ಕೊಲಿಜಿಯಂ ಶಿಫಾರಸು: ದೇಶದ ಹಿತಾಸಕ್ತಿ ಮರೆತ ಸರಕಾರದ ಆಕ್ಷೇಪಣೆಗಳು

Update: 2023-01-21 04:02 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಂತಹ ಉನ್ನತ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ನೇಮಕಾತಿ ಮಾಡುವುದರಲ್ಲಿ ನಿರ್ಣಯಾತ್ಮಕ ಅಧಿಕಾರಕ್ಕಾಗಿ ಮೋದಿ ಸರಕಾರ ಸುಪ್ರೀಂ ಕೋರ್ಟಿನ ಕೊಲಿಜಿಯಂ ಜೊತೆ ನಿರಂತರ ಸಂಘರ್ಷದಲ್ಲಿ ತೊಡಗಿದೆ ಯಷ್ಟೆ. ಇತ್ತೀಚೆಗೆ ತಾನೆ ಕಾನೂನು ಮಂತ್ರಿ ಕಿರಣ್ ರಿಜಿಜು ಅವರು ನ್ಯಾಯಾಧೀಶರ ನೇಮಕಾತಿಯ ಸಮಿತಿಗಳಲ್ಲಿ ಸರಕಾರದ ಪ್ರತಿನಿಧಿ ಇರಬೇಕೆಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಿಗೆ ಪತ್ರವನ್ನು ಬರೆದಿದ್ದಾರೆ. ಇದಕ್ಕೆ ಮುಂಚೆ ರಿಜಿಜು ಜೊತೆಗೆ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರೂ ಸೇರಿಕೊಂಡು ಕೊಲಿಜಿಯಂ ಪದ್ಧತಿಯ ಮೇಲೆ ಬಹಿರಂಗ ದಾಳಿ ನಡೆಸಿದ್ದರು. ಸರಕಾರವು ಜನರಿಂದ ಆಯ್ಕೆಯಾಗಿದ್ದು ಜನರ ಮತ್ತು ದೇಶದ ಕಾಳಜಿಯ ಅಧಿಕೃತ ವೇದಿಕೆಯಾದ ಸರಕಾರಕ್ಕೆ ನ್ಯಾಯಾಧೀಶರ ನೇಮಕಾತಿಯಲ್ಲಿ ಪ್ರಮುಖ ಪಾತ್ರವಿರಬೇಕಾದದ್ದು ಸಹಜ ಎಂಬ ವಾದ ಮೋದಿ ಸರಕಾರದ್ದು. ಆದರೆ ಈಗಿರುವ ಕೊಲಿಜಿಯಂ ವ್ಯವಸ್ಥೆಯಲ್ಲೂ ಸರಕಾರದ ಅಭಿಪ್ರಾಯವನ್ನು ತೆಗೆದುಕೊಳ್ಳುವ ರಿವಾಜನ್ನು ಸಾಂಸ್ಥಿಕವಾಗಿಯೇ ಪಾಲಿಸಲಾಗುತ್ತಿದೆ. ನ್ಯಾಯಾಧೀಶರಾಗಿ ನೇಮಕ ಮಾಡಬಹುದಾದ ಅಭ್ಯರ್ಥಿಗಳ ಬಗ್ಗೆ ಸುಪ್ರೀಂ ಕೋರ್ಟಿನ ಕೊಲಿಜಿಯಂ ಕಳಿಸುವ ಪ್ರಸ್ತಾವವನ್ನು ಸರಕಾರದ ಕಾನೂನು ಇಲಾಖೆ ಸ್ವತಂತ್ರವಾಗಿ ಪರಿಶೀಲಿಸಿ, ಬೇಹುಗಾರಿಕಾ ಸಂಸ್ಥೆಗಳ ಅಭಿಪ್ರಾಯಗಳನ್ನು ತೆಗೆದುಕೊಂಡು ಆ ಅಭ್ಯರ್ಥಿಗಳ ಬಗ್ಗೆ ತನ್ನ ಅನುಮೋದನೆ ಅಥವಾ ಆಕ್ಷೇಪಣೆಗಳನ್ನು ಕಳಿಸುತ್ತದೆ. ಅದನ್ನು ಮತ್ತೊಮ್ಮೆ ಕೂಲಂಕಶವಾಗಿ ಪರಿಶೀಲಿಸುವ ಕೊಲಿಜಿಯಂ ಸರಕಾರದ ಸಲಹೆಗಳನ್ನು ಮಾನ್ಯ ಮಾಡಿ ಅಥವಾ ತಿರಸ್ಕರಿಸಿ ಮತ್ತೊಮ್ಮೆ ತನ್ನ ಶಿಫಾರಸುಗಳನ್ನು ಕಾನೂನು ಇಲಾಖೆಗೆ ಕಳಿಸುತ್ತದೆ. ಈಗಿರುವ ಪದ್ಧತಿಯಂತೆ ಕೊಲಿಜಿಯಂ ಎರಡನೇ ಬಾರಿ ಕಳಿಸಿದ ಶಿಫಾರಸುಗಳನ್ನು ಸರಕಾರ ಮಾನ್ಯ ಮಾಡಬೇಕು. ಆದರೆ ಮೋದಿ ಸರಕಾರ ಆ ಪದ್ಧತಿಯನ್ನೂ ಪಾಲಿಸದೆ ಈಗಾಗಲೇ ಕೊಲಿಜಿಯಂ ಎರಡನೇ ಬಾರಿ ಮಾಡಿದ ಹಲವಾರು ಶಿಫಾರಸುಗಳನ್ನು ಜಾರಿ ಮಾಡದೆ ಸಂಘರ್ಷ ನಡೆಸಿದೆ.

ಹೀಗೆ ಉನ್ನತ ನ್ಯಾಯಾಂಗ ನ್ಯಾಯಾಧೀಶರ ನೇಮಕಾತಿಯಲ್ಲಿ ಅಂತಿಮ ತೀರ್ಮಾನದ ಅಧಿಕಾರ ತನಗಿರದಿದ್ದರೂ ಅನಧಿಕೃತವಾಗಿ ಆ ಅಧಿಕಾರವನ್ನು ಚಲಾಯಿಸುತ್ತಿದೆ. ತನ್ನ ಈ ಸಂವಿಧಾನ ವಿರೋಧಿ ನಡಾವಳಿಗೆ ಮೋದಿ ಸರಕಾರ ದೇಶದ ಮತ್ತು ಸಾರ್ವಜನಿಕರ ಹಿತಾಸಕ್ತಿಯ ಕಾಳಜಿಯ ನೆಪವನ್ನು ನೀಡುತ್ತಾ ಬಂದಿದೆ. ಆದರೆ ಸರಕಾರದ ಇತ್ತೀಚಿನ ಆಕ್ಷೇಪಣೆಗಳಿಗೆ ಕೊಲಿಜಿಯಂ ಜನವರಿ 17 ಮತ್ತು 18ರಂದು ಕೊಟ್ಟಿರುವ ಮಾರುತ್ತರವು ಸರಕಾರದ ಆಕ್ಷೇಪಣೆಗಳಲ್ಲಿ ಪಕ್ಷದ ಸಿದ್ಧಾಂತದ ಮತ್ತು ಸರಕಾರದ ನಾಯಕರ ಹಿತಾಸಕ್ತಿಯನ್ನು ಬಿಟ್ಟರೆ ದೇಶದ, ಜನರ ಮತ್ತು ಪ್ರಜಾತಂತ್ರದ ಬಗೆಗಿನ ಯಾವುದೇ ಹಿತಾಸಕ್ತಿ ಇರಲಿಲ್ಲವೆಂಬುದು ಸ್ಪಷ್ಟ ಪಡಿಸುತ್ತದೆ. ಉದಾಹರಣೆಗೆ ದಿಲ್ಲಿಯಲ್ಲಿ ಹಿರಿಯ ವಕೀಲರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸೌರಭ್ ಕಿರ್ಪಾಲ್ ಅವರನ್ನು ದಿಲ್ಲಿ ಹೈಕೋರ್ಟಿನ ನ್ಯಾಯಾಧೀಶರನ್ನಾಗಿ ನೇಮಿಸಲು ಎರಡನೇ ಬಾರಿ ಮಾಡಿದ ಶಿಫಾರಸನ್ನು ಕೇಂದ್ರ ಸರಕಾರ ಕೆಲವು ಆಕ್ಷೇಪಣೆಗಳೊಂದಿಗೆ ಮರಳಿಸಿದೆ. ಕಿರ್ಪಾಲ್ ಅವರ ಬಗ್ಗೆ ಮೋದಿ ಸರಕಾರಕ್ಕಿದ್ದ ಆಕ್ಷೇಪಣೆಗಳು ಅ) ಅವರು ತಮ್ಮ ಲೈಂಗಿಕ ಧೋರಣೆಯನ್ನು ಬಹಿರಂಗವಾಗಿ ಘೋಷಿಸಿಕೊಂಡಿದ್ದಾರೆ ಎಂಬುದು ಮತ್ತು ಆ) ಅವರ ಸಂಗಾತಿ ಸ್ವಿಟ್ಸರ್‌ಲ್ಯಾಂಡ್ ದೇಶದ ನಾಗರಿಕರಾಗಿದ್ದಾರೆ ಎಂಬುದಷ್ಟೇ ಆಗಿದೆ. ಸ್ವಿಟ್ಸರ್‌ಲ್ಯಾಂಡ್ ಭಾರತದ ಮಿತ್ರ ದೇಶವೇ ವಿನಾ ಶತ್ರು ದೇಶವಲ್ಲ. ಅಲ್ಲದೆ ಕೊಲಿಜಿಯಂ ಹೇಳಿದಂತೆ ಕಿರ್ಪಾಲ್ ಅವರು ತನ್ನ ಲೈಂಗಿಕ ಧೋರಣೆಗಳನ್ನು ಮುಚ್ಚಿಟ್ಟುಕೊಳ್ಳದೆ ಬಹಿರಂಗಗೊಳಿಸಿರುವುದು ಅವರ ಅರ್ಹತೆಯನ್ನು ಹೆಚ್ಚಿಸುತ್ತದೆಯೇ ವಿನಾ ಅನರ್ಹಗೊಳಿಸುವುದಿಲ್ಲ.

ಮೇಲಾಗಿ ಇವು ಯಾವುವೂ ನ್ಯಾಯಾಧೀಶರಾಗಲು ಅವರಿಗಿರುವ ಅರ್ಹತೆಗಳಾದ ಸಾಮರ್ಥ್ಯ, ಪ್ರಾಮಾಣಿಕತೆ ಮತ್ತು ಬೌದ್ಧಿಕತೆಗಳಿಗೆ ಅಡ್ಡಿ ಬರುವುದಿಲ್ಲವೆಂದು ಕೊಲಿಜಿಯಂ ಮತ್ತೆ ಅವರ ಹೆಸರನ್ನು ಶಿಫಾರಸು ಮಾಡಿ ವಾಪಸ್ ಸರಕಾರಕ್ಕೆ ಕಳಿಸಿದೆ. ಹಾಗೆಯೇ ಬಾಂಬೆ ಹೈಕೋರ್ಟಿನ ಹಿರಿಯ ವಕೀಲರಾದ ಸೋಮಶೇಖರ್ ಸುಂದರೇಶನ್ ಅವರನ್ನು ಬಾಂಬೆ ಹೈಕೋರ್ಟಿನ ನ್ಯಾಯಾಧೀಶರನ್ನಾಗಿ ನೇಮಿಸಲು ಮಾಡಿದ್ದ ಶಿಫಾರಸನ್ನು ಮೋದಿ ಸರಕಾರ ವಾಪಸ್ ಕಳಿಸಲು ನೀಡಿರುವ ಕಾರಣ ಅ) ಸರಕಾರದ ಹಲವಾರು ಪ್ರಮುಖ ನೀತಿಗಳು, ಪ್ರಸ್ತಾವಗಳು ಮತ್ತು ನಿರ್ದೇಶನಗಳ ಬಗ್ಗೆ ಈ ವಕೀಲರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾದ ವಿಮರ್ಶೆ ಮಾಡುತ್ತಾರೆ ಆ) ಕೋರ್ಟಿನ ಮುಂದಿರುವ ಹಲವಾರು ಪ್ರಕರಣಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ ಎಂಬುದಾಗಿದೆ. ಹಾಗಾದಲ್ಲಿ ಆಳುವ ಸರಕಾರದ ಬಗ್ಗೆ ಸ್ವತಂತ್ರ ಹಾಗೂ ವಿಮರ್ಶಾತ್ಮಕ ಮನೋಭಾವ ಹೊಂದಿರುವುದು ಸ್ವತಂತ್ರ ನ್ಯಾಯಾಂಗದ ನ್ಯಾಯಾಧೀಶರಾಗಲು ಒಂದು ಅರ್ಹತೆಯಾಗದೆ ವಿನಾ ಅನರ್ಹತೆಯಾಗುವುದೇ? ಹಾಗಿದ್ದಲ್ಲಿ ಮೋದಿ ಸರಕಾರ ಹೌದಪ್ಪಗಳಂತಿರುವ ವಕೀಲರನ್ನು ಮಾತ್ರ ನ್ಯಾಯಾಧೀಶರನ್ನಾಗಿ ನೇಮಕಮಾಡುವ ಇರಾದೆಯನ್ನು ಬಹಿರಂಗವಾಗಿ ಘೋಷಿಸುತ್ತಿದೆಯೇ? ಹಾಗೆಯೇ, ಮದ್ರಾಸ್ ಹೈಕೋರ್ಟಿನ ಹಿರಿಯ ವಕೀಲರಾಗಿರುವ ಜಾನ್ ಸತ್ಯನ್ ಅವರನ್ನು ನ್ಯಾಯಾಧೀಶರನ್ನಾಗಿ ಮಾಡಲು ಆಕ್ಷೇಪಿಸುತ್ತಾ ಮೋದಿ ಸರಕಾರ ನೀಡಿರುವ ಸಬೂಬು ಮತ್ತಷ್ಟು ಕ್ಷುಲ್ಲಕವಾಗಿದೆ. ಜಾನ್ ಸತ್ಯನ್ ಅವರು ಅ) ಪ್ರಧಾನಿ ಮೋದಿಯವರನ್ನು ಟೀಕೆ ಮಾಡುವ ಲೇಖನವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಎನ್ನುವುದು ಆ) ಎರಡನೆಯದು ನೀಟ್ ಪದ್ಧತಿಯಿಂದ ಸಂತ್ರಸ್ತಳಾಗಿ ಆತ್ಮಹತ್ಯೆ ಮಾಡಿಕೊಂಡ ಅನಿತಾ ಎಂಬ ವಿದ್ಯಾರ್ಥಿನಿಯ ಸಾವು ರಾಜಕೀಯ ಕೊಲೆಯೆಂದು ಪ್ರಚಲಿತವಾಗಿದ್ದ ಟ್ವೀಟ್ ಅನ್ನು ಈ ವಕೀಲರು ಹಂಚಿಕೊಂಡಿದ್ದೇ ಅವರ ದೊಡ್ದ ಅನರ್ಹತೆಯೆಂದು ಮೋದಿ ಸರಕಾರ ಅವರ ಕಡತವನ್ನು ಕೊಲಿಜಿಯಂಗೆ ವಾಪಸ್ ಕಳಿಸಿದೆ. ನ್ಯಾಯಾಧೀಶರಾದ ಮೇಲೆ ಸರಕಾರದ ಪರ ಅಥವಾ ವಿರೋಧಿ ನಿಲುವುಗಳನ್ನು ಬಹಿರಂಗಗೊಳಿಸಬಾರದು ಎಂಬುದು ಸರಿ. ಆದರೆ ಇವರೆಲ್ಲರೂ ಸ್ವತಂತ್ರವಾಗಿ ವಕೀಲಿಕೆ ಮಾಡುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಿರಿಯ ಪ್ರತಿಪಾದಕರು. ಇಂತಹ ಸ್ವತಂತ್ರ ಮನೋಭಾವದ ಹಿರಿಯ ವಕೀಲರು ನ್ಯಾಯಾಧೀಶರಾಗುವುದು ನ್ಯಾಯಾಂಗದ ಸ್ವಾತಂತ್ರವನ್ನು ಕಾಪಾಡುತ್ತದೆ.

ಆದರೆ ಪ್ರಧಾನಿ ಮೋದಿ ಸರಕಾರಕ್ಕೆ ಪ್ರಧಾನಿಯನ್ನು ದೇವರ ಅವತಾರವೆಂದು ಹೊಗಳುವ ಅಥವಾ ಮೋದಿ ಸರಕಾರದ ಸಂವಿಧಾನ ವಿರೋಧಿ ಹಿಂದುತ್ವದ ಸಿದ್ಧಾಂತವನ್ನು ಪೀಠದಲ್ಲಿ ಕುಳಿತು ಪ್ರತಿಪಾದಿಸುವ ಅಥವಾ ಹೈಕೋರ್ಟಿನ ಕಾರ್ಯನಿರತ ನ್ಯಾಯಾಧೀಶರಾಗಿ ಮೀಸಲಾತಿ ವಿರುದ್ಧ ಬಂಡಾಯ ಏಳಲು ಮೇಲ್ಜಾತಿಗಳಿಗೆ ಕರೆ ನೀಡುವ ಭಟ್ಟಂಗಿ ನ್ಯಾಯಾಧೀಶರುಗಳು ಮಾತ್ರ ಉನ್ನತ ನ್ಯಾಯಾಂಗಕ್ಕೆ ಅರ್ಹರಾಗಿ ಕಾಣುತ್ತಾರೆಯೇ ವಿನಾ ಸ್ವತಂತ್ರ ಮನೋಭಾವದ ಹಿರಿಯ ವಕೀಲರುಗಳಲ್ಲ. ಅಂದರೆ ಮೋದಿ ಸರಕಾರಕ್ಕೆ ಬೇಕಿರುವುದು ಭಟ್ಟಂಗಿ ನ್ಯಾಯಾಂಗವೇ ವಿನಾ ಸ್ವತಂತ್ರ ನ್ಯಾಯಾಂಗವಲ್ಲ. ನ್ಯಾಯಾಧೀಶರ ನೇಮಕಾತಿಯಲ್ಲಿ ಸರಕಾರದ ಪ್ರಧಾನ ನಿಯಂತ್ರಣವಿಲ್ಲದಿರುವಾಗಲೇ ಸ್ವತಂತ್ರ ಮನೋಭಾವದ ಹಾಗೂ ಸಾಂವಿಧಾನಿಕ ಮೌಲ್ಯವುಳ್ಳ ನ್ಯಾಯಾಧೀಶರ ನೇಮಕಾತಿಯನ್ನು ತಡೆಗಟ್ಟುತ್ತಿರುವ ಮೋದಿ ಸರಕಾರ, ಇನ್ನು ನೇರ ನಿಯಂತ್ರಣವನ್ನೇ ಪಡೆದುಕೊಂಡು ಬಿಟ್ಟರೆ ಏನಾಗಬಹುದು?

Similar News