ಕೆಟ್ಟು ನಿಂತ ಡಬಲ್ ಇಂಜಿನ್
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ನಮ್ಮದು ಡಬಲ್ ಇಂಜಿನ್ ಸರಕಾರ’ ಎಂದು ರಾಜ್ಯದ ಬಿಜೆಪಿ ನಾಯಕರು ಪದೇ ಪದೇ ಕೊಚ್ಚಿಕೊಳ್ಳುವುದಿದೆ. ಕೇಂದ್ರದಲ್ಲೂ, ರಾಜ್ಯದಲ್ಲೂ ಒಂದೇ ಪಕ್ಷ ಅಧಿಕಾರದಲ್ಲಿರುವುದರಿಂದಾಗಿ ರಾಜ್ಯದ ಅಭಿವೃದ್ಧಿ ವೇಗವನ್ನು ಪಡೆಯುತ್ತದೆ ಎಂದು ಈ ಮೂಲಕ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಇದರಲ್ಲಿ ಸತ್ಯ ಇಲ್ಲದೇ ಇಲ್ಲ. ರಾಜ್ಯದಲ್ಲಿ ಒಂದು ಪಕ್ಷ, ಕೇಂದ್ರದಲ್ಲಿ ಇನ್ನೊಂದು ಪಕ್ಷ ಅಧಿಕಾರದಲ್ಲಿದ್ದಾಗ, ಕೇಂದ್ರ ಸರಕಾರ ರಾಜ್ಯದ ಬಗ್ಗೆ ಪಕ್ಷಪಾತಿ ನಿಲುವನ್ನು ತಾಳುತ್ತದೆ. ರಾಜ್ಯಕ್ಕೆ ನೆರವು ನೀಡಿದರೆ, ಅದರ ಲಾಭ ಇನ್ನೊಂದು ಪಕ್ಷ ತನ್ನದಾಗಿಸಿಕೊಳ್ಳುತ್ತದೆ ಎನ್ನುವ ಕಾರಣದಿಂದ ಅದು ಮಲತಾಯಿ ಧೋರಣೆಯನ್ನು ತಳೆಯುತ್ತದೆ. ಕೇಂದ್ರ-ರಾಜ್ಯದಲ್ಲಿ ಒಂದೇ ಸರಕಾರ ಅಧಿಕಾರದಲ್ಲಿದ್ದಾಗ, ರಾಜ್ಯದ ನಾಯಕರು ತಮ್ಮ ರಾಜ್ಯದ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸುಲಭವಾಗುತ್ತದೆ. ಇದನ್ನು ಆಧಾರವಾಗಿಟ್ಟುಕೊಂಡು, ರಾಜ್ಯದಲ್ಲಿ ಡಬಲ್ ಇಂಜಿನ್ ಸರಕಾರ ಅಸ್ತಿತ್ವದಲ್ಲಿದೆ ಎಂದು ರಾಜ್ಯದ ಮುಖಂಡರು ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಡಬಲ್ ಇಂಜಿನ್ ಸರಕಾರ ಅಸ್ತಿತ್ವದಲ್ಲಿರುವುದೇನೋ ನಿಜ. ಆದರೆ ಆ ಇಂಜಿನ್ ಎಷ್ಟರಮಟ್ಟಿಗೆ ಕೆಲಸ ಮಾಡುತ್ತಿದೆ? ಎಂದು ಪ್ರಶ್ನಿಸಿದರೆ ಉತ್ತರ ನಿರಾಶಾದಾಯಕವಾಗಿದೆ.
ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ರಾಜ್ಯ ಅತ್ಯಧಿಕ ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಕೊಟ್ಟಿದೆ. ದೊಡ್ಡ ಪ್ರಮಾಣದಲ್ಲಿ ಜನರ ತೆರಿಗೆಯನ್ನು ಕೇಂದ್ರಕ್ಕೆ ಪಾವತಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಆದರೆ ಅದಕ್ಕೆ ಪ್ರತಿಯಾಗಿ ರಾಜ್ಯಕ್ಕೆ ಸಿಕ್ಕಿರುವುದು ಮಾತ್ರ ಸೊನ್ನೆ. ಇಂದು ರಾಜ್ಯದ ಸಂಸದರೆಲ್ಲ ಒಂದಾಗಿ ಧ್ವನಿಯೆತ್ತಿ ಮಾತನಾಡಿದರೆ ರಾಜ್ಯದ ಅಭಿವೃದ್ಧಿಯ ಪಾಲನ್ನು ಪಡೆಯುವುದು ಕಷ್ಟವೇನಲ್ಲ. ಆದರೆ ರಾಜ್ಯದ ಸಂಸದರು ರಾಜ್ಯದ ಪರವಾಗಿ ನಿಲ್ಲದೆ, ಕೇಂದ್ರ ಸರಕಾರದ ಸಮರ್ಥನೆಯಲ್ಲಿ ತೊಡಗಿದ್ದಾರೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳನ್ನೇ ರಾಜ್ಯಕ್ಕೆ ಕೇಂದ್ರ ನೀಡುತ್ತಿರುವ ‘ಕೊಡುಗೆ’ಯೆಂದು ಬಣ್ಣಿಸುತ್ತಿದ್ದಾರೆ. ಆ ಮೂಲಕ ಕೇಂದ್ರ ವರಿಷ್ಠರ ಪ್ರೀತಿ ಪಾತ್ರರಾಗಲು ಯತ್ನಿಸುತ್ತಿದ್ದಾರೆ. ಪರಿಣಾಮವಾಗಿ ರಾಜ್ಯಕ್ಕೆ ಸಿಗಬೇಕಾದ ಅನುದಾನಗಳು, ಪರಿಹಾರ ನಿಧಿಗಳು ದೊರಕುತ್ತಿಲ್ಲ. 2017ರಿಂದ ಇಲ್ಲಿಯವರೆಗೆ ಕೇಂದ್ರ ಸರಕಾರ ರಾಜ್ಯಗಳಿಗೆ ನೀಡುತ್ತಿರುವ ಅನುದಾನಗಳ ಬಗ್ಗೆ ಕೇಂದ್ರ ಹಣಕಾಸು ಖಾತೆ ಸಚಿವರು ರಾಜ್ಯಸಭೆಗೆ ನೀಡಿರುವ ಮಾಹಿತಿ ಇದನ್ನು ಸ್ಪಷ್ಟಪಡಿಸಿದೆ. ಈ ಮಾಹಿತಿಯ ಪ್ರಕಾರ ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ, ದಕ್ಷಿಣದ ರಾಜ್ಯಗಳಿಗೆ ಸಿಕ್ಕಿರುವ ಅನುದಾನ ತೀರಾ ಕಡಿಮೆ. ಬಿಜೆಪಿಯೇತರ ಪಕ್ಷಗಳು ಆಡಳಿತ ನಡೆಸುತ್ತಿರುವ ಹಲವು ರಾಜ್ಯಗಳಿಗೆ ವಿಶೇಷ ಅನುದಾನ ದೊರಕಿಲ್ಲ. ಆದರೆ ಬಿಜೆಪಿ ಆಡಳಿತ ನಡೆಸುತ್ತಿರುವ ಕರ್ನಾಟಕದ ಕುರಿತಂತೆಯೂ ಕೇಂದ್ರ ಸರಕಾರ ಮಲತಾಯಿ ಧೋರಣೆ ತಳೆದಿರುವುದು ಬೆಳಕಿಗೆ ಬಂದಿದೆ.
ಕಳೆದ ಮೂರು ವರ್ಷಗಳಲ್ಲಿ ಬಿಹಾರ, ಉತ್ತರ ಪ್ರದೇಶಗಳಂತಹ ರಾಜ್ಯಗಳಿಗೆ ಸಾವಿರಾರು ಕೋಟಿ ರೂಪಾಯಿ ವಿಶೇಷ ಅನುದಾನಗಳು ದೊರಕಿವೆಯಾದರೆ, ಕರ್ನಾಟಕದ ಅಭಿವೃದ್ಧಿಗೆ ಯಾವುದೇ ವಿಶೇಷ ಅನುದಾನ ಬಿಡುಗಡೆಯಾಗದೇ ಇರುವುದು ಸಚಿವರ ಹೇಳಿಕೆಯಿಂದ ಬಹಿರಂಗವಾಗಿದೆ. ಬಾಹ್ಯ ನೆರವಿನ ಯೋಜನೆಗಳಿಗೆ ಸಹಾಯಧನ ನೀಡುವಲ್ಲೂ ಸರಕಾರ ಕರ್ನಾಟಕವನ್ನು ನಿರ್ಲಕ್ಷಿಸಿದೆ. ಹಿಮಾಚಲ ಪ್ರದೇಶಕ್ಕೆ 3,379 ಕೋಟಿ ರೂಪಾಯಿ ನೀಡಿದ್ದರೆ, ಉತ್ತರಾಖಂಡಕ್ಕೆ 4,016 ಕೋಟಿ ರೂಪಾಯಿಯನ್ನು ನೀಡಿದೆ. ಇದೇ ಸಂದರ್ಭದಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು 45.50 ಕೋಟಿ ರೂಪಾಯಿ. ಬಂಡವಾಳ ವೆಚ್ಚಕ್ಕಾಗಿ ವಿಶೇಷ ನೆರವಿನ ರೂಪದಲ್ಲಿ ಉತ್ತರ ಪ್ರದೇಶಕ್ಕೆ10,113 ಕೋಟಿ ರೂಪಾಯಿ ದೊರಕಿದೆ. ಮಧ್ಯ ಪ್ರದೇಶಕ್ಕೆ 6,463 ಕೋಟಿ ರೂಪಾಯಿ, ಮಹಾರಾಷ್ಟ್ರಕ್ಕೆ 4,674 ಕೋಟಿ ರೂಪಾಯಿ ಸಿಕ್ಕಿದ್ದರೆ, ಕರ್ನಾಟಕಕ್ಕೆ ಸಿಕ್ಕಿರುವುದು ಕೇವಲ 2,696 ಕೋಟಿ ರೂಪಾಯಿ. ತೆರಿಗೆ ಪಾಲಿನಲ್ಲೂ ಕರ್ನಾಟಕಕ್ಕೆ ನ್ಯಾಯ ಸಿಕ್ಕಿಲ್ಲ. ಕನಿಷ್ಠ ದಕ್ಷಿಣ ರಾಜ್ಯಗಳಿಗೆ ನೀಡಿದ ಅನುದಾನದ ಪಟ್ಟಿಯಲ್ಲಾದರೂ ಕರ್ನಾಟಕಕ್ಕೆ ಹೆಚ್ಚಿನ ಪ್ರಾತಿನಿಧ್ಯವಿದೆಯೇ ಎಂದು ನೋಡಿದರೆ, ಆಂಧ್ರ, ಕೇರಳ, ತಮಿಳುನಾಡು ರಾಜ್ಯಗಳು ಕರ್ನಾಟಕಕ್ಕಿಂತ ಹೆಚ್ಚು ಅನುದಾನಗಳನ್ನು ತನ್ನದಾಗಿಸಿಕೊಂಡಿವೆ. ಕರ್ನಾಟಕದ ಸಂಸದರು ಸಂಸತ್ತಿನಲ್ಲಿ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಬೇಕಾಗಿರುವ ಅನುದಾನಗಳಿಗಾಗಿ ಧ್ವನಿಯೆತ್ತದೆ ಕೇಂದ್ರದ ವರಿಷ್ಠರ ಓಲೈಕೆಗೆ ಮಹತ್ವವನ್ನು ನೀಡಿರುವುದರಿಂದಲೇ ಕೇಂದ್ರ ಸರಕಾರ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಿದೆ.
ಈ ಹಿಂದೆ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಮಳೆ ಪರಿಹಾರಕ್ಕಾಗಿ ಪದೇ ಪದೇ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾಗ, ರಾಜ್ಯದ ಸಂಸದರೇ ಬಹಿರಂಗವಾಗಿ ‘‘ಪರಿಹಾರ ಅಗತ್ಯವಿಲ್ಲ. ರಾಜ್ಯದ ಖಜಾನೆಯಲ್ಲಿ ಸಾಕಷ್ಟು ಹಣವಿದೆ’’ ಎಂಬ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು. ಮಳೆ ಪರಿಹಾರ ನಿಧಿಗಾಗಿ ಕೇಂದ್ರ ಸರಕಾರವನ್ನು ಭೇಟಿ ಮಾಡಲು ಹಲವು ಬಾರಿ ಪ್ರಯತ್ನಿಸಿದ್ದರೂ, ಕೇಂದ್ರದ ವರಿಷ್ಠರು ಮುಖ್ಯಮಂತ್ರಿಯ ಭೇಟಿಗೆ ನಿರಾಕರಿಸಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯ ಜೊತೆಗೆ ನಿಂತು ಪರಿಹಾರ ನಿಧಿಗೆ ಒತ್ತಾಯಿಸಬೇಕಾಗಿದ್ದ ರಾಜ್ಯದ ಸಂಸದರು ಕೇಂದ್ರದ ವರಿಷ್ಠರ ಪರವಾಗಿ ಹೇಳಿಕೆಗಳನ್ನು ನೀಡಿದ್ದರು. ಕರ್ನಾಟಕದ ಬಹುತೇಕ ಸಂಸದರು ಆಳದಲ್ಲಿ ‘ನಾವು ಮೋದಿಯ ಹೆಸರಿನಿಂದ ಆಯ್ಕೆಯಾಗಿದ್ದೇವೆ’ ಎಂದು ಬಲವಾಗಿ ನಂಬಿದ್ದಾರೆ. ರಾಜ್ಯದ ಜನರು ತಮ್ಮನ್ನು ಆಯ್ಕೆ ಮಾಡಿರುವುದೇ ಮೋದಿಯ ಹೆಸರಿನಲ್ಲಿ ಆಗಿರುವುದರಿಂದ, ಕೇಂದ್ರದ ವಿರುದ್ಧ ಮಾತನಾಡಿದರೆ ಎಲ್ಲಿ ಜನರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆಯೋ ಎನ್ನುವ ಆತಂಕ ಕರ್ನಾಟಕದ ಸಂಸದರಲ್ಲಿದೆ. ಕೇಂದ್ರ ಸರಕಾರಕ್ಕೆ ರಾಜ್ಯ ಅತ್ಯಧಿಕ ಸಂಸದರನ್ನು ನೀಡಿದೆ, ಹಾಗೆಯೇ ಅತ್ಯಧಿಕ ತೆರಿಗೆಯ ಪಾಲನ್ನೂ ನೀಡುತ್ತಾ ಬರುತ್ತಿದೆ. ಆದುದರಿಂದ ರಾಜ್ಯ ಸೇರಬೇಕಾಗಿದ್ದ ನ್ಯಾಯಯುತವಾದ ತೆರಿಗೆ ಪರಿಹಾರವನ್ನು, ಅನುದಾನಗಳನ್ನು ಕೇಳುವುದು ಕರ್ತವ್ಯ ಎನ್ನುವುದನ್ನು ಸಂಸದರು ಮರೆತಿದ್ದಾರೆ. ಸಂಸದರ ಈ ಗುಲಾಮಿ ಮನಸ್ಥಿತಿಯನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತಿರುವ ಕೇಂದ್ರದ ವರಿಷ್ಠರು ಕರ್ನಾಟಕವನ್ನು ಸಂಪೂರ್ಣ ಮರೆತಿದ್ದಾರೆ. ಕರ್ನಾಟಕಕ್ಕೆ ಕೇಂದ್ರದ ನಾಯಕರಿಂದ ಸಿಕ್ಕಿರುವುದು ಭರಪೂರ ‘ಮೋದಿ ಭಾಷಣ’ ಮಾತ್ರ. ರಾಜ್ಯಕ್ಕೆ ಕೇಂದ್ರ ಸರಕಾರದ ಯಾವ ಅನುದಾನ ನೀಡುವ ಅಗತ್ಯವಿಲ್ಲ, ವರ್ಷಕ್ಕೆ ಎರಡು ಬಾರಿ ಆಗಮಿಸಿ ಭಾಷಣ ಮಾಡಿದರೆ ಸಾಕು. ಚುನಾವಣೆಯನ್ನು ಗೆಲ್ಲಬಹುದು ಎಂಬ ಆತ್ಮವಿಶ್ವಾಸದಲ್ಲಿ ನಮ್ಮ ಸಂಸದರಿರುವಾಗ,ಕೇಂದ್ರವಾದರೂ ರಾಜ್ಯಕ್ಕೆ ಯಾಕೆ ಅನುದಾನ ಬಿಡುಗಡೆ ಮಾಡುತ್ತದೆ? ಮೋದಿ ಮತ್ತು ಅಮಿತ್ ಶಾ ವರ್ಷಕ್ಕೆ ಎರಡು ಬಾರಿ ರಾಜ್ಯಕೆ ಬಂದು ಭಾಷಣ ಬಿಗಿದು ಹೋಗುತ್ತಿರುವುದೇ ಈ ಕಾರಣಕ್ಕೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ.