ದ್ವೇಷ ಭಾಷಣವನ್ನು ನಿಲ್ಲಿಸುವಲ್ಲಿ ಸುಪ್ರೀಂ ಕೋರ್ಟ್ ಕೂಡಾ ಅಸಹಾಯಕವಾಯಿತೇ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ದ್ವೇಷಭಾಷಣಗಳನ್ನು ನಿಗ್ರಹಿಸುವ ವಿಷಯದಲ್ಲಿ ನ್ಯಾಯಾಲಯವು ಎಂತಹ ಅಸಹಾಯಕ ಪರಿಸ್ಥಿತಿಯನ್ನು ತಲುಪಿದೆ ಎಂಬುದನ್ನು ಮೊನ್ನೆ ದೇಶದ ಸುಪ್ರೀಂ ಕೋರ್ಟೇ ಒಪ್ಪಿಕೊಂಡಿದೆ. ಇದು ದೇಶ ಎಂತಹ ಅಪಾಯದ ಮಟ್ಟವನ್ನು ಮುಟ್ಟಿದೆ ಎಂಬುದನ್ನು ಸೂಚಿಸುತ್ತಿದೆ. ಇದೇ ಫೆ. 5ನೇ ತಾರೀಕು ಮುಂಬೈನಲ್ಲಿ 'ಸಕಲ ಹಿಂದೂ ಸಮಾಜ'ವೆಂಬ ಸಂಘಟನೆಯು ಆಯೋಜಿಸುತ್ತಿರುವ 'ಹಿಂದೂ ಆಕ್ರೋಶ ಸಭೆ'ಯ ಉದ್ದೇಶ ಮುಸ್ಲಿಮರ ವಿರುದ್ಧ ದಾಳಿಯನ್ನು ಪ್ರೇರೇಪಿಸುವುದೇ ಆಗಿದೆ ಎಂದು ಅವರ ಪ್ರಕಟನೆಗಳಲ್ಲಿ ಸಾಬೀತಾಗಿರುವುದರಿಂದ ಅದನ್ನು ನಿಷೇಧಿಸಬೇಕೆಂದು ನಾಗರಿಕರೊಬ್ಬರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಮೊನ್ನೆ ಅದರ ಬಗ್ಗೆ ವಿಚಾರಣೆಯನ್ನು ನಡೆಸಲು ಒಪ್ಪಿಕೊಳ್ಳುತ್ತಾ ಸುಪ್ರೀಂ ಕೋರ್ಟ್ ಈಗಾಗಲೇ ಇದರ ಬಗ್ಗೆ ತಮ್ಮ ನ್ಯಾಯಾಲಯ ಹಲವಾರು ನಿರ್ದಿಷ್ಟ ಕ್ರಮಗಳನ್ನು ಆದೇಶಿಸಿದ್ದರೂ, ಸರಕಾರಗಳು ಅದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದೆ ಇಂತಹ ಸಭೆಗಳಿಗೆ ಅವಕಾಶ ಕೊಡುತ್ತಲೇ ಇರುವುದರ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿತು. ಅಷ್ಟು ಮಾತ್ರವಲ್ಲ, ಇಂತಹ ಘಟನೆಗಳು ನಡೆದಾಗಲೆಲ್ಲಾ ಅಹವಾಲುದಾರರು ಸುಪ್ರೀಂ ಕೋರ್ಟ್‌ನ ಮಧ್ಯಪ್ರವೇಶ ಕೋರುವುದು ಸಾರಾಂಶದಲ್ಲಿ ತಮ್ಮ ಆದೇಶಗಳು ಜಾರಿಯಾಗದಿರುವ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಮುಜುಗರವನ್ನೇ ಉಂಟುಮಾಡುತ್ತಿದೆ ಮತ್ತು ಅಸಹಾಯಕರನ್ನಾಗಿಸುತ್ತಿದೆ ಎಂದು ಹೇಳಿದೆ. ಹಾಗೆ ನೋಡಿದರೆ ಮೋದಿ ಸರಕಾರವು ಅಧಿಕಾರಕ್ಕೆ ಬಂದಮೇಲೆ ದೇಶದ ಬಲಪಂಥೀಯ ಹಾಗೂ ದ್ವೇಷಪಂಥೀಯ ಸಂಘಟನೆಗಳಿಗೆ ಹೊಸ ಶಕ್ತಿ ಬಂದಿರುವುದು ಸ್ಪಷ್ಟ.
2019ರ ಮೇ ತಿಂಗಳಲ್ಲಿ ಮೋದಿಯವರು ಎರಡನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನದಿಂದಲೇ ಜಾರ್ಖಂಡ್‌ನಲ್ಲಿ ಒಬ್ಬ ಮುಸ್ಲಿಮ್ ಯುವಕನನ್ನು ಹಿಂದುತ್ವವಾದಿಗಳೆಂದು ಹೇಳಿಕೊಳ್ಳುವ ಗುಂಪೊಂದು ಬಹಿರಂಗವಾಗಿ ಹೊಡೆದು ಕೊಂದುಹಾಕಿತು. ಆ ಆರೋಪಿಗಳಿಗೆ ಈವರೆಗೆ ಯಾವ ಶಿಕ್ಷೆಯೂ ಆಗಿಲ್ಲ. ಅಲ್ಲಿಂದ ಮೊದಲುಗೊಂಡ ಅಲ್ಪಸಂಖ್ಯಾತರ ಮೇಲಿನ ಶಿಕ್ಷಾಭೀತಿಯಿಲ್ಲದ ಕ್ರೌರ್ಯದ ದಾಳಿಗಳು ಈಗ ಹೊಸ ಮಜಲನ್ನೇ ಮುಟ್ಟಿವೆ. ಕೆಲ ತಿಂಗಳ ಕೆಳಗೆ ಗುಜರಾತಿನ ಪಟ್ಟಣವೊಂದರಲ್ಲಿ ಕಾನೂನು ಕಾಯಬೇಕಾದ ಪೊಲೀಸರೇ ಹಾಡಹಗಲೇ ಎಲ್ಲರನ್ನು ಸಭೆ ಸೇರಿಸಿ ಮುಸ್ಲಿಮ್ ಯುವಕರನ್ನು ಕಂಬಕ್ಕೆ ಕಟ್ಟಿ ಕ್ರೌರ್ಯ ತೋರಿದ್ದಾರೆ. ಪೊಲೀಸರು ಹಾಗೆ ಕಾನೂನು ಬಾಹಿರ ಕ್ರೌರ್ಯದಲ್ಲಿ ತೊಡಗಿದ್ದಾಗ ಸುತ್ತಲಿದ್ದ ಜನರು ''ಹರಹರಮಹದೇವ'' ಘೋಷಣೆ ಹಾಕಿ ಅದಕ್ಕೆ ಪ್ರೋತ್ಸಾಹ ನೀಡಿರುವುದು ಈ ಗಣರಾಜ್ಯ ತಲುಪಿರುವ ಅಧೋಗತಿಗೆ ಸೂಚಕವಾಗಿದೆ. ಆದರೂ ಗುಜರಾತ್ ಸರಕಾರವಾಗಲೀ, ನ್ಯಾಯಾಲಯಗಳಾಗಲೀ ಈವರೆಗೆ ಆ ಪೊಲೀಸರ ಮೇಲೆ ಯಾವುದೇ ಕ್ರಮವನ್ನು ಜರುಗಿಸಿಲ್ಲ. ಇವೆಲ್ಲಕ್ಕೂ ಒಂದು ಮುಖ್ಯ ಕಾರಣ ಸಮಾಜದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಅದರಲ್ಲೂ ಮುಖ್ಯವಾಗಿ ಮುಸ್ಲಿಮರ ವಿರುದ್ಧ ನಿರಂತರವಾಗಿ ಮತ್ತು ಎಡಬಿಡದೆ ಹಿಂದುತ್ವವಾದಿ ಸಂಘಟನೆಗಳು ನಡೆಸುತ್ತಿರುವ ಅಪಪ್ರಚಾರಗಳು ಮತ್ತು ದ್ವೇಷ ಭಾಷಣಗಳು. ಅದಕ್ಕೂ ಮಿಗಿಲಾಗಿ ಇಂತಹ ವೃತ್ತಿಪರ ಸಂಘಪರಿವಾರ ಕೃಪಾಪೋಷಿತ ದ್ವೇಷ ಜೀವಿಗಳಿಗೆ ಈವರೆಗೆ ಯಾವುದೇ ಶಿಕ್ಷೆಯಾಗದಿರುವುದು ಇಂತಹವರ ಸಂತತಿಯು ಹೆಚ್ಚಾಗಲು ಮತ್ತೊಂದು ಪ್ರಮುಖ ಕಾರಣವಾಗಿದೆ ಮತ್ತು ಅಂತಹ ದ್ವೇಷಕೋರರಿಗೆ ಆಡಳಿತದಿಂದ ಮತ್ತು ಆಳುವ ಸರಕಾರದಿಂದ ಸಿಗುತ್ತಿರುವ ಶ್ರೀರಕ್ಷೆ ಇಂತಹ ಪ್ರಕರಣಗಳ ಪ್ರಮಾಣ ಮತ್ತು ತೀವ್ರತೆಯನ್ನು ಹೆಚ್ಚಿಸುತ್ತಿದೆ.
ಆಳುವ ಸರಕಾರದ ಕುಮ್ಮಕ್ಕು ಯಾವ ಮಟ್ಟಕ್ಕೆ ತಲುಪಿದೆಯೆಂದರೆ ಕೋರ್ಟ್ ಗಳು ಸಹ ಅಸಹಾಯಕವಾಗಿ ಕೈಚೆಲ್ಲುವ ಪರಿಸ್ಥಿತಿಗೆ ಬಂದಿವೆ. ಉದಾಹರಣೆಗೆ 2021ರ ನವೆಂಬರ್‌ನಲ್ಲಿ ಉತ್ತರಾಖಂಡದ ಹರಿದ್ವಾರದಲ್ಲಿ ಸ್ವಾಮಿ ನರಸಿಂಗಾನಂದ ಎಂಬ ಸ್ವಘೋಷಿತ ಹಿಂದುತ್ವವಾದಿಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಸ್ಲಿಮರ ನರಮೇಧ ಮಾಡಲು ಬಹಿರಂಗವಾಗಿ ಕರೆನೀಡಲಾಗಿತ್ತು. ಸುಪ್ರೀಂ ಕೋರ್ಟ್ ನ ಮಧ್ಯಪ್ರವೇಶದ ನಂತರ ಅವರನ್ನು ಬಂಧಿಸಲಾಯಿತಾದರೂ ಎರಡೇ ವಾರದಲ್ಲಿ ಜಾಮೀನು ನೀಡಲಾಯಿತು. ಜಾಮೀನು ಪಡೆದ ನಂತರವೂ ಆರೋಪಿಗಳು ಅದೇ ರೀತಿಯ ದ್ವೇಷ ಭಾಷಣ ಮಾಡುತ್ತಿದ್ದರೂ ಅವರ ಜಾಮೀನನ್ನು ಈವರೆಗೆ ರದ್ದು ಮಾಡಿಲ್ಲ. ಬದಲಾಗಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಅಫಿಡವಿಟ್‌ನಲ್ಲಿ ಉತ್ತರಾಖಂಡದ ಉನ್ನತ ಪೊಲೀಸ್ ಅಧಿಕಾರಿಗಳು ನರಸಿಂಗಾನಂದರ ಭಾಷಣದಲ್ಲಿ ಯಾವುದೇ ಆಕ್ಷೇಪಣಾಕಾರಿ ಅಂಶಗಳಿರಲಿಲ್ಲ ಎಂದು ವರದಿ ನೀಡಿದ್ದರು. ಸುಪ್ರೀಂ ಎಚ್ಚರಿಕೆ ನೀಡಿದ ನಂತರ ಆ ಅಫಿಡವಿಟನ್ನು ವಾಪಸ್ ಪಡೆದರು. ತೀರಾ ಇತ್ತೀಚೆಗೆ ಮತ್ತೊಂದು ಅಫಿಡವಿಟ್‌ನಲ್ಲಿ ಇದೇ ಬಗೆಯ ರಾಗ ಹಾಡಿರುವ ಪೊಲೀಸರು ಘಟನೆಯ ಬಗ್ಗೆ ಯಾವುದೇ ಕ್ರಮವನ್ನು ಈವರೆಗೆ ತೆಗೆದುಕೊಳ್ಳದಿದ್ದರೂ ತನಿಖೆಯು ತೃಪ್ತಿಕರವಾಗಿ ನಡೆಯುತ್ತಿದೆ ಎಂದು ವರದಿ ನೀಡಿದ್ದಾರೆ.
2020ರಲ್ಲಿ ದಿಲ್ಲಿಯಲ್ಲಿ ದ್ವೇಷಪಂಥೀಯರು ಮುಸ್ಲಿಮರ ಮೇಲೆ ನಡೆಸಿದ ದಾಳಿಗಳಲ್ಲಿ ದಾಳಿಕೋರರ ಮೇಲೆ ದಿಲ್ಲಿ ಪೊಲೀಸರು ಪ್ರಕರಣವನ್ನೇ ದಾಖಲಿಸಿಕೊಳ್ಳಲಿಲ್ಲ. ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಆದೇಶಿಸಿದ ಆಗಿನ ದಿಲ್ಲಿ ಹೈಕೋರ್ಟ್‌ನ ನ್ಯಾಯಾಧೀಶ ನ್ಯಾ. ಮುರಳೀಧರ್ ಅವರನ್ನು ಮೋದಿ ಸರಕಾರ ರಾತ್ರೋರಾತ್ರಿ ಪಂಜಾಬಿಗೆ ವರ್ಗಾಯಿಸಿತು. ಮಾತ್ರವಲ್ಲ, ಈಗ ಅವರಿಗೆ ಯಾವ ಕಾರಣಕ್ಕೂ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರಾಗಿ ಪದೋನ್ನತಿ ನೀಡಬಾರದೆಂದು ಮೋದಿ ಸರಕಾರ ಪಟ್ಟು ಹಿಡಿದು ಕೂತಿದೆ. ಇದಲ್ಲದೆ ದಿಲ್ಲಿ ಪೊಲೀಸರು ನಡೆಸಿರುವ ತನಿಖೆಯು ಎಷ್ಟು ಏಕಪಕ್ಷೀಯವಾಗಿದೆ ಮತ್ತು ವೃತ್ತಿಶೀಲರಹಿತವಾಗಿದೆ ಎಂದು ದಿಲ್ಲಿ ಹೈಕೋರ್ಟ್‌ನ ನ್ಯಾಯಾಧೀಶರು ಪದೇಪದೇ ದಿಲ್ಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೂ ಅದನ್ನು ಸುಧಾರಿಸಿಕೊಳ್ಳದ ಮೋದಿ ಸರಕಾರ ಬದಲಿಗೆ ಇಂತಹ ಪ್ರಕರಣಗಳಲ್ಲಿ ನಾಗರಿಕ ಸಮಾಜ ನಡೆಸುವ ಸ್ವತಂತ್ರ ಸತ್ಯ ಶೋಧನೆಗಳನ್ನು ನಿಷೇಧಿಸಬೇಕೆಂದು ಸುಪ್ರೀಂಗೆ ಮನವಿ ಮಾಡಿದೆ.
ಮೊನ್ನೆ ಕರ್ನಾಟಕದಲ್ಲಿ ಬಜರಂಗದಳದ ನಾಯಕರು ನಿರಪರಾಧಿ ಫಾಝಿಲ್ ಅವರನ್ನು ಹಿಂದೂಹತ್ಯೆಗೆ ಸೇಡಿನ ಕ್ರಮವಾಗಿಯೇ ಹತ್ಯೆ ಮಾಡಲಾಯಿತೆಂದು ಬಹಿರಂಗವಾಗಿ ಭಾಷಣ ಮಾಡಿದರೂ, ಈವರೆಗೆ ಅವರನ್ನು ಬಂಧಿಸಿಲ್ಲ. ಈಗ ಚುನಾವಣೆಗಳು ಹತ್ತಿರ ಬರುತ್ತಿವೆ. ಕರ್ನಾಟಕದಲ್ಲಿ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರಕ್ಕೆ ಜನರ ಕಲ್ಯಾಣದ ಬಗ್ಗೆ ಹೇಳಿಕೊಳ್ಳುವ ಯಾವುದೇ ಸಾಧನೆಗಳಿಲ್ಲ. ಮೊನ್ನೆ ಮಂಡನೆಯಾದ ಬಜೆಟನ್ನು ನೋಡಿದರೆ ಈ ಹಿಂದೆ ಮಾಡುತ್ತಿದ್ದಂತೆ ಜನರಿಗೆ ಉದ್ಯೋಗ ಅಥವಾ 'ಬಿಜಲಿ-ಸಡಕ್-ಪಾನಿ'ಗಳ ಬಗ್ಗೆ ಸುಳ್ಳು ಭರವಸೆಗಳನ್ನು ಕೂಡಾ ಕೊಡುವ ಅಗತ್ಯವೂ ಇಲ್ಲ ಎಂದು ಮೋದಿ ಸರಕಾರ ತೀರ್ಮಾನಕ್ಕೆ ಬಂದಂತಿದೆ. ದ್ವೇಷ ಭಾಷಣದ ಮೂಲಕ ಸಮಾಜದಲ್ಲಿ ಕೋಮು ಧ್ರುವೀಕರಣವನ್ನು ಮಾಡಿ ರಕ್ತದ ಮಳೆ ಸುರಿಸಿ ವೋಟಿನ ಕಟಾವು ಮಾಡುವ ಉದ್ದೇಶವಿದ್ದಂತಿದೆ. ಇದರಿಂದ ಭಾರತ ಗಣರಾಜ್ಯದ ರಕ್ತಸ್ರಾವ ಇನ್ನು ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ದ್ವೇಷ ಭಾಷಣವನ್ನು ತಡೆಗಟ್ಟುವಲ್ಲಿ ಸುಪ್ರೀಂ ಕೋರ್ಟ್ ತೋರಿರುವ ಅಸಹಾಯಕತೆ ಗಂಡಾಂತರದ ಗಂಟೆಯನ್ನು ಬಾರಿಸುತ್ತಿದೆಯಲ್ಲವೇ?