ಇದು ಆತ್ಮಹತ್ಯೆಯಲ್ಲ, ಸಾಂಸ್ಥಿಕ ಕೊಲೆ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಐಐಟಿ ಬಾಂಬೆಯ ಪೊವಾಯಿ ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್‌ನಲ್ಲಿ ದಲಿತ ವಿದ್ಯಾರ್ಥಿ ದರ್ಶನ್ ಸೋಲಂಕಿ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕ್ಯಾಂಪಸ್‌ನಲ್ಲಿರುವ ಜಾತಿ ತಾರತಮ್ಯವೇ ಆತ್ಮಹತ್ಯೆಗೆ ಕಾರಣ ಎಂದು ದಲಿತ ಸಂಘಟನೆಗಳು ಆರೋಪಿಸಿವೆ. ದಲಿತರ ಕುರಿತಂತೆ ಕ್ಯಾಂಪಸ್‌ನೊಳಗಿರುವ ಅಸಹನೆ ಕೂಡ ಈ ಘಟನೆಯೊಂದಿಗೆ ಬೆಳಕಿಗೆ ಬಂದಿದೆ. ವಿಶ್ವವಿದ್ಯಾನಿಲಯಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ದಲಿತರು ಅನುಭವಿಸುತ್ತಿರುವ ಮಾನಸಿಕ ಮತ್ತು ದೈಹಿಕ ಹಿಂಸೆಗಳು ರೋಹಿತ್ ವೇಮುಲಾ ಆತ್ಮಹತ್ಯೆ ಬಳಿಕ ವ್ಯಾಪಕವಾಗಿ ಚರ್ಚೆಗೆ ಬಂದಿತ್ತು. ವೇಮುಲಾ ಪ್ರಕರಣದಲ್ಲಿ ಇಡೀ ವ್ಯವಸ್ಥೆಯೇ ಈ ಹಿಂಸೆ, ದೌರ್ಜನ್ಯದ ಪರವಾಗಿ ನಿಂತಿತ್ತು. ಹೇಗೆ ಒಂದು ವ್ಯವಸ್ಥೆಯೇ ದಲಿತ ವಿರೋಧಿಯಾಗಿ ಒಬ್ಬ ವಿದ್ಯಾರ್ಥಿಯ ಆತ್ಮಹತ್ಯೆಗೆ ಕಾರಣವಾಗುತ್ತದೆ ಎನ್ನುವುದಕ್ಕೆ ರೋಹಿತ್ ವೇಮುಲಾ ಆತ್ಮಹತ್ಯೆ ಉದಾಹರಣೆಯಾಯಿತು.
ತನ್ನ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ರೋಹಿತ್ ಎಂದೂ ವೌನವಾಗಿರಲಿಲ್ಲ. ನಿರಂತರವಾಗಿ ಅದರ ವಿರುದ್ಧ ಪ್ರತಿಭಟನೆ ಮಾಡಿದ್ದರು. ಧರಣಿ ಕೂತಿದ್ದರು. ಆತನ ನೋವು ಸಂಕಟಗಳಿಗೆ ಸ್ಪಂದಿಸಬೇಕಾಗಿದ್ದ ವಿಶ್ವವಿದ್ಯಾನಿಲಯ ಆತನಿಗೆ ಇನ್ನಷ್ಟು ಹಿಂಸೆಯನ್ನು ನೀಡಿತ್ತು. ಆತನನ್ನು ಹಾಸ್ಟೆಲ್‌ನಿಂದ ಹೊರ ಹಾಕಿತ್ತು. ಸಿಗಬೇಕಾಗಿದ್ದ ಸ್ಕಾಲರ್ ಶಿಪ್‌ನ್ನು ತಡೆ ಹಿಡಿದಿತ್ತು. ಅಂತಿಮವಾಗಿ ಆತ ಕುಲಪತಿಗೆ ಒಂದು ಪತ್ರವನ್ನು ಬರೆದರು. ''ವಿಶ್ವವಿದ್ಯಾನಿಲಯ ಪ್ರವೇಶಿಸುವ ಎಲ್ಲ ದಲಿತ ವಿದ್ಯಾರ್ಥಿಗಳಿಗೆ ಉಚಿತವಾಗಿ ನೇಣು ಹಾಕಿಕೊಳ್ಳಲು ಹಗ್ಗವನ್ನೂ ಒದಗಿಸಿ. ಸಂದರ್ಭ ಬಂದಾಗ ಅದನ್ನು ಬಳಸಿಕೊಳ್ಳಲು ಅವರಿಗೆ ಅನುಕೂಲವಾಗುತ್ತದೆ'' ಎಂದು ಅದರಲ್ಲಿ ಹತಾಶೆ ವ್ಯಕ್ತಪಡಿಸಿದ್ದರು. ಇವೆಲ್ಲ ಬೆಳವಣಿಗೆಗಳ ಬಳಿಕ ಅವರು ನೇಣಿಗೆ ಶರಣಾಗಿದ್ದರು. ಅಂಬೇಡ್ಕರ್ ಕುರಿತಂತೆ ಅಪಾರವಾಗಿ ಓದಿದ್ದ, ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ, ಹೋರಾಟದಲ್ಲಿ ಸಕ್ರಿಯನಾಗಿದ್ದ ರೋಹಿತ್ ವೇಮುಲಾ ಸ್ಥಿತಿಯೇ ಹೀಗಿರಬೇಕಾದರೆ, ಯಾವುದೇ ಸಂಘಟನೆಗಳ ಬಲವಿಲ್ಲದ, ಆರ್ಥಿಕ ಹಿನ್ನೆಲೆಯೂ ಇಲ್ಲದ ದಲಿತ ಸಮುದಾಯದ ವಿದ್ಯಾರ್ಥಿಗಳ ಸ್ಥಿತಿ ಶಾಲಾ ಕಾಲೇಜುಗಳಲ್ಲಿ ಹೇಗಿರಬಹುದು? ಈ ಬಗ್ಗೆ ಇನ್ನಾದರೂ ನಾವು ಗಂಭೀರವಾಗಿ ಯೋಚಿಸಬೇಕಾಗಿದೆ.
ಕೆಲವು ದಿನಗಳ ಹಿಂದೆ ಬೆಂಗಳೂರಿನ ಜೈನ್ ವಿವಿಯಲ್ಲಿ ವೇದಿಕೆಯ ಮೇಲೆಯೇ ಅಂಬೇಡ್ಕರ್‌ರನ್ನು ಅವಮಾನಿಸುವ, ಮೀಸಲಾತಿಯನ್ನು ವ್ಯಂಗ್ಯ ಮಾಡುವ, ದಲಿತ ಹೆಣ್ಣು ಮಗಳನ್ನು ತಮಾಷೆ ಮಾಡುವ ಸ್ಕಿಟ್‌ನ್ನು ವಿದ್ಯಾರ್ಥಿಗಳು ಅಭಿನಯಿಸಿದರು. ಅದು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಯಿತು. ವೇದಿಕೆಯಲ್ಲಿ ನಾಟಕ ನಡೆಯುತ್ತಿರುವಾಗ, ಕೆಳಗಿರುವ ವಿದ್ಯಾರ್ಥಿಗಳು ಅದನ್ನು ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿದ್ದರು. ಈ ಸಂದರ್ಭದಲ್ಲಿ ಪ್ರೇಕ್ಷಕರ ನಡುವೆ ಒಬ್ಬ ದಲಿತ ವಿದ್ಯಾರ್ಥಿಯಿದ್ದರೆ ಆತನ ಸ್ಥಿತಿ ಏನಾಗಬೇಕು? ಅಷ್ಟೂ ಶಿಳ್ಳೆ, ಚಪ್ಪಾಳೆಗಳು ಬೀಳುತ್ತಿರುವುದು ತನ್ನ ವಿರುದ್ಧ ಎನ್ನುವುದು ಆತನಿಗೆ ಗೊತ್ತಿದೆ. ಅಲ್ಲಿ ತಮಾಷೆ ಮಾಡುತ್ತಿರುವುದು ತಾನು ಹುಟ್ಟಿದ ಜಾತಿಯನ್ನು ಎನ್ನುವುದು ಆತನ ಅರಿವಿನಲ್ಲಿದೆ. ಜಾತಿ ಅಸಮಾನತೆಯಿಂದ ತನಗೆ ಬಿಡುಗಡೆ ನೀಡಿದ ಅಂಬೇಡ್ಕರ್‌ರನ್ನು ವ್ಯಂಗ್ಯಕ್ಕೀಡು ಮಾಡುತ್ತಿದ್ದಾರೆ ಎನ್ನುವುದು ಆತನ ಗಮನಕ್ಕೆ ಬಂದಿದೆ. ಆದರೆ ಅದನ್ನು ಪ್ರತಿಭಟಿಸುವ ಅವಕಾಶವಿಲ್ಲ.
ಒಂದು ವೇಳೆ ಸ್ಕಿಟ್‌ನ್ನು ಕಾಲೇಜಿನಲ್ಲಿರುವ ಒಬ್ಬ ಕೆಳಜಾತಿಯ ವಿದ್ಯಾರ್ಥಿ ಪ್ರತಿಭಟಿಸಿದ್ದಿದ್ದರೆ ಆತನ ಸ್ಥಿತಿ ಏನಾಗಬಹುದಿತ್ತು? ಒಂದು, ಅಲ್ಲಿರುವ ಬಹುಸಂಖ್ಯಾತ ಮೇಲ್‌ಜಾತಿಯ ಸಹಪಾಠಿಗಳ ಶಾಶ್ವತ ವಿರೋಧವನ್ನು ಕಟ್ಟಿಕೊಳ್ಳಬೇಕಾಗಿತ್ತು. ಅಷ್ಟೇ ಅಲ್ಲ, ಅಲ್ಲಿನ ಉಪನ್ಯಾಸಕರು, ಕಾಲೇಜು ಆಡಳಿತ ಮಂಡಳಿಯಿಂದಲೂ ಆತ ಮಾನಸಿಕವಾಗಿ ಕಿರುಕುಳವನ್ನು ಎದುರಿಸಬೇಕಾಗಿತ್ತು. ಯಾಕೆಂದರೆ, ವಿದ್ಯಾರ್ಥಿಗಳು ಆ ನಾಟಕವನ್ನು ಪ್ರದರ್ಶಿಸಿರುವುದು ಶಿಕ್ಷಕರ ಒಪ್ಪಿಗೆಯ ಮೇರೆಗೇ ಆಗಿತ್ತು. ಅಲ್ಲಿರುವ ಉಪನ್ಯಾಸಕರು ಮತ್ತು ಕಾಲೇಜಿನ ಆಡಳಿತ ಮಂಡಳಿಯ ಜಾತೀಯ ಮನಸ್ಥಿತಿಯೇ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ಅಂತಹದೊಂದು ನಾಟಕವನ್ನು ಪ್ರದರ್ಶಿಸಲು ಧೈರ್ಯವನ್ನು ನೀಡಿತ್ತು. ಇವರೆಲ್ಲರ ಶತ್ರುತ್ವವನ್ನು ಕಟ್ಟಿಕೊಂಡು ಆ ವಿದ್ಯಾರ್ಥಿ ಆ ಕಾಲೇಜಿನಲ್ಲಿ ಸುಗಮವಾಗಿ ವಿದ್ಯೆ ಕಲಿಯುವುದು ಸಾಧ್ಯವಾಗುವ ಮಾತೆ? ದಲಿತರಿಗೆ ಅವಮಾನ ಹೊಸತಲ್ಲ. ಆದರೆ ಅಕ್ಷರ ಕಲಿತ ವಿದ್ಯಾರ್ಥಿಗಳು ಸ್ವಾಭಿಮಾನ, ಆತ್ಮಾಭಿಮಾನವನ್ನೂ ಮೈಗೂಡಿಸಿಗೊಂಡಿರುತ್ತಾರೆ. ಇಂತಹದೊಂದು ಅವಮಾನವನ್ನು ಸಹಿಸುತ್ತಾ ಆ ಕಾಲೇಜಿನಲ್ಲಿ ವಿದ್ಯೆ ಕಲಿಯುವುದಾದರೂ ಸಾಮಾನ್ಯ ವಿಷಯವೆ? ಇಂತಹ ಒತ್ತಡಗಳ ನಡುವೆ ಸ್ವಲ್ಪ ಯಾಮಾರಿದರೂ ವಿದ್ಯಾರ್ಥಿಗಳು ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರಕ್ಕೆ ಬಂದು ಬಿಡುತ್ತಾರೆ.
ಬಿಜೆಪಿಯೇತರ ಸರಕಾರ ಇರುವಾಗಲೂ ಈ ದೇಶದಲ್ಲಿ ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2011ರಲ್ಲೇ ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆಯ ಕುರಿತಂತೆ 'ದಿ ಡೆತ್ ಆಫ್ ಮೆರಿಟ್' ಎನ್ನುವ ಸಾಕ್ಷಚಿತ್ರವೊಂದು ಹೊರ ಬಂದಿತ್ತು. ಆತ್ಮಹತ್ಯೆಗೈದ ಬಹುತೇಕ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದರು. ಮೇಲ್ ಜಾತಿ ವಿದ್ಯಾರ್ಥಿಗಳ ವ್ಯಂಗ್ಯ, ನಿಂದನೆ, ದೈಹಿಕ ಹಲ್ಲೆ, ಅಧ್ಯಾಪಕರು ಮತ್ತು ಆಡಳಿತ ಮಂಡಳಿಯ ಪಕ್ಷಪಾತ ಧೋರಣೆಗಳೇ ಬಹುತೇಕ ಆತ್ಮಹತ್ಯೆಗಳಿಗೆ ಮುಖ್ಯ ಕಾರಣ ಎನ್ನುವುದನ್ನು ಈ ಸಾಕ್ಷ ಚಿತ್ರ ತೆರೆದಿಟ್ಟಿತ್ತು. ರೋಹಿತ್ ವೇಮುಲಾ ಆತ್ಮಹತ್ಯೆಯ ಬಳಿಕವಂತೂ ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಗಂಭೀರ ಚರ್ಚೆಗೆ ಒಳಗಾಯಿತು. ಶಾಲೆ, ಕಾಲೇಜುಗಳಲ್ಲಿ ದಲಿತ ವಿದ್ಯಾರ್ಥಿಗಳನ್ನು ಜಾತಿಯ ಹೆಸರಿನಲ್ಲಿ ನಿಂದಿಸುವ, ದೌರ್ಜನ್ಯವೆಸಗುವ ಪ್ರವೃತ್ತಿ ಮುಂದುವರಿಯುತ್ತಿರುವುದು ಬೆಳಕಿಗೆ ಬಂತು. ಆದರೆ ದಲಿತರ ಮೇಲೆ ನಡೆಯುತ್ತಿರುವ ಈ ಮಾನಸಿಕ, ದೈಹಿಕ ದೌರ್ಜನ್ಯಗಳನ್ನು ತಡೆಯುವುದಕ್ಕೆ ಬೇಕಾದ ಕ್ರಮ ತೆಗೆದುಕೊಳ್ಳಲು ಸರಕಾರ ಯಾವ ಪ್ರಯತ್ನವನ್ನೂ ನಡೆಸಲಿಲ್ಲ. ಒಂದೆಡೆ ಮೇಲ್‌ಜಾತಿಯ ಜನರಿಗೆ ದಲಿತರು ತಮಗೆ ಸಮವಾಗಿ ನಿಂತು ವಿದ್ಯೆ ಕಲಿಯುವುದು ಇಷ್ಟವಿಲ್ಲ. ಈ ಬಗ್ಗೆ ಅವರಿಗೆ ತೀವ್ರ ಅಸಮಾಧಾನವಿದೆ.
ತಮ್ಮ ಅಸಮಾಧಾನ, ಸಿಟ್ಟನ್ನು ಕಾನೂನಿನ ಭಯದಿಂದ ಅವರು ಮುಚ್ಚಿಟ್ಟಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸಿಟ್ಟನ್ನು ಪ್ರದರ್ಶಿಸುವುದಕ್ಕೆ ವೇದಿಕೆಗಳು ಸಿಗುತ್ತಿವೆ. ಮುಖ್ಯವಾಗಿ, ದೇಶದಲ್ಲಿ ದಲಿತರ ಸಂಘಟನೆ, ಹೋರಾಟಗಳಿಗೆ ಹಿನ್ನಡೆಯಾಗಿದೆ. ಇದೇ ಸಂದರ್ಭದಲ್ಲಿ ಮೇಲ್‌ಜಾತಿಯ ಜನರು ಸಂಘಟಿತರಾಗಿ ತಮ್ಮ 'ಶೋಷಿಸುವ ಹಕ್ಕು'ಗಳಿಗಾಗಿ ಬೀದಿಗಿಳಿದಿದ್ದಾರೆ. ಮೀಸಲಾತಿಯ ಪರಿಣಾಮಕಾರಿ ಜಾರಿಗಾಗಿ ದಲಿತರು ಸಂಘಟಿತರಾಗಿ ಬೀದಿಗಿಳಿಯಬೇಕಾಗಿತ್ತು. ಆದರೆ ಇಂದು ಮೀಸಲಾತಿಗಾಗಿ ಬೀದಿಯಲ್ಲಿರುವುದು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಿರುವ ಪಟೇಲರು, ಮರಾಠರು, ಜಾಠರು. ಇವರ ಪ್ರತಿಭಟನೆ ತೀವ್ರವಾದ ಪರಿಣಾಮ, ಮೇಲ್‌ಜಾತಿಗಾಗಿ ಸರಕಾರ ಶೇ. 10ರಷ್ಟು ಮೀಸಲಾತಿಯನ್ನು ಘೋಷಿಸಿತು. ಇದು, ದಲಿತರು ಇನ್ನಷ್ಟು ಕೀಳರಿಮೆ ಮುಜುಗರ ಇತ್ಯಾದಿಗಳ ಜೊತೆಗೆ ಕಾಲೇಜುಗಳಲ್ಲಿ ಓಡಾಡುವ ಸ್ಥಿತಿ ನಿರ್ಮಾಣ ಮಾಡಿದೆ.
ಮೇಲ್‌ಜಾತಿ ಸವಲತ್ತನ್ನೂ, ಮೀಸಲಾತಿಯ ಸವಲತ್ತೆರಡನ್ನೂ ತನ್ನದಾಗಿಸಿಕೊಂಡ ವಿದ್ಯಾರ್ಥಿಗಳು ಈಗಲೂ ಮೀಸಲಾತಿಯ ಸಕಲ ಫಲಾನುಭವಿಗಳು ದಲಿತರು ಎಂದೇ ಹೇಳಿಕೊಂಡು ಓಡಾಡುತ್ತಿದ್ದಾರೆ. ತಮ್ಮಾಳಗಿನ ಸಿಟ್ಟು ಆಕ್ರೋಶವನ್ನು ವ್ಯಂಗ್ಯ, ನಿಂದನೆಗಳ ರೂಪಗಳಲ್ಲಿ ಪ್ರದರ್ಶಿಸುತ್ತಿದ್ದಾರೆ. ಇದರ ವಿರುದ್ಧ ಸಂಘಟಿತವಾಗಿ ಧ್ವನಿಯೆತ್ತುವ ಶಕ್ತಿಯೂ ದಲಿತ ವಿದ್ಯಾರ್ಥಿಗಳಲ್ಲಿ ಇಲ್ಲವಾಗಿದೆ. ಧ್ವನಿಯೆತ್ತಿದರೆ ಪೊಲೀಸ್ ಕೇಸುಗಳ ಮೂಲಕ ಅವರ ಭವಿಷ್ಯವನ್ನೇ ಚಿವುಟಿ ಹಾಕಲಾಗುತ್ತದೆ. ರೋಹಿತ್ ವೇಮುಲಾ ಪ್ರಕರಣದಲ್ಲೂ ಇದೇ ನಡೆಯಿತು. ಅಲ್ಲಿನ ಎಬಿವಿಪಿ ವಿದ್ಯಾರ್ಥಿ ಮುಖಂಡನೊಬ್ಬನ ಜೊತೆಗೆ ನಡೆದ ತಿಕ್ಕಾಟ ಆತನ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಿತು. ಪೊಲೀಸರು ರೋಹಿತ್ ವೇಮುಲಾ ಮೇಲೆ ಹಲ್ಲೆ ಆರೋಪ ಪ್ರಕರಣ ದಾಖಲಿಸಿದರು. ಇದೇ ಸಂದರ್ಭದಲ್ಲಿ ಎಬಿವಿಪಿ ಮುಖಂಡನ ಮೇಲೆ ಯಾವ ಕೇಸೂ ದಾಖಲಾಗಲಿಲ್ಲ.
ರೋಹಿತ್‌ರ ಗಾಯಗಳ ಮೇಲೆ ಪೊಲೀಸ್ ಇಲಾಖೆ ಬರೆ ಎಳೆಯಿತು. ಕಾಲೇಜು ಪ್ರವೇಶದೊಂದಿಗೆ ದಲಿತರ ಸಮಸ್ಯೆ ಮುಗಿಯುತ್ತದೆ ಎನ್ನುವ ವಾದ ಸುಳ್ಳು. ಅದರೊಂದಿಗೆ ಅವರ ಸಮಸ್ಯೆಯ ಇನ್ನೊಂದು ಹೆಬ್ಬಾಗಿಲು ತೆರೆದುಕೊಳ್ಳುತ್ತದೆ ಎನ್ನುವುದಕ್ಕೆ ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆಯೇ ಉದಾಹರಣೆ. ಪ್ರತೀ ಕಾಲೇಜುಗಳಲ್ಲಿ ದಲಿತ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸುವುದಕ್ಕಾಗಿಯೇ ಪ್ರತ್ಯೇಕ ಸಮಾಲೋಚಕರ ಅಗತ್ಯವಿದೆ ಎನ್ನುವುದನ್ನು ಸೋಲಂಕಿ ಆತ್ಮಹತ್ಯೆ ಮತ್ತೊಮ್ಮೆ ಆಗ್ರಹಿಸುತ್ತಿದೆ. ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ಒಂದು ಸಾಂಸ್ಥಿಕ ಕೊಲೆ ಎಂದು ಭಾವಿಸಿ ತನಿಖೆ ನಡೆಸುವ ಅಗತ್ಯವಿದೆ.