೂ ಭಿನ್ನ ಪಕ್ಷಗಳ ಸರಕಾರಗಳಿಗೆ ಕಿರುಕುಳ ನೀಡಲು ರಾಜ್ಯಪಾಲರ ಹುದ್ದೆಗಳು ಅಸ್ತಿತ್ವದಲ್ಲಿವೆಯೇ ಎಂಬ ಸಂದೇಹ ಬರುತ್ತದೆ. ರಾಜ ಭವನಗಳ ದುರ್ಬಳಕೆ ಮತ್ತು ರಾಜ್ಯಪಾಲರ ಅಸಾಂವಿಧಾನಿಕ ವರ್ತನೆಯಿಂದ ಒಕ್ಕೂಟ ವ್ಯವಸ್ಥೆಗೆ ಚೇತರಿಸಲಾಗದ ಪೆಟ್ಟು ಬೀಳುತ್ತದೆ. ಅದಕ್ಕೆ ಅವಕಾಶ ನೀಡದಂತೆ ಇನ್ನಾದರೂ ಒಕ್ಕೂಟ ಸರಕಾರ ಎಚ್ಚರ ವಹಿಸಬೇಕಾಗಿದೆ.

Similar News