ಮೀರ್‌ಸಾದಿಕ್-ಪೂರ್ಣಯ್ಯರು ಬಿಜೆಪಿಗೆ ಆದರ್ಶ ಪುರುಷರೆ?

Update: 2023-02-17 04:17 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

''ಟಿಪ್ಪು ಸುಲ್ತಾನನನ್ನು ನಂಜೇಗೌಡ ಮತ್ತು ಉರಿಗೌಡ ಎಂಬವರು ಹೊಡೆದು ಹಾಕಿದಂತೆ ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು'' ಎಂಬ ಸಚಿವ ಅಶ್ವಥ್ ನಾರಾಯಣ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಗದ್ದಲ ಸೃಷ್ಟಿಸಿದೆ. ಈ ಹೇಳಿಕೆ ಅವರ ರಾಜಕೀಯ ವರ್ಚಸ್ಸಿಗೆ ಮಾತ್ರವಲ್ಲ, ಅವರು ಹೊಂದಿರುವ ಉನ್ನತ ಶಿಕ್ಷಣ ಸಚಿವ ಖಾತೆಗೂ ಕುಂದುಂಟು ಮಾಡಿದೆ. ಈಗಾಗಲೇ ತಮ್ಮ ಹೇಳಿಕೆಗೆ ಸಚಿವರು ಸಮಜಾಯಿಷಿಯನ್ನು ನೀಡಿದ್ದಾರಾದರೂ, ಬೇಷರತ್ ಕ್ಷಮೆಯಾಚನೆಯನ್ನು ಅವರು ಮಾಡಿಲ್ಲ. ಈ ಬಾರಿಯ ಚುನಾವಣೆಯನ್ನು ದ್ವೇಷ ರಾಜಕಾರಣದ ಮೂಲಕ ಬಿಜೆಪಿ ಗೆಲ್ಲಲು ಹೊರಟಿದೆ ಎನ್ನುವುದಕ್ಕೆ ಅವರ ಹೇಳಿಕೆಯಿಂದ ಇನ್ಢ್ನಷ್ಟು ಪುಷ್ಟಿ ಸಿಕ್ಕಿದೆ. 'ಸೇತುವೆ, ರಸ್ತೆಯ ಬಗ್ಗೆ ಮಾತನಾಡಬೇಡಿ, ಲವ್‌ಜಿಹಾದ್ ಬಗ್ಗೆ ಮಾತನಾಡಿ' 'ಈ ಬಾರಿ ಟಿಪ್ಪು ಸುಲ್ತಾನ್ ಮತ್ತು ಸಾವರ್ಕರ್ ನಡುವೆ ಸ್ಪರ್ಧೆ' ಎಂಬ ನಳಿನ್‌ಕುಮಾರ್ ಕಟೀಲು ಅವರ ಹೇಳಿಕೆಯ ಮುಂದುವರಿದ ಭಾಗವಾಗಿದೆ, ಈ ಹೇಳಿಕೆ. ಇದು ಜನರನ್ನು ಹಿಂಸೆಗೆ ಪ್ರಚೋದಿಸುವಂತಿದೆ ಮಾತ್ರವಲ್ಲ, ಬಹಿರಂಗವಾಗಿಯೇ ಹೊಡಿ ಬಡಿ ರಾಜಕೀಯಕ್ಕೆ ಕರೆ ನೀಡಿದಂತಾಗಿದೆ.

ಟಿಪ್ಪುವನ್ನು ಎದುರಿಟ್ಟುಕೊಂಡು ಚುನಾವಣೆಯನ್ನು ಎದುರಿಸಲು ಹೊರಟಿರುವ ಬಿಜೆಪಿಯ ತಂತ್ರವೇ ಅದರ ಹತಾಶೆಯನ್ನು ಹೇಳುತ್ತಿದೆ. ಜನ ಸಾಮಾನ್ಯರು ನಾಡಿನ ಅಭಿವೃದ್ಧಿಯ ಕುರಿತ ಮಾತುಗಳ ನಿರೀಕ್ಷೆಯಲ್ಲಿದ್ದರೆ, ಬಿಜೆಪಿಯ ನಾಯಕರು ಟಿಪ್ಪು, ಸಾವರ್ಕರ್ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಈಗಾಗಲೇ ತನ್ನ ಜನಪ್ರಿಯ ಭರವಸೆಗಳನ್ನು ಜನರ ಮುಂದಿಡುತ್ತಿದೆ. ಅದಕ್ಕೆ ಪ್ರತಿಯಾಗಿ ತನ್ನ ಅಭಿವೃದ್ಧಿ ಪರ ಪ್ರಣಾಳಿಕೆಯನ್ನು ಮುಂದಿಡುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿರುವುದನ್ನು ಅವರ ಹೇಳಿಕೆಗಳೇ ಸಾಬೀತು ಪಡಿಸುತ್ತಿವೆ. ಸಾವರ್ಕರ್ ಅಥವಾ ಟಿಪ್ಪು ಇವರಿಬ್ಬರೂ ದೇಶದ್ರೋಹಿಗಳೋ, ದೇಶಪ್ರೇಮಿಗಳೋ ಎನ್ನುವ ಅಂಶವನ್ನು ತೀರ್ಮಾನಿಸುವುದಕ್ಕಾಗಿ ಹಮ್ಮಿಕೊಳ್ಳುವ ಚರ್ಚಾಸ್ಪರ್ಧೆಯಲ್ಲ ಚುನಾವಣೆಯೆಂದರೆ. ಈ ನಾಡನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ತಾನು ನೀಡುವ ಕೊಡುಗೆಗಳನ್ನು ರಾಜಕೀಯ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ಜನರಿಗೆ ಮನವರಿಕೆ ಮಾಡಬೇಕು.

ಮೈಸೂರನ್ನು ಆಳಿ ಹೋದ ಅರಸನೆನ್ನುವ ಕಾರಣಕ್ಕೆ ಈ ನಾಡಿನ ಜನರು ಟಿಪ್ಪುಸುಲ್ತಾನನನ್ನು ಪ್ರಸ್ತಾಪಿಸುವುದರಲ್ಲಿ ಅರ್ಥವಿದೆ. ಟಿಪ್ಪು ಮತಾಂಧನೋ, ಅಲ್ಲವೋ ಆನಂತರದ ಮಾತು. ಆದರೆ ಕರ್ನಾಟಕದ ಇತಿಹಾಸದ ಪುಟಗಳಿಂದ ಆತನನ್ನು ಬೇರ್ಪಡಿಸುವುದು ಅಸಾಧ್ಯ. ಇದೇ ಸಂದರ್ಭದಲ್ಲಿ, ಸಾವರ್ಕರ್‌ಗೂ ಕರ್ನಾಟಕಕ್ಕೂ ಯಾವ ಸಂಬಂಧವೂ ಇಲ್ಲ. ಬ್ರಿಟಿಷರ ಜೊತೆಗೆ ಕ್ಷಮೆಯಾಚಿಸಿದ ಸಾವರ್ಕರ್, ಉಳಿದ ಜೀವನವನ್ನು ಬ್ರಿಟಿಷರು ಕೊಟ್ಟ ಪಿಂಚಣಿಯಿಂದ ಕಳೆದರು. ಆದರೆ ಕರ್ನಾಟಕ ಯಾವತ್ತೂ ಕ್ಷಮೆಯಾಚನೆಯ ಪರಂಪರೆಯನ್ನು ಹೊಂದಿಲ್ಲ. ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಟಿಪ್ಪು ಸುಲ್ತಾನ ಇವರೆಲ್ಲರೂ ಬ್ರಿಟಿಷರಿಗೆ ತಲೆಬಾಗದೆ ತಮ್ಮ ಪ್ರಾಣವನ್ನು ಅರ್ಪಿಸಿದವರು. ಬ್ರಿಟಿಷರಿಗೆ ತಲೆಬಾಗಿದ್ದಿದ್ದರೆ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸಾಯುವ ಅಗತ್ಯವೇ ಇರಲಿಲ್ಲ. ಟಿಪ್ಪುಸುಲ್ತಾನ ಬ್ರಿಟಿಷರ ಆಳ್ವಿಕೆಯನ್ನು ಒಪ್ಪಿಕೊಂಡಿದ್ದರೆ, ರಾಜ್ಯ, ಪ್ರಾಣ ಕಳೆದುಕೊಳ್ಳುವ ಅಗತ್ಯವಿದ್ದಿರಲಿಲ್ಲ. ಇಂತಹ ವೀರರ ಮುಂದೆ ಸಾವರ್ಕರ್‌ರನ್ನು ತಂದು ನಿಲ್ಲಿಸುವ ಬಿಜೆಪಿಯ ಪ್ರಯತ್ನ ನಾಡದ್ರೋಹವಾಗಿದೆ. ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ , ಟಿಪ್ಪು ಸುಲ್ತಾನರ ಪ್ರಾಣ ತ್ಯಾಗಕ್ಕೆ ಮಾಡುವ ಅವಮಾನವಾಗಿದೆ. ಇದರ ಜೊತೆ ಜೊತೆಗೇ ಸಿದ್ದರಾಮಯ್ಯರನ್ನು ಟಿಪ್ಪು ಸುಲ್ತಾನನಿಗೆ ಹೋಲಿಸಿ, ಅವರನ್ನು ಹೊಡೆದು ಹಾಕಬೇಕು ಎಂದು ಕರೆ ನೀಡುವುದು ಮುಂದಿನ ಚುನಾವಣೆಯನ್ನು ರಕ್ತಸಿಕ್ತಗೊಳಿಸುವ ಪ್ರಯತ್ನದ ಭಾಗವೆಂದು ಜನರು ಆತಂಕಪಡುವಂತಾಗಿದೆ.

ಕರ್ನಾಟಕದ ನೆಲವನ್ನು ಬ್ರಿಟಿಷರ ಪಾಲಾಗಿಸುವಲ್ಲಿ ಸಂಚು ಹೂಡಿದ ಪೂರ್ಣಯ್ಯ ಮತ್ತು ಮೀರ್ ಸಾದಿಕ್‌ನ ಮೇಲಿರುವ ಕಳಂಕವನ್ನು ಈ ನಾಡಿನ ಒಕ್ಕಲಿಗರ ತಲೆಗೆ ಕಟ್ಟುವ ಪ್ರಯತ್ನವೂ ಇದರ ಹಿಂದಿದೆ. 'ಟಿಪ್ಪು ಸುಲ್ತಾನನನ್ನು ಉರಿಗೌಡ, ನಂಜೇಗೌಡ ಹೊಡೆದು ಹಾಕಿದರು' ಎನ್ನುವುದು ಕೆಲವು ವರ್ಷಗಳಿಂದ ಬಿಜೆಪಿ ಹರಡುತ್ತಿರುವ ಹೊಸ ಸುಳ್ಳು. ಆರೆಸ್ಸೆಸ್‌ನ ಶಾಖೆಯೊಳಗಿರುವ ಉರಿ ಮತ್ತು ನಂಜಿಗೆ ಈ ನಾಡಿನ ಒಕ್ಕಲಿಗ ಸಮುದಾಯ ಬಲಿ ಪಶುವಾಗುತ್ತಿದೆ. ಹಾಗೆಯೇ ಕುರುಬ ಸಮುದಾಯ ಮತ್ತು ಒಕ್ಕಲಿಗ ಸಮುದಾಯವನ್ನು ಪರಸ್ಪರ ಎತ್ತಿಕಟ್ಟುವ ಪ್ರಯತ್ನವೂ ಇದರ ಹಿಂದಿದೆ. ಒಕ್ಕಲಿಗರು ಈ ನೆಲದ ಒಕ್ಕಲುಗಳು. ಮಣ್ಣಿನ ನೆಜ ಒಡೆಯರು. ಈ ನಾಡಿನ ಅಭಿವೃದ್ಧಿಯಲ್ಲಿ ಕೆಂಪೇಗೌಡರ ಪಾತ್ರ ಬಹುದೊಡ್ಡದು. ಇದೇ ಸಂದರ್ಭದಲ್ಲಿ ತನ್ನ ಆಡಳಿತ ಕಾಲದಲ್ಲಿ ಕೃಷಿ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ಕೊಟ್ಟ ಹಿರಿಮೆ ಟಿಪ್ಪುಸುಲ್ತಾನನದು. ಕನ್ನಂಬಾಡಿ ಅಣೆಕಟ್ಟಿನ ಬಗ್ಗೆ ಮೊದಲು ಕನಸು ಕಂಡಿರುವುದು ಟಿಪ್ಪುಸುಲ್ತಾನ್. ಇದಕ್ಕೆ ಸಂಬಂಧಿಸಿದ ಫಲಕವನ್ನೂ ಈಗಲೂ ಮೈಸೂರಿನಲ್ಲಿ ನಾವು ಕಾಣಬಹುದು.

ಟಿಪ್ಪು ಮತ್ತು ಕೆಂಪೇಗೌಡರನ್ನು ಹೊರತು ಪಡಿಸಿದ ಕರ್ನಾಟಕವನ್ನು ನಾವು ಕಲ್ಪಿಸಲೂ ಸಾಧ್ಯವಿಲ್ಲ. ಕೇಂಪೇಗೌಡರನ್ನು , ಟಿಪ್ಪುವನ್ನು, ಕಿತ್ತೂರು ಚೆನ್ನಮ್ಮರನ್ನು ಆದರ್ಶವಾಗಿಟ್ಟುಕೊಂಡು ಚುನಾವಣೆಯನ್ನು ಎದುರಿಸುವ ಬದಲು, ಮೀರ್ ಸಾದಿಕ್, ಪೂರ್ಣಯ್ಯ ಮತ್ತು ಬ್ರಿಟಿಷರ ಪಿಂಚಣಿಯಿಂದ ಬದುಕಿದ ಸಾವರ್ಕರ್‌ರನ್ನು ಆದರ್ಶವಾಗಿಟ್ಟುಕೊಂಡು ಚುನವಾಣೆಯನ್ನು ಎದುರಿಸಲು ಹೊರಟಿರುವುದು ಬಿಜೆಪಿಯ ಸಿದ್ಧಾಂತದ ಚಿಂತಾಜನಕ ಸ್ಥಿತಿಯನ್ನು ಹೇಳುತ್ತದೆ. ಕರ್ನಾಟಕದ ವೀರ ಪರಂಪರೆಯ ಬಗ್ಗೆ ಕೀಳರಿಮೆ ಹೊಂದಿ, ಅವರನ್ನು ಅವಮಾನಿಸುತ್ತಾ, ಉತ್ತರ ಭಾರತದ ರಾಜರನ್ನು ಕರ್ನಾಟಕಕ್ಕೆ ಆಮದು ಮಾಡುವ ಯಾವುದೇ ರಾಜಕೀಯ ನಾಯಕರು ಯಾವ ಪಕ್ಷಕ್ಕೇ ಸೇರಿರಲಿ, ಅವರು ಕನ್ನಡ ದ್ರೋಹಿಗಳೇ ಆಗಿದ್ದಾರೆ. ಅವರನ್ನು ತಿರಸ್ಕರಿಸುವುದು ನಾಡಿನ ಜನತೆಗೆ ಅನಿವಾರ್ಯವಾಗಿದೆ.

Similar News