ವಿವಾದ ಹುಟ್ಟುಹಾಕಿದ ನ್ಯಾಯಾಧೀಶೆಯ ನೇಮಕ

Update: 2023-02-14 04:03 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವುದು ಮಾತ್ರವಲ್ಲ ಅಲ್ಪಸಂಖ್ಯಾತ ಸಮುದಾಯಗಳ ಬಗ್ಗೆ ದ್ವೇಷದ ವಿಷ ಕಾರುತ್ತ ಬಂದ ಆರೋಪವಿರುವ ತಮಿಳುನಾಡಿನ ನ್ಯಾಯವಾದಿ ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿಯವರನ್ನು ಮದ್ರಾಸ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶೆಯಾಗಿ ನೇಮಕ ಮಾಡಿರುವ ಕೊಲಿಜಿಯಂ ಕ್ರಮ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ನ್ಯಾಯಾಂಗವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಸಕ್ತ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರದ ಹುನ್ನಾರದ ಭಾಗವಾಗಿ ಈ ನೇಮಕ ನಡೆದಿದೆ ಎಂಬುದು ಅನೇಕ ಕಾನೂನು ಪರಿಣಿತರ ವಾದವಾಗಿದೆ. ಈ ನೇಮಕದಲ್ಲಿ ಕೊಲಿಜಿಯಂ ಕೇಂದ್ರ ಸರಕಾರದ ಒತ್ತಡಕ್ಕೆ ಮಣಿದು ತೀರ್ಮಾನ ಕೈಗೊಂಡಿರುವುದು ಸ್ಪಷ್ಟವಾಗಿದೆ.

 ಗೌರಿಯವರನ್ನು ಮದ್ರಾಸ್ ಹೈಕೋರ್ಟ್ ಹೆಚ್ಚುವರಿ ನ್ಯಾಯಾಧೀಶೆಯನ್ನಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎರಡು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಫೆಬ್ರವರಿ 7ನೇ ತಾರೀಕು ವಜಾ ಮಾಡಿತ್ತು. ಸುಪ್ರೀಂ ಕೋರ್ಟ್ ಸದರಿ ಎರಡು ಅರ್ಜಿಗಳ ವಿಚಾರಣೆ ನಡೆಸುತ್ತಿರುವಾಗಲೇ ಫೆಬ್ರವರಿ 7ರಂದು ಗೌರಿ ನ್ಯಾಯಾಧೀಶೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈಕೆಯ ನೇಮಕವನ್ನು ಹೆಸರಾಂತ ವಕೀಲರು ಮತ್ತು ಕಾನೂನು ಪರಿಣಿತರು ಟೀಕಿಸಿದ್ದರು. ಕೊಲಿಜಿಯಂ ಶಿಫಾರಸನ್ನು ರದ್ದುಪಡಿಸಲು ಅಥವಾ ಈ ತೀರ್ಮಾನವನ್ನು ಮರು ಪರಿಶೀಲಿಸಲು ಕೊಲಿಜಿಯಂ ಸೂಚನೆ ನೀಡುವ ಸಂಬಂಧ ನಮ್ಮ ನ್ಯಾಯಾಂಗ ಪರಾಮರ್ಶೆಯ ಅಧಿಕಾರವನ್ನು ಬಳಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಬಿ.ಆರ್. ಗವಾಯಿ ಅವರನ್ನೊಳಗೊಂಡ ಪೀಠ ಹೇಳಿತ್ತು.

ರಾಜಕೀಯ ಹಿನ್ನೆಲೆ ಹೊಂದಿದವರನ್ನು ನ್ಯಾಯಾಲಯದ ಉನ್ನತ ಸ್ಥಾನಗಳಿಗೆ ನೇಮಕ ಮಾಡಬಾರದೆಂದಿಲ್ಲ. 1957ರಲ್ಲಿ ಕೇರಳದ ಕಮ್ಯುನಿಸ್ಟ್ ಸರಕಾರದಲ್ಲಿ ಕಾನೂನು ಮಂತ್ರಿಯಾಗಿದ್ದ ವಿ.ಆರ್. ಕೃಷ್ಣ ಅಯ್ಯರ್ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಗೌರಿ ನೇಮಕದಲ್ಲಿ ಅವರ ರಾಜಕೀಯ ಹಿನ್ನೆಲೆಯೊಂದೇ ಆಕ್ಷೇಪಕ್ಕೆ ಕಾರಣವಾಗಿಲ್ಲ. ಅದರ ಜೊತೆಗೆ ಗೌರಿ ನ್ಯಾಯವಾದಿಯಾಗಿದ್ದಾಗ ಬಿಜೆಪಿ ಪದಾಧಿಕಾರಿಯಾಗಿ ಅವರು ನೀಡಿರುವ ಸಂದರ್ಶನ ಮತ್ತು ಮಾಡಿರುವ ಭಾಷಣಗಳಲ್ಲಿ ಅನೇಕ ಅಕ್ಷೇಪಾರ್ಹ ಅಂಶಗಳಿವೆ. ಒಬ್ಬ ವಕೀಲೆಯಾಗಿ ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾಗಿ ಅನೇಕ ಬಾರಿ ಮಾತಾಡಿದ್ದಾರೆ. ಅಲ್ಪಸಂಖ್ಯಾತ ಮುಸಲ್ಮಾನರು ಮತ್ತು ಕ್ರೈಸ್ತರ ವಿರುದ್ಧ ಅತ್ಯಂತ ವಿಷಕಾರಿಯಾದ ದ್ವೇಷವನ್ನು ಪ್ರಚೋದಿಸುವ ಮಾತುಗಳನ್ನು ಆಡಿದ್ದಾರೆ. ಇಂತಹ ಮಹಿಳೆ ನ್ಯಾಯಾಧೀಶೆಯಾಗಿ ನಿಷ್ಪಕ್ಷಪಾತವಾದ ತೀರ್ಪು ನೀಡಲು ಸಾಧ್ಯವಿಲ್ಲ ಎಂಬುದು ಅನೇಕ ಕಾನೂನು ಪರಿಣಿತರ ಅಭಿಪ್ರಾಯವಾಗಿದೆ.

ಇಂತಹ ವಿವಾದಾಸ್ಪದ ವ್ಯಕ್ತಿಯನ್ನು ನ್ಯಾಯಾಲಯದ ಉನ್ನತ ಸ್ಥಾನಕ್ಕೆ ನೇಮಕ ಮಾಡಿಸಲು ಮೋದಿ ನೇತೃತ್ವದ ಕೇಂದ್ರ ಸರಕಾರ ತೋರಿಸಿದ ಸಂಶಯಾಸ್ಪದ ಆಸಕ್ತಿ ಮತ್ತು ಇದಕ್ಕಾಗಿ ನೇಮಕಾತಿ ಮಾಡುವ ಸುಪ್ರೀಂ ಕೋರ್ಟ್ ಕೊಲಿಜಿಯಂ ಮೇಲೆ ತಂದ ತೀವ್ರವಾದ ಒತ್ತಡ ಪ್ರಶ್ನಾರ್ಹವಾಗಿದೆ. ಈ ನೇಮಕಕ್ಕೆ ಮುನ್ನ ಕೊಲಿಜಿಯಂ ವಿರುದ್ಧ ಕೇಂದ್ರ ಕಾನೂನು ಸಚಿವರು ಮತ್ತು ಉಪ ರಾಷ್ಟ್ರಪತಿಗಳು ನಡೆಸಿದ ವಾಗ್ದಾಳಿ ನ್ಯಾಯಾಂಗದ ಮೇಲೆ ಹಿಡಿತವನ್ನು ಸಾಧಿಸುವ ಉದ್ದೇಶವನ್ನು ಹೊಂದಿತ್ತು ಎಂಬುದು ಬರೀ ಆರೋಪವಲ್ಲವೆನ್ನುವುದು ಆನಂತರದ ವಿದ್ಯಮಾನಗಳಿಂದ ಸ್ಪಷ್ಟವಾಗುತ್ತದೆ.

ಗೌರಿ ನೇಮಕಕ್ಕೆ ಸಂಬಂಧಪಟ್ಟಂತೆ ಬಂದಿರುವ ತಕರಾರು ಅರ್ಜಿಗಳನ್ನು ವಿಚಾರಣೆಗೆ ಸ್ವೀಕರಿಸುವ ಬಗ್ಗೆ ಯೋಚಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದ ತಕ್ಷಣ ಕೇಂದ್ರ ಸರಕಾರ ತರಾತುರಿಯಲ್ಲಿ ನೇಮಕದ ಆದೇಶ ಪ್ರಕಟಿಸಿರುವುದು ಕೂಡ ಸಂಶಯಾಸ್ಪದವಾಗಿದೆ.

ಸಂವಿಧಾನ ವಿರೋಧಿಯಾದ ಕೋಮು ದ್ವೇಷದ ಭಾಷಣಗಳನ್ನು ನಿರಂತರವಾಗಿ ಮಾಡುತ್ತ ಬಂದ ವ್ಯಕ್ತಿಯನ್ನು ಕೇಂದ್ರ ಸರಕಾರದ ಒತ್ತಡಕ್ಕೆ ಮಣಿದು ನ್ಯಾಯಾಧೀಶೆಯನ್ನಾಗಿ ನೇಮಕ ಮಾಡಿರುವ ಕೊಲಿಜಿಯಂ ಕೂಡ ಈ ಲೋಪದ ಪಾಲುಗಾರಿಕೆಯನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಈಕೆಯ ರಾಜಕೀಯ ಮತ್ತು ಕೋಮುವಾದಿ ಹಿನ್ನೆಲೆಯ ಕುರಿತು ಗುಪ್ತಚರ ವರದಿಗಳನ್ನು ಪರಿಶೀಲಿಸದೆ ಕೊಲಿಜಿಯಂ ಅವಸರದ ತೀರ್ಮಾನ ಕೈಗೊಳ್ಳಬಾರದಿತ್ತು.

ಹೆಚ್ಚುವರಿ ನ್ಯಾಯಾಧೀಶೆಯಾಗಿ ನೇಮಕಗೊಂಡಿರುವ ಗೌರಿಯವರ ರಾಜಕೀಯ ಹಿನ್ನೆಲೆ, ಸಂವಿಧಾನಕ್ಕೆ ಅಪಚಾರ ಮಾಡುವ ಪ್ರಚೋದನಾಕಾರಿ ಮಾತುಗಳ ಬಗ್ಗೆ ಮೋದಿಯವರ ನೇತೃತ್ವದ ಕೇಂದ್ರ ಸರಕಾರಕ್ಕೆ ಗೊತ್ತಿಲ್ಲವೆಂದಲ್ಲ. ತಮ್ಮ ಸೈದ್ಧಾಂತಿಕ ಹಿನ್ನೆಲೆ ಹೊಂದಿರುವವರನ್ನೇ ನ್ಯಾಯಾಂಗದ ಉನ್ನತ ಸ್ಥಾನಗಳಿಗೆ ನೇಮಕ ಮಾಡಿ ಇಡೀ ನ್ಯಾಯಾಂಗ ವ್ಯವಸ್ಥೆಯನ್ನು ಸ್ವಾಧೀನ ಪಡಿಸಿಕೊಳ್ಳುವ ಮಸಲತ್ತಿನ ಭಾಗವಾಗಿ ಈ ನೇಮಕಾತಿ ನಡೆದಿದೆ. ಇದು ಹೊಸದಲ್ಲ. ಮಹಾತ್ಮಾ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯನ್ನು ಹಾಡಿ ಹೊಗಳಿದ ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿ ಆರಿಸಿ ತರಲಿಲ್ಲವೇ? ಈಗ ಅದೇ ತಂತ್ರವನ್ನು ನ್ಯಾಯಾಂಗದ ನೇಮಕಾತಿಗಳಿಗೂ ವಿಸ್ತರಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಇತ್ತೀಚಿನ ಅಂದರೆ ಕಳೆದ ಎಂಟು ವರ್ಷಗಳ ಕಾಲಾವಧಿಯ ತೀರ್ಪುಗಳು ರಾಜಕೀಯ ಪ್ರಭಾವದಿಂದ ಮುಕ್ತವಾಗಿಲ್ಲ ಎಂಬ ಸಂದೇಹಗಳು ಅನೇಕ ಸಲ ಮೂಡಿವೆ. ಅದೇನೇ ಇರಲಿ ನ್ಯಾಯಾಂಗದ ಉನ್ನತ ಸ್ಥಾನಗಳ ನೇಮಕಾತಿ ಪಾರದರ್ಶಕವಾಗಿರುವುದು ಅಗತ್ಯವಾಗಿದೆ.

Similar News