ಲಸಿಕೆ ಅಡ್ಡ ಪರಿಣಾಮ: ಸರಕಾರ ಗೊಂದಲ ನಿವಾರಿಸಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೊರೋನ ಕಾಲ ಮುಗಿಯುತ್ತಾ ಬಂದಿದೆಯಾದರೂ, ಕೋವಿಡ್ ಲಸಿಕೆಯ ಕುರಿತಂತೆ ಇರುವ ಗೊಂದಲ ಮುಗಿಯುವಂತೆ ಕಾಣುತ್ತಿಲ್ಲ. ಈವರೆಗೆ ಕೊರೋನ ವೈರಸ್ ಕುರಿತಂತೆ ಆತಂಕ ವ್ಯಕ್ತಪಡಿಸುತ್ತಿದ್ದ ಜನರು ಇದೀಗ ಕೋವಿಡ್ ಲಸಿಕೆಗಳ ಕುರಿತಂತೆ ಭೀತಿ, ಆತಂಕ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹರಡುತ್ತಿರುವ ವದಂತಿ, ಅದಕ್ಕೆ ಪುಷ್ಟಿ ಕೊಡುವಂತೆ ಸರಕಾರದ ವರ್ತನೆ ಮತ್ತು ಹೇಳಿಕೆಗಳು ಜನರನ್ನು ಗೊಂದಲಕ್ಕೀಡು ಮಾಡಿದೆ. ಒಂದೆಡೆ ಕೋವಿಡ್ ಲಸಿಕೆಗಳನ್ನು ತೆಗೆದುಕೊಂಡವರು ತಮ್ಮ ಹಾಗೂ ತಮ್ಮ ಕುಟುಂಬದ ಜನರ ಆರೋಗ್ಯದ ಬಗ್ಗೆ ಹೊಂದಿದ್ದಾರೆ. ಇನ್ನೊಂದೆಡೆ, ಹೊಸದಾಗಿ ಕೋವಿಡ್ ಲಸಿಕೆಗಳನ್ನು ಪಡೆಯುವವರು ಹಲವು ಬಾರಿ ಯೋಚಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಹೊಸದಾಗಿ, ಸರಕಾರ ಆರ್‌ಟಿಐ ಅಡಿಯಲ್ಲಿ ನೀಡಿರುವ ಮಾಹಿತಿಗಳು ಜನರನ್ನು ಇನ್ನಷ್ಟು ಭೀತಿ ಪಡುವಂತೆ ಮಾಡಿದೆ. 'ಎರಡು ವರ್ಷಗಳಿಗೂ ಅಧಿಕ ಅವಧಿಯಲ್ಲಿ ದೇಶಾದ್ಯಂತ ಸುಮಾರು 100 ಕೋಟಿ ಮಂದಿಗೆ ನೀಡಲಾದ ಕೋವಿಡ್ ಲಸಿಕೆಗಳು ಹಲವಾರು ಅಡ್ಡ ಪರಿಣಾಮಗಳನ್ನು ಹೊಂದಿವೆ' ಎಂಬುದನ್ನು ಕೇಂದ್ರ ಸರಕಾರ ಆರ್‌ಟಿಐ ಮಾಹಿತಿಯಲ್ಲಿ ಒಪ್ಪಿಕೊಂಡಿರುವ ಅಂಶ ಇದೀಗ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ''ಭಾರತದಲ್ಲಿ ನೀಡಲಾದ ಕೋವಿಶೀಲ್ಡ್, ಕೋವ್ಯಾಕ್ಸಿನ್, ಕೋವೋವ್ಯಾಕ್ಸ್ , ಸ್ಪುಟ್ನಿಕ್ ವಿ, ಕೊರ್ಬೋ ಇವಾಕ್ಸ್ ಲಸಿಕೆಗಳಲ್ಲಿ ಅಡ್ಡ ಪರಿಣಾಮ ಕಂಡು ಬಂದಿದೆ ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ತಿಳಿಸಿದ್ದಾರೆ. ಸಾಧಾರಣವಾಗಿ ಯಾವುದೇ ಲಸಿಕೆಗಳನ್ನು ಪಡೆದುಕೊಂಡಾಗ ಸಣ್ಣ ಪುಟ್ಟ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುವುದು ಸಹಜ. ಆದರೆ ಅವುಗಳು ದೀರ್ಘ ಕಾಲಿಕವಾಗಿರುವುದಿಲ್ಲ. ಸರಕಾರ ಉಲ್ಲೇಖಿಸಿರುವ ಕೆಲವು ಅಡ್ಡ ಪರಿಣಾಮಗಳು ಅಂತಹ ಗಂಭೀರವಾದುದೇನೂ ಅಲ್ಲ. ಆದರೆ ಲಸಿಕೆಯ ಕುರಿತಂತೆ ಈಗ ದೇಶಾದ್ಯಂತ ಜನರು ಹೊಂದಿರುವ ಆತಂಕ ಅದರಾಚೆಗಿನದು. ಲಸಿಕೆ ನೀಡಿದ ಬಳಿಕ ದೇಶದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಿವೆ ಎನ್ನುವುದು ಕೇಳಿ ಬಹು ಮುಖ್ಯ ಆರೋಪ. ಯುವಕರೇ ಈ ಹೃದಯಘಾತದ ನೇರ ಬಲಿಪಶುಗಳು. ಲಸಿಕೆ ಪಡೆದ ಬಳಿಕ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವಿದೆ ಎನ್ನುವ ಸಂಶಯವನ್ನೂ ಹಲವರು ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ಸಂಭವಿಸುತ್ತಿರುವ ಅನಿರೀಕ್ಷಿತ ಹೃದಯಘಾತ ಸಾವುಗಳ ಹಿಂದೆ ಲಸಿಕೆಯ ದುಷ್ಪರಿಣಾಮಗಳಿವೆ ಎನ್ನುವ ಭೀತಿಯನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ. ಆದುದರಿಂದಲೇ ಕೋವಿಡ್ ಲಸಿಕೆಗಳ ಅಡ್ಡಪರಿಣಾಮದ ಬಗ್ಗೆ ಸರಕಾರದ ಹೇಳಿಕೆಯನ್ನು ಜನರು ಗಂಭೀರವಾಗಿ ತೆಗೆದುಕೊಂಡಿದ್ದಾರೆ.
ಲಸಿಕೆ ಪಡೆದು ಕೈಕಾಲು ನಿಷ್ಕ್ರಿಯಗೊಂಡು ಹಾಸಿಗೆಪಾಲಾಗಿರುವ ಹಲವು ಜೀವಗಳು ನಮ್ಮ ನಡುವೆ ಇವೆ. ಹಾಗೆಯೇ ಲಸಿಕೆಯಿಂದ ತೀವ್ರ ಅನಾರೋಗ್ಯಕ್ಕೀಡಾಗಿ ಸಾವಿಗೀಡಾದ ಘಟನೆಗಳೂ ನಡೆದಿವೆ. ಇವರೆಲ್ಲ ಈಗಾಗಲೇ ಸರಕಾರದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸರಕಾರ ತಮಗೆ ಪರಿಹಾರವನ್ನು ನೀಡಬೇಕು ಎಂದು ಅವರು ನ್ಯಾಯಾಲಯದಲ್ಲಿ ಕೋರಿಕೊಂಡಿದ್ದಾರೆ. ಆದರೆ ಲಸಿಕೆಯ ಅಡ್ಡಪರಿಣಾಮಗಳಿಂದಾದ ಅನಾಹುತಗಳ ಹೊಣೆಗಾರಿಕೆಯಿಂದ ಸರಕಾರ ನುಣುಚಿಕೊಂಡಿದೆ. ''ಲಸಿಕೆ ಕಡ್ಡಾಯವಲ್ಲ. ಐಚ್ಛಿಕವಾಗಿದೆ. ಆದುದರಿಂದ ಅದನ್ನು ತೆಗೆದುಕೊಂಡವರೇ ಅದಕ್ಕೆ ಹೊಣೆಗಾರರು. ಲಸಿಕೆಗಳಿಂದ ಯಾವುದೇ ರೀತಿಯಲ್ಲಿ ಹಾನಿಯಾದರೆ ಅದಕ್ಕೆ ಸಂಬಂಧಪಟ್ಟ ಪರಿಹಾರವನ್ನು ಆಯಾ ಔಷಧಿ ಕಂಪೆನಿಯ ಜೊತೆಗೆ ಕೇಳಬೇಕು'' ಎನ್ನುವ ಹೇಳಿಕೆಯನ್ನು ಸರಕಾರ ಈಗಾಗಲೇ ನ್ಯಾಯಾಲಯಕ್ಕೆ ನೀಡಿದೆ. ನಿಜಕ್ಕೂ ಲಸಿಕೆ ಐಚ್ಛಿಕವೇ ಆಗಿದ್ದರೆ ಸರಕಾರದ ಮಾತಿನಲ್ಲಿ ಅರ್ಥವಿತ್ತು. ಆದರೆ ಅಂದು-ಇಂದು ಸರಕಾರ ಲಸಿಕೆಯನ್ನು ಪರೋಕ್ಷವಾಗಿ ಜನರ ಮೇಲೆ ಹೇರುತ್ತಲೇ ಇದೆ. ಲಸಿಕೆಯ ಪ್ರಮಾಣ ಪತ್ರದಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಛಾಪಿಸಲಾಗಿದೆ ಮಾತ್ರವಲ್ಲ, ಲಸಿಕೆಯನ್ನು ಸರಕಾರದ ಹೆಗ್ಗಳಿಕೆಯ ಭಾಗವಾಗಿ ಅದು ಪ್ರಚಾರ ಮಾಡಿಕೊಂಡು ಬರುತ್ತಿದೆ.
ಜನಸಾಮಾನ್ಯರ ಕೋಟ್ಯಂತರ ರೂಪಾಯಿ ಹಣವನ್ನು ಆ ಲಸಿಕೆಗಾಗಿ ಸುರಿಯಲಾಗಿದೆ. ಲಸಿಕೆ ಕಂಪೆನಿಗಳು ಜನರ ತೆರಿಗೆ ಹಣವನ್ನು ದೋಚುತ್ತಿದ್ದಾರೆ. ಕೊರೋನ ಕಾಲದಲ್ಲಿ ಯಾರೂ ಲಸಿಕೆಗಾಗಿ ಹಾಹಾಕಾರ ಮಾಡಿರಲಿಲ್ಲ. ಜನಸಾಮಾನ್ಯರು ಕೊರೋನಕ್ಕಿಂತ, ಲಾಕ್‌ಡೌನ್ ಮತ್ತು ನಿರುದ್ಯೋಗಕ್ಕೆ ಹೆಚ್ಚು ಹೆದರಿದ್ದರು. ''ನಮ್ಮನ್ನು ಕೆಲಸ ಮಾಡಲು ಬಿಡಿ'' ಎಂದು ಅವರು ಸರಕಾರದ ಬಳಿ ಕೇಳಿಕೊಂಡಿದ್ದರೇ ಹೊರತು, ''ಲಸಿಕೆ ಕೊಡಿ'' ಎಂದು ಬೀದಿಗಿಳಿದಿರಲಿಲ್ಲ. ಆದರೆ ಸರಕಾರ ಮೊದಲು 'ಲಾಕ್‌ಡೌನ್' ಹೆಸರಿನಲ್ಲಿ ಜನಸಾಮಾನ್ಯರಿಗೆ ದಿಗ್ಬಂಧನವನ್ನು ವಿಧಿಸಿತು. ಇದಾದ ಬಳಿಕ, ಲಸಿಕೆ ಪಡೆದವರಿಗೆ ಮಾತ್ರ ಬೀದಿಗಿಳಿಯುವ ಅವಕಾಶವನ್ನು ನೀಡಿತು. ಯಾವುದೇ ಮಾಲ್‌ಗಳಿಗೆ ಹೋಗಬೇಕಾದರೆ, ಕಚೇರಿಗಳಿಗೆ ತೆರಳಬೇಕಾದರೆ, ಟ್ರೈನ್‌ನಲ್ಲಿ ಓಡಾಡಬೇಕಾದರೆ ಲಸಿಕೆ ಕಡ್ಡಾಯ ಎನ್ನುವ ನಿಯಮವನ್ನು ಹೇರಿತು. ಅಷ್ಟೇ ಏಕೆ, ಶಾಲೆಗೆ ತೆರಳಬೇಕಾದರೆ ವಿದ್ಯಾರ್ಥಿಗಳಿಗೂ ಲಸಿಕೆ ಅನಿವಾರ್ಯ ಎನ್ನುವ ಶರತ್ತನ್ನು ವಿಧಿಸಿತು.
ಇಷ್ಟೆಲ್ಲ ಒತ್ತಡ ಹೇರಿದ ಬಳಿಕ 'ಲಸಿಕೆ ಐಚ್ಛಿಕವಾಗಿತ್ತು, ಕಡ್ಡಾಯವಾಗಿರಲಿಲ್ಲ' ಎನ್ನುವ ಸರಕಾರದ ಹೇಳಿಕೆಗೆ ಅರ್ಥವಿದೆಯೆ? ಅಷ್ಟೇ ಅಲ್ಲ, ಈಗಲೂ ಬೂಸ್ಟರ್ ತೆಗೆದುಕೊಳ್ಳುವುದಕ್ಕೆ ಸರಕಾರದ ನೇತೃತ್ವದಲ್ಲೇ ಪ್ರಚಾರ ನಡೆಯುತ್ತಿದೆ. ಕೇವಲ ಪ್ರಚಾರ ಮಾತ್ರವಲ್ಲ, ಪರೋಕ್ಷವಾಗಿ ಜನರ ಮೇಲೆ ಒತ್ತಡಗಳನ್ನು ಹಾಕಲಾಗುತ್ತಿದೆ. ಹೀಗಿರುವಾಗ, ಸರಕಾರ ಜನರ ಆತಂಕಗಳಿಗೆ ಸ್ಪಷ್ಟೀಕರಣವನ್ನು ನೀಡಲೇಬೇಕಾಗುತ್ತದೆ. ಒಂದೆಡೆ ನ್ಯಾಯಾಲಯದಲ್ಲಿ ''ಲಸಿಕೆಗೂ ತನಗೂ ಸಂಬಂಧವಿಲ್ಲ'' ಎಂದು ಹೇಳುತ್ತಾ, ಮಗದೊಂದೆಡೆ ''ಲಸಿಕೆ ತೆಗೆದುಕೊಳ್ಳಲು'' ಪ್ರೋತ್ಸಾಹಿಸುವುದು ಕೊರೋನ ನಿರ್ವಹಣೆಯಲ್ಲಿ ಸರಕಾರದ ಇಬ್ಬಂದಿತನವನ್ನು ತೋರಿಸುತ್ತದೆ. ಇದೀಗ 'ಕೊರೋನ ಅಡ್ಡ ಪರಿಣಾಮಗಳ ಬಗ್ಗೆ ' ಸರಕಾರ ನೀಡಿರುವ ಹೇಳಿಕೆ ಲಸಿಕೆಯ ಕುರಿತಂತೆ ಅದು ಇನ್ನೂ ಸ್ಪಷ್ಟತೆಯನ್ನು ಹೊಂದಿಲ್ಲ ಎನ್ನುವುದನ್ನು ಹೇಳುತ್ತದೆ.
ದೇಶದ ಜನರು ಲಸಿಕೆಯ ವಿಶ್ವಾಸಾರ್ಹತೆಯ ಬಗ್ಗೆ ಭರವಸೆಯನ್ನು ಹೊಂದಿಲ್ಲ. ಇಂತಹ ಸಂದರ್ಭದಲ್ಲಿ ಸರಕಾರ ಲಸಿಕೆಯನ್ನು ಜನರ ಮೇಲೆ ಬಲವಂತವಾಗಿ ಹೇರುವ ಪ್ರಯತ್ನವನ್ನು ಮಾಡಬಾರದು. ಮುಂಜಾಗ್ರತೆಗಾಗಿ ಲಸಿಕೆಯನ್ನು ಪ್ರೋತ್ಸಾಹಿಸಬಹುದೇ ಹೊರತು, ಲಾಕ್‌ಡೌನ್‌ನ ಬೆದರಿಕೆಯನ್ನು ಒಡ್ಡಿ ಅವರ ಮೇಲೆ ಲಸಿಕೆಯನ್ನು ಪ್ರಯೋಗಿಸಬಾರದು. ಇಷ್ಟಕ್ಕೂ ಲಸಿಕೆಯಿಂದಾಗಿ ಕೊರೋನ ತೊಲಗಿದೆ ಎನ್ನುವುದು ಸಾಬೀತಾಗಿಲ್ಲ. ಕೊರೋನ ಒಮ್ಮೆ ಬಂದರೆ ಅವರು ಲಸಿಕೆಯನ್ನು ಪಡೆಯಬೇಕಾಗಿಲ್ಲ. ಅವರ ದೇಹವೇ ಪ್ರತಿರೋಧ ಶಕ್ತಿಯನ್ನು ಪಡೆದುಕೊಳ್ಳುತ್ತದೆ ಎಂದು ವೈದ್ಯರು ಹೇಳುತ್ತಾ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ಲಸಿಕೆ ಪಡೆದವರಲ್ಲೂ ಮತ್ತೊಮ್ಮೆ ಕೊರೋನ ಕಾಣಿಸಿಕೊಂಡ ಉದಾಹರಣೆಗಳೂ ಇವೆ. ಹೀಗಿರುವಾಗ, ಅನಗತ್ಯವಾಗಿ ಜನರ ಮೇಲೆ ಅದನ್ನು ಕಡ್ಡಾಯಗೊಳಿಸುವುದು ಸರಿಯಲ್ಲ. ಲಸಿಕೆ ಪಡೆಯುವುದು ಅಥವಾ ಪಡೆಯದೇ ಇರುವುದು ಜನರ ಆಯ್ಕೆಯಾಗಬೇಕು. ಸರಕಾರ ಅನಗತ್ಯ ಹೇಳಿಕೆಗಳನ್ನು ನೀಡಿ ಜನರನ್ನು ಗೊಂದಲಕ್ಕೀಡು ಮಾಡುವುದು, ಅವರನ್ನು ಆತಂಕಕ್ಕೆ ತಳ್ಳುವುದನ್ನು ಇನ್ನಾದರೂ ನಿಲ್ಲಿಸಬೇಕು.