ದುಬೈಯಲ್ಲಿ ಸಾಹೆಬಾನ್‌ ಯುಎಇ ವತಿಯಿಂದ ವಿಜೃಂಭಣೆಯ ಕುಟುಂಬ ಸಮ್ಮಿಲನ ಕಾರ್ಯಕ್ರಮ

Update: 2023-02-13 15:28 GMT

ದುಬೈ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಉರ್ದು ಭಾಷಿಕ ಮುಸ್ಲಿಂ ಸಮುದಾಯದ ಪ್ರಮುಖ ಸಂಘಟನೆ ಸಾಹೆಬಾನ್‌ ಯುಎಇ ಫೆ.4ರಂದು ಶೇಖ್‌ ಝಾಯೆದ್‌ ರಸ್ತೆಯ ಕ್ರೌನ್‌ ಪ್ಲಾಝಾ ಹೊಟೇಲ್‌ ನ ಅಲ್‌ ಜುಮೈರಾ ಬಾಲ್‌ ರೂಮ್‌ ನಲ್ಲಿ ವಿಜೃಂಭಣೆಯ ಸಾಮಾಜಿಕ ಕುಟುಂಬ ಸಮ್ಮಿಲನವನ್ನು ಆಯೋಜಿಸಿತ್ತು. ಸಂಜೆ ಐದೂವರೆಯಿಂದ ಕಾರ್ಯಕ್ರಮ ಪ್ರಾರಂಭಗೊಂಡಿತು. ಸಾಹೆಬಾನ್‌ ಬ್ಯುಝಿನೆಸ್‌ ಕಮ್ಯೂನಿಟಿ ಯುಎಇ ಪ್ರಾಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಯುಎಇ ಸೇರಿದಂತೆ ನೆರೆಯ ಜಿಸಿಸಿ ದೇಶಗಳು ಮತ್ತು ಭಾರತದಿಂದ 800 ಕ್ಕೂ ಹೆಚ್ಚು ಸಮುದಾಯದ ಸದಸ್ಯರು ಹಾಗೂ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.

ಮಾಸ್ಟರ್ ಫಾಝಿಲ್ ರಾಹೀಲ್ ಅಲಿ ಪವಿತ್ರ ಕುರಾನ್ ಪಠಿಸುವುದರೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಸಾಹೇಬಾನ್ ಯುಎಇ ಸಂಯೋಜಕ ಅಲ್ತಾಫ್ ಎಂ.ಎಸ್ ಸ್ವಾಗತಿಸಿ, ಸಾಹೇಬಾನ್ ಯುಎಇ ಸಮುದಾಯದ ಸದಸ್ಯರು ಒಗ್ಗೂಡಲು, ಸಂಪರ್ಕ ಸಾಧಿಸಲು ಮತ್ತು ಸಹೋದರ ಬಾಂಧವ್ಯವನ್ನು ಬಲಪಡಿಸಲು ವೇದಿಕೆಯನ್ನು ಒದಗಿಸುತ್ತಿದೆ ಎಂದು ಹೇಳಿದರು.

ಸಮುದಾಯದ ಪೋಷಕರಾದ ಹಿದಾಯತುಲ್ಲಾ ಅಬ್ಬಾಸ್, ಕೆ.ಎಸ್. ನಿಸಾರ್ ಅಹ್ಮದ್ ಮತ್ತು ಎಚ್ ಎಂ  ಅಫ್ರೋಝ್ ಅಸ್ಸಾದಿ ಅವರ  ಉದ್ಯಮ ಕ್ಷೇತ್ರದ  ಅತ್ಯುತ್ತಮ ಸಾಧನೆಗಳು, ಸ್ಥಳೀಯ ಆರ್ಥಿಕತೆಗೆ ಕೊಡುಗೆ, ಶ್ಲಾಘನೀಯ ಮಾನವೀಯ ಸೇವೆ, ದಾನಧರ್ಮ ಹಾಗು ಸೇವಾ ಚಟುವಟಿಕೆಗಳು  ಮತ್ತು ಸಾಹೇಬಾನ್ ಯುಎಇ ಹಾಗೂ ಅದರ ಚಟುವಟಿಕೆಗಳಿಗೆ ನಿರಂತರವಾಗಿ ನೀಡಿದ ಬೆಂಬಲವನ್ನು ಗುರುತಿಸಿ ಗೌರವಿಸಲಾಯಿತು. ಸೈಯದ್ ಸಿರಾಜ್ ಅಹ್ಮದ್, ಸುಹೇಲ್ ಕುದ್ರೋಳಿ, ಅಲ್ತಾಫ್ ಖಲೀಫ್ ಸನ್ಮಾನ ಕಾರ್ಯಕ್ರಮ ನಡೆಸಿ ಕೊಟ್ಟರು.

 ಸನ್ಮಾನ ಸ್ವೀಕರಿಸಿದ  ಹಿದಾಯತುಲ್ಲಾ ಅಬ್ಬಾಸ್ ಸಾಹೇಬಾನ್  ಸಂಚಾಲಕರಿಗೆ ಹಾಗೂ ಸಭೆಗೆ ಪೋಷಕರ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಸಮುದಾಯದ ಸದಸ್ಯರು  ತಮ್ಮ ಯಶಸ್ಸಿಗೆ ಶ್ರಮಿಸಬೇಕು. ತಮ್ಮ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡಿ, ಸಮುದಾಯಕ್ಕೆ ಸಹಕರಿಸಿ ಸಮಾಜಕ್ಕೆ ಕೊಡುಗೆ ನೀಡುವ  ಮೂಲಕ, ನಮ್ಮ ಸಾಹೆಬಾನ್‌ ಸಮುದಾಯದ ಬಗ್ಗೆ ಅಭಿಮಾನ ಹುಟ್ಟುವಂತೆ ಮಾಡಬೇಕು  ಎಂದು ಅವರು ಹೇಳಿದರು. ಮುಖ್ಯ ಅತಿಥಿಗಳಾದ ಹಿದಾಯ ಫೌಂಡೇಶನ್ ಮಂಗಳೂರು ಇದರ ಸಂಸ್ಥಾಪಕ ಖಾಸಿಂ ಅಹ್ಮದ್ ಎಚ್.ಕೆ ಮಾತನಾಡಿ ಬಡವರ ಮತ್ತು ವಂಚಿತರ ಅಭ್ಯುದಯಕ್ಕಾಗಿ ಕೆಲಸ ಮಾಡುವಂತೆ  ಕರೆ ನೀಡಿದರು.

ಮುಹಮ್ಮದ್ ಅಕ್ರಂ, ಮಹಮ್ಮದ್ ಆಸಿಫ್, ಅಲ್ತಾಫ್ ಖತೀಬ್ ಮತ್ತು ಇರ್ಷಾದ್ ಮೂಡುಬಿದಿರೆ ಪ್ರಾಯೋಜಕರನ್ನು ಸನ್ಮಾನಿಸಿದರು. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಉನ್ನತ ದರ್ಜೆಯ ವಿಜ್ಞಾನಿ ಎಂದು ಗುರುತಿಸಲ್ಪ ಅಬುಧಾಬಿಯ ಖಲೀಫಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಅಬ್ದುಲ್ ರಹಿಮಾನ್ ಬೇಗ್ ಮತ್ತು ಫುಡ್‌ಶಾಲಾ ಯುಎಇ 2022 ರ ವಿಜೇತರಾದ ಯಾಸ್ಮೀನ್ ಇರ್ಫಾನ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಸಾಹೆಬಾನ್ ಯುಎಇಯ ಸಂಚಾಲಕರು ಮತ್ತು ಪೋಷಕರಾದ ಎಚ್. ಎಂ.  ಅಫ್ರೋಝ್ ಅಸ್ಸಾದಿ  ಪ್ರತಿಭಾವಂತ ಸಾಹೆಬಾನ್ ಯುವ ಸಾಧಕರಿಗೆ  ಪ್ರಶಸ್ತಿ ಪ್ರದಾನ ಮಾಡಿದರು, ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಶಾಮ್ ಅಕ್ಬರ್ ಶೇಕ್, ಸಫಾ ತಮದೂರ್, ರಫಾ ರಿಯಾಝ್ ಖಲೀಫ್, ದಾನಿಯಾಲ್ ದಾನಿಶ್ ಇಕ್ಬಾಲ್, ರಫಾನ್ ಬಲಂತಿಬೇಗ್, ಮುಹಮ್ಮದ್ ರಫಾನ್, ಶೇಖ್ ಸಾಹಿರ್ ಅಕ್ಬರ್, ಮೆಹೆಕ್ ಶೇಖ್, ನುಹಾ ರಿಯಾಝ್‌ ಪ್ರಶಸ್ತಿ ಪಡೆದರು. ಕ್ರೀಡಾ ಸಾಧನೆಗಾಗಿ ಅನ್ಬರ್ ಅಲ್ತಾಫ್ ಮತ್ತು ಸಾಕಿಬ್ ಬಾಜಿ ಹಾಗೂ ಪ್ರದರ್ಶನ ಕಲೆಗಾಗಿ ಅನಮ್ ಅಸ್ಲಂ ಗೌರವ ಸ್ವೀಕರಿಸಿದರು.

ಫೈಝಾನ್ ಖತೀಬ್, ಮುಹಮ್ಮದ್ ಸಮೀವುಲ್ಲಾ, ಮುಹಮ್ಮದ್ ಸುಫ್ಯಾನ್ ಮತ್ತು ಅಬ್ದುಲ್ ಅಹದ್ ತಂಡವು ಸಾಹೆಬಾನ್ ಯುಎಇಯ ವರ್ಷಗಳ ಪ್ರಯಾಣವನ್ನು ಫೋಟೋ ಮೂಲಕ ಪ್ರಸ್ತುತಪಡಿಸಿದರು. ಪ್ರಸಿದ್ಧ ಬಾಲಿವುಡ್ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮತ್ತು ಮಿಮಿಕ್ರಿ ಕಲಾವಿದ ಜಯ ವಿಜಯ್ ಸಚನ್ ತಮ್ಮ ಮಿಮಿಕ್ರಿ ಮತ್ತು ಹಾಸ್ಯದ ಮೂಲಕ ಸಭಿಕರನ್ನು ರಂಜಿಸಿದರು. ಮುಂಬೈನ ಸುಫಿಯಾನಾ ತಂಡವು ತಮ್ಮ ಸುಮಧುರ ಹಾಡುಗಳಿಂದ  ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಸಾಹೆಬಾನ್ ಕಾರ್ಯಕರ್ತ ಮತ್ತು ಮಂಗಳೂರಿನ ನಿರೂಪಕ ಮತ್ತು ರೇಡಿಯೋ ಕಲಾವಿದ ಸಾಹಿಲ್ ಝಹೀರ್ ಕಾರ್ಯಕ್ರಮವನ್ನು ನಿರೂಪಿಸಿ  ಪ್ರೇಕ್ಷಕರನ್ನು ರಂಜಿಸಿದರು.

Similar News