ಬಿಬಿಸಿ ಮೇಲಿನ ‘ದಾಳಿ’ ಭಾರತದ ವರ್ಚಸ್ಸಿಗೆ ಧಕ್ಕೆ!

Update: 2023-02-16 04:01 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್(ಬಿಬಿಸಿ)ನ ದಿಲ್ಲಿ ಮತ್ತು ಮುಂಬೈ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯು ಏಕಾಏಕಿ ‘ದಾಳಿ’ ನಡೆಸಿದೆ. ತೆರಿಗೆ ವಂಚನೆಯ ಆರೋಪದಲ್ಲಿ ಈ ಕಾರ್ಯಾಚರಣೆ ನಡೆದಿದೆ ಎಂದು ಇಲಾಖೆ ಹೇಳಿಕೊಂಡಿದೆ. ಬಿಬಿಸಿ ಭಾರತ ತೆರಿಗೆ ಕಾನೂನಿಗೆ ಅತೀತವಾದ ಸಂಸ್ಥೆಯಲ್ಲ. ತೆರಿಗೆ ವಂಚನೆಯನ್ನು ಅದು ಎಸಗಿದ್ದರೆ, ಐಟಿ ತನ್ನ ಕಾರ್ಯಾಚರಣೆ ನಡೆಸಿರುವುದನ್ನು ಪ್ರಶ್ನಿಸಲಾಗುವುದಿಲ್ಲ. ಆದರೆ ಬಿಬಿಸಿಯ ವಿವಾದಾತ್ಮಕ ‘ಇಂಡಿಯಾ: ದಿ ಮೋದಿ ಕ್ವಶ್ಚನ್’ ಸಾಕ್ಷ್ಯಚಿತ್ರ ಪ್ರಸಾರವಾದ ಎರಡೇ ವಾರದಲ್ಲಿ ಬಿಬಿಸಿಯ ವಿರುದ್ಧ ಐಟಿ ಜಾಗೃತವಾಗಿರುವುದರಿಂದ, ಈ ಕಾರ್ಯಾಚರಣೆಯ ವಿಶ್ವಾಸಾರ್ಹತೆ ಪ್ರಶ್ನೆಗೊಳಗಾಗಿದೆ. ಬಿಬಿಸಿ ಸಾಕ್ಷ್ಯಚಿತ್ರದ ವಿರುದ್ಧ ಕೇಂದ್ರ ಸರಕಾರ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿರುವುದು ಮಾತ್ರವಲ್ಲ, ಅದಕ್ಕೆ ನಿಷೇಧ ಹೇರುವ ಪ್ರಯತ್ನವನ್ನೂ ಮಾಡಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗದಂತೆ ನೋಡಿಕೊಂಡಿದೆ. ಈ ನಿಷೇಧದ ವಿರುದ್ಧ ವಿಶ್ವಾದ್ಯಂತ ಮಾನವ ಹಕ್ಕು ಸಂಘಟನೆಗಳು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿವೆ. ಇದೀಗ ಏಕಾಏಕಿ ಐಟಿ ಕಾರ್ಯಾಚರಣೆ ನಡೆದಿರುವುದು, ಬಿಬಿಸಿಯನ್ನು ಬೆದರಿಸುವ ತಂತ್ರದ ಭಾಗವಾಗಿದೆ ಎಂದು ಭಾವಿಸುವಂತಾಗಿದೆ.

ಐಟಿ ಕಾರ್ಯಾಚರಣೆ ‘ದಾಳಿ’ಯ ರೂಪವನ್ನು ಪಡೆದದ್ದು ಕಳೆದ ಒಂದು ದಶಕದಿಂದ. ತನ್ನ ವಿರೋಧಿಗಳ ಬಾಯಿ ಮುಚ್ಚಿಸಲು ಕೇಂದ್ರ ಸರಕಾರ ಸಿಬಿಐ, ಐಟಿಯಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ ಎನ್ನುವ ಆರೋಪ ಇತ್ತೀಚಿನ ದಿನಗಳಲ್ಲಿ ತೀವ್ರವಾಗುತ್ತಿದೆ. ಐಟಿ ಕಾರ್ಯಾಚರಣೆ ತೆರಿಗೆ ಅಕ್ರಮಗಳನ್ನು ತಡೆಯುವ ಉದ್ದೇಶಕ್ಕಿಂತ, ಕೇಂದ್ರ ಸರಕಾರದ ವಿರೋಧಿಗಳನ್ನು ನಿಯಂತ್ರಿಸಲು ಬಳಕೆಯಾಗುತ್ತಿದೆ ಎಂದು ಹಲವು ರಾಜಕೀಯ ನಾಯಕರು ಆರೋಪಿಸಿದ್ದಾರೆ. ಸರಕಾರವನ್ನು ಉರುಳಿಸಲು, ರಾಜಕಾರಣಿಗಳನ್ನು ಪಕ್ಷಾಂತರ ಮಾಡಿಸುವುದಕ್ಕೂ ಐಟಿ ಕಾರ್ಯಾಚರಣೆ ‘ಬ್ಲಾಕ್‌ಮೇಲ್’ಯ ರೂಪದಲ್ಲಿ ಬಳಕೆಯಾಗುತ್ತಿದೆ. ‘ತೆರಿಗೆ ಅಕ್ರಮಗಳನ್ನು ನಡೆಸದೇ ಇದ್ದರೆ ಈ ದಾಳಿಗೆ ಯಾಕೆ ಹೆದರಬೇಕು?’ ಎನ್ನುವ ಪ್ರಶ್ನೆಯನ್ನು ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರ ಕೇಳುತ್ತಿದೆ. ಐಟಿಯಂತಹ ಸಂಸ್ಥೆಗಳು ನಿಜಕ್ಕೂ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದೆಯಾದರೆ, ಈ ದಾಳಿ ವಿರೋಧಿ ರಾಜಕಾರಣಿಗಳ ವಿರುದ್ಧ ಮಾತ್ರ ಯಾಕೆ ನಡೆಯಬೇಕು? ಎನ್ನುವ ಪ್ರಶ್ನೆ ಯನ್ನು ವಿರೋಧ ಪಕ್ಷಗಳು ಕೇಳುತ್ತಿವೆ.

ಕಳೆದ ಒಂದು ದಶಕದಲ್ಲಿ ಯಾರು ಕೇಂದ್ರದಲ್ಲಿ ಆಡಳಿತವನ್ನು ನಡೆಸುತ್ತಿದ್ದಾರೆಯೋ ಆ ರಾಜಕಾರಣಿಗಳ ಆಸ್ತಿ, ಸಂಪತ್ತಿನ ಮೇಲೆ ಐಟಿ ಇಲಾಖೆ ಕಣ್ಣಿಡಬೇಕು. ನೋಟು ನಿಷೇಧದ ಬಳಿಕ ದೇಶದಲ್ಲಿ ಭಾರೀ ಅಕ್ರಮಗಳು ನಡೆದವು. ಸಹಸ್ರಾರು ಕೋಟಿ ರೂ. ಕಪ್ಪು ಹಣ ಬಿಳಿಯಾದವು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಪಕ್ಷದ ಮುಖಂಡರು ಇದರಲ್ಲಿ ಶಾಮೀಲಾಗಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದವು. ಆದರೆ ಕಳೆದ ಒಂದು ದಶಕದಲ್ಲಿ ಆಡಳಿತ ಪಕ್ಷದ ಎಷ್ಟು ಮಂದಿ ರಾಜಕೀಯ ನಾಯಕರ ನಿವಾಸಗಳ ಮೇಲೆ ದಾಳಿ ನಡೆದಿದೆ? ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟರೆ, ಆದಾಯ ತೆರಿಗೆ ಇಲಾಖೆಯ ನಡೆಯ ಬಗ್ಗೆ ಪ್ರಶ್ನೆಗಳು ಹುಟ್ಟುತ್ತವೆ. ಸರಕಾರದ ವಿರುದ್ಧ ಮಾತನಾಡಿತು ಎನ್ನುವ ಕಾರಣಕ್ಕಾಗಿ ಎನ್‌ಡಿ ಟಿವಿಯ ವಿರುದ್ಧ ತನಿಖಾ ಸಂಸ್ಥೆಗಳನ್ನು ಬಳಸಿರುವ ಪ್ರಕರಣ ಇನ್ನೂ ಹಸಿಯಾಗಿದೆ. ಕಾನೂನನ್ನು ದುರ್ಬಳಕೆ ಮಾಡುವ ಮೂಲಕ ಈ ದೇಶದ ಹಲವು ಪತ್ರಕರ್ತರನ್ನು ದಮನಿಸುವ ಪ್ರಯತ್ನವನ್ನು ಸರಕಾರ ನಡೆಸುತ್ತಾ ಬಂದಿದೆ. ಇದೀಗ ಅಂತರ್‌ರಾಷ್ಟ್ರೀಯ ಮಟ್ಟದ ಮಾಧ್ಯಮವೊಂದರ ಬಾಯಿ ಮುಚ್ಚಿಸುವುದಕ್ಕಾಗಿ ಸರಕಾರ ಐಟಿ ಕಾರ್ಯಾಚರಣೆಯ ಬೆದರಿಕೆಯನ್ನು ಒಡ್ಡಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.

ತನ್ನ ವಿರುದ್ಧ ಮಾತನಾಡಿದರೆ, ಭಾರತದಲ್ಲಿ ನಿಮ್ಮನ್ನು ಕಾರ್ಯಾಚರಿಸಲು ಬಿಡುವುದಿಲ್ಲ ಎನ್ನುವ ಸಂದೇಶ ಇದರ ಹಿಂದೆ ಇದೆ. ಆದುದರಿಂದಲೇ, ಬಿಬಿಸಿ ಮೇಲಿನ ಆದಾಯ ತೆರಿಗೆ ಕಾರ್ಯಾಚರಣೆಯನ್ನು ವಿಶ್ವ ಆತಂಕದಿಂದ ನೋಡುತ್ತಿದೆ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಒದಗಿರುವ ದೈನೇಸಿ ಸ್ಥಿತಿಯನ್ನು ಇದು ಬಟಾಬಯಲುಗೊಳಿಸಿದೆ. ಸರಕಾರದ ನಡೆ ವಿಶ್ವಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಧಕ್ಕೆ ತಂದಿದೆ. ಬಿಬಿಸಿ ಸಾಕ್ಷ್ಯಚಿತ್ರ ಭಾರತದ ವಿರುದ್ಧ ನಡೆದ ಸಂಚು ಎನ್ನುವ ಕೇಂದ್ರದ ವಾದಕ್ಕೆ ಯಾವ ಕಾರಣವೂ ಇಲ್ಲ. ಗುಜರಾತ್ ಹತ್ಯಾಕಾಂಡ ಭಾರತದ ಪಾಲಿನ ಅತಿ ದೊಡ್ಡ ಕಳಂಕ. ಇದರ ಬಗ್ಗೆ ಕೇಂದ್ರ ಸರಕಾರಕ್ಕೂ ಯಾವುದೇ ಅನುಮಾನ ಇದ್ದಿರಲಿಕ್ಕಿಲ್ಲ. ದೇಶದಲ್ಲಿ ಗುಜರಾತ್ ಹತ್ಯಾಕಾಂಡವನ್ನು ಪ್ರಾಯೋಜಿಸಲು ಹಲವು ಪತ್ರಿಕೆಗಳು, ಮಾಧ್ಯಮಗಳು ತಮ್ಮದೇ ಆದ ಕೊಡುಗೆಗಳನ್ನು ನೀಡಿವೆ. ವದಂತಿಗಳನ್ನು ಹರಡುತ್ತಾ, ಪ್ರಚೋದನಾಕಾರಿ ಭಾಷಣಗಳನ್ನು ಪ್ರಸಾರ ಮಾಡುತ್ತಾ ಅಂತಿಮವಾಗಿ ಗುಜರಾತ್ ಹತ್ಯಾಕಾಂಡಕ್ಕೆ ಘಳಿಗೆಯನ್ನು ನಿರ್ಣಯಿಸಿತು. ಭಾರತಕ್ಕೇನಾದರೂ ಅವಮಾನವಾಗಿದ್ದಿದ್ದರೆ ಆ ಮಾಧ್ಯಮಗಳಿಂದ. ಗುಜರಾತ್ ಹತ್ಯಾಕಾಂಡವನ್ನು ತಡೆಯುವ ಹೊಣೆಗಾರಿಕೆ ಅಲ್ಲಿನ ಸರಕಾರದ್ದು. ಆಗ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು. ಗುಜರಾತ್ ಹತ್ಯಾಕಾಂಡದ ಹಿಂದೆ ರಾಜ್ಯ ಸರಕಾರದ ವೈಫಲ್ಯವಿದೆ ಎಂದರೆ, ಆ ರಾಜ್ಯ ಸರಕಾರದ ನೇತೃತ್ವವನ್ನು ವಹಿಸಿದ ವ್ಯಕ್ತಿಗೆ ಅಥವಾ ಪಕ್ಷಕ್ಕೆ ಅವಮಾನವಾಗುತ್ತದೆಯೇ ಹೊರತು, ಅದರಿಂದ ಭಾರತಕ್ಕೆ ಅವಮಾನವಾಗುವಂತಹದ್ದಿಲ್ಲ. ಒಂದು ವೇಳೆ ಅವಮಾನವಾಗುವುದೇ ಆಗಿದ್ದರೆ, ಗುಜರಾತ್ ಹತ್ಯಾಕಾಂಡವನ್ನು ತಡೆಯಲಾಗದ ಮುಖ್ಯಮಂತ್ರಿಯೊಬ್ಬನನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿದ ಕಾರಣಕ್ಕೆ ಭಾರತದ ಪ್ರಜೆಗಳು ತಲೆತಗ್ಗಿ ಸಬೇಕು.

ಬಿಬಿಸಿ ಸಾಕ್ಷ್ಯಚಿತ್ರದಲ್ಲಿ ಗುಜರಾತ್ ಹತ್ಯಾಕಾಂಡ ನಡೆಯಲು ವಾತಾವರಣವನ್ನು ನಿರ್ಮಾಣ ಮಾಡಿದ ಸರಕಾರದ ಬಗ್ಗೆ ವಿವರಗಳಿವೆ. ಅದನ್ನು ನಿರಾಕರಿಸುವುದಾದರೆ ಅದಕ್ಕೆ ಕೇಂದ್ರದ ಬಳಿ ಹಲವು ದಾರಿಗಳಿವೆ. ಆ ಸಾಕ್ಷ್ಯಚಿತ್ರವನ್ನು ನಿಷೇಧಿಸುವುದರಿಂದಾಗಲಿ ಅಥವಾ ಅದನ್ನು ಪ್ರಸಾರ ಮಾಡುತ್ತಿರುವ ಬಿಬಿಸಿಯನ್ನು ನಿ ಷೇಧಿಸುವುದರಿಂದಾಗಲಿ ಸರಕಾರ ಕಳೆದುಕೊಂಡ ತನ್ನ ಘನತೆಯನ್ನು ಮರಳಿ ಗಳಿಸಿಕೊಳ್ಳುವುದಿಲ್ಲ. ಈ ಹಿಂದೆ ಭಾರತದಲ್ಲಿ ಸಂಭವಿಸಿದ ಹಲವು ಹತ್ಯಾಕಾಂಡಗಳ ಬಗ್ಗೆ, ಜಾತಿ ದೌರ್ಜನ್ಯಗಳ ಬಗ್ಗೆ ಬಿಬಿಸಿ ಸಾಕ್ಷಚಿತ್ರಗಳನ್ನು ಮಾಡಿವೆ. ಈ ಹಿಂದಿನ ಸರಕಾರಗಳನ್ನೂ ಅದು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿವೆ. ಆದರೆ ಆಗ ಯಾವುದೇ ಸರಕಾರ ಬಿಬಿಸಿಯ ವಿರುದ್ಧ ಆಕ್ರೋಶದ ಮಾತುಗಳನ್ನಾಗಲಿ, ಆ ಸಾಕ್ಷ್ಯಚಿತ್ರವನ್ನು ನಿಷೇಧಿಸುವ ಪ್ರಯತ್ನವನ್ನಾಗಲಿ ಮಾಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಬಿಬಿಸಿಯ ವಿರುದ್ಧ ಭಾರತ ಕತ್ತಿ ಮಸೆಯುವ ಮೂಲಕ, ಭಾರತದ ಪ್ರಜಾಸತ್ತೆಯ ಹಿರಿಮೆಗೆ ವಿಶ್ವಮಟ್ಟದಲ್ಲಿ ಭಾರೀ ಆಘಾತವನ್ನು ಮಾಡಿದೆ. ಇದು ಬಿಬಿಸಿ ಸಾಕ್ಷ್ಯಚಿತ್ರದಿಂದಾದ ಅವಮಾನಕ್ಕಿಂತಲೂ ಕೆಟ್ಟ ಅವಮಾನವಾಗಿದೆ. ಬಿಬಿಸಿಯನ್ನು ದಮನಿಸುವುದಕ್ಕೆ ಸರಕಾರ ಐಟಿ ದಾಳಿಯನ್ನು ಪ್ರಾಯೋಜಿಸುವ ಮೂಲಕ, ಗುಜರಾತ್ ಹತ್ಯಾಕಾಂಡದಲ್ಲಿ ತನ್ನ ಪಾತ್ರವೇನು ಎನ್ನುವುದನ್ನು ವಿಶ್ವಕ್ಕೆ ಕೇಂದ್ರ ಸರಕಾರವೇ ಕೂಗಿ ಕೂಗಿ ಹೇಳಿದಂತಾಗಿದೆ.

Similar News