ಅಂಬೇಡ್ಕರ್ ವ್ಯಂಗ್ಯ: ವಿಕೃತ ಮನಸ್ಸಿನ ಅಭಿವ್ಯಕ್ತಿ

Update: 2023-02-13 04:29 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಬೆಂಗಳೂರಿನ ಜೈನ್ ವಿವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳು ಅಂಬೇಡ್ಕರ್ ಮತ್ತು ದಲಿತ ಸಮುದಾಯವನ್ನು ತಮಾಷೆಗೀಡು ಮಾಡಿದ ನಾಟಕವೊಂದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅಂಬೇಡ್ಕರ್ ಬಗ್ಗೆ ಕೀಳು ಅಭಿರುಚಿಯ ತಮಾಷೆ ಮಾತುಗಳನ್ನಾಡಿರುವುದು ಮಾತ್ರವಲ್ಲದೆ, ಕೆಳಜಾತಿ ಹೆಣ್ಣೊಬ್ಬಳ ಜಾತಿಯನ್ನು ಉಲ್ಲೇಖಿಸಿ, 'ಡೋಂಟ್ ಟಚ್ ಮಿ ಟಚ್ ಮಿ' ಎನ್ನುವ ಹಾಡಿಗೆ ವಿದ್ಯಾರ್ಥಿಗಳು ನರ್ತಿಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಜೈನ್ ವಿಶ್ವವಿದ್ಯಾನಿಲಯವು, ವಿದ್ಯಾರ್ಥಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ನೀಡಿದೆೆ.

ವಿದ್ಯಾರ್ಥಿಗಳ ಪೋಷಕರನ್ನು ಕರೆಸಿ, ಅವರಿಂದಲೂ ಹೇಳಿಕೆಯನ್ನು ತೆಗೆದುಕೊಳ್ಳುವುದಾಗಿ ಹೇಳಿದೆ. ಇದೇ ಸಂದರ್ಭದಲ್ಲಿ 'ವಿದ್ಯಾರ್ಥಿಗಳು ತಮಾಷೆಗೆಂದು ಮಾಡಿರುವ ಪ್ರಹಸನವನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು' ಎನ್ನುವಂತಹ ಸಲಹೆಗಳನ್ನೂ ಕೆಲವರು ನೀಡುತ್ತಿದ್ದಾರೆ. ಈ ಹಿಂದೆ ಬೀದರ್‌ನ ಶಾಹೀನ್ ಕಾಲೇಜಿನಲ್ಲಿ ಎಳೆ ವಿದ್ಯಾರ್ಥಿಗಳು ಸಿಎಎ ವಿರುದ್ಧ ಪುಟ್ಟದೊಂದು ನಾಟಕ ಮಾಡಿ, ''ನಾವೆಲ್ಲರೂ ಭಾರತೀಯರು'' ಎಂದು ಘೋಷಿಸಿದಾಗ, ಆ ವಿದ್ಯಾರ್ಥಿಗಳ ಮೇಲೆ ದೇಶದ್ರೋಹದ ಪ್ರಕರಣವನ್ನು ದಾಖಲಿಸಿರುವುದನ್ನು ನಾವು ನೆನಪಿಸಿಕೊಳ್ಳಬೇಕಾಗಿದೆ. ಭಾರತ ಎಂದಿಗೂ ನಮ್ಮದು, ನಾವೆಂದೂ ವಿದೇಶಿಯರಲ್ಲ ಎನ್ನುವುದನ್ನು ಪ್ರತಿಪಾದಿಸಿದ್ದ ಎಳೆ ವಿದ್ಯಾರ್ಥಿಗಳನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಯಿತು. ಇದರ ವಿರುದ್ಧ ಮಾನವ ಹಕ್ಕು ಆಯೋಗ ಕೂಡ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತ್ತು. ಆದರೆ, ಜೈನ್ ವಿವಿಯಲ್ಲಿ ಅಂತಹ ಯಾವುದೇ ಗಂಭೀರ ವಿಚಾರಗಳನ್ನು ಎತ್ತಿ ವಿದ್ಯಾರ್ಥಿಗಳು ನಾಟಕ ಮಾಡಿರುವುದಲ್ಲ. ಯಾವುದೇ ಜ್ವಲಂತ ಸಮಸ್ಯೆಗಳನ್ನೂ ಅವರು ಕೈಗೆತ್ತಿಕೊಂಡಿಲ್ಲ. ಉದ್ದೇಶಪೂರ್ವಕವಾಗಿ ಕೆಳಜಾತಿಯ ಮಹಿಳೆಯ ಜಾತಿಯನ್ನು ವ್ಯಂಗ್ಯ ಮಾಡಿದ್ದಾರೆ. ವಿದ್ಯಾರ್ಥಿಗಳಿಂದ ತಿಳಿಯದೇ ಆದ ಪ್ರಮಾದ ಇದು ಎಂದು ಕೈ ಬಿಡಬಹುದಾಗಿತ್ತು. ಆದರೆ ಇದರ ಜೊತೆ ಜೊತೆಗೇ ಅಂಬೇಡ್ಕರ್ ಅವರನ್ನೂ ವ್ಯಂಗ್ಯ, ತಮಾಷೆ ಮಾಡಲಾಗಿದೆ. ಅಂದರೆ ವಿದ್ಯಾರ್ಥಿಗಳ ಆಳದಲ್ಲಿ ದಲಿತರು ಮತ್ತು ಅಂಬೇಡ್ಕರ್ ಕುರಿತಂತೆ ಇದ್ದ ಅಸಹನೆಯೇ ಇಂತಹದೊಂದು ಪ್ರಹಸನವನ್ನು ಮಾಡಲು ಅವರಿಗೆ ಸ್ಫೂರ್ತಿಯನ್ನು ನೀಡಿದೆ.

ಹಾಸ್ಯಪ್ರಜ್ಞೆ ನಮ್ಮಲ್ಲಿ ಇರಬೇಕು. ಇದೇ ಸಂದರ್ಭದಲ್ಲಿ ಯಾವುದೇ ನಾಯಕರೂ ಪ್ರಶ್ನಾತೀತರಲ್ಲ. ಎಲ್ಲರೂ ವಿಮರ್ಶೆಗೆ ಅರ್ಹರು. ಆದರೆ ತಮಾಷೆ-ವಿಕೃತ ಹಾಸ್ಯ, ವಿಮರ್ಶೆ-ನಿಂದನೆ ಇವುಗಳ ನಡುವಿನ ವ್ಯತ್ಯಾಸ ನಮಗೆ ಗೊತ್ತಿರಬೇಕಾಗುತ್ತದೆ. ಹಾಸ್ಯದ ಹೆಸರಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ವೈಯಕ್ತಿಕವಾಗಿ ಚುಚ್ಚಿ ವಿಕೃತವಾಗಿ ಆನಂದಿಸುವುದು ಅಕ್ಷಮ್ಯ. 'ಅಸ್ಪಶ್ಯತೆ-ಅನ್‌ಟಚ್‌ಬಲಿಟಿ'ಯ ಹಿಂದಿರುವ ಕ್ರೌರ್ಯ ತಿಳಿಯದ ಎಳೆ ವಿದ್ಯಾರ್ಥಿಗಳೇನೂ ಅವರು ಆಗಿರಲಿಲ್ಲ. ಅದನ್ನು ವ್ಯಂಗ್ಯ ಮಾಡಿ, ತಮಾಷೆ ಮಾಡುವಾಗ ಆ ಕಾಲೇಜಿನಲ್ಲಿ ತಳಸ್ತರದಿಂದ ಬಂದ ವಿದ್ಯಾರ್ಥಿಗಳು ಕೂಡ ಉಪಸ್ಥಿತರಿದ್ದರು. ಅಸ್ಪಶ್ಯತೆಯಿಂದ ನೊಂದ, ಅಂಬೇಡ್ಕರ್‌ರನ್ನು ತಮ್ಮ ಪಾಲಿನ ಬಿಡುಗಡೆಯ ದಾರಿಯೆಂದು ಭಾವಿಸಿದ ಆ ವಿದ್ಯಾರ್ಥಿಗಳ ಮನಸ್ಸಿಗೆ ಅದೆಷ್ಟು ಆಘಾತವಾಗಿರಬಹುದು? ಅಸ್ಪಶ್ಯತೆ ಎನ್ನುವುದು ದಲಿತರ ಎದೆಯ ಮೇಲಿನ ಒಣಗದ ಗಾಯ. ಆ ಗಾಯವನ್ನು ಮುಟ್ಟಿ , ಕೆದಕಿ ಅದರಿಂದ ಮನರಂಜಿಸಲು ವಿದ್ಯಾರ್ಥಿಗಳಿಗೆ ಕಲಿಸಿಕೊಡುವುದು ಯಾವ ರೀತಿಯಲ್ಲೂ ನಾಗರಿಕ ಸಮಾಜ ಒಪ್ಪುವಂತಹದ್ದಲ್ಲ. ಇದರಲ್ಲಿ ಆವಿದ್ಯಾರ್ಥಿಗಳನ್ನಷ್ಟೇ ಹೊಣೆ ಮಾಡುವಂತಿಲ್ಲ. ಶಾಲೆ ಮತ್ತು ಪೋಷಕರ ಪ್ರೋತ್ಸಾಹವಿಲ್ಲದೇ ಇದ್ದಿದ್ದರೆ ಇಂತಹದೊಂದು ಅನಾಹುತವನ್ನು ಎಸಗುವುದಕ್ಕೆ ವಿದ್ಯಾರ್ಥಿಗಳಿಗೆ ಧೈರ್ಯ ಬರುತ್ತಿರಲಿಲ್ಲ. ಕೆಳಜಾತಿಯ ಜನರ ಕುರಿತಂತೆ ಅವರಲ್ಲಿದ್ದ ಕೀಳು ಮನಸ್ಥಿತಿಯೇ ಅವರ ಕೈಯಲ್ಲಿ ಅಂತಹದೊಂದು ನಾಟಕವನ್ನು ಮಾಡಿಸಿದೆ. ಆದುದರಿಂದ ಜೈನ್ ವಿವಿಯು ವಿದ್ಯಾರ್ಥಿಗಳ ಪೋಷಕರನ್ನು ಕರೆಸಿ ವಿಚಾರಣೆ ನಡೆಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಸಂತ್ರಸ್ತರಿಗೆ ನ್ಯಾಯ ಸಿಗಬೇಕಾದರೆ ಜೈನ್‌ವಿವಿಯ ಶಿಕ್ಷಕರನ್ನೇ ಪೊಲೀಸರು ಕರೆಸಿ ವಿಚಾರಣೆ ನಡೆಸಬೇಕಾಗಿದೆ.

ಈ ವ್ಯಂಗ್ಯ ಕೇವಲ ನಾಟಕಕ್ಕಷ್ಟೇ ಸೀಮಿತವಾಗಿ ಉಳಿದಿಲ್ಲ. ಯುವ ಸಮುದಾಯದ ನಡುವೆ ಅಂಬೇಡ್ಕರ್ ಮತ್ತು ಶೋಷಿತ ಸಮುದಾಯದ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಬಿತ್ತುವ ಪ್ರಯತ್ನವೊಂದು ಆಂದೋಲನದ ರೂಪದಲ್ಲಿ ನಡೆಯುತ್ತಿದೆ. ಈ ದೇಶದ ಇತಿಹಾಸದ ಬಗ್ಗೆ ರಮ್ಯವಾದ, ರೋಚಕವಾದ ಚಿತ್ರಣವನ್ನು ನೀಡುತ್ತಾ ಅಸ್ಪಶ್ಯತೆ, ಜಾತೀಯತೆ, ಅದರ ವಿರುದ್ಧದ ಹೋರಾಟಗಳನ್ನು ವಿದ್ಯಾರ್ಥಿಗಳಿಂದ,ಯುವಕರಿಂದ ಮುಚ್ಚಿ ಡುವ ಪ್ರಯತ್ನ ನಡೆಯುತ್ತಿದೆ. ಜಾತೀಯತೆಯ ವಿರುದ್ಧದ ಹೋರಾಟಗಳನ್ನು ಭಾರತದ ವಿರುದ್ಧ ಸಂಚು ಎನ್ನುವ ರೀತಿಯಲ್ಲಿ ಯುವಕರಿಗೆ, ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿದೆ. ಅಂಬೇಡ್ಕರ್‌ರಂತಹ ಹೋರಾಟಗಾರರನ್ನು ಈ ದೇಶದ ಭವ್ಯ ಇತಿಹಾಸದ ವಿರುದ್ಧದ ಸಂಚುಕೋರ ಎಂಬಿತ್ಯಾದಿಯಾಗಿ ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ. ವಿದ್ಯಾರ್ಥಿಗಳು ಇದರ ಬಲಿಪಶುಗಳಾಗುತ್ತಿದ್ದಾರೆ. ಆ ಬಲಿಪಶುಗಳೇ ಇದೀಗ ಕೆಳಜಾತಿಯನ್ನು ತಮಾಷೆ ಮಾಡುವ, ಅಂಬೇಡ್ಕರ್‌ರನ್ನು ವ್ಯಂಗ್ಯ ಮಾಡುವ ನಾಟಕವೊಂದನ್ನು ಕಾಲೇಜಿನಲ್ಲಿ ಪ್ರದರ್ಶಿಸಿದ್ದಾರೆ. ಇದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಲೇಬೇಕಾಗಿದೆ.

ಇಂದು ಅಂಬೇಡ್ಕರ್ ಮತ್ತು ಶೋಷಿತ ಸಮುದಾಯದ ವಿರುದ್ಧ ಸಂಘಟಿತವಾಗಿ ದಾಳಿಗಳು ಹೆಚ್ಚುತ್ತಿವೆ. ಮನುಸ್ಮತಿಯನ್ನು ಬಹಿರಂಗವಾಗಿ ಸಮರ್ಥಿಸುವ ವರ ಸಂಖ್ಯೆ ಅಧಿಕವಾಗಿದೆ. ಹಾಗೆಯೇ ದಲಿತರ ಮೀಸಲಾತಿಯ ವಿರುದ್ಧ ಬಹಿರಂಗವಾಗಿ ಹೇಳಿಕೆಗಳನ್ನು ನೀಡಲಾಗುತ್ತಿದೆ. ದಲಿತರನ್ನು , ದುರ್ಬಲ ವರ್ಗದ ಜನರನ್ನು ಬೇರೆ ಬೇರೆ ರೀತಿಯಲ್ಲಿ ವ್ಯಂಗ್ಯವಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಮನುಸ್ಮತಿಯೇ ಭಾರತದ ಸಂವಿಧಾನವೆಂದು ಭಾಷಣಗಳಲ್ಲಿ ಘೋಷಿಸುತ್ತಿದ್ದಾರೆ. ಈ ಹಿಂದೆಲ್ಲ ಅಂಬೇಡ್ಕರ್ ಪ್ರತಿಮೆಯನ್ನು ಧ್ವಂಸಗೊಳಿಸಿದ ಘಟನೆಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದವು. ಇಂದು ಅಂಬೇಡ್ಕರ್ ಚಿಂತನೆಗಳನ್ನೇ ಬಹಿರಂಗವಾಗಿ ಟೀಕಿಸಲು ಶುರು ಹಚ್ಚಿದ್ದಾರೆ. ಇದು ಎಂತಹ ಅತಿರೇಕಕ್ಕೆ ಹೋಗಿದೆಯೆಂದರೆ, ಒಬ್ಬ ಸಂಘಪರಿವಾರದ ಮುಖಂಡ ತನ್ನ ಭಾಷಣದಲ್ಲಿ ''ನಾನೇನಾದಾರೂ ಅಂಬೇಡ್ಕರ್ ಕಾಲದಲ್ಲಿ ಬದುಕಿದ್ದಿದ್ದರೆ ಗಾಂಧಿಯನ್ನು ಗೋಡ್ಸೆ ಕೊಂದಂತೆ ಅಂಬೇಡ್ಕರ್ ಅವರನ್ನು ಕೊಂದು ಹಾಕುತ್ತಿದ್ದೆ'' ಎಂದು ಘೋಷಿಸುತ್ತಾನೆ. ಹಾಗೆ ಘೋಷಿಸಿದ ಬಳಿಕವೂ ಪೊಲೀಸರಿಂದ ಬಂಧಿಸಲ್ಪಡದೆ ಆತ ಸ್ವತಂತ್ರವಾಗಿ ಓಡಾಡುತ್ತಿದ್ದಾನೆ. ಇದೇ ಸಂದರ್ಭದಲ್ಲಿ, ಅಂಬೇಡ್ಕರ್ ಪರವಾಗಿ ಮಾತನಾಡಬೇಕಾದ ಧ್ವನಿಗಳು ಸೋಲುತ್ತಿವೆ. ಇದರಿಂದ ಉತ್ಸಾಹಿತಗೊಂಡ ಮೇಲ್‌ಜಾತಿ ಪರ ಕೇಂದ್ರ ಸರಕಾರ, ಮೇಲ್‌ಜಾತಿಯ ಜನರಿಗಾಗಿ ಶೇ.10 ಮೀಸಲಾತಿಯನ್ನು ಜಾರಿಗೊಳಿಸಿ ಮೀಸಲಾತಿಯ ಉದ್ದೇಶವನ್ನೇ ವ್ಯಂಗ್ಯ ಮಾಡಿತು. ಈ ಬೃಹತ್ ವ್ಯಂಗ್ಯದ ಮುಂದೆ, ಜೈನ್ ವಿವಿಯಲ್ಲಿ ವಿದ್ಯಾರ್ಥಿಗಳು ಮಾಡಿರುವ ವ್ಯಂಗ್ಯ ಏನೇನೂ ಅಲ್ಲ.

Similar News