​ಕನ್ನಡದಲ್ಲಿ ನ್ಯಾಯ; ಕನ್ನಡಕ್ಕೆ ನ್ಯಾಯ

Update: 2023-01-27 04:24 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಕನ್ನಡವೂ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಪ್ರತಿಗಳನ್ನು ಒದಗಿಸುವ ಮಹತ್ವದ ಆನ್‌ಲೈನ್ ಸೇವೆಗೆ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಅವರು ಬುಧವಾರ ಚಾಲನೆ ನೀಡಿದ್ದಾರೆ. ಇಲೆಕ್ಟ್ರಾನಿಕ್ಸ್ ಸುಪ್ರೀಂಕೋರ್ಟ್ ರಿಪೋರ್ಟ್ಸ್‌ನ ಭಾಗವಾಗಿ ನ್ಯಾಯಾಲಯವು ಹಿಂದಿ, ಒರಿಯಾ, ಮರಾಠಿ, ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಪ್ರತಿಗಳನ್ನು ಗುರುವಾರದಿಂದ ಉಚಿತವಾಗಿ ಒದಗಿಸಲು ಚಂದ್ರಚೂಡ್ ಆದೇಶಿಸಿದ್ದಾರೆ. ಗಣರಾಜ್ಯೋತ್ಸವದ ದಿನವೇ ಇಂತಹದೊಂದು ಮಹತ್ವದ ನಿರ್ಧಾರ ಸುಪ್ರೀಂಕೋರ್ಟ್‌ನಿಂದ ಹೊರ ಬಿದ್ದಿರುವುದು ಶ್ಲಾಘನೀಯವಾಗಿದೆ. ಒಕ್ಕೂಟ ವ್ಯವಸ್ಥೆಯನ್ನು ಸೌಹಾರ್ದವಾಗಿ ಬೆಸೆದಿರುವ ಭಾಷಾ ವೈವಿಧ್ಯಕ್ಕೆ ಸಂದ ಬಹುದೊಡ್ಡ ಗೌರವ ಇದಾಗಿದೆ. ದಿಲ್ಲಿಯ ಭಾಷೆಯ ಕೋಟೆಯೊಳಗೆ ಬಂಧಿತವಾಗಿದ್ದ ನ್ಯಾಯಕ್ಕೆ ದೊರಕಿದ ಬಿಡುಗಡೆಯೆಂದು ಇದನ್ನು ಭಾವಿಸಬೇಕು. ಇದರಿಂದಾಗಿ ಕನ್ನಡಕ್ಕೆ ನ್ಯಾಯ ದೊರಕಿದೆ. ಜೊತೆಗೆ ನ್ಯಾಯಕ್ಕೂ ನ್ಯಾಯ ದೊರಕಿದೆ. ಜನರು ತಮಗೆ ಸಂಬಂಧಿಸಿದ ನ್ಯಾಯವನ್ನು ತಮ್ಮದೇ ಭಾಷೆಯಲ್ಲಿ ಪಡೆದುಕೊಳ್ಳುವ ಹಕ್ಕನ್ನು ಸಣ್ಣ ಪ್ರಮಾಣದಲ್ಲಾದರೂ ತಮ್ಮದಾಗಿಸಿಕೊಂಡಿದ್ದಾರೆ. ತಮಗೆ ಗೊತ್ತಿಲ್ಲದ ಭಾಷೆಯಲ್ಲಿ ತಮಗಾದ ಅನ್ಯಾಯವನ್ನು ಮಂಡಿಸಿ, ತಮಗೆ ಗೊತ್ತಿಲ್ಲದ ಭಾಷೆಯಲ್ಲಿ ನ್ಯಾಯವನ್ನು ಪಡೆದುಕೊಳ್ಳುವುದೆಂದರೆ, ಮೂಗ ತನ್ನ ಅನ್ಯಾಯವನ್ನು ಹೇಳಿಕೊಂಡಂತೆ, ಕಿವುಡ ನ್ಯಾಯದ ಮಾತುಗಳನ್ನು ಕೇಳಿಸಿಕೊಂಡಂತೆ. ಅವರ ಮತ್ತು ನ್ಯಾಯದಾತರ ನಡುವೆಯಿರುವ ಮಧ್ಯವರ್ತಿಗಳ ಕೈಯಲ್ಲಿ ಇಂದಿಗೂ ನಮ್ಮ ನ್ಯಾಯಾಲಯಗಳ ನ್ಯಾಯಗಳು ನರಳುತ್ತಿವೆ. ಇಂತಹ ಸಂದರ್ಭದಲ್ಲಿ ನ್ಯಾಯವನ್ನು ಜನರ ಭಾಷೆಯಲ್ಲಿ ಜನರಿಗೆ ತಲುಪಿಸುವ ಮಹತ್ವವನ್ನು ಸುಪ್ರೀಂಕೋರ್ಟ್ ಈ ಮೂಲಕ ಎತ್ತಿ ಹಿಡಿದಂತಾಗಿದೆ.
 
   ಭಾರತದಲ್ಲಿ ನ್ಯಾಯ ವ್ಯವಸ್ಥೆ ಪಾರದರ್ಶಕವಾಗಿದೆ ಎಂದು ನಾವೆಷ್ಟೇ ಕೊಚ್ಚಿಕೊಂಡರೂ, ಜನರು ಮತ್ತು ನ್ಯಾಯಾಲಯದ ನಡುವೆ ಭಾಷೆ ಬಹುದೊಡ್ಡ ಗೋಡೆಯಾಗಿ ನಿಂತು ಬಿಟ್ಟಿದೆ. ಈ ಗೋಡೆಯನ್ನು ಕೆಡಹುವ ಪ್ರಯತ್ನವನ್ನು ಹಲವರು ಮಾಡಿದ್ದಾರಾದರೂ ಇಂದಿಗೂ ಅದರಲ್ಲಿ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗುವುದಕ್ಕೆ ಸಾಧ್ಯವಾಗಿಲ್ಲ. ಯಾಕೆಂದರೆ, ಈ ಗೋಡೆ ಬಿದ್ದು ಬಿಟ್ಟರೆ, ಜನರು ಮತ್ತು ನ್ಯಾಯಾಲಯದ ನಡುವಿನ ಮಧ್ಯವರ್ತಿಗಳು ಕೆಲಸ ಕಳೆದುಕೊಳ್ಳುತ್ತಾರೆ. ಆಗ ಅವರಿಗೆ ಜನ ಸಾಮಾನ್ಯರನ್ನು ಶೋಷಿಸುವುದಕ್ಕೆ ಸಾಧ್ಯವಾಗುವುದಿಲ್ಲ. ದೇಶಾದ್ಯಂತ ಹೆಚ್ಚಿನ ನ್ಯಾಯಾಲಯಗಳಲ್ಲಿ ಇಂದು ನ್ಯಾಯಾಲಯದ ಕಲಾಪಗಳು ನಡೆಯುತ್ತಿರುವುದು ಇಂಗ್ಲಿಷ್‌ನಲ್ಲಿ. ಇಲ್ಲವೇ ಹಿಂದಿಯಲ್ಲಿ. ತೀರ್ಪು ಕೂಡ ಹೊರ ಬೀಳುವುದು ಹಿಂದಿ ಅಥವಾ ಇಂಗ್ಲಿಷ್‌ನಲ್ಲೇ. ಇದು ಕೇವಲ ಸುಪ್ರೀಂಕೋರ್ಟ್‌ಗೆ ಮಾತ್ರ ಅನ್ವಯವಾಗುವುದಲ್ಲ. ವಿವಿಧ ರಾಜ್ಯಗಳಲ್ಲಿರುವ ಹೈಕೋರ್ಟ್ ನಿಂದ, ಹಿಡಿದು ಜಿಲ್ಲಾ ನ್ಯಾಯಾಲಯದವರೆಗೆ ಇಂತಹ ಭಾಷಾ ಸಮಸ್ಯೆ ಜನರಿಗೆ ನ್ಯಾಯ ಪಡೆಯಲು ತೊಡಕಾಗಿವೆ. ಮಾತೃ ಭಾಷೆಯಲ್ಲಿ ಶಿಕ್ಷಣದ ಬಗ್ಗೆ ನಾವು ಮಾತನಾಡುತ್ತೇವೆ. ಅದಕ್ಕಾಗಿ ಸಾರ್ವಜನಿಕ ಆಂದೋಲನಗಳು ನಡೆಯುತ್ತವೆ. ಆದರೆ ಒಬ್ಬ ವ್ಯಕ್ತಿಗೆ ತನ್ನ ಮಾತೃ ಭಾಷೆಯಲ್ಲಿ ನ್ಯಾಯಾಲಯದಲ್ಲಿ ನ್ಯಾಯವನ್ನು ಪಡೆದುಕೊಳ್ಳುವ ಹಕ್ಕು ಯಾಕಿಲ್ಲ? ತನ್ನ ಪರವಾಗಿರುವ ನ್ಯಾಯವನ್ನು ನ್ಯಾಯವಾದಿಯ ಮೂಲಕವೇ ತಿಳಿದುಕೊಳ್ಳುವ ಅನಿವಾರ್ಯ ಸ್ಥಿತಿ ಇಂದಿಗೂ ಯಾಕಿದೆ? ಈ ಬಗ್ಗೆ ಚರ್ಚೆ ನಡೆದಿರುವುದು ಕಡಿಮೆ. ನ್ಯಾಯಾಲಯದಲ್ಲಿ 'ಗೆದ್ದವನು ಸೋತ, ಸೋತವನು ಸತ್ತ' ಎನ್ನುವ ಮಾತಿದೆ. ನ್ಯಾಯಾಲಯದಲ್ಲಿ ನ್ಯಾಯ ಪ್ರಕ್ರಿಯೆ ಅದೆಷ್ಟು ಸುದೀರ್ಘವಾಗಿರುತ್ತದೆ ಎನ್ನುವುದನ್ನು ಈ ಗಾದೆ ವಿವರಿಸುತ್ತದೆ. ಹಲವು ವರ್ಷಗಳ ಬಳಿಗೆ ನ್ಯಾಯ ದೊರಕಿದರೂ, ಆ ನ್ಯಾಯಕ್ಕಾಗಿ ಆತ ಬಹಳಷ್ಟನ್ನು ಕಳೆದುಕೊಂಡಿರುತ್ತಾನೆ. ನ್ಯಾಯ ಪಡೆದ ಸಂಭ್ರಮ ಅವನಲ್ಲಿರುವುದಿಲ್ಲ. ಸೋತವನದು ಸತ್ತ ಸ್ಥಿತಿ. ಆದರೆ ಇವರ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದ ನ್ಯಾಯವಾದಿಗಳು ಮಾತ್ರ ಶ್ರೀಮಂತರಾಗಿರುತ್ತಾರೆ. ಇಲ್ಲಿ ಗೆದ್ದವನಿಗೂ, ಸೋತವನಿಗೂ ನ್ಯಾಯಾಲಯದಲ್ಲಿ ತನ್ನ ಪರವಾಗಿ ಏನು ವಾದಗಳು ನಡೆದಿವೆ ಎನ್ನುವುದೇ ತಿಳಿದಿರುವುದಿಲ್ಲ. ವಿಚಾರಣೆ ಬೇಗ ಮುಗಿಯದ ಹಾಗೆ ಎರಡೂ ಕಡೆಯ ನ್ಯಾಯವಾದಿಗಳೂ ಒಳಗೊಳಗೆ ಒಪ್ಪಂದ ಮಾಡಿಕೊಂಡಿರುತ್ತಾರೆ. ನ್ಯಾಯಾಧೀಶರು ಕೂಡ ಸಂತ್ರಸ್ತನ ಮಾತುಗಳಿಗೆ ಸಂಪೂರ್ಣ ನ್ಯಾಯವಾದಿಯನ್ನೇ ಅವಲಂಬಿಸುವ ಸ್ಥಿತಿಯಿದೆ. ಇತ್ತ ನ್ಯಾಯಾಧೀಶರ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಸಂತ್ರಸ್ತ ಕೂಡ ನ್ಯಾಯವಾದಿಯನ್ನೇ ಅವಲಂಬಿಸಬೇಕಾಗುತ್ತದೆ. ಹೀಗಿರುವಾಗ ನ್ಯಾಯ ವ್ಯವಸ್ಥೆಯನ್ನು ಪಾರದರ್ಶಕವೆಂದು ಒಪ್ಪಿಕೊಳ್ಳುವುದಾದರೂ ಹೇಗೆ? ಕಟ್ಟ ಕಡೆಗೆ ನ್ಯಾಯವೋ, ಅನ್ಯಾಯವೋ ನ್ಯಾಯಾಧೀಶರು ನೀಡಿದ ತೀರ್ಪನ್ನು ಕೂಡ ನ್ಯಾಯವಾದಿಯ ಮೂಲಕವೇ ಸಂತ್ರಸ್ತ ತಿಳಿದುಕೊಳ್ಳಬೇಕು. ನ್ಯಾಯಾಲಯದ ತೀರ್ಪುಗಳನ್ನು ಅನೇಕ ಸಂದರ್ಭದಲ್ಲಿ ವಿದ್ಯಾವಂತರಿಗೇ ಅರ್ಥ ಮಾಡಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ. ತೀರ್ಪನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸಿಕೊಂಡು ನ್ಯಾಯಾಲಯವನ್ನೇ ತಪ್ಪು ದಾರಿಗೆ ಎಳೆಯುತ್ತಾರೆ. ಇಂತಹ ಸಂದರ್ಭದಲ್ಲಿ ಅರ್ಥವಾಗದ ಭಾಷೆಯಲ್ಲಿರುವ ತೀರ್ಪನ್ನು ಶ್ರೀಸಾಮಾನ್ಯ ಸಂತ್ರಸ್ತರು ಹೇಗೆ ಸ್ವೀಕರಿಸಬೇಕು?
 
   ಮಾತೃ ಭಾಷೆಯಲ್ಲಿ ಶಿಕ್ಷಣದ ಬಗ್ಗೆ ಮಾತನಾಡುತ್ತೇವೆ. ಅದಕ್ಕಾಗಿ ಸರಕಾರ ಸರಕಾರಿ ಶಾಲೆಗಳಿಗೆ ಸಾಕಷ್ಟು ವೆಚ್ಚವನ್ನೂ ಮಾಡುತ್ತಿದೆ. ಆದರೆ ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆಯುವವರ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಬ್ಯಾಂಕು, ಕಚೇರಿ, ನ್ಯಾಯಾಲಯಗಳಲ್ಲಿ ಮಾತೃ ಭಾಷೆ ಬಳಕೆಯಲ್ಲಿದ್ದಾಗ ಜನರಿಗೂ ತಮ್ಮ ಭಾಷೆಯ ಕುರಿತಂತೆ ಆತ್ಮವಿಶ್ವಾಸ ಮೂಡುತ್ತದೆ. ಕರ್ನಾಟಕದಂತಹ ರಾಜ್ಯಗಳಲ್ಲಿ ಕೊಂಕಣಿ, ಉರ್ದು, ಬ್ಯಾರಿ, ತುಳು, ಕೊಡವ ಮೊದಲಾದ ಮಾತೃ ಭಾಷಿಗರು ಕನ್ನಡವನ್ನು ಶಾಲೆಯಲ್ಲೇ ಕಲಿಯಬೇಕು. ಈ ಕನ್ನಡ ದೈನಂದಿನ ಬದುಕಿಗೂ ಅನಿವಾರ್ಯವೆನಿಸಿದಾಗ ಅವರು ಕನ್ನಡ ಮಾಧ್ಯಮದಲ್ಲೇ ತಮ್ಮ ಮಕ್ಕಳನ್ನು ಓದಿಸಬಹುದು. ಆದರೆ ಕನ್ನಡ ಮಾಧ್ಯಮ ಭಾಷೆಯಲ್ಲಿ ಕಲಿತ ಮಕ್ಕಳು ಬೆಳೆದು ಬೇರೆ ಬೇರೆ ಕಚೇರಿಗಳಿಗೆ ಹೋದರೆ ಅಲ್ಲಿ ಹಿಂದಿ, ಇಂಗ್ಲಿಷನ್ನೇ ಸಂವಹನಕ್ಕೆ ಬಳಸಿದರೆ ಇವರ ಸ್ಥಿತಿ ಏನಾಗಬೇಕು? ಹಿಂದಿ, ಇಂಗ್ಲಿಷ್ ಸರಿಯಾಗಿ ಅರ್ಥವಾಗದೆ ಕೀಳರಿಮೆಯಿಂದ ನಿಲ್ಲುವ ಸ್ಥಿತಿಯನ್ನು ತಮ್ಮ ಮಕ್ಕಳಿಗೆ ಯಾವ ಪೋಷಕರು ತಾನೆ ನಿರ್ಮಿಸುವುದಕ್ಕೆ ಸಿದ್ಧರಿರುತ್ತಾರೆ? ಕನ್ನಡ ಮಾಧ್ಯಮ ಶಿಕ್ಷಣ ಯಶಸ್ವಿಯಾಗಬೇಕಾದರೆ ಕನಿಷ್ಠ ಕರ್ನಾಟಕದ ಎಲ್ಲ ಸರಕಾರಿ ಕಚೇರಿಗಳಲ್ಲಿ, ಬ್ಯಾಂಕುಗಳಲ್ಲಿ , ನ್ಯಾಯಾಲಯಗಳಲ್ಲಿ ಕನ್ನಡದಲ್ಲೇ ಸಂವಹನ ನಡೆಸುವುದಕ್ಕೆ ಬೇಕಾದ ಕಾನೂನನ್ನು ಸರಕಾರ ಕಠಿಣವಾಗಿ ಅನುಷ್ಠಾನಗೊಳಿಸಬೇಕು. ಎಲ್ಲ ನ್ಯಾಯಾಲಯಗಳಲ್ಲಿ ಕನ್ನಡದಲ್ಲೇ ಜನರಿಗೆ ತೀರ್ಪು ಸಿಗುವಂತಾಗಬೇಕು. ಕನ್ನಡ ಮೊದಲ ಭಾಷೆಯಾಗಿದೈನಂದಿನ ಬದುಕಿನಲ್ಲಿ ಪ್ರಾಮುಖ್ಯತೆಯನ್ನು ಪಡೆಯಬೇಕು. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಕನ್ನಡ ಭಾಷೆಯಲ್ಲಿ ತೀರ್ಪಿನ ಪ್ರತಿಯನ್ನು ಒದಗಿಸಲು ಮುಂದಾಗಿರುವುದು ಒಂದು ಮಹತ್ವದ ನಡೆಯಾಗಿದೆ. ಕರ್ನಾಟಕದ ಹೈಕೋರ್ಟ್‌ನಲ್ಲೂ ಕನ್ನಡ ಭಾಷೆಯಲ್ಲೇ ತೀರ್ಪಿನ ಪ್ರತಿಗಳು ಸಿಗುವಂತಾಗಬೇಕು. ಇದು ನ್ಯಾಯಾಲಯಗಳಿಗೆ ಮಾತ್ರವಲ್ಲ, ಇತರ ಉದ್ಯಮ ಕ್ಷೇತ್ರಗಳಿಗೂ ಅನ್ವಯವಾಗಲಿ. ಬ್ಯಾಂಕ್ ವಿಲೀನವಾದ ಬಳಿಕ ಕರ್ನಾಟಕದ ಬ್ಯಾಂಕುಗಳಲ್ಲಿ ಕನ್ನಡ ಬಳಕೆ ಭಾರೀ ಪ್ರಮಾಣದಲ್ಲಿ ಇಳಿಮುಖವಾಗಿದೆ. ಹಿಂದಿ ಅಥವಾ ಇಂಗ್ಲಿಷ್ ಗೊತ್ತಿಲ್ಲದೇ ಇದ್ದರೆ ಅಲ್ಲಿ ವ್ಯವಹರಿಸುವುದಕ್ಕೆ ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಹಕರಿಂದ ಬ್ಯಾಂಕ್ ಹೊರತು, ಬ್ಯಾಂಕ್‌ನಿಂದ ಗ್ರಾಹಕರಲ್ಲ. ಆದುದರಿಂದ, ಗ್ರಾಹಕರ ಭಾಷೆಯಲ್ಲಿ ಸಂವಹನ ನಡೆಸುವುದು ಎಲ್ಲ ಬ್ಯಾಂಕ್‌ಗಳ ಕರ್ತವ್ಯದ ಭಾಗವಾಗಬೇಕು

Similar News