ಭಾರತ ವಿಭಜನೆಗೆ ಯಾರು ಕಾರಣ?

Update: 2023-01-30 03:36 GMT

ಭಾರತ ವಿಭಜನೆಯನ್ನು ತಪ್ಪಿಸಲು ಗಾಂಧೀಜಿಗೆ ಸಾಧ್ಯವಾಗಲಿಲ್ಲ. ಆದರೆ ಪಾಕಿಸ್ತಾನ ಏನಾದರೂ ಆಗಲಿ ಭಾರತ ಸರ್ವಧರ್ಮಗಳ ಸಹಬಾಳ್ವೆಯ, ಜಾತ್ಯತೀತ ದೇಶವಾಗಿರಬೇಕು ಎಂಬುದು ಗಾಂಧೀಜಿಯ ಆಶಯ ಆಗಿತ್ತು. ಅದಕ್ಕಾಗಿ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷತೆಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಸೂಚಿಸಿದ ಗಾಂಧೀಜಿ, ಪ್ರಧಾನಿ ಸ್ಥಾನಕ್ಕೆ ಕಟ್ಟಾ ಜಾತ್ಯತೀತವಾದಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಹೆಸರನ್ನು ಸೂಚಿಸಿದರು. ಅಂದಿನಿಂದ ಗಾಂಧಿ ಮತ್ತು ನೆಹರೂ ಅವರನ್ನು ಕಂಡರೆ ಕೋಮುವಾದಿ ಶಕ್ತಿಗಳಿಗೆ ಆಗುವುದಿಲ್ಲ.


ಭಾರತದ ಮೊದಲ ಭಯೋತ್ಪಾದಕ ಹತ್ಯೆ ಅಂದರೆ ಗಾಂಧಿ ಹತ್ಯೆ. ಮಹಾತ್ಮಾ ಎಂದು ಹೆಸರಾದ ಮೋಹನದಾಸ ಕರಮಚಂದ ಗಾಂಧಿಯವರನ್ನು ನಾಥೂರಾಮ್ ಗೋಡ್ಸೆ ಹತ್ಯೆ ಮಾಡಿ ಇಂದಿಗೆ ಎಪ್ಪತ್ತೈದು ವರ್ಷ.
ಹತ್ಯೆ ಮಾಡಿದವನ ಸಿದ್ಧಾಂತದ ಕೈ ಮೇಲಾಗಿ ಮಹಾತ್ಮಾ ಈಗ ಖಳನಾಯಕನಾಗಿದ್ದಾರೆ. ಅವರನ್ನು ಗುಂಡಿಕ್ಕಿ ಕೊಂದವನನ್ನು ಹೀರೊ ಮಾಡಿ ಆತನ ಜನ್ಮದಿನ ಆಚರಿಸುವ, ಆತನ ಪ್ರತಿಮೆಯನ್ನು ನಿಲ್ಲಿಸುವ ಬದಲಾದ ಕಾಲ ಘಟ್ಟದಲ್ಲಿ ನಾವಿದ್ದೇವೆ.
ವಾಸ್ತವವಾಗಿ ಭಾರತದ ವಿಭಜನೆಗೆ ಯಾರು ಕಾರಣ? ಈ ಪ್ರಶ್ನೆಗೆ ಉತ್ತರ ಹುಡುಕಲು ಚರಿತ್ರೆಯ ಪುಟಗಳನ್ನು ತಿರುವಿ ಹಾಕುವುದರ ಜೊತೆಗೆ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡ ಅಂದಿನ ಪೀಳಿಗೆಯ ಹೋರಾಟಗಾರರನ್ನು ವಿಚಾರಿಸಬೇಕು. ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡು ಜೈಲು ವಾಸ ಅನುಭವಿಸಿದ ನನ್ನ ದೊಡ್ಡಪ್ಪ ರಾಯಪ್ಪ ಬೆಳಗಲಿ ಮತ್ತು ನನ್ನ ತಂದೆ ಧರ್ಮಣ್ಣ ಬೆಳಗಲಿಯವರು ಬದುಕಿದ್ದಾಗ ಈ ಬಗ್ಗೆ ನಾನು ಅವರನ್ನು ಕೇಳಿದ್ದೆ. ಗಾಂಧೀಜಿಯ ಪರಮ ಭಕ್ತರಾಗಿದ್ದ ಅವರು ಗಾಂಧೀಜಿ ಅವರು ಮಾಡು ಇಲ್ಲವೆ ಮಡಿ ಎಂದು ಕರೆ ನೀಡಿದ ಮುಂಬೈಯ ಗೋವಾಲಿ ಟ್ಯಾಂಕ್ ಮೈದಾನ ಸಭೆಯಲ್ಲಿ ಭಾಗವಹಿಸಿದವರು. ಅವರ ಪ್ರಕಾರ, ಭಾರತ ವಿಭಜನಗೆ ಗಾಂಧಿ ವಿರೋಧವಾಗಿದ್ದರು. ಅವರ ಇಚ್ಛೆಗೆ ವಿರುದ್ಧವಾಗಿ ಭಾರತದ ವಿಭಜನೆ ನಡೆಯಿತು.

ಅವರಷ್ಟೇ ಅಲ್ಲ ಸ್ವಾತಂತ್ರ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಆಝಾದ್ ಹಿಂದ್ ಫೌಜ್ ಮಹಿಳಾ ರೆಜಿಮೆಂಟ್‌ನ ಕ್ಯಾಪ್ಟನ್ ಆಗಿದ್ದ ಡಾ. ಲಕ್ಷ್ಮೀ ಸೆಹಗಲ್ ಅವರನ್ನೂ ಈ ಬಗ್ಗೆ ನಾನು ವಿಚಾರಿಸಿದಾಗ ಅವರೂ ಭಾರತದ ವಿಭಜನೆಗೆ ಗಾಂಧಿ ಕಾರಣವಲ್ಲ ಎಂದು ಹೇಳಿದರು.
ಗಾಂಧೀಜಿ ಹತ್ಯೆಯನ್ನು ಈಗ ಬಲವಾಗಿ ಸಮರ್ಥಿಸಿಕೊಳ್ಳುತ್ತಿರುವ ಗೋಡ್ಸೆವಾದಿಗಳು, ಪಾಕಿಸ್ತಾನ ನಿರ್ಮಾಣಕ್ಕೆ ಗಾಂಧಿ ಕಾರಣ, ಭಾರತದ ವಿಭಜನೆಯ ಖಳನಾಯಕ ಗಾಂಧಿ ಎಂದು ವಾಟ್ಸ್‌ಆ್ಯಪ್ ಸೇರಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡುತ್ತಿರುವ ಈ ದಿನಗಳಲ್ಲಿ ಗಾಂಧಿಯನ್ನು ಸಮರ್ಥಿಸಿಕೊಳ್ಳುವವರು ವಿರಳ. ಆದರೂ ಇಂದಿಗೂ ಕೋಮುವಾದಿ ಶಕ್ತಿಗಳಿಗೆ ಗಾಂಧಿಯ ಭಯ ಸ್ವಪ್ನದಲ್ಲೂ ಕಾಡುತ್ತಿದೆ.
 ರಾಷ್ಟ್ರಪತಿ ಚುನಾವಣೆಗೆ ಎಡಪಂಥೀಯ ರಂಗದ ಅಭ್ಯರ್ಥಿಯಾಗಿ ಪ್ರಚಾರಕ್ಕೆ ಬಂದಿದ್ದ ಕ್ಯಾಪ್ಟನ್ ಲಕ್ಷ್ಮೀ ಅವರನ್ನು ಅವರು ತಂಗಿದ್ದ ಬೆಂಗಳೂರಿನ ಬಾಲಬ್ರೂಯಿ ಅತಿಥಿ ಗೃಹದಲ್ಲಿ ಭೇಟಿ ಮಾಡಿದ್ದೆ.

ಆಗ ಮಾತನಾಡುವಾಗ ಭಾರತ ವಿಭಜನೆಯ ಪ್ರಸ್ತಾಪ ಬಂದಾಗ ವಿಭಜನೆಗೆ ಕಾರಣ ಗಾಂಧೀಜಿ ಅಲ್ಲ ಸಾವರ್ಕರ್ ಎಂದು ಅವರು ಸ್ಪಷ್ಟವಾಗಿ ಹೇಳಿದ್ದರು.
ಮಹಾತ್ಮಾ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಅಹಿಂಸಾತ್ಮಕ ಚಳವಳಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಆಝಾದ್ ಹಿಂದ್ ಸೇನೆಯ ಗರ್ಜನೆ, ಭಗತ್ ಸಿಂಗ್ ಅವರ ನಾಯಕತ್ವದಲ್ಲಿ ಎಡಪಂಥೀಯ ಯುವಕರು ಒಡ್ಡಿದ ಕ್ರಾಂತಿಕಾರಿ ಪ್ರತಿರೋಧ, ನೌಕಾ ಪಡೆಯ ದಂಗೆ, ಹೀಗೆ ಹಲವಾರು ಆಂದೋಲನದ ಧಾರೆಗಳ ಪರಿಣಾಮವಾಗಿ ಬ್ರಿಟಿಷ್ ವಸಾಹತುಶಾಹಿ ಭಾರತದಿಂದ ತೊಲಗಿತು. ನಂತರ ಗಾಂಧೀಜಿ ಜೊತೆಗಿದ್ದವರು ಕಾಂಗ್ರೆಸ್ ಜೊತೆಗೆ ಸೇರಿದರು. ಗಾಂಧೀಜಿ ಜೊತೆಗಿನ ಒಂದು ಗುಂಪು ರಾಮ್ ಮನೋಹರ ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣ ಅವರ ನೇತೃತ್ವದಲ್ಲಿ ಸೋಶಿಯಲಿಸ್ಟ್ ಪಕ್ಷವನ್ನು ಕಟ್ಟಿದರು. ಸುಭಾಷ್ ಚಂದ್ರ ಬೋಸ್ ಮತ್ತು ಭಗತ್ ಸಿಂಗ್ ಹಾಗೂ ಚಂದ್ರಶೇಖರ್ ಆಝಾದ್ ಜೊತೆಗಿದ್ದವರು ಕಮ್ಯುನಿಸ್ಟ್ ಪಕ್ಷದೊಂದಿಗೆ ಗುರುತಿಸಿಕೊಂಡರು. ಆದರೆ, ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡ ಯಾವೊಬ್ಬ ವ್ಯಕ್ತಿಯೂ ಆರೆಸ್ಸೆಸ್ ಜೊತೆಗೆ ಸೇರಲಿಲ್ಲ. ಯಾಕೆಂದರೆ ಅದು ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ. ಇತಿಹಾಸ ಗೊತ್ತಿಲ್ಲದ ಓದುವ ಅಭಿರುಚಿ ಮತ್ತು ಆಸಕ್ತಿ ಇಲ್ಲದ ಇಂದಿನ ಅನೇಕ ಯುವಕರು ವಾಟ್ಸ್ ಆ್ಯಪ್ ಯುನಿವರ್ಸಿಟಿಯ ಸುಳ್ಳುಗಳನ್ನು ಸತ್ಯವೆಂದು ನಂಬಿ ಗಾಂಧಿ, ನೆಹರೂ ಬಗ್ಗೆ ಅವಹೇಳನದ ಮಾತನ್ನು ಆಡುತ್ತಾರೆ.

ಭಾರತದ ವಿಭಜನೆಯ ತುಂಬ ಹಿಂದೆಯೇ ವಿನಾಯಕ ದಾಮೋದರ್ ಸಾವರ್ಕರ್ ಅವರು 'ಹಿಂದುತ್ವ' ಎಂಬ ಪದವನ್ನು ಬಳಕೆಗೆ ತಂದರು. ಅದೇ ಹೆಸರಿನ ಸೈದ್ಧಾಂತಿಕ ಪ್ರತಿಪಾದನೆಯ ಪುಸ್ತಕವನ್ನು ಬರೆದರು. ಸಾವರ್ಕರ್ ಮಂಡಿಸಿದ ದ್ವಿರಾಷ್ಟ್ರ ಸಿದ್ಧಾಂತವನ್ನು ಇತರ ಆರೆಸ್ಸೆಸ್ ನಾಯಕರಾದ ಬಾಲಕೃಷ್ಣ ಶಿವರಾಮ ಮೂಂಜೆ ಮತ್ತು ಭಾಯಿ ಪರಮಾನಂದ ಮತ್ತು ಶ್ರದ್ಧಾನಂದರು ಬೆಂಬಲಿಸಿದ್ದರು ಎಂದು ಹಿರಿಯ ಪತ್ರಕರ್ತ ಖುಷ್‌ವಂತ್ ಸಿಂಗ್ ಲೇಖನವೊಂದರಲ್ಲಿ ಉಲ್ಲೇಖಿಸಿದ್ದಾರೆ.

ಮೊಗಲ್ ಆಡಳಿತವನ್ನೇ ಆಧಾರವಾಗಿ ಇಟ್ಟುಕೊಂಡು ಸಾವರ್ಕರ್ 'ಹಿಂದುತ್ವ' ಸಿದ್ಧಾಂತವನ್ನು ರೂಪಿಸಿದರು. ಜರ್ಮನಿಯಲ್ಲಿ ಹಿಟ್ಲರ್ ಯೆಹೂದಿಗಳನ್ನು ಸಾಮೂಹಿಕವಾಗಿ ಕೊಲ್ಲಲು ಬಲವಂತದ ಕ್ಯಾಂಪುಗಳನ್ನು ಮಾಡಿ ಬೇಲಿಯೊಳಗೆ ಬಂಧಿಸಿಟ್ಟಂತೆ ಭಾರತದ ಮುಸಲ್ಮಾನರನ್ನು ಶತ್ರುವಾಗಿ ಬಿಂಬಿಸಲಾಯಿತು. ಇದಕ್ಕಾಗಿ ಅಧ್ಯಯನ ಮಾಡಲು ಬಾಲಕೃಷ್ಣ ಶಿವರಾಮ ಮೂಂಜೆಯವರನ್ನು ಜರ್ಮನಿ ಮತ್ತು ಇಟಲಿಗಳಿಗೆ ಕಳಿಸಲಾಗಿತ್ತು. ಅಲ್ಲಿಂದ ಮೂಂಜೆ ಎರವಲು ತಂದ ಫ್ಯಾಶಿಸ್ಟ್ ಮತ್ತು ನಾಝಿ ಸಿದ್ಧಾಂತಕ್ಕೆ ಕಸಿ ಮಾಡಿ ಹಿಂದುತ್ವ ಸಿದ್ಧಾಂತವನ್ನು ರೂಪಿಸಲಾಯಿತು. ಹಿಂದೂಗಳು ಮತ್ತು ಮುಸಲ್ಮಾನರು ಒಂದೇ ದೇಶದಲ್ಲಿ ಇರಲು ಸಾಧ್ಯವಿಲ್ಲ ಎಂದು ಹೇಳಿ ಜಿನ್ನಾಗಿಂತ ಮೊದಲು ದ್ವಿರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿದವರು ವಿನಾಯಕ ದಾಮೋದರ್ ಸಾವರ್ಕರ್. ಆದರೆ, ರಾಷ್ಟ್ರ ವಿಭಜನೆಯ ಕಳಂಕ ಅಂಟಿಸಿದ್ದು ಗಾಂಧೀಜಿಗೆ.

ಬ್ರಿಟಿಷರು ಭಾರತದಿಂದ ತೊಲಗಿದ ನಂತರ ಕೋಮು ದಳ್ಳುರಿ ಭುಗಿಲೆದ್ದಿತು. ಸ್ವಾತಂತ್ರಾ ನಂತರ ಮನುವಾದಿ ಹಿಂದೂ ರಾಷ್ಟ್ರದ ಷಡ್ಯಂತ್ರ ರೂಪಿಸಿದ್ದ ಇಟಲಿಯ ಮುಸ್ಸೋಲಿನಿ ಮತ್ತು ಜರ್ಮನಿಯ ಅಡಾಲ್ಫ್ ಹಿಟ್ಲರ್‌ನಿಂದ ಪ್ರೇರಣೆ ಪಡೆದ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾಗಳು ಭಾರತೀಯರನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಇತಿಹಾಸದ ತಿಪ್ಪೆ ಕೆದರಲು ಶುರು ಮಾಡಿದವು. ಹಿಂದಿನ ಮೊಗಲ್ ಅರಸರ ಕಾಲದಲ್ಲಿ ಹಿಂದೂಗಳಿಗೆ ಆದ ಅನ್ಯಾಯದ ಬಗ್ಗೆ, ದೇವಾಲಯಗಳು ಭಗ್ನಗೊಂಡ ಬಗ್ಗೆ ಜಿಝಿಯಾ ತೆರಿಗೆಯ ಬಗ್ಗೆ ಭಾವೋದ್ರೇಕದ ಕತೆಗಳನ್ನು ಕಟ್ಟಿ ಹೇಳಲಾರಂಭಿಸಿದರು. ಮೊಗಲ್ ವಿರುದ್ಧ ಹೋರಾಡಿದ ಛತ್ರಪತಿ ಶಿವಾಜಿ ಮತ್ತು ಪೃಥ್ವಿರಾಜ್ ಚೌಹಾಣರ ನೈಜ ಇತಿಹಾಸಕ್ಕೆ ಕೋಮು ಬಣ್ಣವನ್ನು ಬಳಿದು ಅವರನ್ನು ರಾಷ್ಟ್ರೀಯ ವೀರರೆಂದು, ಮುಸಲ್ಮಾನರು ಶತ್ರುಗಳೆಂದು ಬಿಂಬಿಸಿ ಕಟ್ಟುಕತೆಗಳನ್ನು ಹರಡಲಾರಂಭಿಸಿದರು. ಆದರೆ, ವಾಸ್ತವಿಕವಾಗಿ ಶಿವಾಜಿ ಮುಸ್ಲಿಮ್ ವಿರೋಧಿಯಾಗಿರಲಿಲ್ಲ. ಅವರ ಸೈನ್ಯದ ಪ್ರಮುಖ ಹುದ್ದೆಗಳಲ್ಲಿ ಮುಸಲ್ಮಾನರಿದ್ದರು. ಆದರೆ, ಚಾತುರ್ವರ್ಣ ಪದ್ಧ್ದತಿಗೆ ಮರುಜೀವ ನೀಡಲು ಭಾರತದ ಹಿಂದುಳಿದ, ಆದಿವಾಸಿ ಸಮುದಾಯದ ಜನರನ್ನು ಹಿಂದೂಗಳೆಂದು ನಂಬಿಸಿ ಬಲೆಗೆ ಹಾಕಿಕೊಳ್ಳಲು ಕಲ್ಪಿತ ಶತ್ರುವನ್ನಾಗಿ ಮುಸಲ್ಮಾನರನ್ನು ತೋರಿಸಲಾಯಿತು.

ವಾಸ್ತವವಾಗಿ ಭಾರತದ ವಿಭಜನೆಗೆ ಗಾಂಧೀಜಿ ವಿರೋಧವಾಗಿದ್ದರು.ಆದರೆ, ಜಿನ್ನಾ ಮತ್ತು ಸಾವರ್ಕರ್ ಪ್ರಕಾರ ಮುಸ್ಲಿಮ್ ಮತ್ತು ಹಿಂದೂ ಸಮುದಾಯಗಳು ವಿಭಿನ್ನ ರಾಷ್ಟ್ರೀಯತೆಗಳನ್ನು ಹೊಂದಿವೆ. ಪ್ರತ್ಯೇಕ ನಾಗರಿಕತೆ ಮತ್ತು ಸಂಸ್ಕೃತಿಗಳನ್ನು ಹೊಂದಿವೆ.
ಎರಡೂ ಸಮುದಾಯಗಳು ಒಂದು ರಾಷ್ಟ್ರವಾಗಿರಲು ಸಾಧ್ಯವಿಲ್ಲ ಎಂಬುದು ಸಿದ್ಧಾಂತವಾಗಿತ್ತು. ಹೀಗಾಗಿ ಹಿಂದೂ, ಮುಸ್ಲಿಮ್ ಏಕತೆ ಪ್ರತಿಪಾದಿಸಿದ ಗಾಂಧಿಯನ್ನು ಖಳನಾಯಕನಂತೆ ಬಿಂಬಿಸಲಾಯಿತು.

 ಭಾರತ ವಿಭಜನೆಯನ್ನು ತಪ್ಪಿಸಲು ಗಾಂಧೀಜಿಗೆ ಸಾಧ್ಯವಾಗಲಿಲ್ಲ. ಆದರೆ ಪಾಕಿಸ್ತಾನ ಏನಾದರೂ ಆಗಲಿ ಭಾರತ ಸರ್ವಧರ್ಮಗಳ ಸಹಬಾಳ್ವೆಯ, ಜಾತ್ಯತೀತ ದೇಶವಾಗಿರಬೇಕು ಎಂಬುದು ಗಾಂಧೀಜಿಯ ಆಶಯ ಆಗಿತ್ತು. ಅದಕ್ಕಾಗಿ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷತೆಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಸೂಚಿಸಿದ ಗಾಂಧೀಜಿ, ಪ್ರಧಾನಿ ಸ್ಥಾನಕ್ಕೆ ಕಟ್ಟಾ ಜಾತ್ಯತೀತವಾದಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಹೆಸರನ್ನು ಸೂಚಿಸಿದರು. ಅಂದಿನಿಂದ ಗಾಂಧಿ ಮತ್ತು ನೆಹರೂ ಅವರನ್ನು ಕಂಡರೆ ಕೋಮುವಾದಿ ಶಕ್ತಿಗಳಿಗೆ ಆಗುವುದಿಲ್ಲ.ಅಂಬೇಡ್ಕರ್ ಅವರ ತೇಜೋವಧೆಗೆ ಯತ್ನಿಸಿದರು. ಅರುಣ್ ಶೌರಿಯವರಿಂದ ಪುಸ್ತಕ ಬರೆಯಿಸಿದರು. ಆದರೆ ಬಾಬಾಸಾಹೇಬರಿಂದ ಬೆಳಕಿನ ಜಗತ್ತನ್ನು ಪ್ರವೇಶಿಸಿದ ದಮನಿತ ಸಮುದಾಯ ಭಾರತದ ಭಾಗ್ಯ ವಿದಾತನ ಜೊತೆಗೆ ದೃಢವಾಗಿ ನಿಂತಿದ್ದರಿಂದ ಮತ್ತೆ ಅವರ ತಂಟೆಗೆ ಹೋಗಲಿಲ್ಲ. ಆದರೆ, ಅಂಬೇಡ್ಕರ್ ಅವರನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು ತಮ್ಮ ಹಿಡನ್ ಅಜೆಂಡಾ ಜಾರಿಗೊಳಿಸಿಕೊಳ್ಳುವ ಹುನ್ನಾರ ಕೈ ಬಿಟ್ಟಿಲ್ಲ. ಆದರೆ, ಹಿಂದೂ ರಾಷ್ಟ್ರ ನಿರ್ಮಾಣದ ಕಾರ್ಯಸೂಚಿಯನ್ನು ಗಟ್ಟಿಯಾಗಿ ವಿರೋಧಿಸಿದ ಬಾಬಾಸಾಹೇಬರನ್ನು ಬಳಸಿಕೊಳ್ಳುವುದು ಸುಲಭವಲ್ಲ. ಅವರನ್ನು ಮುಟ್ಟಲು ಹೊರಟವರು ಭಸ್ಮವಾಗುತ್ತಾರೆಂದು ನಾಗಪುರದ ಆರೆಸ್ಸೆಸ್ ಜನರಿಗೆ ಗೊತ್ತಿದೆ.

ಭಾರತ ಎಂಬುದು ವಿಭಿನ್ನ ಜನ ಸಮುದಾಯಗಳ, ಭಾಷೆಗಳ, ಧರ್ಮ ಗಳ, ಸಂಸ್ಕೃತಿಗಳ, ನಾಗರಿಕತೆಗಳ ಮತ್ತು ರಾಷ್ಟ್ರೀಯತೆಗಳ ತಾಣವಾಗಿದೆ.
ಈ ಎಲ್ಲ ಆಸ್ಮಿತೆಗಳನ್ನು ಗೌರವಿಸಿ ಮನ್ನಿಸಿದರೆ ಇದು ಸುರಕ್ಷಿತವಾಗಿ ಉಳಿಯುತ್ತದೆ. ಸಂವಿಧಾನದ ಪ್ರಕಾರ ಇದು ಒಕ್ಕೂಟ ರಾಷ್ಟ್ರ. ಒಂದೇ ದೇಶ, ಒಂದೇ ಧರ್ಮ, ಒಂದೇ ಭಾಷೆ, ಒಂದೆ ರೇಷನ್ ಕಾರ್ಡ್ ಎಂದು ಅನೇಕತೆಯನ್ನು ನಾಶ ಮಾಡಿ ಮನುವಾದಿ ಪರಿಕಲ್ಪನೆಯ ಏಕತೆಯನ್ನು ಹೇರಲು ಹೊರಟರೆ ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ. ಬಹುತ್ವ ಭಾರತದ ಉಳಿವಿನಲ್ಲಿ ನಮ್ಮೆಲ್ಲರ ಭವಿಷ್ಯ ಅಡಕವಾಗಿದೆ ಎಂಬುದನ್ನು ಮರೆಯಬಾರದು.

Similar News