ಇದು ದೇಶದ ಮೇಲೆ ನಡೆಯುತ್ತಿರುವ ದಾಳಿಯೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೇಂದ್ರ ಸರಕಾರದ ಪ್ರಕಾರ ಭಾರತದ ಮೇಲೆ ವಸಾಹತುಶಾಹಿ ಶಕ್ತಿಗಳು ಎರಡು ಸರ್ಜಿಕಲ್ ಸ್ಟ್ರೈಕ್ ನಡೆಸಿವೆ. ಅವುಗಳಲ್ಲಿ ಒಂದು ದಾಳಿ ಬಿಬಿಸಿಯ ಮೂಲಕ ನಡೆದಿದ್ದರೆ, ಇನ್ನೊಂದು ದಾಳಿ ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆಯ ಮೂಲಕ ನಡೆದಿದೆ. ಗುಜರಾತ್ ಹತ್ಯಾಕಾಂಡದಲ್ಲಿ ಆಗಿನ ಮುಖ್ಯಮಂತ್ರಿಯ ಪಾತ್ರದ ಕುರಿತಂತೆ ಬಿಬಿಸಿಯು ತಯಾರಿಸಿದ ಸಾಕ್ಷ್ಯ ಚಿತ್ರವನ್ನು ‘ಭಾರತದ ವಿರುದ್ಧ ವಸಾಹತು ಶಾಹಿ ಸಂಚು’ ಎಂದು ಕೇಂದ್ರ ಸರಕಾರ ಕರೆದಿದೆ. ಇದೇ ಸಂದರ್ಭದಲ್ಲಿ ಹಿಂಡನ್‌ಬರ್ಗ್ ರಿಸರ್ಚ್ ವರದಿಯು ಅದಾನಿ ಸಂಸ್ಥೆಗಳ ವಿರುದ್ಧ ಮಾಡಿರುವ ಆರೋಪವನ್ನು ಗೌತಮ್ ಅದಾನಿಯವರು ‘ಜಲಿಯನ್ ವಾಲಾಬಾಗ್ ಹತ್ಯಾಕಾಂಡ’ಕ್ಕೆ ಹೋಲಿಸಿದ್ದಾರೆ. ವಿದೇಶಿ ಶಕ್ತಿಗಳು ಭಾರತದ ಮೇಲೆ ನಡೆಸಿದ ಪರೋಕ್ಷ ದಾಳಿಯೆಂದು ಅವರು ಬಣ್ಣಿಸಿದ್ದಾರೆ. ಅದಾನಿ ಆರೋಪಕ್ಕೆ ಹಿಂಡನ್‌ಬರ್ಗ್ ತಿರುಗೇಟು ನೀಡಿದ್ದು, ‘ಅದಾನಿಯವರು ತಾನು ಮಾಡುತ್ತಿರುವ ಮೋಸವನ್ನು ರಾಷ್ಟ್ರೀಯ ಮುಖವಾಡದಲ್ಲಿ ಬಚ್ಚಿಡಲು ಯತ್ನಿಸಿದ್ದಾರೆ’ ಎಂದು ಪ್ರತಿ ಆರೋಪಿಸಿದೆ. ಇವೆರಡೂ ಭಾರತದ ಮೇಲೆ ನಡೆದ ದಾಳಿಯಾಗಿರುವುದರಿಂದ, ಆ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವುದಾಗಲಿ ಅಥವಾ ಅದಾನಿಯ ವಿರುದ್ಧ ಮಾತನಾಡುವುದಾಗಲಿ ಸರಕಾರದ ಪ್ರಕಾರ ದೇಶದ್ರೋಹದ ಕೃತ್ಯವಾಗಲಿದೆ.
ಈ ಹಿಂದೆಲ್ಲ ಸರಕಾರವನ್ನಾಗಲಿ, ಯಾವುದೇ ಉದ್ಯಮಿಗಳನ್ನಾಗಲಿ ಟೀಕಿಸುವುದು, ವಿಮರ್ಶಿಸುವುದು ದೇಶದ್ರೋಹದ ವಿಷಯವಾಗಿರಲಿಲ್ಲ. ಅದು ದೇಶಪ್ರೇಮದ ಭಾಗವಾಗಿತ್ತು. ಯುಪಿಎ ಸರಕಾರದ ಅವಧಿಯಲ್ಲಿ ಸರಕಾರದ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ನೇತೃತ್ವದಲ್ಲಿ ಹೋರಾಟ ನಡೆದಾಗ ಇಡೀ ದೇಶ ಅವರ ಜೊತೆಗಿತ್ತು. ಆದರೆ ಇಂದು ಕಾಲ ಬದಲಾಗಿದೆ. ಮೋದಿಯನ್ನು ಟೀಕಿಸಿದರೆ ಅದು ದೇಶವನ್ನು ಟೀಕಿಸಿದಂತೆ ಎನ್ನುವ ವಾತಾವರಣವನ್ನು ನಿರ್ಮಿಸಲಾಗಿದೆ. ಈ ಹಿಂದೆ ದೇಶಕ್ಕಾಗಿ ನಾಯಕರು ಬಲಿಯಾಗುತ್ತಿದ್ದರು. ಆದರೆ ಇಂದು ನಾಯಕನಿಗಾಗಿ ದೇಶವನ್ನು ಬಲಿಕೊಡುವ ಮನಸ್ಥಿತಿಯೊಂದು ಸೃಷ್ಟಿಯಾಗುತ್ತಿದೆ. ಮೋದಿಯ ಯಾವುದೇ ಜನವಿರೋಧಿ ನೀತಿಗಳನ್ನು ಟೀಕಿಸಿದರೂ ಟೀಕಿಸಿದವರನ್ನು ದೇಶದ್ರೋಹಿಗಳೆಂದು, ಹಿಂದೂ ಧರ್ಮ ವಿರೋಧಿಗಳೆಂದು ಕರೆದು ಅವರ ಮೇಲೆ ದಾಳಿ ನಡೆಸಲಾಗುತ್ತದೆ. ಸೈನಿಕರು ತಮಗೆ ನೀಡುವ ಕಳಪೆ ಆಹಾರದ ಬಗ್ಗೆ ಮಾತನಾಡಿದಾಗ ಸೈನಿಕನನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಯಿತು. ರೈತರು ಬೀದಿಗಿಳಿದಾಗ ರೈತರನ್ನೆಲ್ಲ ‘ದೇಶದ್ರೋಹಿಗಳು’ ಎಂದು ಕರೆಯಲಾಯಿತು. ಭಾರತೀಯರೇ ಸರಕಾರದ ವಿರುದ್ಧ ಮಾತನಾಡುವ ವಾತಾವರಣ ಇಲ್ಲದಿರುವಾಗ, ವಿದೇಶಿಯರು ಭಾರತ ಸರಕಾರದ ವಿರುದ್ಧ ಟೀಕೆಗಳನ್ನು ಮಾಡಿದರೆ ಅದನ್ನು ನಮ್ಮ ಸರಕಾರ ಸಹಿಸಲು ಸಾಧ್ಯವೆ?
ಬಿಬಿಸಿ ಸಾಕ್ಷ್ಯಚಿತ್ರದಲ್ಲಿ ಸುಳ್ಳುಗಳಿವೆ, ಅದು ಭಾರತದ ವರ್ಚಸ್ಸಿಗೆ ಕಳಂಕ ತರಲು ಯತ್ನಿಸುತ್ತಿದೆಯೆಂದಾದರೆ ‘ಅದು ಹೇಗೆ?’ ಎನ್ನುವುದನ್ನು ಭಾರತ ಸರಕಾರವೇ ವಿವರಿಸಬೇಕು. ಗುಜರಾತ್ ಹತ್ಯಾಕಾಂಡ ನಡೆದಿರುವುದು ಭಾರತದಲ್ಲಿ. ಅದನ್ನು ನಡೆಸಿರುವುದು ವಿದೇಶದಿಂದ ಬಂದ ಬಿಬಿಸಿ ಪತ್ರಕರ್ತರಲ್ಲ. ಗೋಧ್ರಾ ರೈಲಿಗೆ ಬೆಂಕಿ ಬಿದ್ದಾಗ ವದಂತಿಗಳನ್ನು ಹರಡಿ ಗುಜರಾತ್‌ನಲ್ಲಿ ಹತ್ಯಾಕಾಂಡಕ್ಕೆ ವೇದಿಕೆ ಸೃಷ್ಟಿಸಿದ್ದು ಬಿಬಿಸಿಯಲ್ಲ, ಅಪ್ಪಟ ಸ್ವದೇಶಿ ಮಾಧ್ಯಮಗಳು. ಇಲ್ಲವಾಗಿದ್ದರೆ, ಗುಜರಾತ್ ಹತ್ಯಾಕಾಂಡದ ಆರೋಪವನ್ನೇ ಬಿಬಿಸಿಯ ತಲೆಗೆ ಕಟ್ಟಿ ಬಿಡಬಹುದಿತ್ತೇನೋ. ಇಷ್ಟಕ್ಕೂ ಗುಜರಾತ್ ಹತ್ಯಾಕಾಂಡ ನಡೆಯುತ್ತಿರುವಾಗ ಆಳುತ್ತಿದ್ದುದು ಯಾವುದೇ ವಸಾಹತು ಶಾಹಿ ಸರಕಾರವಲ್ಲ. ಮೋದಿ ನೇತೃತ್ವದ ಬಿಜೆಪಿ ಸರಕಾರ. ಗುಜರಾತ್ ಹತ್ಯಾಕಾಂಡವನ್ನು ಸಂಘಟಿಸಿದವರು ಯಾರೋ, ಅವರು ಭಾರತದ ವಿರುದ್ಧ ಸಂಚು ನಡೆಸಿದರು. ಅಂದು ಸಾವಿರಾರು ಜನರನ್ನು ಕೊಂದು ಹಾಕಲಾಯಿತು, ಸಾವಿರಾರು ಮನೆ, ಅಂಗಡಿಗಳನ್ನು ಸುಟ್ಟು ಹಾಕಲಾಯಿತು. ಇವೆಲ್ಲವೂ ಭಾರತಕ್ಕಾಗಿರುವ ನಾಶ, ನಷ್ಟ. ಆದುದರಿಂದ ಈ ನಾಶ ನಷ್ಟಕ್ಕೆ ಯಾರು ಕಾರಣರೋ ಅವರೇ ಭಾರತದ ವಿರುದ್ಧ ದಾಳಿ ನಡೆಸಿದ್ದಾರೆ, ಸಂಚು ನಡೆಸಿದ್ದಾರೆ. ಆದುದರಿಂದ, ಗುಜರಾತ್ ಹತ್ಯಾಕಾಂಡದ ಹಿಂದೆ ಯಾರಿದ್ದರು ಎನ್ನುವುದನ್ನು ತಿಳಿದುಕೊಳ್ಳುವ ಹಕ್ಕು ಭಾರತೀಯರಿಗಂತೂ ಇದ್ದೇ ಇದೆ. ಜೀವಾವಧಿ ಶಿಕ್ಷೆಗೊಳಗಾಗಿದ್ದ ಗುಜರಾತ್ ಹತ್ಯಾಕಾಂಡದ ಪ್ರಮುಖ ಆರೋಪಿಗಳನ್ನು ಇತ್ತೀಚೆಗೆ ಸರಕಾರದ ನೇತೃತ್ವದಲ್ಲಿ ಬಿಡುಗಡೆ ಮಾಡಲಾಯಿತು. ಹಾಗೆ ಬಿಡುಗಡೆ ಮಾಡಿದ ಸರಕಾರ ವಸಾಹತು ಶಾಹಿ ಸರಕಾರವಲ್ಲ. ಗುಜರಾತ್‌ನ್ನು ಆಳುತ್ತಿರುವ ಬಿಜೆಪಿ ಸರಕಾರ. ಆ ಸರಕಾರಕ್ಕೆ ಒತ್ತಾಸೆಯಾಗಿ ನಿಂತಿರುವುದು ಮೋದಿ ನೇತೃತ್ವದ ಕೇಂದ್ರ ಸರಕಾರ. ಎಲ್ಲಕ್ಕಿಂತ ಮುಖ್ಯವಾಗಿ ಕಳೆದ ಗುಜರಾತ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಭಾಷಣವೊಂದರಲ್ಲಿ ‘‘೨೦೦೨ರ ಗುಜರಾತ್ ಗಲಭೆಯಲ್ಲಿ ನಾವು ಪಾತಕಿಗಳಿಗೆ ಪಾಠ ಕಲಿಸಿದ್ದೇವೆ’’ ಎಂದು ಹತ್ಯಾಕಾಂಡವನ್ನು ತಮ್ಮ ಪಕ್ಷದ ಸಾಧನೆಯಾಗಿ ಘೋಷಿಸಿದರು. ಹೀಗಿರುವಾಗ, ಬಿಬಿಸಿ ಸಾಕ್ಷ್ಯಚಿತ್ರವನ್ನು ವಸಾಹತು ಶಾಹಿ ಸಂಚು, ಭಾರತದ ಮೇಲಿನ ದಾಳಿ ಎನ್ನುವುದರಲ್ಲಿ ಹುರುಳಿದೆಯೆ? ಈ ಹಿಂದಿನ ಹಲವು ಪ್ರಧಾನಿಗಳ ವಿರುದ್ಧ ಟೀಕೆಗಳು ಬಂದಿದ್ದವು. ಇಂದಿರಾಗಾಂಧಿಯ ತುರ್ತುಪರಿಸ್ಥಿತಿಯ ವಿರುದ್ಧ ವಿದೇಶಿ ಮಾಧ್ಯಮಗಳು ಕಟುವಾಗಿ ಖಂಡಿಸಿದ್ದವು. ಅದು ಭಾರತದ ವಿರುದ್ಧದ ದಾಳಿಯೆಂದು ಯಾರೂ ಭಾವಿಸಿರಲಿಲ್ಲ. ಬೋಫೋರ್ಸ್ ಹಗರಣದಲ್ಲಿ ರಾಜೀವ್‌ಗಾಂಧಿ ಅಧಿಕಾರವನ್ನು ಕಳೆದುಕೊಂಡಾಗ ಅವರು ತನ್ನ ರಾಜಕೀಯಕ್ಕಾಗಿ ಭಾರತ ದೇಶವನ್ನು ಗುರಾಣಿಯಾಗಿ ಬಳಸಿಲ್ಲ. ಆದರೆ ಮೋದಿಯ ವಿರುದ್ಧ ಆರೋಪಗಳು ಬಂದಾಕ್ಷಣ, ಭಾರತವನ್ನು ಮುಂದೆ ನಿಲ್ಲಿಸಿ, ಪ್ರಧಾನಿಯನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ. ಇದು ಭಾರತಕ್ಕೆ ಮಾಡುವ ಅವಮಾನವಾಗಿದೆ.
ಇನ್ನೊಂದೆಡೆ ಉದ್ಯಮಿ ಗೌತಮ್ ಅದಾನಿ ಕೂಡ ಹಿಂಡನ್‌ಬರ್ಗ್ ರಿಸರ್ಚ್‌ನ ಆರೋಪಗಳಿಂದ ಬಚಾವಾಗಲು ‘ಭಾರತದ ರಾಷ್ಟ್ರೀಯತೆ’ಯನ್ನು ಗುರಾಣಿಯಾಗಿ ಬಳಸಲು ಮುಂದಾಗಿದ್ದಾರೆ. ಜಲಿಯನ್‌ವಾಲಾಬಾಗ್ ಹತ್ಯಾಕಾಂಡಕ್ಕೆ ಹಿಂಡನ್‌ಬರ್ಗ್ ವರದಿಯನ್ನು ಹೋಲಿಸಿದ್ದಾರೆ. ಈ ದೇಶದ ಹಿತಾಸಕ್ತಿಗಾಗಿ, ಈ ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಜನರು ಜಲಿಯನ್‌ವಾಲಾಬಾಗ್‌ನಲ್ಲಿ ಬ್ರಿಟಿಷರ ಗುಂಡಿಗೆ ಬಲಿಯಾದರು. ಅವರ ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯವನ್ನು ಕಾರ್ಪೊರೇಟ್ ಶಕ್ತಿಗಳು ಜನರಿಂದ ಹಂತಹಂತವಾಗಿ ಕಿತ್ತುಕೊಳ್ಳುತ್ತಿದ್ದಾರೆ. ಸಾರ್ವಜನಿಕ ಸೊತ್ತುಗಳು ಒಂದೊಂದಾಗಿ ಅದಾನಿ ಬಳಗದ ಪಾಲಾಗುತ್ತಿವೆ. ಇಂದು ಪ್ರಜಾಸತ್ತಾತ್ಮಕ ಸರಕಾರವನ್ನು ನಿಯಂತ್ರಿಸುವ ಶಕ್ತಿಯಾಗಿ ಅದಾನಿ ಬದಲಾಗಿದ್ದಾರೆ. ಹೀಗಿರುವಾಗ, ತನ್ನ ಮೇಲಿನ ಆರೋಪಗಳನ್ನು ದೇಶದ ಮೇಲೆ ನಡೆದ ದಾಳಿ ಎಂದು ಕರೆದು ಬಚಾವಾಗಲು ಯತ್ನಿಸುತ್ತಿರುವುದು ತಮಾಷೆಯಾಗಿದೆ. ಹಿಂಡನ್‌ಬರ್ಗ್ ವರದಿ ಸತ್ಯವೇ ಆಗಿರಬೇಕಾಗಿಲ್ಲ ಅಥವಾ ಅದು ನೀಡಿರುವ ವರದಿಯ ಹಿಂದೆ ದುರುದ್ದೇಶಗಳಿರಬಹುದು. ಅದನ್ನು ಬಹಿರಂಗ ಪಡಿಸುವುದು ಅದಾನಿಯ ಕೆಲಸ. ಅದು ಸಾಧ್ಯವಾಗದೇ ಇದ್ದಾಗ, ಈ ದೇಶದ ಜನರನ್ನು ಒತ್ತೆಯಾಳಾಗಿಸಿಕೊಂಡು ರಕ್ಷಣೆ ಪಡೆಯಲು ಯತ್ನಿಸುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ದೇಶದ ನೂರಾರು ಉದ್ದಿಮೆಗಳು ಸರ್ವನಾಶವಾಗಿವೆ. ಹಲವು ಕೈಗಾರಿಕೋದ್ಯಮಿಗಳು ನಷ್ಟಕ್ಕೀಡಾಗಿದ್ದಾರೆ. ಅವರು ಯಾರೂ ದೇಶದ ಹೆಸರು ಹೇಳಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಯತ್ನಿಸಿಲ್ಲ. ಇಂತಹ ಸಂದರ್ಭದಲ್ಲೂ ಅದಾನಿ ವಿಶ್ವದ ಅತ್ಯಂತ ಶ್ರೀಮಂತ್ರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ಶ್ರೀಮಂತಿಕೆ ಹೇಗೆ ಬಂತು ಎನ್ನುವುದು ಗುಟ್ಟಿನ ವಿಷಯವೇನೂ ಅಲ್ಲ. ಈ ದೇಶದ ಜನರ ಹೂಡಿಕೆಯ ಹಣದ ಮೇಲೆ ಅವರು ನಿಂತಿದ್ದಾರೆ. ಅವರಿಂದು ಸ್ಪಷ್ಟೀಕರಣವನ್ನೋ, ಉತ್ತರವನ್ನೋ ನೀಡಬೇಕಾದುದು ಹಿಂಡನ್‌ಬರ್ಗ್‌ಗೆ ಅಲ್ಲ. ಈ ದೇಶದ ಜನರಿಗೆ. ಹಿಂಡನ್‌ಬರ್ಗ್ ಉಲ್ಲೇಖಿಸಿದಂತೆ ಅವರು ಮೋಸಗೈದಿರುವುದು ನಿಜವೇ ಆಗಿದ್ದರೆ, ಭಾರತದ ಮೇಲೆ ನಿಜಕ್ಕೂ ದಾಳಿ ನಡೆಸಿರುವುದು ಹಿಂಡನ್‌ಬರ್ಗ್ ಅಲ್ಲ, ಅದಾನಿ ಬಳಗ ಎಂದು ಜನರು ಭಾವಿಸಬೇಕಾಗುತ್ತದೆ. ಆದುದರಿಂದ, ತನ್ನ ಮೇಲಿನ ಆರೋಪದಿಂದ ಪಾರಾಗಲು ಜಲಿಯನ್ ವಾಲಾಬಾಗ್ ಹುತಾತ್ಮರನ್ನು ಮುಂದಿಡುವುದರಿಂದ ಅವರ ಸಮಸ್ಯೆ ಪರಿಹಾರವಾಗುವುದಿಲ್ಲ.